ETV Bharat / state

ಒಳಮೀಸಲಾತಿ: ಬಂಜಾರ, ಭೋವಿ, ಕೊರಮ, ಕೊರಚ, ಅಲೆಮಾರಿಗಳಿಗಾದ ಅನ್ಯಾಯ ಸರಿಪಡಿಸುವಂತೆ ರಾಜ್ಯಪಾಲರಿಗೆ ಮನವಿ

'ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗಿಕರಣ) ವಿಧೇಯಕ-2025'ನ್ನು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನಿಯೋಗ ವಿರೋಧಿಸಿದ್ದು, ಹಲವು ಬೇಡಿಕೆಗಳೊಂದಿಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

karnataka-reservation-protection-union-delegation-opposes-internal-reservation-classification
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನಿಯೋಗ ಮಂಗಳವಾರ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. (ETV Bharat)
author img

By ETV Bharat Karnataka Team

Published : January 21, 2026 at 7:32 AM IST

4 Min Read
Choose ETV Bharat

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನಿಯೋಗವು ಮಂಗಳವಾರ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.‌

ಒಳಮೀಸಲಾತಿಯಲ್ಲಿ ಪ್ರವರ್ಗ-ಸಿ ಗುಂಪನ್ನು ಬದಲಾಯಿಸಿ ಪ್ರವರ್ಗ-1 ಎಂದು ಮರು ಸಂಯೋಜನೆ ಮಾಡಬೇಕು. ಆ ಮೂಲಕ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸೂಕ್ಷ್ಮ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ರಾಜ್ಯ ಸರ್ಕಾರ ವರ್ಗೀಕರಿಸಿದ ಒಳಮೀಸಲಾತಿಯಲ್ಲಿ ಮೂರನೇ ಗುಂಪು ಅಥವಾ 'ಪ್ರವರ್ಗ-ಸಿ' ಗುಂಪಿನಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸೂಕ್ಷ್ಮ ಸಮುದಾಯಗಳು ಸೇರಿದಂತೆ ಒಟ್ಟು 63 ಜಾತಿಗಳು ಬರುತ್ತವೆ. ಅಷ್ಟು ಜಾತಿಗಳನ್ನು ಒಂದೇ ಗುಂಪಿಗೆ ಸೇರಿಸಿದ್ದರೂ ಕೇವಲ ಶೇ.5ರಷ್ಟು ಒಳಮೀಸಲಾತಿಯನ್ನು ಮಾತ್ರ ನಿಗದಿಗೊಳಿಸಲಾಗಿದೆ. ಆದರೆ ಉಪವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡುವಾಗ ಈ ಸಮುದಾಯಗಳ ಜನಸಂಖ್ಯೆ ಶೈಕ್ಷಣಿಕ, ಸಾಮಾಜಿಕ, ಹಿಂದುಳಿದಿರುವಿಕೆಯನ್ನು ಮಾನದಂಡವಾಗಿ ಪರಿಗಣಿಸಿಲ್ಲ. ಹೀಗಾಗಿ, ಈ ಸಮುದಾಯಗಳಿಗೆ ಕಡಿಮೆ ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಲಾಗಿದೆ. ವಾಸ್ತವಿಕ ದತ್ತಾಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ತಿಳಿಸಿದೆ.

ಈಗಾಗಲೇ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣ ಶೇ.15ರಿಂದ 17ಕ್ಕೆ ಹೆಚ್ಚಿಸಲಾಗಿದೆ. ಇದನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಿಲ್ಲ. ಕರ್ನಾಟಕ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ತರಾತುರಿಯಲ್ಲಿ ಪರಿಶಿಷ್ಟ ಜಾತಿಗಳ ಅಸಾಂವಿಧಾನಿಕ ವರ್ಗೀಕರಣ ಅನಗತ್ಯ. ಹೀಗಿರುವಾಗ ರಾಜ್ಯ ಸರ್ಕಾರ ಸರ್ಕಾರಿ ಆದೇಶಕ್ಕೆ ಕಾನೂನಿನ ರೂಪ ನೀಡುವ ಉದ್ದೇಶದಿಂದ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ 'ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗಿಕರಣ) ವಿಧೇಯಕ-2025' ಎಂಬ ಹೆಸರಿನಲ್ಲಿ ಒಳಮೀಸಲಾತಿ ಮಸೂದೆಯನ್ನು ಅಂಗೀಕರಿಸಿ ತಮ್ಮ ಅಂಕಿತಕ್ಕೆ ಕಳುಹಿಸಿದೆ ಎಂದು ವಿವರಿಸಿದೆ.

