ಡಿಕೆಶಿ ಸಂಪುಟದಲ್ಲಿ ಬೆಳಗಾವಿಗೆ ಸಿಗುತ್ತಾ ಸಿಂಹಪಾಲು? ದೊಡ್ಡದಿದೆ ಆಕಾಂಕ್ಷಿಗಳ ಪಟ್ಟಿ, ಯಾರೆಲ್ಲಾ ಇದ್ದಾರೆ ರೇಸ್ನಲ್ಲಿ?
ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಆಗುತ್ತಿದ್ದು, ಅವರ ಸಂಪುಟದಲ್ಲಿ ಈ ಬಾರಿ ಬೆಳಗಾವಿ ಜಿಲ್ಲೆಯ ಎಷ್ಟು ಜನರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ಮೂಡಿದೆ. ಯಾರೆಲ್ಲಾ ಆಕಾಂಕ್ಷಿಗಳಿದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ.

Published : May 30, 2026 at 7:09 PM IST
ಬೆಳಗಾವಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಿದ್ದಂತೆ, ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಜಿಲ್ಲೆಯ ಶಾಸಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಬೆಂಗಳೂರು ನಂತರ ದೊಡ್ಡ ಜಿಲ್ಲೆ ಬೆಳಗಾವಿಗೆ ಕನಿಷ್ಠ 4 ಸಚಿವ ಸ್ಥಾನ ಆದರೂ ಸಿಗಬೇಕು. ಇದು ನಮ್ಮ ನ್ಯಾಯಯುತ ಹಕ್ಕು. ಬೆಂಗಳೂರಿಗೆ ಬೆಣ್ಣೆ, ಬೆಳಗಾವಿಗೆ ಸುಣ್ಣ ಸರಿಯಲ್ಲ. ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಸಂಪುಟದಲ್ಲಿ ನಮಗೆ ಸಿಂಹಪಾಲು ಸಿಗಬೇಕು ಅಂತಾ ಈ ಭಾಗದ ಜನರು ಕಾಂಗ್ರೆಸ್ ಹೈಕಮಾಂಡ್ಗೆ ಆಗ್ರಹಿಸಿದ್ದಾರೆ.
ಹೌದು, ಬೆಳಗಾವಿ ಜಿಲ್ಲೆಯ 11 ಕಾಂಗ್ರೆಸ್ ಶಾಸಕರ ಪೈಕಿ ಸಿದ್ದರಾಮಯ್ಯ ಸರ್ಕಾರದಲ್ಲಿ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮಾತ್ರ ಮಂತ್ರಿ ಸ್ಥಾನ ಒಲಿದು ಬಂದಿತ್ತು. ಈಗ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದ್ದು, ನೂತನ ಸಂಪುಟದಲ್ಲಿ ತಮ್ಮನ್ನು ಮಂತ್ರಿ ಮಾಡುವಂತೆ 6ಕ್ಕೂ ಅಧಿಕ ಶಾಸಕರು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪುನಃ ಸಚಿವರಾಗುವ ವಿಶ್ವಾಸದಲ್ಲಿದ್ದು, ಅವರ ಜೊತೆಗೆ ಲಕ್ಷ್ಮಣ ಸವದಿ, ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ಆಸೀಫ್ ಸೇಠ್ ಕೂಡ ತಮಗೂ ಸಚಿವ ಸ್ಥಾನ ನೀಡುವಂತೆ, ಬೆಂಗಳೂರಿನಲ್ಲೇ ಬೀಡುಬಿಟ್ಟಿರುವ ಈ ಎಲ್ಲ ನಾಯಕರು, ಕಾಂಗ್ರೆಸ್ ಪ್ರಭಾವಿ ಮತ್ತು ಹಿರಿಯ ಮುಖಂಡರ ಮನವೊಲಿಸಲು ಮುಂದಾಗಿದ್ದಾರೆ.
ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದ ಜೊತೆಗೆ ಡಿಸಿಎಂ ಸ್ಥಾನವೂ ಸಿಗುವ ಸಾಧ್ಯತೆ ದಟ್ಟವಾಗಿದೆ. ಇಷ್ಟೇ ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಹುದ್ದೆ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ. ಸಿದ್ದರಾಮಯ್ಯ ಸಂಪುಟದಲ್ಲಿ ಡಿ.ಕೆ. ಶಿವಕುಮಾರಗೆ ಸಿಕ್ಕ ಸ್ಥಾನಮಾನವು ಈ ಸರ್ಕಾರದಲ್ಲಿ ತನಗೂ ಸಿಗಬೇಕು ಅಂತಾ ಹೈಕಮಾಂಡ್ ಮುಂದೆ ಸತೀಶ್ ತಮ್ಮ ಬೇಡಿಕೆ ಮಂಡಿಸಿರುವುದು, ಅವರ ಆಪ್ತ ವಲಯದಿಂದ ಕೇಳಿ ಬಂದಿದೆ. ಒಂದು ವೇಳೆ ಈ ಎಲ್ಲಾ ಸ್ಥಾನಗಳು ಅವರಿಗೆ ಸಿಕ್ಕಿದ್ದೇ ಆದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಸದೃಢ ಆಗಲಿದೆ. ಹಿರಿಯ ರಾಜಕಾರಣಿ ವಿ.ಎಸ್. ಕೌಜಲಗಿ ಅವರ ನಂತರದಲ್ಲಿ ಜಿಲ್ಲೆಯ ಮತ್ತೊಬ್ಬ ನಾಯಕ ಕೆಪಿಸಿಸಿ ಅಧ್ಯಕ್ಷರಾದ ಹೆಗ್ಗಳಿಕೆಗೆ ಸತೀಶ್ ಪಾತ್ರರಾಗಲಿದ್ದಾರೆ. ಈಗಾಗಲೇ ಅವರಿಗೆ ಉನ್ನತ ಸ್ಥಾನ ಸಿಗಲಿ ಅಂತಾ ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.

ಲಕ್ಷ್ಮೀಗೆ ಮತ್ತೆ ಒಲಿಯುತ್ತಾ ಅದೃಷ್ಟ? ಸಿದ್ದರಾಮಯ್ಯ ಸರ್ಕಾರದಲ್ಲೇ ಮಂತ್ರಿ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಈಗ ತಮ್ಮ ಗುರು ಡಿ.ಕೆ. ಶಿವಕುಮಾರ್ ಸಂಪುಟದಲ್ಲೂ ಮಂತ್ರಿ ಆಗುವ ಉತ್ಸಾಹದಲ್ಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯೊಂದಿಗೆ ಮತ್ತೊಂದು ದೊಡ್ಡ ಖಾತೆ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಬೇರೆಯವರಿಗೆ ಅವಕಾಶ ಮಾಡಿಕೊಡುವ ಸಂಬಂಧ ಹೆಬ್ಬಾಳ್ಕರ್ ಅವರನ್ನು ಸಂಪುಟದಿಂದ ಕೈಬಿಡುತ್ತಾರೆ ಎನ್ನುವ ಚರ್ಚೆಯೂ ಇದೆ. ಈ ಚರ್ಚೆ ಸುಳ್ಳಾಗಿಸಿ ತಮ್ಮ ಸಾಮರ್ಥ್ಯ ಮತ್ತು ಪ್ರಭಾವದಿಂದ ಮತ್ತೆ ಅವರಿಗೆ ಮಂತ್ರಿ ಸ್ಥಾನ ಸಿಗುತ್ತೆ ಎನ್ನಲಾಗುತ್ತಿದೆ.

