ETV Bharat / state

30 ದಿನಗಳಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭ: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ

ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹ ಕೇಳಿಬಂದ ಬೆನ್ನಲ್ಲೇ ವಿವಿಧ ಇಲಾಖೆಯಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ.

KARNATAKA GOVERNMENT  HK PATIL  ಖಾಲಿ ಹುದ್ದೆಗಳ ನೇಮಕಾತಿ  CABINET MEETING  RECRUITMENT
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : February 27, 2026 at 7:11 AM IST

3 Min Read
Choose ETV Bharat

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಜೊತೆಗೆ ನೇಮಕಾತಿ ಪ್ರಕ್ರಿಯೆಯನ್ನು 30 ದಿನಗಳಲ್ಲಿ ಪ್ರಾರಂಭಿಸಲು ತೀರ್ಮಾನಿಸಿದೆ.

ಎರಡು ದಿನಗಳ ಹಿಂದೆ ಧಾರವಾಡದಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ನಡೆಸಿದ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯ ವಿವಿಧ ಇಲಾಖೆಗಳು ಮತ್ತು ಸರ್ಕಾರಿ ಸ್ವಾಮ್ಯದ ನಿಗಮಗಳಲ್ಲಿ ಅಂದಾಜು 2.7 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.

ನೇಮಕಾತಿ ಸಂಬಂಧ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ. ಒಳಮೀಸಲಾತಿ ಪ್ರಮಾಣದ ಬಗ್ಗೆ ಪ್ರಶ್ನಿಸಲಾಗಿದ್ದರಿಂದ ಹೈಕೋರ್ಟ್‌ ಶೇ.56 ಮೀಸಲಾತಿ ಹೆಚ್ಚಳಕ್ಕೆ ತಡೆ ಕೊಟ್ಟಿದೆ. ಸದ್ಯ ಶೇ.50 ಮೀಸಲಾತಿ ಅಡಿ 56,432 ಹುದ್ದೆಗಳ ನೇಮಕಾತಿ ಮಾಡುತ್ತೇವೆ ಎಂದು ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಶೇ‌.56ರಷ್ಟು ಮೀಸಲಾತಿ ಬದಲು ಶೇ.50 ರಷ್ಟು ಮಾತ್ರವೇ ವಿವಿಧ ಹುದ್ದೆಗಳನ್ನ ತುಂಬಲು ಸಚಿವ ಸಂಪುಟ ಅನುಮೋದಿಸಿದೆ‌. ಹೈಕೋರ್ಟ್ ಮಧ್ಯಂತರ ಆದೇಶ ಹಾಗೂ ಅಡ್ವೋಕೇಟ್ ಜನರಲ್ ಅವರ ಸಲಹೆ ಆಧರಿಸಿ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ವಿಳಂಬವಾಗಬಾರದು ಎಂಬ ಕಾರಣಕ್ಕೆ‌ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ 30 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸದ್ಯಕ್ಕೆ ಹಳೆಯ ಮೀಸಲಾತಿ ಪ್ರಮಾಣದಲ್ಲಿ (50%) ನೇಮಕಾತಿ ನಡೆದರೂ, ಹೆಚ್ಚುವರಿಯಾಗಿ ಎಸ್‌ಸಿಗೆ ಶೇಕಡಾ 2 ರಷ್ಟು ಮತ್ತು ಎಸ್‌ಟಿಗೆ ಶೇಕಡಾ 4 ರಷ್ಟು ಹುದ್ದೆಗಳನ್ನು ಕಾಯ್ದಿರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹ: ಧಾರವಾಡದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಶೇಕಡಾವಾರು ಹೆಚ್ಚಳ ಮತ್ತು ಹೈಕೋರ್ಟ್ ಮುಂದೆ ಪರಿಶಿಷ್ಟ ಜಾತಿಗಳಲ್ಲಿನ ಆಂತರಿಕ ಮೀಸಲಾತಿ ಹಂಚಿಕೆ ವಿರುದ್ಧ ದಾಖಲಾಗಿರುವ ಅರ್ಜಿಯನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ಪ್ರಕ್ರಿಯೆ ಮುಂದುವರಿಸುವ ಕುರಿತು ಇಂದು ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾದ ಚರ್ಚೆ ನಡೆಯಿತು ಎಂದು ಸಂಸದೀಯ ವ್ಯವಹಾರಗಳ ಸಚಿವ ಹೆಚ್​ ಕೆ ಪಾಟೀಲ್​ ಹೇಳಿದರು.

