ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಸಿಹಿಸುದ್ದಿ: ಶೇ.2ರಷ್ಟು ತುಟ್ಟಿಭತ್ಯೆ ಹೆಚ್ಚಳ
ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.2ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.

Published : October 15, 2025 at 7:39 PM IST
ಬೆಂಗಳೂರು: ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (ಡಿಎ) ಶೇ.2ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಈ ಮೂಲಕ ನೌಕರರಿಗೆ ದೀಪಾವಳಿಯ ಸಿಹಿಸುದ್ದಿ ನೀಡಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ತುಟ್ಟಿಭತ್ಯೆ ಕಳೆದ ಜುಲೈ 1ರಿಂದ ಅನ್ವಯವಾಗಲಿದೆ. ಮೂಲವೇತನದ ಶೇ.12.25 ರಿಂದ ಶೇ.14.25ಕ್ಕೆ ಪರಿಷ್ಕರಿಸಿ ಆದೇಶಿಸಿದೆ. ಕೇಂದ್ರ ಸರ್ಕಾರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಬಳಿಕ ರಾಜ್ಯ ಸರ್ಕಾರ ಡಿಎಯನ್ನು ಪರಿಷ್ಕರಿಸುವ ಸಂಪ್ರದಾಯವಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಶೇ.3ರಷ್ಟು ಡಿಎ ಹೆಚ್ಚಳ ಮಾಡಿತ್ತು. ಇದೇ ರೀತಿ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮನವಿ ಮಾಡಿದ್ದರು. ಇದರಂತೆ ಶೇ.2ರಷ್ಟು ಡಿಎ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ಧಾರೆ. ತುಟ್ಟಿಭತ್ಯೆ ಹೆಚ್ಚಳಕ್ಕೆ ಷಡಾಕ್ಷರಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಸರ್ಕಾರಿ ನೌಕರರಿಗೆ 'ಆರೋಗ್ಯ ಸಂಜೀವಿನಿ' ಯೋಜನೆ ಜಾರಿ: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ನೀಡುವ 'ಕರ್ನಾಟಕ ಆರೋಗ್ಯ ಸಂಜೀವಿನಿ' ಯೋಜನೆ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ. ಈ ಕುರಿತು ಸರ್ಕಾರ ಸೆಪ್ಟೆಂಬರ್ 23ರಂದು ಆದೇಶ ಹೊರಡಿಸಿತ್ತು.
ಈ ಯೋಜನೆಗಾಗಿ ನೌಕರರ ವೇತನದಿಂದ ಗ್ರೂಪ್‌ಗೆ ಅನುಗುಣವಾಗಿ ಮಾಸಿಕ ವಂತಿಕೆ ಕಡಿತವಾಗಲಿದ್ದು, ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಯೋಜನೆ ಅನುಷ್ಠಾನವಾಗಿದೆ.
ಯೋಜನೆಯು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ನಗದುರಹಿತವಾಗಿ ಪಡೆಯಲು ಸಹಾಯಕವಾಗಲಿದೆ. ಅಕ್ಟೋಬರ್‌ನಿಂದಲೇ ಇದರ ಪ್ರಯೋಜನಗಳು ಲಭ್ಯ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಬಂದ ದಿನಾಂಕದಿಂದ ಪ್ರಸ್ತುತ ಜಾರಿಯಲ್ಲಿರುವ "ಜ್ಯೋತಿ ಸಂಜೀವಿನಿ” ಯೋಜನೆ ಸ್ಥಗಿತಗೊಳ್ಳಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು
ಮಾಸಿಕ ವಂತಿಕೆಯನ್ನು ಪಾವತಿಸುವುದು ಹೇಗೆ?: ಈ ಯೋಜನೆಯಡಿ ಸರ್ಕಾರಿ ನೌಕರರ ವೇತನದಿಂದ ಕಡಿತಗೊಳಿಸಲ್ಪಟ್ಟ ವಂತಿಕೆಯನ್ನು ಎಲ್ಲಾ ಡಿಡಿಒಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಈ ಉದ್ದೇಶಕ್ಕಾಗಿಯೇ ತೆರೆಯಲಾದ ಬ್ಯಾಂಕ್ ಖಾತೆಗೆ ಖಜಾನೆ-2ರಲ್ಲಿ ಸೃಜಿಸಲಾಗುವ ಸ್ವೀಕೃತಿದಾರರ ಐಡಿ (ID)ಗೆ ಜಮಾ ಮಾಡಬೇಕು. (ಬ್ಯಾಂಕ್ ಖಾತೆ ವಿವರಗಳನ್ನು ಡಿಡಿಒಗಳಿಗೆ HRMS ಮುಖಾಂತರ ತಿಳಿಸಲಾಗುತ್ತದೆ).
ಸರ್ಕಾರಿ ನೌಕರನ ಪತಿ ಅಥವಾ ಪತ್ನಿ ಕೂಡ ಸರ್ಕಾರಿ ನೌಕರರಾಗಿರುವಲ್ಲಿ ವಂತಿಕೆಯನ್ನು ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಪಾವತಿಸುವ ಬಗ್ಗೆ ಸಂಬಂಧಪಟ್ಟ ಸರ್ಕಾರಿ ನೌಕರರೇ ತೀರ್ಮಾನಿಸಿ ಡಿಡಿಒಗೆ ಮಾಹಿತಿ ನೀಡಬೇಕು.
ಇವುಗಳನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸ್ ಅಂಕಗಳು ಶೇ.33ಕ್ಕೆ ಇಳಿಕೆ
'ಬಿ' ಖಾತಾದಿಂದ 'ಎ' ಖಾತಾ ಪರಿವರ್ತನೆಗೆ ಸರ್ಕಾರ ಅಸ್ತು: ಮಾರ್ಗಸೂಚಿ ದರ ಶೇ.5ರಷ್ಟು ಪಾವತಿಸಿ 'ಎ' ಖಾತಾ ಪಡೆಯಿರಿ

