ಕರ್ನಾಟಕವನ್ನು ಕ್ವಾಂಟಮ್ ತಂತ್ರಜ್ಞಾನದ ರಾಷ್ಟ್ರೀಯ ಕೇಂದ್ರವಾಗಿಸಲು 'ಕರ್ನಾಟಕ ಕ್ವಾಂಟಮ್ ಟಾಸ್ಕ್ ಫೋರ್ಸ್' ರಚನೆ
ರಾಜ್ಯ ಸರ್ಕಾರ 'ಕರ್ನಾಟಕ ಕ್ವಾಂಟಮ್ ಟಾಸ್ಕ್ ಫೋರ್ಸ್'ಅನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.

Published : June 1, 2026 at 3:37 PM IST
ಬೆಂಗಳೂರು: ಕರ್ನಾಟಕ ರಾಜ್ಯವನ್ನು ಕ್ವಾಂಟಮ್ ತಂತ್ರಜ್ಞಾನ ಮತ್ತು ಕ್ವಾಂಟಮ್ ಆವಿಷ್ಕಾರದಲ್ಲಿ ರಾಷ್ಟ್ರಮಟ್ಟದ ಕೇಂದ್ರವನ್ನಾಗಿಸುವ ಮಹತ್ವಾಕಾಂಕ್ಷೆಯ ಉದ್ದೇಶದಿಂದ ರಾಜ್ಯ ಸರ್ಕಾರ 'ಕರ್ನಾಟಕ ಕ್ವಾಂಟಮ್ ಟಾಸ್ಕ್ ಫೋರ್ಸ್'ಅನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.
ಇತ್ತೀಚೆಗೆ ನಡೆದ 'ಕ್ವಾಂಟಮ್ ಇಂಡಿಯಾ ಬೆಂಗಳೂರು ಶೃಂಗಸಭೆ'ಯಲ್ಲಿ ಅನಾವರಣಗೊಳಿಸಲಾಗಿದ್ದ 'ಕರ್ನಾಟಕ ಕ್ವಾಂಟಮ್ ರೋಡ್‌ಮ್ಯಾಪ್'ನಲ್ಲಿನ ರೂಪುರೇಷೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಲಿದೆ. ಈ ಕುರಿತು ರಾಜ್ಯ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅಧಿಕೃತ ಆದೇಶ ಪ್ರಕಟಿಸಿದೆ.
ಈ ಪ್ರತಿಷ್ಠಿತ ಟಾಸ್ಕ್ ಫೋರ್ಸ್‌ಗೆ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಭೌತಶಾಸ್ತ್ರ ವಿಭಾಗದ ಜೆಆರ್‌ಡಿ ಟಾಟಾ ಚೇರ್ ಪ್ರೊಫೆಸರ್ ಹಾಗೂ ಜೆ.ಸಿ. ಬೋಸ್ ನ್ಯಾಷನಲ್ ಫೆಲೋ ಆದ ಪ್ರೊ. ಅರಿಂದಮ್ ಘೋಷ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರು (ಕರ್ನಾಟಕ ಸರ್ಕಾರ) ಹಾಗೂ ಕೆಸ್ಟೆಪ್ಸ್ (KSTEPS) ವ್ಯವಸ್ಥಾಪಕ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ಟಾಸ್ಕ್ ಫೋರ್ಸ್‌ನಲ್ಲಿ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಉದ್ಯಮದ ತಜ್ಞರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಒಳಗೊಂಡಂತೆ ಒಟ್ಟು 16 ಮಂದಿ ಸದಸ್ಯರಿದ್ದಾರೆ.