ಡಿಸೆಂಬರ್ 28, 2022ರ ಮೊದಲು ಜಾರಿಯಲ್ಲಿದ್ದ ಮೀಸಲಾತಿ ಆದೇಶ ಮತ್ತು ರೋಸ್ಟರ್ ಪಾಯಿಂಟ್‌ಗಳಿಗೆ ಅನುಗುಣವಾಗಿ ಸರ್ಕಾರವು ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲಿದೆ ಎಂದು ಅವರು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

ಆ ಹೆಚ್ಚಳವನ್ನು ಗಣನೆಗೆ ತೆಗೆದುಕೊಂಡು, ನಾವು ಈಗ ಶೇಕಡಾ 50ಕ್ಕೆ ಹಿಂತಿರುಗಿಸುತ್ತಿದ್ದೇವೆ. ನ್ಯಾಯಾಲಯದ ತೀರ್ಪಿನ ಫಲಿತಾಂಶಕ್ಕೆ ಒಳಪಟ್ಟು, ನಾವು ಎಸ್‌ಸಿಗೆ ಶೇಕಡಾ 2 ಮತ್ತು ಎಸ್‌ಟಿ ಮೀಸಲಾತಿಗೆ ಶೇಕಡಾ 4 ರಷ್ಟು ಸೇರ್ಪಡೆ ಮಾಡುತ್ತೇವೆ ಎಂದು ಹೆಚ್​ ಕೆ ಪಾಟೀಲ್ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ ಅವರು, ಈ ವಿಷಯ ನ್ಯಾಯಾಲಯದಲ್ಲಿರುವುದರಿಂದ, ನಾವು ಶೇಕಡಾ 56ಕ್ಕೆ ಹೋರಾಡುತ್ತಿದ್ದೇವೆ. ಈ ವಿಚಾರದಲ್ಲಿ ನ್ಯಾಯಾಲಯದಲ್ಲಿ ಯಾವ ಫಲಿತಾಂಶ ಬರುತ್ತದೋ ಆ ಆದೇಶಕ್ಕೆ ಒಳಪಟ್ಟು ನಿರ್ಧಾರ ಕೈಗೊಳ್ಳುತ್ತೇವೆ. ಒಂದೊಮ್ಮೆ ನಮಗೆ ಶೇಕಡಾ 56ರರಷ್ಟು ಮೀಸಲಾತಿ ಜಾರಿಗೆ ತರಲು ಅವಕಾಶ ಸಿಕ್ಕರೆ, ಆ ಸಮಯದಲ್ಲಿ ಶೇಕಡಾ 2 ರಷ್ಟು ಹೆಚ್ಚು ಸೀಟುಗಳನ್ನು ಎಸ್‌ಸಿಗಳಿಗೆ ಮತ್ತು ಶೇಕಡಾ 4 ರಷ್ಟು ಎಸ್‌ಟಿಗಳಿಗೆ ನೀಡಲಾಗುತ್ತದೆ ಎಂದು ಹೇಳಿದರು. ಆಂತರಿಕ ಮೀಸಲಾತಿ ಶೇಕಡಾ 50ರ ಮಿತಿಯೊಳಗೆ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗೆ, ಸಚಿವರು, ಹೌದು. ಇದೀಗ, ನಮಗೆ ಶೇಕಡಾ 50 ರೊಳಗೆ ಉಳಿಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದರು.

'ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ-2025'ಕ್ಕೆ ಗುರುವಾರ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಕಾವೇರಿ 6ನೇ ಹಂತದ ಯೋಜನೆಗೆ ಅನುಮೋದನೆ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಉಪನಗರಗಳಿಗೆ ಕುಡಿಯುವ ನೀರು ಒದಗಿಸಲು ಬೆಂಗಳೂರು ಜಲಮಂಡಳಿ ವತಿಯಿಂದ ಕಾವೇರಿ 6ನೇ ಹಂತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರ ಅಂದಾಜು ವೆಚ್ಚ 6,939 ಕೋಟಿ ರೂಪಾಯಿಯಾಗಿದೆ. ಈ ಯೋಜನೆಯಿಂದ ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚಿಕ್ಕಬಾಣಾವರ, ಮಾದನಾಯಕನಹಳ್ಳಿ, ಬ್ಯಾ ಶೆಟ್ಟಿ ಹಳ್ಳಿ, ವಿಜಯಪುರ ಮುಂತಾದ ಉಪನಗರಗಳಿಗೆ ನೀರು ಸರಬರಾಜು ಆಗಲಿದೆ ಎಂದರು.

ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು:

  • ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ನಿರ್ಮಾಣ ಹಾಗೂ ಮೊದಲನೇ ಹಂತದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಕಾಮಗಾರಿಗಳನ್ನು 48 ಕೋಟಿ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
  • ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಸ್ಥಾಪನೆಗೆ ಅನುಮೋದನೆ.
  • ರಾಜ್ಯದ 854 ಸರ್ಕಾರಿ ಪ್ರೌಢಶಾಲೆಗಳು ಹಾಗೂ ಶಾಲೆಗಳಲ್ಲಿ 4,429 ಕೋಟಿ ರೂ ಅಂದಾಜು ಮೊತ್ತದಲ್ಲಿ ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಲು ಅನುಮತಿ.

ಇದನ್ನೂ ಓದಿ: ಕೊಟ್ಟ ಮಾತಿನಂತೆ ನೇಮಕಾತಿ ಮಾಡುತ್ತೇವೆ, ಬಜೆಟ್​ನಲ್ಲೂ ಘೋಷಿಸುವೆ: ಮುಖ್ಯಮಂತ್ರಿ ಸಿದ್ದರಾಮಯ್ಯ