ಡಿಕೆಶಿ ಸಂಪುಟದಲ್ಲಿ ಸವದಿಗೆ ಸಿಗುತ್ತಾ ಸ್ಥಾನ? ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಗೆದ್ದಿರುವ ಅಥಣಿ ಶಾಸಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಸಿದ್ದರಾಮಯ್ಯ ಸರ್ಕಾರದಲ್ಲೇ ಸಚಿವರಾಗುವ ಆಸೆ ಇಟ್ಟುಕೊಂಡಿದ್ದರು. ಆದರೆ, ಅದು ಸಾಧ್ಯ ಆಗಿರಲಿಲ್ಲ. ಈಗ ತಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿಕೆಶಿ ಅವರೇ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಸವದಿ ಅವರಿಗೆ ಅದೃಷ್ಟ ಕುಲಾಯಿಸಲಿದೆ. ಸವದಿ ನಾಲ್ಕು ಬಾರಿ ಗೆದ್ದಿದ್ದು, ಉತ್ತರ ಕರ್ನಾಟಕದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಆಗಿದ್ದರು. ಆದರೆ, ಕಾಂಗ್ರೆಸ್ ಅವರನ್ನು ಕಡೆಗಣಿಸಿದೆ ಎಂಬ ಆರೋಪ ಇದೆ. ಹೀಗಾಗಿ, ಈ ಬಾರಿ ಅವರ ಹಿರಿತನಕ್ಕೆ ಮನ್ನಣೆ ಸಿಗುವ ಸಾಧ್ಯತೆ ಹೆಚ್ಚಿದೆ.

ಮಹಾಂತೇಶ ಕೌಜಲಗಿಗೆ ಮಣೆ ಹಾಕುತ್ತಾ ಹೈ ಕಮಾಂಡ್? ಬೈಲಹೊಂಗಲ ಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ ಅವರು ಕೂಡ ಮಂತ್ರಿ ಸ್ಥಾನದ ರೇಸ್ನಲ್ಲಿದ್ದಾರೆ. ನಾಲ್ಕು ಬಾರಿ ಇವರು ಗೆದ್ದಿದ್ದು, ಒಮ್ಮೆ ವಿಧಾನಪರಿಷತ್ ಸದಸ್ಯರಾಗಿದ್ದರು. ಮಹಾಂತೇಶ ಅವರ ತಂದೆ ಶಿವಾನಂದ ಕೌಜಲಗಿ ಅವರು ದೇವೇಗೌಡರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಅಜ್ಜ ಹೆಚ್.ವಿ. ಕೌಜಲಗಿ ಅವರು ಬಿ.ಡಿ. ಜತ್ತಿ ಅವರ ಸರ್ಕಾರದಲ್ಲಿ ಕಂದಾಯ ಇಲಾಖೆ ಮಂತ್ರಿ ಆಗಿದ್ದರು. ಸುದೀರ್ಘ ರಾಜಕೀಯ ಹಿನ್ನೆಲೆ ಹೊಂದಿರುವ ಮಹಾಂತೇಶ ಅವರು ತಮ್ಮದೇ ಪ್ರಭಾವದಿಂದ ಮಂತ್ರಿ ಆಗಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಕೌಜಲಗಿ ಅವರ ಅಭಿಮಾನಿಗಳು ಕೂಡ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ತಮ್ಮ ನಾಯಕನಿಗೆ ಮಂತ್ರಿ ಸ್ಥಾನ ಸಿಗಲಿ ಅಂತಾ ಪ್ರಾರ್ಥಿಸಿದರು.

ಈ ಬಾರಿಯಾದ್ರೂ ಮಂತ್ರಿ ಆಗ್ತಾರಾ ಅಶೋಕ ಪಟ್ಟಣ? ರಾಮದುರ್ಗ ಶಾಸಕ ಅಶೋಕ ಪಟ್ಟಣ ಸಿದ್ದರಾಮಯ್ಯ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಅವರ ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಮೂರು ಬಾರಿ ಶಾಸಕರಾಗಿರುವ ಪಟ್ಟಣ, 2013-18 ಹಾಗೂ 2023ರಿಂದ ಈವರೆಗೆ ವಿಧಾನಸಭೆ ಮುಖ್ಯ ಸಚೇತಕರಾಗಿ ಕೆಲಸ ಮಾಡಿದ್ದಾರೆ. ಹಿರಿತನದ ಆಧಾರದ ಮೇಲೆ ಇವರು ಕೂಡ ತಮ್ಮನ್ನು ಮಂತ್ರಿ ಮಾಡುವಂತೆ ಹೈಕಮಾಂಡ್ ಮುಂದೆ ಕೇಳಿಕೊಂಡಿದ್ದಾರೆ. ಅಶೋಕ ಪಟ್ಟಣ ತಂದೆ ಸ್ವಾತಂತ್ರ್ಯ ಹೋರಾಟಗಾರ ಮಹಾದೇವಪ್ಪ ಹಾಗೂ ತಾಯಿ ಶಾರದಮ್ಮ ಇಬ್ಬರು ಕೂಡ ಶಾಸಕರಾಗಿದ್ದರು. ಈ ಬಾರಿಯಾದರೂ ಇವರಿಗೆ ಅದೃಷ್ಟ ಒಲಿಯುತ್ತಾ ಅಂತಾ ಕಾದು ನೋಡುತ್ತಿದ್ದಾರೆ ಅವರ ಅಭಿಮಾನಿಗಳು.

ಗಣೇಶ ಹುಕ್ಕೇರಿ ಕೂಡ ಸಚಿವ ಸ್ಥಾನದ ಆಕಾಂಕ್ಷಿ: ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಹೆಸರು ಕೂಡ ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ತಂದೆ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಪ್ರಭಾವ ಬಳಸಿ, ಸಚಿವರಾಗಲು ಪ್ರಯತ್ನಿಸುತ್ತಿದ್ದಾರೆ. ಗಣೇಶ ಯುವ ಶಾಸಕರಾಗಿದ್ದು, ಚಿಕ್ಕೋಡಿ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಒಂದು ವೇಳೆ ಯುವಕರಿಗೆ ಮಣೆ ಹಾಕಿದ್ದಲ್ಲಿ ಗಣೇಶ ಅವರಿಗೆ ಡಿಕೆಶಿ ಸಂಪುಟದಲ್ಲಿ ಸ್ಥಾನ ಸಿಗಬಹುದು.

ಮಂತ್ರಿಗಿರಿಗೆ ಬೇಡಿಕೆ ಇಟ್ಟ ಆಸೀಫ್ ಸೇಠ್: ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ಅಲ್ಪಸಂಖ್ಯಾತ ಕೆಟಗರಿಯಲ್ಲಿ ತನಗೆ ಮಂತ್ರಿ ಸ್ಥಾನ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ನಾನು ಮತ್ತು ಅಣ್ಣ ಫಿರೋಜ್ ಸೇಠ್ ಕಾಂಗ್ರೆಸ್ ಪಕ್ಷ ಕಟ್ಟಲು ಸಾಕಷ್ಟು ಶ್ರಮ ವಹಿಸಿದ್ದೇವೆ. ಇದನ್ನು ಪರಿಗಣಿಸಿ ತನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಈಟಿವಿ ಭಾರತಕ್ಕೆ ಆಸೀಫ್ ಸೇಠ್ ತಿಳಿಸಿದರು. ಕಿತ್ತೂರು ಕರ್ನಾಟಕದಲ್ಲಿ ನಮ್ಮ ಸಮುದಾಯಕ್ಕೆ ಒಮ್ಮೆಯೂ ಸಚಿವ ಸ್ಥಾನ ಸಿಕ್ಕಿಲ್ಲ. ಅದೇ ರೀತಿ ಈವರೆಗೆ ಬೆಳಗಾವಿ ನಗರದ ಯಾವೊಬ್ಬ ಶಾಸಕರೂ ಮಂತ್ರಿ ಆಗಿಲ್ಲ. ಹಾಗಾಗಿ, ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ಮಾತನಾಡಿ, ಬೆಂಗಳೂರು ನಂತರ ಬೆಳಗಾವಿ ಅತೀ ದೊಡ್ಡ ಜಿಲ್ಲೆ. 18 ವಿಧಾನಸಭೆ ಕ್ಷೇತ್ರಗಳ ಪೈಕಿ 11 ಶಾಸಕರು ನಮ್ಮ ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದಿದ್ದಾರೆ. ಈ ಹಿಂದೆ ಜಿಲ್ಲೆಗೆ 3, 4, 5 ಮಂತ್ರಿ ಸ್ಥಾನಗಳು ಸಿಕ್ಕ ಇತಿಹಾಸ ಇದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೋಸ್ಕರ ಡಿ.ಕೆ. ಶಿವಕುಮಾರ ಅವರ ಸಂಪುಟದಲ್ಲಿ ಕನಿಷ್ಠ ನಾಲ್ವರು ಶಾಸಕರಿಗೆ ಆದರೂ ಮಂತ್ರಿ ಸ್ಥಾನ ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ. ಇದು ಇಡೀ ಜಿಲ್ಲೆಯ ಜನರ ನಿರೀಕ್ಷೆಯೂ ಆಗಿದೆ ಎಂದರು.
ಈ ಕುರಿತು ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ಮೆಹಬೂಬ್ ಮಕಾನದಾರ್ ಮಾತನಾಡಿ, ಪ್ರತಿ ಸರ್ಕಾರದಲ್ಲೂ ಉತ್ತರಕರ್ನಾಟಕಕ್ಕೆ ಸಿಗಬೇಕಾದ ಪ್ರಾತಿನಿಧ್ಯ ಸಿಗುವುದಿಲ್ಲ. ಅದರಲ್ಲೂ ಬೆಂಗಳೂರು ನಂತರದಲ್ಲಿ ಅತೀ ದೊಡ್ಡ ಜಿಲ್ಲೆ ಆಗಿರುವ ಬೆಳಗಾವಿಗೆ ಕೇವಲ ಎರಡು ಮಂತ್ರಿ ಸ್ಥಾನ ನೀಡಿದರೆ ದೊಡ್ಡ ಅನ್ಯಾಯ ಮಾಡಿದಂತೆ ಆಗುತ್ತದೆ. ಬೆಂಗಳೂರಿಗೆ 8-10 ಸ್ಥಾನ ಕೊಟ್ಟು ಬೆಳಗಾವಿಗೆ ಎರಡು ಕೊಡುವುದು ಸರಿಯಲ್ಲ. ಈ ರೀತಿಯ ಮಲತಾಯಿ ಧೋರಣೆ ನಿಲ್ಲಿಸಬೇಕು. ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜೊತೆಗೆ ಇನ್ನೂ ಇಬ್ಬರನ್ನು ಮಂತ್ರಿ ಮಾಡಬೇಕು. ಇದು ನಮ್ಮ ಭಾಗದ ನ್ಯಾಯಯುತ ಹಕ್ಕಾಗಿದೆ. ಹಿರಿತನ, ಸಾಮರ್ಥ್ಯ ಆಧರಿಸಿ ಲಕ್ಷ್ಮಣ ಸವದಿ, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ಅಶೋಕ ಪಟ್ಟಣ, ಆಸೀಫ್ ಸೇಠ್ ಸೇರಿ ಹಲವರು ಮಂತ್ರಿ ಆಗಲು ಅರ್ಹರಿದ್ದಾರೆ. ಇವರಲ್ಲಿ ಯಾರಿಗಾದರೂ ಸಂಪುಟದಲ್ಲಿ ಸ್ಥಾನ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಪೆಟ್ಟು ಬೀಳುತ್ತದೆ ಎಂದು ಎಚ್ಚರಿಸಿದರು.
ಒಟ್ಟಾರೆ ಈ ಎಲ್ಲ ಕಾಂಗ್ರೆಸ್ ಶಾಸಕರು ಮಂತ್ರಿಗಿರಿಗಾಗಿ ದುಂಬಾಲು ಬಿದ್ದಿದ್ದು, ಯಾರಿಗಾದರೂ ಮಂತ್ರಿ ಮಾಡಿ. ಆದರೆ, ಕನಿಷ್ಠ ನಾಲ್ಕು ಮಂದಿ ಆದರೂ ಬೆಳಗಾವಿಯವರು ಡಿಕೆಶಿ ಸಂಪುಟದಲ್ಲಿ ಇರಬೇಕು ಅಂತಾ ಜಿಲ್ಲೆಯ ಜನರು ಆಗ್ರಹಿಸಿದ್ದಾರೆ. ಅಂತಿಮವಾಗಿ ಯಾರಿಗೆಲ್ಲಾ ಸಚಿವ ಸ್ಥಾನ ಸಿಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಲೋಕಭವನದಲ್ಲಿ ಜೂನ್ 3 ರಂದು ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪದಗ್ರಹಣ: ಕಾಂಗ್ರೆಸ್ನಿಂದ ಅಧಿಕೃತ ಮಾಹಿತಿ

