ETV Bharat / state

ರಾಜ್ಯದಲ್ಲಿ ಮುಂದುವರೆದ ತಾಪಮಾನ ಏರಿಕೆ, ಮುಂದಿನ 7 ದಿನಗಳಲ್ಲಿ ಮತ್ತಷ್ಟು ಹೆಚ್ಚಳ

ಬೇಸಿಗೆಯ ಆರಂಭದಲ್ಲೇ ರಾಜ್ಯದಲ್ಲಿ ತಾಪಮಾನ ಏರಿಕೆಯಾಗಿದ್ದು, ಮುಂದಿನ ಒಂದು ವಾರದಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ.

BENGALURU  KARNATAKA HEAT RISE  KARNATAKA TEMPERATURE  ಕರ್ನಾಟಕ ತಾಪಮಾನ KARNATAKA WEATHER
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : March 2, 2026 at 11:37 AM IST

1 Min Read
Choose ETV Bharat

ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಏರಿಕೆಯ ಪ್ರಮಾಣ ದಿನೇ ದಿನೇ ಅಧಿಕವಾಗುತ್ತಿದೆ. ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಏರಿಕೆ ಕಂಡುಬಂದಿದ್ದು, ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ರಾಜ್ಯದಲ್ಲಿ ಇಂದು ಗರಿಷ್ಠ ತಾಪಮಾನ 34°Cವರೆಗೂ ಹಾಗೂ ಕನಿಷ್ಠ ತಾಪಮಾನ 22°C ದಾಖಲಾಗಬಹುದು ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಅಲ್ಪ ಮಳೆಯಾಗುವ ಸಾಧ್ಯತೆಯಿದೆ.

ಕಲಬುರಗಿ, ವಿಜಯಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಿರಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ ಸೆಕೆಯ ಅನುಭವ ಹೆಚ್ಚಿರಲಿದೆ. ಬೆಳಗಾವಿಯಲ್ಲಿ ಬೆಳಗ್ಗೆ ಮತ್ತು ರಾತ್ರಿ ತಂಪು ಹವೆ ಇರಲಿದ್ದು, ಮಧ್ಯಾಹ್ನ ಕೊಂಚ ತಾಪಮಾನ ಏರಿಕೆಯಾಗಲಿದೆ. ಕಲಬುರಗಿಯಲ್ಲಿ ಬಿಸಿ ಗಾಳಿಯ ಎಚ್ಚರಿಕೆ ನೀಡಲಾಗಿದೆ. ಹಾಗೂ ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಇತರೆ ಜಿಲ್ಲೆಗಳಿಗಿಂತ ಕೊಂಚ ತಂಪಾದ ವಾತಾವರಣವಿರಲಿದೆ.

ಮುಂದಿನ ಒಂದು ವಾರದ ನಿರೀಕ್ಷಿತ ಹವಾಮಾನ: ಹವಾಮಾನ ಇಲಾಖೆ ಈಗಾಗಲೇ ನೀಡಿರುವ ಮುನ್ಸೂಚನೆಯಂತೆ ಮುಂದಿನ 7 ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶವು ಸರಾಸರಿಗಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ದಕ್ಷಿಣ ಒಳನಾಡು ಪ್ರದೇಶದಲ್ಲಿ ಹವಾಮಾನವು ಶುಷ್ಕವಾಗಿರಲಿದ್ದು, ಮಧ್ಯಾಹ್ನದ ವೇಳೆ ತೀವ್ರ ಬಿಸಿಲಿರಲಿದೆ. ಉತ್ತರ ಒಳನಾಡಿನ ಕಲಬುರಗಿ, ರಾಯಚೂರುಗಳಲ್ಲಿ‌ ಉಷ್ಣಾಂಶವು 38°C ದಾಟುವ ಸಾಧ್ಯತೆ ಇದೆ. ಬಿಸಿ ಗಾಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಮಂಗಳೂರು, ಉಡುಪಿಗಳಲ್ಲಿ ಆರ್ದ್ರತೆ ಹೆಚ್ಚಿರಲಿದೆ.

ಇದನ್ನೂ ಓದಿ: ಮಧ್ಯ ಪ್ರಾಚ್ಯ ಉದ್ವಿಗ್ನತೆಯ ಎಫೆಕ್ಟ್; ಕಚ್ಚಾ ತೈಲ ಬೆಲೆ ಶೇ 10ರಷ್ಟು ಏರಿಕೆ

ಈ ಅವಧಿಯಲ್ಲಿ ಉಷ್ಣಾಂಶ ಏರುವ ಸಾಧ್ಯತೆ: ಈ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಷ್ಣಾಂಶವು 34 ಡಿಗ್ರಿ ಸೆಲ್ಸಿಯಸ್​ನಿಂದ 38.9 ಡಿಗ್ರಿ ಸೆಲ್ಸಿಯಸ್​ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ ಸುಮಾರು 3 ರಿಂದ 4 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿರಲಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಈ ಮೊದಲು ಕಾರವಾರ ಜಿಲ್ಲಾಧಿಕಾರಿ ಎಚ್ಚರಿಸಿದ್ದರು.

ಹೆಚ್ಚಿದ ಬಿಸಿಲಿನಿಂದಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು, ತಲೆಸುತ್ತು, ದೌರ್ಬಲ್ಯ, ಅತಿಯಾದ ಆಯಾಸ, ತಲೆನೋವು ಮತ್ತು ಚರ್ಮದ ಒಣಗುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ತೀವ್ರ ಪ್ರಕರಣಗಳಲ್ಲಿ ಉಷ್ಣಾಘಾತ ಸಂಭವಿಸುವ ಸಾಧ್ಯತೆಯೂ ಇರುವುದರಿಂದ ಜಾಗರೂಕರಾಗಿರಬೇಕು.