ETV Bharat / state

ವಿಚ್ಛೇದನಕ್ಕಾಗಿ ಪತಿ ಅರ್ಜಿ: ಪತ್ನಿಗೆ 10 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಕೌಟುಂಬಿಕ ನ್ಯಾಯಾಲಯ ಅಥವಾ ಹೈಕೋರ್ಟ್‌ ವಿಚಾರಣೆಯನ್ನು ಸತತವಾಗಿ ಮುಂದೂಡಿದೆ. ನ್ಯಾಯಾಲಯಗಳ ಪ್ರಕ್ರಿಯೆನ್ನು ಕಕ್ಷಿದಾರರ ಇಚ್ಚೆಗನುಗುಣವಾಗಿ ನಡೆಸುವುದಕ್ಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ಪೀಠ ತಿಳಿಸಿದೆ.

BENGALURU  HIGH COURT  DIVORCE CASE  ಪತ್ನಿಗೆ ದಂಡ  HIGH COURT FINED TO WIFE
ಹೈಕೋರ್ಟ್ (IANS)
author img

By ETV Bharat Karnataka Team

Published : February 26, 2026 at 7:42 AM IST

3 Min Read
Choose ETV Bharat

ವರದಿ: ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು: ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಂದೂಡಲು, ಮರು ಪಾಟಿಸವಾಲು ಮಾಡಲು ಕೋರಿ ಮಧ್ಯಂತರ ಅರ್ಜಿಗಳ ಸಲ್ಲಿಸುವ ಮೂಲಕ 27 ಲಕ್ಷ ರೂ ಜೀವನಾಂಶ ಪಡೆದು, ಸತತ ಐದು ವರ್ಷಗಳಿಗೂ ಹೆಚ್ಚು ಕಾಲ ಅರ್ಜಿ ಇತ್ಯರ್ಥಕ್ಕೆ ಅವಕಾಶ ನೀಡದೇ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ಮಹಿಳೆಯೊಬ್ಬರಿಗೆ ಹೈಕೋರ್ಟ್ 10 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ.

ಅಲ್ಲದೇ, ದಂಡದ ಮೊತ್ತವನ್ನು ಆದೇಶದ ಮೂರು ವಾರಗಳಲ್ಲಿ ಸೈನಿಕರ ಕಲ್ಯಾಣ ನಿಧಿಗೆ ಪಾವತಿಸಬೇಕು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕವೇ, ಅರ್ಜಿದಾರರ ಮಧ್ಯಂತರ ಮನವಿಯ ವಿಚಾರಣೆ ಪ್ರಕ್ರಿಯೆ ಮುಂದುವರೆಸಲು ಅವಕಾಶ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ವಿಚಾರಣೆ ಮುಂದೂಡುವಂತೆ ಹಲವು ಬಾರಿ ಮನವಿ ಮಾಡಿದ್ದಲ್ಲದೇ ಪ್ರಕರಣದ ಸಾಕ್ಷಿದಾರರನ್ನು ಪಾಟಿ ಸವಾಲು ಮಾಡಲು ಕೋರಿ ಸಲ್ಲಿಸಿರುವ ಅರ್ಜಿಯ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ, ರಾಮನಗರ ಜಿಲ್ಲೆಯ ಕನಕಪುರದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲಕೂರು ಸುಮಲತಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣ ಸಂಬಂಧ ದಾಖಲೆಗಳು ಮತ್ತು ವಾದ - ಪ್ರತಿವಾದ ಆಲಿಸಿದ ಬಳಿಕ, ಮಹಿಳೆಯೊಬ್ಬರು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ಕಾರಣದಿಂದ ಕೌಟುಂಬಿಕ ನ್ಯಾಯಾಲಯ ಅಥವಾ ಹೈಕೋರ್ಟ್‌ ವಿಚಾರಣೆಯನ್ನು ಸತತವಾಗಿ ಮುಂದೂಡಿದೆ. ಹಾಗಂತ ವಿಚಾರಣೆಯನ್ನು ಇನ್ನೂ ಮುಂದೂಡುವ ಉದಾರ ನೀತಿ ಅನುಸರಿಸಲು ಸಾಧ್ಯವಿಲ್ಲ. ನ್ಯಾಯಾಲಯಗಳ ಪ್ರಕ್ರಿಯೆನ್ನು ಕಕ್ಷಿದಾರರ ಇಚ್ಚೆಗನುಗುಣವಾಗಿ ನಡೆಸುವುದಕ್ಕೆ ಸಾಧ್ಯವಿಲ್ಲ. ಜತೆಗೆ, ಕೌಟುಂಬಿಕ ನ್ಯಾಯಾಲಯಗಳ ಕಾಯಿದೆ ಮತ್ತು ಸಿವಿಲ್‌ ಪ್ರಕ್ರಿಯಾ ಸಂಹಿತೆ(ಸಿಪಿಸಿ) ವಿಚಾರಣೆಯನ್ನು ಅಡ್ಡಿ ಪಡಿಸುವುದು, ಪ್ರತಿ ಪಕ್ಷಗಾರ ಮತ್ತು ನ್ಯಾಯಾಲಯಗಳಿಗೆ ಅನಾನುಕೂಲವನ್ನುಂಟು ಮಾಡಲು ಸಹಕಾರಿಯಾಗಬಾರದು ಎಂದು ಪೀಠ ತಿಳಿಸಿದೆ.