ಮಸೂದೆಯಲ್ಲಿ ಪ್ರರ್ಗ-ಸಿ ಗುಂಪಿನಲ್ಲಿದ್ದ 63 ಜಾತಿಗಳ ಪೈಕಿ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಹೊರತುಪಡಿಸಿ 59 ಅಲೆಮಾರಿ ಸೂಕ್ಷ್ಮ ಸಮುದಾಯಗಳಿಗೆ ಐದು ಹುದ್ದೆಯಲ್ಲಿ ಒಂದು ಹುದ್ದೆ ಮೀಸಲಿಡಲು ನಿರ್ಧರಿಸಲಾಗಿದೆ. ಆದರೆ ಅದಕ್ಕೆ ಅನುಸರಿಸಿದ ಮಾನದಂಡವೇನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಮಸೂದೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳಿಗೆ ಒಳಮೀಸಲಾತಿ ಆದೇಶದ ನಂತರ ಹೊರಡಿಸಲಾದ ರೋಸ್ಟರ್ ಆದೇಶ ಅನುಗುಣವಾಗಿಲ್ಲ. ಇದರಿಂದ ರೋಸ್ಟರ್ ಬಿಂದುಗಳನ್ನು ಅನುಸರಿಸುವಾಗ ಅನೇಕ ಗೊಂದಲಗಳು ಉಂಟಾಗುತ್ತವೆ. ಮತ್ತು ಮೀಸಲಾತಿ ಮೂರೂ ಗುಂಪುಗಳಿಗೆ ಸಮಾನವಾಗಿ, ಸಮರ್ಪಕ ಹಂಚಿಕೆಯಾಗುವುದಿಲ್ಲ ಎಂದು ಆಕ್ಷೇಪಿಸಿದೆ.

ಈ ಎಲ್ಲ ಅಂಶಗಳನ್ನು ನೋಡಿದಾಗ, ಆಯೋಗದ ವರದಿ ಅಪೂರ್ಣ ದತ್ತಾಂಶಗಳಿಂದ ಕೂಡಿದ್ದರೂ ಸಹ ಅದರ ವರದಿಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಮಾರ್ಪಾಡಿನ ಹೆಸರಿನಲ್ಲಿ ತನಗೆ ಬೇಕಾದಂತೆ ಪರಿಶಿಷ್ಟ ಜಾತಿಗಳಲ್ಲಿ ಪ್ರವರ್ಗಗಳನ್ನು ಮಾಡಿ, ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಹಂಚಿ ಒಳಮೀಸಲಾತಿ ಪಾಲನೆಯಲ್ಲಿ ಅನುಸರಿಸಬೇಕಾದ ಯಾವ ಮಾನದಂಡಗಳನ್ನು ಅನುಸರಿಸದೆ, ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿ ಸರ್ಕಾರಿ ಆದೇಶದ ಮೂಲಕ ಒಳಮೀಸಲಾತಿ ಜಾರಿಗೊಳಿಸಿ, ಈಗ ಕಾನೂನು ರೂಪ ನೀಡಲು ಹೊರಟಿರುವುದಕ್ಕೆ ನಮ್ಮ ಸಮುದಾಯಗಳ ವಿರೋಧವಿದೆ. ಅಸಾಂವಿಧಾನಿಕವಾದ ರೀತಿಯಲ್ಲಿ ಒಳಮೀಸಲಾತಿ ಕಾನೂನು ತರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವಲ್ಲ. ಇದನ್ನು ಸರಿಪಡಿಸುವ ಮೂಲಕ ಸಂವಿಧಾನವನ್ನು ಕಾಪಾಡಬೇಕು ಎಂದು ಕೋರಿದೆ.

ಹಕ್ಕೊತ್ತಾಯಗಳೇನು?: ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗಿಕರಣ) ವಿಧೇಯಕ-2025ರ ಪ್ರಕಾರ ಪ್ರರ್ಗ-ಸಿ ಗುಂಪಿನಲ್ಲಿ ಇರುವ 63 ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಶೇ.6ಕ್ಕೆ ಹೆಚ್ಚಿಸಬೇಕು. ಅಲೆಮಾರಿ, ಸೂಕ್ಷ್ಮ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ.1 ಮೀಸಲಾತಿ ಒದಗಿಸಬೇಕು. ಪ್ರವರ್ಗ-ಸಿ ಗುಂಪಿನ ಸಮುದಾಯಗಳು ಪರಿಶಿಷ್ಟ ಜಾತಿಗಳಲ್ಲೇ ಸಾಮಾಜಿಕ, ಶೈಕ್ಷಣಿಕವಾಗಿ ಅತೀ ಹಿಂದುಳಿದ ಗುಂಪು ಎಂಬುದು ನ್ಯಾಯಮೂರ್ತಿ ಹೆಚ್.ಎನ್.ನಾಗಮೋನ್ ದಾಸ್ ಆಯೋಗದ ವರದಿಯ ಅಂಕಿ-ಅಂಶಗಳನ್ನು ಅಧ್ಯಯನ ಮಾಡಿದಾಗ ತಿಳಿದುಬರುತ್ತದೆ. ಹೀಗಾಗಿ, ಪ್ರವರ್ಗ-ಸಿ ಗುಂಪನ್ನು ಬದಲಾಯಿಸಿ ಪ್ರವರ್ಗ-1 ಎಂದು ಮರುಸಂಯೋಜನೆ ಮಾಡಬೇಕು. ಆ ಮೂಲಕ ಬಂಜಾರ, ಭೋವಿ, ಕೊರಮ, ಕೊರಚ, ಮತ್ತು ಅಲೆಮಾರಿ ಸೂಕ್ಷ್ಮ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಪರಿಶಿಷ್ಟ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇ.18ಕ್ಕೆ ಹೆಚ್ಚಿಸಬೇಕು.

