ETV Bharat / state

ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಕಡ್ಡಾಯ: ಸರ್ಕಾರ ಆದೇಶ

ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ, ಸಂಸ್ಥೆಗಳು ನಡೆಸುವ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

karnataka-government-order-making-prior-permission-mandatory-for-programs-conducted-by-private-organizations-in-government-places
ವಿಧಾನಸೌಧ (ETV Bharat)
author img

By ETV Bharat Karnataka Team

Published : October 18, 2025 at 9:03 PM IST

3 Min Read
Choose ETV Bharat

ಬೆಂಗಳೂರು: ಸಾರ್ವಜನಿಕ, ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ, ಸಂಸ್ಥೆಗಳು, ಸಂಘಟನೆಗಳ ಕಾರ್ಯಚಟುವಟಿಕೆಗೆ ಅನುಮತಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ, ಗೃಹ ಇಲಾಖೆಯಿಂದ ಈ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ದವಾಗಿ ನಡೆಸಲು ಅನುಮತಿ ನೀಡುವ ಸಂಬಂಧ ಮಾರ್ಗಸೂಚಿ ಹೊರಡಿಸಲು ತೀರ್ಮಾನಿಸಲಾಗಿತ್ತು.‌ ಸಚಿವ ಸಂಪುಟದ ತೀರ್ಮಾನದಂತೆ ಗೃಹ ಇಲಾಖೆ ಇದೀಗ ಆದೇಶ ಹೊರಡಿಸಿದೆ. ಅಧಿಕೃತ ಆದೇಶದಂತೆ ಯಾವುದೇ ಖಾಸಗಿ ಸಂಘ, ಸಂಸ್ಥೆ, ಸಂಘಟನೆ, ಜನರ ಗುಂಪು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದೇ ಸರ್ಕಾರಿ ಸ್ಥಳ, ಮೈದಾನಗಳನ್ನು ಬಳಕೆ ಮಾಡಬೇಕು.‌

ಸರ್ಕಾರಿ ಸ್ಥಳಗಳು ಯಾವುದು?: ಆದೇಶದಲ್ಲಿ ಯಾವೆಲ್ಲಾ ಸರ್ಕಾರಿ, ಸಾರ್ವಜನಿಕ ಸ್ಥಳಗಳನ್ನು ಬಳಸಲು ಪೂರ್ವಾನುಮತಿ ಪಡೆಯಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಅದರಂತೆ ಸರ್ಕಾರದ/ಸರ್ಕಾರಿ ಸಾಮ್ಯದ/ನಿಗಮ/ಮಂಡಳಿಗಳ, ಶಾಲಾ -ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು, ಕೆರೆಗಳು ಮತ್ತು ಇತರ ಆಸ್ತಿ/ಜಾಗಗಳನ್ನು ಬಳಕೆ ಮಾಡಬೇಕಾದರೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಅಗತ್ಯವಾಗಿದೆ.‌

ಯಾರಿಂದ ಅನುಮತಿ ಪಡೆಯಬೇಕು?: ಪ್ರದೇಶ ವ್ಯಾಪ್ತಿಯ ಪೊಲೀಸ್ ಕಮಿಷನರ್ ಅಥವಾ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರಿಂದ ಅಥವಾ ಸರ್ಕಾರ ಅನುಮತಿಸಿದ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.‌

ಸರ್ಕಾರದ/ಸರ್ಕಾರಿ ಸಾಮ್ಯದ ಶಾಲಾ-ಕಾಲೇಜುಗಳು, ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಆವರಣದ ಬಳಕೆಗೆ ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಅನುಮತಿ ಅಗತ್ಯವಾಗಿದೆ.‌ ಉದ್ಯಾನಗಳು, ಆಟದ ಮೈದಾನಗಳು, ಇತರ ತೆರೆದ ಸ್ಥಳಗಳ ಬಳಕೆಗೆ ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುಮತಿ ಅಗತ್ಯವಾಗಿದೆ. ಸಾರ್ವಜನಿಕ ರಸ್ತೆಗಳು, ಸರ್ಕಾರದ ಇತರ ಆಸ್ತಿ/ಸ್ಥಳಗಳು- ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು/ ಪೊಲೀಸ್ ಅಧೀಕ್ಷಕರ ಅನುಮತಿ ಪಡೆಯಬೇಕಾಗಿದೆ.

ಸಂಘ ಸಂಸ್ಥೆಗಳು ಎಂದರೆ?: ಯಾವುದೇ ನೋಂದಾಯಿತ ಅಥವಾ ನೋಂದಾವಣೆಯಾಗದ ಖಾಸಗಿ ಸಂಘಟನೆ, ಸೊಸೈಟಿ, ಟ್ರಸ್ಟ್, ಕ್ಲಬ್, ಜನರ ಗುಂಪು, ಒಕ್ಕೂಟ, ಒತರೆ ಯಾವುದೇ ಸಂಸ್ಥೆಗಳು ಪೂರ್ವಾನುಮತಿ ಪಡೆಯಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.‌

ಯಾವೆಲ್ಲಾ ಮೆರವಣಿಗೆ, ರಾಲಿಗೆ ಅನುಮತಿ ಅಗತ್ಯ?: ಯಾವುದೇ ಹೆಸರಿನಿಂದ ಕರೆಯಲ್ಪಡುವ 10ಕ್ಕಿಂತ ಅಧಿಕ ಜನರ ಗುಂಪನ್ನು ಮೆರವಣಿಗೆ, ರಾಲಿ ಎಂದು ಪರಿಗಣಿಸಲಾಗುತ್ತದೆ. ಅವರು ಸಂಗೀತ ಅಥವ ಇತರೆ ಚಟುವಟಿಕೆಗಳೊಂದಿಗೆ ಸರ್ಕಾರಿ ಸ್ಥಳಗಳಲ್ಲಿ ನಿರ್ದಿಷ್ಟ ಉದ್ದೇಶದೊಂದಿಗೆ ಒಟ್ಟಾಗಿ ಸಾಗುವುದು, ನಿಗದಿತ ಮಾರ್ಗದಲ್ಲಿ ಮೆರವಣಿಗೆ ಮಾಡಲು ಅನುಮತಿ ಕಡ್ಡಾಯವಾಗಿದೆ. ಆದರೆ, ಮದುವೆ ಮೆರವಣಿಗೆ, ಅಂತಿಮ‌ ಸಂಸ್ಕಾರ, ಅಂತಿಮ ಯಾತ್ರೆಗೆ ಇದು ಅನ್ವಯವಾಗುವುದಿಲ್ಲ.‌

3 ದಿನ ಮುಂಚಿತವಾಗಿ ಅರ್ಜಿ ಹಾಕಬೇಕು: ಖಾಸಗಿ ಸಂಘ, ಸಂಸ್ಥೆಗಳು, ಸಂಘಟನೆಗಳು ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಉದ್ದೇಶಿತ ಕಾರ್ಯಕ್ರಮ, ಮೆರವಣಿಗೆ ಮಾಡುವ ಮೂರು ದಿನ ಮುಂಚಿತವಾಗಿ ಅನುಮತಿಗೆ ಕೋರಿ ಲಿಖಿತವಾಗಿ ಸಕ್ಷಮ ಪ್ರಾಧಿಕಾರದ ಮುಂದೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

ಸಂಬಂಧಿತ ಅಧಿಕಾರಿ ಇತರೆ ಇಲಾಖೆಗಳ ಜೊತೆ ಅರ್ಜಿಯನ್ನು ಪರಿಶೀಲಿಸಬೇಕು.‌ ಅಗತ್ಯ ಬಿದ್ದರೆ ಅರ್ಜಿದಾರ ಸ್ಥಳೀಯ ಸಂಸ್ಥೆಗಳು, ಇತರೆ ಇಲಾಖೆಗಳಾದ ಲೋಕೋಪಯೋಗಿ, ಅಗ್ನಿಶಾಮಕ, ವಿದ್ಯುತ್ ಸರಬರಾಜು ಇಲಾಖೆಗಳಿಂದ ಎನ್ ಒಸಿ ಪಡೆಯಬೇಕು.

ಸಕ್ಷಮ ಪ್ರಾಧಿಕಾರ ಕರ್ನಾಟಕ ಪೊಲೀಸ್ ಕಾಯ್ದೆ 1963ಯಡಿ ಅಧಿಕಾರ ಬಳಸಿ ಸರ್ಕಾರಿ ಹಾಗು ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ ಹೇರಬಹುದು.‌ ಒಂದು ವೇಳೆ ಅರ್ಜಿದಾರ ಸಕ್ಷಮ ಪ್ರಾಧಿಕಾರದ ಎಲ್ಲಾ ಅಗತ್ಯ ನಿಯಮ, ನಿರ್ದೇಶನಗಳನ್ನು ಅನುಸರಿಸಿದ್ದರೆ ಉದ್ದೇಶಿತ ಕಾರ್ಯಕ್ರಮದ ಕನಿಷ್ಠ ಒಂದು ದಿನದ ಮುಂಚಿತವಾಗಿ ಲಿಖಿತ ಅನುಮತಿ ಆದೇಶ ನೀಡಬಹುದಾಗಿದೆ.‌

ಅರ್ಜಿದಾರ ಅನುಮತಿ ಪಡೆದ ಬಳಿಕ ಉದ್ದೇಶಿತ ಕಾರ್ಯಕ್ರಮ, ಮೆರವಣಿಗೆಗೆ ತಯಾರಿ ನಡೆಸಬಹುದಾಗಿದೆ. ಕಾರ್ಯಕ್ರಮ ಆಯೋಜಕರು ಅಥವಾ ಅರ್ಜಿದಾರರು ಸಾರ್ವಜನಿಕ, ಖಾಸಗಿ ಆಸ್ತಿ ಪಾಸ್ತಿ ಹಾನಿಗೊಳಗಾದರೆ ಅದಕ್ಕೆ ಹೊಣೆಗಾರರಾಗಿರುತ್ತಾರೆ. ಜೊತೆಗೆ ಅನುಮತಿಸಿದ ಕಾರ್ಯಕ್ರಮ, ಮೆರವಣಿಗೆಗಳಿಂದ ಉಂಟಾಗಬಹುದಾದ ಯಾವುದೇ ಅಪರಾಧ ಕೃತ್ಯಗಳಿಗೂ ಅವರು ಜವಾಬ್ದಾರರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.

ನಿಯಮ‌ ಉಲ್ಲಂಘಿಸಿದರೆ ಏನು ಕ್ರಮ?: ಒಂದು ವೇಳೆ ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಈ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಅಥವ ಅದಕ್ಕೆ ವ್ಯತಿರಿಕ್ತವಾಗಿ ಕಾರ್ಯಕ್ರಮ, ಮೆರವಣಿಗೆ ನಡೆಸಿದರೆ ಅದನ್ನು ಬಿಎನ್ಎಸ್ ಪ್ರಕಾರ ಕಾನೂನು ಬಾಹಿರ ಗುಂಪು ಸೇರುವಿಕೆ ಎಂದು ಪರಿಗಣಿಸಲಾಗುವುದು. ಅದಕ್ಕನುಗುಣವಾಗಿ ಪೊಲೀಸ್ ಅಧಿಕಾರಿ ಬಿಎನ್ಎಸ್ ಕಾಯ್ದೆಯಡಿ ಯಾವುದೇ ವ್ಯಕ್ತಿಯ ದೂರಿನ ಮೇರೆಗೆ ಅಥವ ಸ್ವಯಂಪ್ರೇರಿತ ದೂರು ದಾಖಲಿಸಿ ಸಂಬಂಧಿತ ಸೆಕ್ಷನುಗಳಡಿ ಪ್ರಕರಣ ದಾಖಲಿಸಬೇಕು ಎಂದು ಅದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ಯಾವುದೇ ಸಂಸ್ಥೆ, ಸಂಘಟನೆ ಬ್ಯಾನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಹೆಚ್.ಕೆ.ಪಾಟೀಲ್