ಅಲ್ಲದೇ, ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ಪ್ರಕರಣದಂತೆ ವಿಚಾರಣೆ ನಡೆದಲ್ಲಿ ಒಂದು ದಶಕದಲ್ಲಿ ಯಾವುದೇ ಪ್ರಕರಣವನ್ನು ಇತ್ಯರ್ಥ ಪಡಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅರ್ಜಿದಾರರ ನಡೆ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದ್ದು, ಅತ್ಯಂತ ದುಃಖಕರ ಸ್ಥಿತಿಯನ್ನು ತೋರ್ಪಡಿಸಲಿದೆ ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿಯ ಸಂಬಂಧ ಸತತವಾಗಿ ಪಾಟಿಸವಾಲು ನಡೆಸುವಂತೆ ಹೈಕೋರ್ಟ್ ಸೂಚಿಸಿದ್ದರೂ, ಪತ್ನಿ ಅದಕ್ಕೆ ಸಹಕರಿಸಿಲ್ಲ. ಪ್ರಕರಣದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರಕರಣವನ್ನು ಶೀಘ್ರ ವಿಲೇವಾರಿ ಮಾಡಲು ಯಾವುದೇ ಅವಕಾಶ ನೀಡಿಲ್ಲ. ಪತ್ನಿಯ ವರ್ತನೆಯಿಂದ ಬೇಸರಗೊಂಡಿರುವ ಕೌಟುಂಬಿಕ ನ್ಯಾಯಾಲಯ ಮಧ್ಯಂತರ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಕೌಟುಂಬಿಕ ನ್ಯಾಯಾಲಯ ನಡೆಸಿರುವ ವಿಚಾರಣೆ ಪ್ರಕ್ರಿಯೆ ಅತ್ಯಂತ ಶ್ಲಾಘನೀಯ ಎಂದು ತಿಳಿಸಿರುವ ಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲಾಗುವುದಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ, ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ : ಅರ್ಜಿದಾರ(ಪತ್ನಿ)ರ ಪತಿ ವಿಚ್ಚೇದನ ಕೋರಿ 2019ರ ಏಪ್ರಿಲ್ 4 ರಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನೋಟಿಸ್ ಜಾರಿಯಾದ ಬಳಿಕ ವಕೀಲರ ಮೂಲಕ 2019ರ ಅಕ್ಟೋಬರ್ 19ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಅರ್ಜಿದಾರರು, ಸೂಕ್ತ ಸಮಯಕ್ಕೆ ಆಕ್ಷೇಪಣೆ ಸಲ್ಲಿಸಲು ವಿಫಲರಾಗಿದ್ದರು. ಇದೇ ಕಾರಣದಿಂದ ನ್ಯಾಯಾಧೀಶರು ಪಾಟಿಸವಾಲು ನಡೆಸಲಾಗಿಲ್ಲ ಎಂಬುದಾಗಿ ತಿಳಿಸಿ 2022ರ ಜೂನ್ 22ರಂದು ಆದೇಶಿಸಿದ್ದರು.

ಬಳಿಕ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಪತ್ನಿ, ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶ ನೀಡಬೇಕು. ಮತ್ತೆ ಪಾಟಿಸವಾಲು ಮಾಡೇಕು ಎಂದು ಕೋರಿದ್ದರು. ಇದಕ್ಕೂ ನ್ಯಾಯಾಲಯ ಅನುಮತಿ ನೀಡಿತ್ತು. ಇದಾದ ಬಳಿಕ ಪಾಟಿಸವಾಲು ನಡೆಸುವುದನ್ನು ಮುಂದೂಡಲು ಮನವಿ ಮಾಡಿದ್ದರು. ಪ್ರಕ್ರಿಯೆ ಇದೇ ರೀತಿಯಲ್ಲಿ ಮುಂದುವರೆದು, ಪ್ರಕರಣ ಸಂಬಂಧ ವಿಚಾರಣೆಗಾಗಿ ಕೋರ್ಟ್ ಕಮಿಷನರ್​ನನ್ನು ನೇಮಕ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಈ ಆದೇಶವನ್ನು ಮರು ಪರಿಶೀಲಿಸಲು ಕೋರಿ ಅರ್ಜಿದಾರರು ಮತ್ತೊಂದು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೋರ್ಟ್ ಕಮಿಷನರ್​ನನ್ನು ನೇಮಕ ಮಾಡಿದ್ದ ಆದೇಶ ರದ್ದುಪಡಿಸಿ, ಪತ್ನಿಯ ಕಡೆಯಿಂದ ಯಾವುದೇ ವಿಳಂಬವಿಲ್ಲದೇ ಪ್ರಕರಣವನ್ನು ಮುಂದೂಡದೆ ವಿಚಾರಣೆ ನಡೆಸಲು ಆದೇಶಿಸಿತ್ತು. ಆ ಬಳಿಕ ಅರ್ಜಿದಾರರು ಮತ್ತೆ ಅರ್ಜಿಯನ್ನು ಪುನಃ ಪರಿಶೀಲನೆಗೊಳಪಡಿಸಬೇಕು ಮತ್ತು ಮರು ಪಾಟಿಸವಾಲು ನಡೆಸಬೇಕು. ಇದಕ್ಕಾಗಿ ವಿಚಾರಣೆ ಮುಂದೂಡಬೇಕು ಎಂದು ಕೋರಿದ್ದರು. ಈ ಮಧ್ಯಂತರ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ(ಪತ್ನಿ) ಪರ ವಕೀಲರು, ವೈವಾಹಿಕ ಹಕ್ಕುಗಳ ಮರು ಸ್ಥಾಪನೆಗಾಗಿ ಕೋರಿ ಪತ್ನಿ ಸಲ್ಲಿಸಿರುವ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಅನುಮೋದಿಸಿದೆ, ಆದ್ದರಿಂದ ಪತ್ನಿಯ ವೈವಾಹಿಕ ಹಕ್ಕುಗಳ ಮರು ಸ್ಥಾಪನೆಗಾಗಿ ಸಲ್ಲಿಸಿರುವ ಅರ್ಜಿಯ ಸಂಬಂಧ ಪಾಟಿಸವಾಲು ನಡೆಸುವುದಕ್ಕೆ ಅವಕಾಶ ನೀಡಬೇಕು. ಆದರೆ, ಈ ಸಂಬಂಧ ಕೋರಿದ್ದ ಮಧ್ಯಂತರ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿದೆ. ಆ ಅರ್ಜಿಯನ್ನು ಪರಿಗಣಿಸಲು ನಿರ್ದೇಶನ ನೀಡಬೇಕು ಎಂದು ಪೀಠಕ್ಕೆ ಕೋರಿದರು.

ಇದಕ್ಕೆ ಆಕ್ಷೇಪಿಸಿದ ಪತಿಯ ಪರ ವಕೀಲರು, ವಿವಾಹ ವಿಚ್ಛೇದನ ಕೋರಿ 2019ರಲ್ಲಿ ಅರ್ಜಿ ಸಲ್ಲಿಸಲಾಗಿದೆ. 2025ರವರೆಗೂ ಪತಿಯ ದಾಂಪತ್ಯ ಹಕ್ಕುಗಳು ಮರು ಸ್ಥಾಪನೆಗಾಗಿ ಯಾವುದೇ ಮನವಿ ಮಾಡಿಲ್ಲ. ಒಂದಲ್ಲ ಒಂದು ಕಾರಣ ನೀಡಿ ಕಾಲಾವಕಾಶ ತೆಗೆದುಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಮಧ್ಯಂತರ ಪರಿಹಾರವಾಗಿ ಪತಿ ಈಗಾಗಲೇ 27 ಲಕ್ಷ ರೂ. ಪಾವತಿಸಿದ್ದಾರೆ. ಇದಾದ ಬಳಿಕ ದಾಂಪತ್ಯ ಹಕ್ಕುಗಳ ಮರು ಸ್ಥಾಪನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇತ್ಯರ್ಥವಾಗದೇ ಸುದೀರ್ಘ ವಿಚಾರಣೆ ನಡೆಯಲಿ ಎಂಬ ಕಾರಣಕ್ಕಾಗಿ ಈ ಅರ್ಜಿನ್ನು ಸಲ್ಲಿಸಿದ್ದು, ಅರ್ಜಿಯನ್ನು ವಜಾಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಇದನ್ನೂ ಓದಿ: ತನ್ನಿಂದ ದೂರವಿರುವ ಪತ್ನಿಯಿಂದ ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಜಾ