ETV Bharat / state

ಇಂದು ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಮುಂದಿನ ಮುಖ್ಯಮಂತ್ರಿ ಘೋಷಣೆ

ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಹೊಸ ನಾಯಕನನ್ನಾಗಿ ಆಯ್ಕೆ ಮಾಡುವ ನಿರೀಕ್ಷೆ ಹೆಚ್ಚಿದೆ.

KARNATAKA CONG LEGISLATURE PARTY MEETING ON SATURDAY, NEW LEADER SET TO BE ELECTED
ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಡಾ. ಜಿ ಪರಮೇಶ್ವರ್ (ETV Bharat)
author img

By ETV Bharat Karnataka Team

Published : May 30, 2026 at 7:38 AM IST

1 Min Read
Choose ETV Bharat

ಬೆಂಗಳೂರು: ಇಂದು ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಮುಂದಿನ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ ಎಂದು ಪಕ್ಷದ ಮೂಲಗಳು ಶುಕ್ರವಾರ ತಿಳಿಸಿವೆ. ಮುಂದಿನ ಸರ್ಕಾರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.

ಶನಿವಾರ ಸಂಜೆ 4 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದೆ ಎಂದು ಶಾಸಕಾಂಗ ಪಕ್ಷದ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ್ ಅವರು ಎಲ್ಲಾ ಶಾಸಕರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಶುಕ್ರವಾರ ಅಂಗೀಕರಿಸಿ, ಸಚಿವ ಸಂಪುಟವನ್ನು ವಿಸರ್ಜಿಸಿದ್ದರು. ನಂತರ ಈ ಸಭೆಯನ್ನು ನಿಗದಿಯಾಗಿದೆ.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಹೊಸ ನಾಯಕನನ್ನಾಗಿ ಇಂದು ಆಯ್ಕೆ ಮಾಡುವ ನಿರೀಕ್ಷೆಯಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಧಾನ ಪರಿಷತ್ ಸಭಾ ನಾಯಕ ಎನ್.ಎಸ್. ಬೋಸರಾಜು ಮತ್ತು ಪಕ್ಷದ ಎಲ್ಲಾ ಕಾರ್ಯಾಧ್ಯಕ್ಷರು ಭಾಗವಹಿಸಲಿದ್ದಾರೆ.. ಶಾಸಕರೆಲ್ಲರೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಹೈಕಮಾಂಡ್​ ಸೂಚನೆ ಮೇರೆಗೆ ಗುರುವಾರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳಿದ್ದರು. ಶುಕ್ರವಾರ ಇಬ್ಬರೂ ನಾಯಕರು ಕಾಂಗ್ರೆಸ್‌ ಹೈಕಮಾಂಡ್​​ ನಾಯಕರನ್ನು ಭೇಟಿ ಮಾಡಿ, ಅಧಿಕಾರ ವರ್ಗಾವಣೆ ಮತ್ತು ಹೊಸ ಸಚಿವ ಸಂಪುಟ ರಚನೆ ಕುರಿತು ಚರ್ಚಿಸಿ ಬಂದಿದ್ದಾರೆ.

ಶಾಸಕಾಂಗ ಪಕ್ಷದ ಸಭೆ ಬಳಿಕ ಮುಂದಿನ ಮುಖ್ಯಮಂತ್ರಿ ಯಾರೆಂಬುದು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಮೊದಲಿನಿಂದಲೂ ಚರ್ಚೆಯಾಗುತ್ತಿರುವಂತೆ ಬಹುತೇಕ ಡಿ.ಕೆ.ಶಿವಕುಮಾರ್ ಅವರೇ ಸಿಎಂ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಗುರುವಾರ, ತಮ್ಮ ನಿವಾಸದಲ್ಲಿ ಸಂಪುಟ ಸಹೋದ್ಯೋಗಿಗಳಿಗಾಗಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ, ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದರು. ನಂತರ ಲೋಕಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ್ದ ಅವರು ಸುದ್ದಿಗೋಷ್ಠಿ ನಡೆಸಿ ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಅವರ ನಡೆ ನಿಜಕ್ಕೂ ಮಾದರಿ: ದಿನೇಶ್ ಗುಂಡೂರಾವ್