ಮೀಸಲಾತಿ ಮಿತಿ ಶೇ.50ಕ್ಕೆ ಮೀರಬಾರದು ಎಂಬ ಸರ್ವೊಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಉಚ್ಚನ್ಯಾಯಾಲಯದಲ್ಲಿ ಈಗಾಗಲೇ ಪ್ರಶ್ನಿಸಲಾಗಿದೆ. ಹಾಗಾಗಿ, ರಾಜ್ಯ ಸರ್ಕಾರ ಈಗಾಗಲೇ ಶೇ.17ಕ್ಕೆ ಹೆಚ್ಚಿಸಿರುವ ಮೀಸಲಾತಿ ಪ್ರಮಾಣವನ್ನು ಕಾರ್ಯಕಾರಿ ಆದೇಶದ ಮೂಲಕ ಶೇ.18ಕ್ಕೆ ವಿಸ್ತರಿಸಬೇಕು. ಮುಂದೆ ಹೆಚ್ಚಿಸಲಿರುವ ಮೀಸಲಾತಿ ಕಾರ್ಯಕಾರಿ ಆದೇಶವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ರಾಜ್ಯ ಸರ್ಕಾರ 03-09-2025ರಂದು ಹೊರಡಿಸಿರುವ ಸರ್ಕಾರಿ ಆದೇಶದಲ್ಲಿ ವಿವಿಧ ಬಿಂದುಗಳಲ್ಲಿ ನಿಗದಿಪಡಿಸಲಾಗಿದೆ. ನೇಮಕಾತಿ ರೋಸ್ಟರ್ ಬಿಂದು ನಿಗದಿ ಆದೇಶದ ದೋಷದಿಂದಾಗಿ ಇತ್ತೀಚೆಗೆ ನಡೆದ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಗಳ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಯಲ್ಲಿ 'ಪ್ರರ್ಗ-ಬಿ' ಮತ್ತು 'ಪ್ರರ್ಗ-ಸಿ' ಗುಂಪಿಗೆ ಹುದ್ದೆಗಳು/ಸೀಟುಗಳು ಸಿಗದೆ ಅನ್ಯಾಯವಾಗಿದೆ. ತಕ್ಷಣ ಈ ಆದೇಶವನ್ನು ವಾಪಸ್ ಪಡೆಯಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಹೊಸ ನಿಯಮ ರೂಪಿಸಬೇಕು. ಅಲ್ಲಿಯವರೆಗೆ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ಹಳೆಯ ನಿಯಮಗಳಂತೆ ಮುಂದುವರೆಸಬೇಕು ಎಂದು ಕೋರಲಾಗಿದೆ.

ಎಸ್.ಸಿ.ಪಿ, ಟಿ.ಎಸ್.ಪಿ, ಯೋಜನೆಯ ಶೇ.24ರಷ್ಟು ಅನುದಾನ ಹಂಚಿಕೆಯ ನಿಯಮದಂತೆ ಈ ಪ್ರವರ್ಗ ಸಿ ಗುಂಪಿಗೆ ಒಟ್ಟು ಹಣದ ಕನಿಷ್ಠ ಶೇ.6ರಷ್ಟನ್ನು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ-ವಡ್ಡರ್ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ನೇತೃತ್ವದ ನಿಯೋಗದಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಉಪ ಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಜನಾರ್ಧನ ಸ್ವಾಮಿ, ಮಾಜಿ ಸಚಿವರಾದ ಡಾ.ಬಿ.ಟಿ.ಲಲಿತಾನಾಯ್ಕ, ಮಾಜಿ ಶಾಸಕರಾದ ಭೀಮನಾಯ್ಕ, ಬಸವರಾಜ್ ನಾಯ್ಕ, ಜಲಜಾನಾಯ್ಕ, ನಿವೃತ್ತ IAS ಅಧಿಕಾರಿ ಮಂಜುನಾಥ ಪ್ರಸಾದ್, ರವಿ ಮಾಕಳಿ, OCCI ರಾಷ್ಟ್ರೀಯ ಅಧ್ಯಕ್ಷ, ಅನಂತನಾಯ್ಕ ಎನ್, ಜಯದೇವ ನಾಯ್ಕ, ಬಾಲರಾಜ್ ನಾಯ್ಕ ಮುಂತಾದವರು ಇದ್ದರು.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಪರೀಕ್ಷೆ ಓದಿಗಾಗಿ ನಿರಂತರ ವಿದ್ಯುತ್ ಒದಗಿಸಿ: ಸಿಎಂಗೆ ಪತ್ರ ಬರೆದ ಹೊಯ್ಸಳ ಶೌರ್ಯ ಪ್ರಶಸ್ತಿ ವಿಜೇತ ವಿದ್ಯಾರ್ಥಿ