ETV Bharat / state

16 ಸಿಹಿತಿಂಡಿ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ, ₹6 ಲಕ್ಷ ಮೌಲ್ಯದ ಉತ್ಪನ್ನಗಳು ವಶಕ್ಕೆ

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿನ ಸಿಹಿತಿಂಡಿ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದರು.

RAID ON SWEET MANUFACTURING UNITS
ದಾಳಿಯ ವೇಳೆ ಆಹಾರ ಉತ್ಪನ್ನಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು (ETV Bharat)
author img

By ETV Bharat Karnataka Team

Published : August 31, 2026 at 8:33 PM IST

2 Min Read
Choose ETV Bharat

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಆಕ್ಷೇಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತಾ ಅಧಿಕಾರಿಗಳು ಇಂದು ರಾಜ್ಯದ ಪ್ರಮುಖ ನಗರಗಳು, ಜಿಲ್ಲೆಗಳಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದರು.

ಆಹಾರ ಸುರಕ್ಷತಾ ಕ್ರಮಗಳು, ಲೇಬಲಿಂಗ್​, ಅವಧಿ ಮೀರಿದ ಉತ್ಪನ್ನಗಳ ಬಳಕೆ ಮಾಡಿದ 16 ಸಿಹಿತಿಂಡಿ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ, ಸುಮಾರು 5.99 ಲಕ್ಷ ರೂ ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಅವರ ನಿರ್ದೇಶನದ ಮೇರೆಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಆಹಾರ ಸುರಕ್ಷತಾ ವಿಭಾಗವು ಈ ವಿಶೇಷ ಕಾರ್ಯಾಚರಣೆ ನಡೆಸಿತು. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಜಿಬಿಎ ವ್ಯಾಪ್ತಿ, ಮೈಸೂರು ನಗರ, ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006 ಮತ್ತು ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಪರವಾನಗಿ ಮತ್ತು ನೋಂದಣಿ) ನಿಯಮಗಳು-2011 ರ ಅಡಿಯಲ್ಲಿ ತಪಾಸಣೆ ನಡೆಸಲಾಗಿದೆ. ಸಿಹಿತಿಂಡಿ ತಯಾರಿಕಾ ಘಟಕಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಮಾನದಂಡಗಳ ಪಾಲನೆ ಮಾಡಲಾಗುತ್ತಿದೆಯೇ ಅಥವಾ ಉಲ್ಲಂಘಿಸಲಾಗಿದೆಯೇ ಎಂದು ತಿಳಿಯಲು ಕಾನೂನುರೀತಿ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯೋಗಾಲಯದಲ್ಲಿ ಪರೀಕ್ಷೆ: ತಪಾಸಣೆಗೆ ಒಳಪಟ್ಟ ಆಹಾರ ಉತ್ಪನ್ನ ಘಟಕಗಳಲ್ಲಿ ಸಂಗ್ರಹಿಸಲಾದ ಸಿಹಿತಿಂಡಿಗಳು, ಅಡುಗೆ ಮತ್ತು ತಾಜಾ ಎಣ್ಣೆ, ಮೊಸರು, ಬೇಳೆಕಾಳುಗಳು, ಚನ್ನಾ, ಜಿಲೇಬಿ, ಖೋವಾ ಮತ್ತು ಚಹಾ ಪುಡಿಯ ಮಾದರಿಗಳನ್ನು ಅವುಗಳ ಗುಣಮಟ್ಟ ಮತ್ತು ನಿಗದಿತ ಆಹಾರ ಸುರಕ್ಷತಾ ಮಾನದಂಡಗಳ ಅನುಸರಣೆಯನ್ನು ನಿರ್ಧರಿಸಲು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಕಾರ್ಯಾಚರಣೆಯ ಸಮಯದಲ್ಲಿ, ಅಧಿಕಾರಿಗಳು 5 ಲೀಟರ್ ಅವಧಿ ಮೀರಿದ ನಂದಿನಿ ಮೊಸರನ್ನು ವಶಪಡಿಸಿಕೊಂಡರು. ತಪ್ಪಾಗಿ ಲೇಬಲ್‌ ಮಾಡಲಾದ 13 ದೊಡ್ಡ ಮತ್ತು 6 ಸಣ್ಣ ಪ್ಯಾಕೆಟ್‌ಗಳ ಚಾಕೊಲೇಟ್ ಅಲಂಕಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ 10 ಕೆಜಿ ಚಾಕೊಲೇಟ್ ಫ್ಲೇವರ್ ಮತ್ತು 5 ಕೆಜಿ ರಸಗುಲ್ಲಾ ಕೂಡ ಜಪ್ತಿ ಮಾಡಲಾಗಿದೆ.

ಬಾಳೆಹಣ್ಣು ಚಿಪ್ಸ್​, ಚಕ್ಲಿ ಮಸಾಲಾ ಸೇರಿದಂತೆ ಸುಮಾರು 60 ಕೆಜಿ ಪ್ಯಾಕ್ ಮಾಡಿದ ಉತ್ಪನ್ನಗಳನ್ನು ತಪ್ಪಾಗಿ ಬ್ರ್ಯಾಂಡಿಂಗ್ ಮಾಡಿದ್ದಕ್ಕಾಗಿ ವಶಪಡಿಸಿಕೊಳ್ಳಲಾಗಿದೆ. ತಯಾರಕರ ಹೆಸರು ಮತ್ತು ವಿಳಾಸ ಮತ್ತು FSSAI ಪರವಾನಗಿ ಸಂಖ್ಯೆಯಂತಹ ಕಡ್ಡಾಯ ಮಾಹಿತಿಯು ಪ್ಯಾಕೇಜ್‌ಗಳ ಮೇಲೆ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಪಾಸಣೆಯ ಸಮಯದಲ್ಲಿ ಇಲಾಖೆಯು, 367 ಕೆಜಿ ರೆಡಿ-ಟು-ಈಟ್ ಸವರಿಗಳು, 4 ಕೆಜಿ ಕೋಕೋ ಪೌಡರ್, 4.5 ಕೆಜಿ ಕ್ರ್ಯಾಕ್ಡ್ ಕೋಕೋ ಬೀನ್ಸ್, 6 ಕೆಜಿ ಖೋವಾ ಮತ್ತು 196 ಕೆಜಿ ಫೆನ್ನೆಲ್ ಪೌಡರ್ ವಶಪಡಿಸಿಕೊಂಡಿದೆ.

ಆಹಾರ ಸುರಕ್ಷತಾ ಅಭಿಯಾನ: "ಆಹಾರ ಉತ್ಪಾದನಾ ಘಟಕಗಳು ನಿಗದಿತ ಸುರಕ್ಷತೆ ಮತ್ತು ನೈರ್ಮಲ್ಯ ಕ್ರಮಗಳನ್ನು ಅನುಸರಿಸುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ಅಭಿಯಾನ ನಡೆಸಲಾಗುತ್ತಿದೆ" ಎಂದು ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಆಯುಕ್ತ ಕೆ.ಶ್ರೀನಿವಾಸ್ ಹೇಳಿದರು.

"ಅಭಿಯಾನದ ಸಮಯದಲ್ಲಿ ಸಂಗ್ರಹಿಸಲಾದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದೋಷ ಕಂಡುಬಂದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ತಿಳಿಸಿದರು.

ಇವುಗಳನ್ನೂ ಓದಿ: