ಹೋರಾಟಕ್ಕೆ ಮಣಿದ ಸರ್ಕಾರ: ರೇಷ್ಮೆ ಇಲಾಖೆ ಆವರಣದಲ್ಲಿ ಕ್ರೀಡಾಂಗಣಕ್ಕೆ ಕೊಕ್
ಹೋರಾಟಗಾರರ ಹೋರಾಟಕ್ಕೆ ಮಣಿದ ಸರ್ಕಾರವು ರೇಷ್ಮೆ ಇಲಾಖೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಆದೇಶವನ್ನು ಹಿಂಪಡೆದಿದೆ.

Published : April 22, 2026 at 8:18 PM IST
ಮೈಸೂರು: ತಿ.ನರಸೀಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿರುವ ರೇಷ್ಮೆ ಫಿಲೇಚರ್ ಕಾರ್ಖಾನೆಯ ಆವರಣದಲ್ಲಿ 5 ಎಕರೆ ಜಾಗವನ್ನು ಕ್ರೀಡಾಂಗಣ ನಿರ್ಮಿಸಲು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾವಣೆ ಮಾಡಿದ್ದ ಆದೇಶವನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ಸರ್ಕಾರವು 'ಪರಿಸರಕ್ಕಾಗಿ ನಾವು ಸಂಘಟನೆ' ಧನ್ಯವಾದ ಸಲ್ಲಿಸಿದೆ.
ಈ ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿದರೆ 500ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ, ಇಲ್ಲಿ ರೂಪುಗೊಂಡಿರುವ ಪ್ರಾಣಿ, ಪಕ್ಷಿ, ಕ್ರಿಮಿಕೀಟ, ಚಿಟ್ಟೆಯನ್ನೊಳಗೊಂಡ ಜೀವ ಪರಿಸರ ವ್ಯವಸ್ಥೆ ನಾಶವಾಗುತ್ತದೆ. ಕಾರ್ಖಾನೆಯ ಒಟ್ಟು ವಿಸ್ತೀರ್ಣ 12.5 ಎಕರೆ ಪ್ರದೇಶದಲ್ಲಿ ಶೇ.33ರಷ್ಟು ಪ್ರದೇಶದಲ್ಲಿ ಕಡ್ಡಾಯವಾಗಿ ಮರಗಿಡಗಳಿರಬೇಕು ಎಂಬ ನಿಯಮದ ಉಲ್ಲಂಘನೆ ಆಗುತ್ತದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಹೇಳಿದ್ದಾರೆ.
ಇಲ್ಲಿನ ದುರ್ವಾಸನೆ, ಹೊಗೆ ಮತ್ತು ಧೂಳಿನಿಂದ ಆಗುವ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಿ, ವಾತಾವರಣವನ್ನು ಸಮತೋಲನ ಮಾಡಲು ಇಲ್ಲಿ ಮರಗಿಡಗಳ ಅಗತ್ಯವಿದೆ. ಕಲ್ಲಿದ್ದಲು ಸಂಗ್ರಹಕ್ಕೆ, ಸಿಂಡರ್ ಹಾಕಲು, ವಾಹನಗಳ ಓಡಾಟಕ್ಕೆ ಮತ್ತು ಕಾರ್ಖಾನೆಯ ವಿಸ್ತೀರ್ಣಕ್ಕೆ ಜಾಗದ ಅಗತ್ಯವಿದೆ. ಇಲ್ಲಿ ಕ್ರೀಡಾಂಗಣ ಮಾಡಿದರೆ ಕಾರ್ಖಾನೆ ಮುಚ್ಚುವುದು ಅನಿವಾರ್ಯ ಆಗಲಿದೆ. ಇದರಿಂದ ನೂರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ, ರೇಷ್ಮೆ ನೂಲಿನ ಉತ್ಪಾದನೆ ಸ್ಥಗಿತಗೊಳ್ಳುತ್ತದೆ, ಇದರಿಂದ ವಿಶ್ವ ವಿಖ್ಯಾತ ರೇಷ್ಮೆ ಸೀರೆಗಳ ತಯಾರಿಕೆಗೆ ಕಂಟಕ ಬರುತ್ತದೆ ಎಂದು ತಿಳಿಸಿದ್ದಾರೆ.
ಆದ್ದರಿಂದ, ಇಲ್ಲಿ ಕ್ರೀಡಾಂಗಣ ನಿರ್ಮಾಣ ಬೇಡ, ಬೇರೆ ಕಡೆ ಮಾಡಿ ಎಂದು ತೀವ್ರವಾಗಿ ಒತ್ತಾಯಿಸಿ ಪರಿಸರಕ್ಕಾಗಿ ನಾವು ಸಂಘಟನೆಯು ಈ ಕಾರ್ಖಾನೆಯ ಕಾರ್ಮಿಕರ ಜೊತೆಗೂಡಿ ಮುಷ್ಕರ ಪ್ರಾರಂಭಿಸಿತ್ತು. ಈ ಹೋರಾಟಕ್ಕೆ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದವು. ಎಲ್ಲರ ಸಂಘಟಿತ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು ತನ್ನ ಮೊದಲಿನ ಆದೇಶವನ್ನು ಹಿಂಪಡೆದು ಹೊಸ ಆದೇಶ ಹೊರಡಿಸಿದೆ ಎಂದು ಹೇಳಿದ್ದಾರೆ.
ಈ ಒಂದು ಆದೇಶದಿಂದ 500ಕ್ಕೂ ಹೆಚ್ಚು ಮರಗಳು, ಇಲ್ಲಿನ ಜೀವವೈವಿಧ್ಯತೆ, ನೂರಾರು ಕಾರ್ಮಿಕರ ಕೆಲಸ, ರೇಷ್ಮೆ ಕಾರ್ಖಾನೆ, ರೇಷ್ಮೆ ಸೀರೆಗಳ ತಯಾರಿಕೆ ಮತ್ತು ಮೈಸೂರು ಪರಂಪರೆ ಉಳಿದಂತಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ನಮ್ಮ ಸಂಘಟನೆ ಧನ್ಯವಾದ ಸಲ್ಲಿಸುತ್ತದೆ ಎಂದು ಪ್ರಕಟಣೆಯಲ್ಲಿ ಪರಶುರಾಮೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಸಿಲೇಟಿಗೆ ಜನ ತತ್ತರ: ಹಾವೇರಿಯಲ್ಲಿ ಈಜುಕೊಳಗಳತ್ತ ಮಕ್ಕಳು, ಯುವಕರ ದಾಂಗುಡಿ

