ETV Bharat / state

ಕೃಷಿ ಪಂಪ್ ಸೆಟ್​​ಗಳಿಗೆ ಹಗಲಿನ ವೇಳೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಬದ್ದ: ಸಚಿವ ಕೆ.ಜೆ.ಜಾರ್ಜ್

ರಾಜ್ಯ ಇಂಧನ ಇಲಾಖೆಯು ಇರುವ ಸದಾವಕಾಶಗಳನ್ನು ಬಳಸಿಕೊಂಡು ನಾಡಿನ ಜನರ, ಮುಖ್ಯವಾಗಿ ರೈತರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.

karnataka-government-committed-to-provide-7-hours-of-electricity-during-the-day-to-agricultural-pump-sets-says-minister-k-j-george
ಸಚಿವ ಕೆ.ಜೆ.ಜಾರ್ಜ್ (ETV Bharat)
author img

By ETV Bharat Karnataka Team

Published : February 27, 2026 at 6:30 PM IST

2 Min Read
Choose ETV Bharat

ಬೆಂಗಳೂರು: ರೈತರ ಕೃಷಿ ಪಂಪ್ ಸೆಟ್​​ಗಳಿಗೆ ಹಗಲು ವೇಳೆ ನಿರಂತರ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿ ಕುಸುಮ-ಸಿ ಯೋಜನೆಯಡಿ ಕೃಷಿ ಫೀಡರ್​​ಗಳ ಸೌರೀಕರಣ ಕಾರ್ಯವನ್ನು ತ್ವರಿತಗೊಳಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಪ್ರದೇಶ ಕಾಂಗ್ರೆಸ್ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಮುಖಂಡರು ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕುಸುಮ್-ಸಿ ಯೋಜನೆ ಮೂಲಕ ಕೃಷಿಗೆ ವಿದ್ಯುತ್ ಒದಗಿಸುವ ಉಪ ಕೇಂದ್ರಗಳನ್ನು ಸೌರೀಕರಣಗೊಳಿಸಿ, 2500 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿಯೊಂದಿಗೆ ರೈತರಿಗೆ ಹಗಲು ವೇಳೆ 7 ಗಂಟೆ ವಿದ್ಯುತ್ ನೀಡಲು ಕ್ರಮ ವಹಿಸಲಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಅದರೆ ಶೇ.80ರಷ್ಟು ಸಬ್ಸಿಡಿಯೊಂದಿಗೆ ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಒದಗಿಸುತ್ತಿದ್ದೇವೆ. ಇದು ಕೃಷಿ ಕ್ಷೇತ್ರಕ್ಕೆ ಇಂಧನ ಇಲಾಖೆಯ ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ರೈತರರಿಗೆ ವಿದ್ಯುತ್ ನೀಡುವ ಮೂಲಕ ಇಂಧನ ಇಲಾಖೆ ರಾಜ್ಯದ ಪ್ರಗತಿಗೆ ಮಹತ್ತರ ಕೊಡುಗೆ ನೀಡುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಗೃಹ ಬಳಕೆದಾರರಿಗೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದು 1.65 ಕೋಟಿ ಕುಟುಂಬಗಳಿಗೆ ಬೆಳಕಾಗಿದೆ. ಇಂಧನ ಇಲಾಖೆ ಇರುವ ಸದಾವಕಾಶಗಳನ್ನು ಬಳಸಿಕೊಂಡು ನಾಡಿನ ಜನರ, ಮುಖ್ಯವಾಗಿ ರೈತರ ಏಳಿಗೆಗೆ ಶ್ರಮಿಸುತ್ತಿದೆ ಎಂದರು.

ಸೌರಶಕ್ತಿಯನ್ನು ಕೃಷಿ ಚಟುವಟಿಕೆಗಳಿಗೆ ಸಂಯೋಜಿಸುವ ಮೂಲಕ ವಿದ್ಯುತ್ ಪರಿವರ್ತಕಗಳ ಮೇಲೆ ಬೀಳುತ್ತಿದ್ದ ಒತ್ತಡ ಹಾಗೂ ವಿದ್ಯುತ್ ಕಳ್ಳತನಗಳಿಗೆ ಕಡಿವಾಣ ಹಾಕಲಾಗುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಪಗ್ರತಿ ಸಾಧಿಸಿದ್ದು, ವಿಶ್ವಾಸಾರ್ಹ ಪ್ರಸರಣವನ್ನು ಕಾಯ್ದುಕೊಂಡಿದ್ದೇವೆ ಎಂದು ಹೇಳಿದರು.

ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ಶಕ್ತಿ ನೀಡಿದೆ. ಸರ್ಕಾರ ಗ್ಯಾರಂಟಿಗಳಿಗೆ ಕಳೆದ ಸಾಲಿನಲ್ಲಿ 55,000 ಕೋಟಿ ರೂ. ಮೀಸಲಿಟ್ಟಿದೆ. ಇದರಲ್ಲಿ ಪ್ರತಿ ಕುಟುಂಬಕ್ಕೆ 5,000 ರೂ. ಸಿಗುತ್ತಿದೆ. ಪ್ರತಿಯಾಗಿ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ದುರದೃಷ್ಟವಶಾತ್ ನಾವು ಕಟ್ಟುವ ನಾಲ್ಕು ಲಕ್ಷ ಕೋಟಿ ರೂ. ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ಕೇವಲ 60,000 ಕೋಟಿ ಹಣವನ್ನು ಮಾತ್ರ ರಾಜ್ಯಕ್ಕೆ ವಾಪಸ್ ನೀಡುತ್ತಿದೆ. ನಮ್ಮ ರಾಜ್ಯದ ಅಭಿವೃದ್ದಿಗೆ ಕೇಂದ್ರವೇ ಅಡ್ಡಗಾಲಾಗಿದೆ ಎಂದು ಸಚಿವರು ಆರೋಪಿಸಿದರು.

ಬಿಜೆಪಿಯವರದ್ದು ಹುಸಿ ದೇಶಪ್ರೇಮ: ಜವಾಹರಲಾಲ್ ನೆಹರು ಅವರು ಶ್ರೀಮಂತ ಕುಟುಂಬದಿಂದ ಬಂದಿದ್ದರು. ಗಾಂಧೀಜಿ ಜೊತೆಗೆ ಜೈಲುವಾಸ ಅನುಭವಿಸಿದ್ದರು. ಬಿಜೆಪಿಯವರು ಯಾರೂ ದೇಶಕ್ಕಾಗಿ ಜೈಲು ಸೇರಿಲ್ಲ, ಹೋರಾಟ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ನೆಹರು ಅವರ ಪರಿಶ್ರಮ ಇವತ್ತು ಫಲಕೊಟ್ಟಿದೆ. ದೇಶ ಅಭಿವೃದ್ಧಿಯತ್ತ ದೃಢ ಹೆಜ್ಜೆಗಳನ್ನು ಇಡುತ್ತಿದೆ. ಈಗ ಅವರು ಹೋಗಿ ಸ್ವಿಚ್ ಆನ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿ ಹೋಗಿ ಕೇವಲ ಭಾಷಣ ಬಿಗಿಯುತ್ತಾರೆ. ಕೇವಲ ಹುಸಿ ದೇಶಪ್ರೇಮದ ಪ್ರಚೋದನೆಯ ಮಾತುಗಳು ಅಷ್ಟೇ ಇವರ ಬಂಡವಾಳ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ: ಕರ್ತವ್ಯದಿಂದ‌ ವಜಾ ನಿರ್ಧಾರ ಹಿಂಪಡೆಯುವಿಕೆ, ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