ಟಾಸ್ಕ್ ಫೋರ್ಸ್‌ನ ಪ್ರಮುಖ ಸದಸ್ಯರು: ಶೈಕ್ಷಣಿಕ ಹಾಗೂ ಸಂಶೋಧನಾ ರಂಗದ ತಜ್ಞರಾದ ಪ್ರೊ. ಉರ್ಬಸಿ ಸಿನ್ಹಾ (ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್), ಪ್ರೊ. ಬಿ. ಗುರುಮೂರ್ತಿ (FSID, IISc), ಪ್ರೊ. ಅಕ್ಷಯ್ ನಾಯಕ್ (ಕ್ವಾಂಟಮ್ ರಿಸರ್ಚ್ ಪಾರ್ಕ್), ಡಾ. ಅಜಿತ್ ಪದ್ಯಾನ (VTU-VRIF ಸೆಂಟರ್ ಫಾರ್ ಡೀಪ್ ಟೆಕ್ನಾಲಜೀಸ್), ಪ್ರೊ. ರಾಜೇಶ್ ಗೋಪಕುಮಾರ್ (ICTS) ಮತ್ತು ಡಾ. ತಸ್ಲೀಮಾರಿಫ್ ಸೈಯದ್ (C-CAMP). ಉದ್ಯಮ ರಂಗದ ಪ್ರತಿನಿಧಿಗಳಾದ ಎಲ್. ವೆಂಕಟ ಸುಬ್ರಮಣಿಯನ್ (ಕ್ಯೂಬಿಟ್ ಫೋರ್ಸ್ ಸಿಇಒ, ಐಬಿಎಂ ಕ್ವಾಂಟಮ್ ಇಂಡಿಯಾದ ಮಾಜಿ ಮುಖ್ಯಸ್ಥರು ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇತ್ತೀಚೆಗೆ ರಚಿಸಿರುವ 'ಕ್ವಾಂಟಮ್ ಸೆಕ್ಯೂರ್ ಅಂಡ್ ಅಡಾಪ್ಟಿವ್ ಫೈನಾನ್ಷಿಯಲ್ ಇಕೋಸಿಸ್ಟಮ್' - Q-SAFE ತಜ್ಞರ ಸಮಿತಿಯ ನೂತನ ಸದಸ್ಯರು), ಡಾ. ನಾಗೇಂದ್ರ ನಾಗರಾಜ್ (QPiAi), ಶ್ರೀ ನಾಗಾನಂದ್ ದೊರೆಸ್ವಾಮಿ (Idea Spring), ವಿಂಗ್ ಕಮಾಂಡರ್ ಎಸ್. ಸುಧಾಕರನ್ (ನಿವೃತ್ತ) (QuGates Technologies), ಮತ್ತು ಶ್ರೀಮತಿ ಸೀಮಾ ಅಂಬಸ್ತ (L&T Datacenter and Cloud Services) ಸಮಿತಿಯಲ್ಲಿ ಸದಸ್ಯರಾಗಿ ಇರಲಿದ್ದಾರೆ.
ಇನ್ನು ಸರ್ಕಾರದ ಪ್ರತಿನಿಧಿಗಳಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳು ಸಮಿತಿಯಲ್ಲಿ ಇರಲಿದ್ದಾರೆ.
ಟಾಸ್ಕ್ ಫೋರ್ಸ್‌ನ ಪ್ರಮುಖ ಜವಾಬ್ದಾರಿಗಳು: ಈ ಉನ್ನತ ಮಟ್ಟದ ಸಮಿತಿಯು ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕ್ವಾಂಟಮ್ ತಂತ್ರಜ್ಞಾನದ ಸಂಶೋಧನೆ, ನಾವೀನ್ಯತೆ, ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹ ಮತ್ತು ಕೈಗಾರಿಕಾ ಅಳವಡಿಕೆಗೆ ಅಗತ್ಯವಾದ ನೀತಿ ನಿರೂಪಣೆ, ಆಯಕಟ್ಟಿನ ನಿರ್ದೇಶನ ಹಾಗೂ ಸಾಂಸ್ಥಿಕ ಮಾರ್ಗದರ್ಶನವನ್ನು ಒದಗಿಸಲಿದೆ.
ಅತ್ಯಂತ ಪ್ರಮುಖವಾಗಿ, ಭಾರತದ ಕ್ವಾಂಟಮ್ ಪರಿಸರ ವ್ಯವಸ್ಥೆಯ (Quantum Ecosystem) ಕೇಂದ್ರಬಿಂದುವಾಗಿ ರೂಪುಗೊಳ್ಳಲಿರುವ ಬೃಹತ್ 'ಹೆಸರಘಟ್ಟ ಕ್ವಾಂಟಮ್ ಸಿಟಿ' ಸೇರಿದಂತೆ ರಾಜ್ಯದ ಅತ್ಯಾಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸುವ ಮತ್ತು ಅದರ ಸಮಗ್ರ ಮೇಲ್ವಿಚಾರಣೆ ನಡೆಸುವ ಮಹತ್ವದ ಜವಾಬ್ದಾರಿಯನ್ನು ಈ ಸಮಿತಿಯು ನಿರ್ವಹಿಸಲಿದೆ.
ಇವುಗಳನ್ನೂ ಓದಿ:

