ETV Bharat / state

ಕೇರಳದ ಕನ್ನಡ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಕೇಂದ್ರ ಮಧ್ಯಪ್ರವೇಶಿಸಬೇಕು: ಸಚಿವ ತಂಗಡಗಿ

ಮಲಯಾಳಂ ಭಾಷಾ ಮಸೂದೆಗೆ ಒಪ್ಪಿಗೆ ನೀಡದಂತೆ ಒತ್ತಾಯಿಸಲು ಕರ್ನಾಟಕ ಸರ್ಕಾರದ ನಿಯೋಗವನ್ನು ಶೀಘ್ರದಲ್ಲೇ ಕೇರಳ ರಾಜ್ಯಪಾಲರ ಬಳಿಗೆ ಕಳುಹಿಸಲಾಗುವುದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

MALAYALAM FIRST LANGUAGE
ಸಚಿವ ಶಿವರಾಜ್ ತಂಗಡಗಿ (ETV Bharat)
author img

By ETV Bharat Karnataka Team

Published : January 9, 2026 at 5:22 PM IST

2 Min Read
Choose ETV Bharat

ಬೆಂಗಳೂರು: ಕೇರಳದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಒತ್ತಾಯಿಸಿದ್ದಾರೆ.

ಕೇರಳ ಸರ್ಕಾರವು ಈ ವಿಷಯದಲ್ಲಿ ಮುಂದುವರಿಯದಂತೆ ನೋಡಿಕೊಳ್ಳಲು ಕೇಂದ್ರವು ಭಾಷಾ ನಿರ್ದೇಶಕರನ್ನು ತಕ್ಷಣವೇ ಕೇರಳಕ್ಕೆ ಕಳುಹಿಸಬೇಕು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರ ಮಲಯಾಳಂ ಭಾಷಾ ಮಸೂದೆಗೆ ಒಪ್ಪಿಗೆ ನೀಡದಂತೆ ಒತ್ತಾಯಿಸಲು ಕರ್ನಾಟಕ ಸರ್ಕಾರದ ನಿಯೋಗವನ್ನು ಶೀಘ್ರದಲ್ಲೇ ಕೇರಳ ರಾಜ್ಯಪಾಲರ ಬಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಮತ್ತೊಂದೆಡೆ, ಕಾಸರಗೋಡಿನಲ್ಲಿರುವ ಕನ್ನಡಿಗರಿಗೆ ಬೆಂಬಲ ನೀಡಲು ಸಚಿವರ ನಿಯೋಗವನ್ನು ಕಳುಹಿಸುವಂತೆ ಕನ್ನಡ ಪರ ಸಂಘಟನೆಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

ಕಳೆದ ಅಕ್ಟೋಬರ್‌ನಲ್ಲಿ ಕೇರಳ ವಿಧಾನಸಭೆಯು ಮಲಯಾಳಂ ಭಾಷಾ ಮಸೂದೆ-2025 ಅನ್ನು ಅಂಗೀಕರಿಸಿತು, ಇದು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯ ಮಾಡುತ್ತದೆ. ಈ ಮಸೂದೆಯು ಈಗ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕಾಸರಗೋಡಿನಲ್ಲಿ ಸುಮಾರು 202 ಕನ್ನಡ ಮಾಧ್ಯಮ ಶಾಲೆಗಳಿವೆ.

ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ- ಸಿಎಂ ಸಿದ್ದರಾಮಯ್ಯ: ಕೇರಳ ರಾಜ್ಯದ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಪಿಣರಾಯಿ ವಿಜಯನ್ ಅವರ ಸರ್ಕಾರದ ನಿರ್ಧಾರ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ. ಇದರಿಂದ ಕೇರಳದ ಗಡಿ ಜಿಲ್ಲೆಗಳಲ್ಲಿ ವಾಸಿಸುವ ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಕಲಿಯುವ ಹಕ್ಕಿನಿಂದ ವಂಚಿಸಲ್ಪಡುವ ಅಪಾಯವಿದೆ. ಕೇರಳ ಸರ್ಕಾರ ಕೂಡಲೇ ಈ ಮಸೂದೆಯನ್ನು ವಾಪಾಸ್ ಪಡೆದು, ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್​ ಪೋಸ್ಟ್​ ಮಾಡಿ ಒತ್ತಾಯಿಸಿದ್ದಾರೆ.

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾಧಿಸುತ್ತೇನೆ. ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ ಅದು ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಆಗ್ರಹಿಸುತ್ತೇನೆ. ಭಾಷಾ ಅಲ್ಪಸಂಖ್ಯಾತರಿಗೆ ಮಾತೃಭಾಷೆ ಎನ್ನುವುದು ಕೇವಲ ಭಾಷೆ ಅಲ್ಲ, ಅದು ಅವರಿಗೆ ಘನತೆಯ ಬದುಕು ನೀಡುವ ಅಸ್ಮಿತೆಯಾಗಿರುತ್ತದೆ. ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಸುಲಭದಲ್ಲಿ ವಿಷಯಗಳನ್ನು ಗ್ರಹಿಸುತ್ತಾರೆ ಎನ್ನುವದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅವರ ಮೇಲೆ ಅನ್ಯಭಾಷೆಯನ್ನು ಹೇರುವುದರಿಂದ ಅವರ ಕಲಿಕಾ ಸಾಮರ್ಥ್ಯವನ್ನು ಕುಂದಿಸುವುದು ಮಾತ್ರವಲ್ಲ, ಒಂದು ಸ್ವತಂತ್ರಭಾಷೆಯ ಅವಸಾನಕ್ಕೆ ದಾರಿ ಮಾಡಿಕೊಟ್ಟ ಹಾಗಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋಗಿಲು ಅಕ್ರಮ ನಿರ್ಮಾಣ ತೆರವು: ಚುನಾವಣೆ ಸೋಲಿನ ಭಯದಿಂದ ಕೇರಳ ಸಿಎಂ ಸಲ್ಲದ ರಾಜಕೀಯ - ಡಿಸಿಎಂ