Bio Economy ವರದಿ ಬಿಡುಗಡೆ: ₹ 3.53 ಲಕ್ಷ ಕೋಟಿ ದಾಟಿದ ಕರ್ನಾಟಕದ ಜೈವಿಕ ಆರ್ಥಿಕತೆ
ರಾಜ್ಯ ಜೈವಿಕ ಆರ್ಥಿಕತೆಯು (BioEconomy) 2025 ರಲ್ಲಿ ₹ 3,25,360 ಕೋಟಿಗಳಿಗೆ (39.2 ಶತಕೋಟಿ ಡಾಲರ್) ತಲುಪಿದ್ದು, ಇದು ಹಿಂದಿನ ವರ್ಷಗಳಿಗಿಂತ ಗರಿಷ್ಠ ಬೆಳವಣಿಗೆ ದಾಖಲಿಸಿದೆ.

Published : February 24, 2026 at 9:18 AM IST
ಬೆಂಗಳೂರು: ರಾಜ್ಯದ ಜೈವಿಕ ಆರ್ಥಿಕತೆಯು (BioEconomy) 2025ರಲ್ಲಿ ₹3.53 ಲಕ್ಷ ಕೋಟಿಗಳಿಗೆ (39.2 ಶತಕೋಟಿ ಡಾಲರ್) ತಲುಪಿದೆ. ಸಂಶೋಧನೆ ಜೊತೆಗೆ ತಯಾರಿಕೆ, ವಿತರಣೆ, ಸೇವೆಗಳವರೆಗೆ ಸಂಪೂರ್ಣ ಮೌಲ್ಯ ಸರಪಳಿ ಒಳಗೊಂಡಿರುವ, ತಯಾರಿಕೆ ಕೇಂದ್ರಿತ ಜೈವಿಕ ಆರ್ಥಿಕತೆಯು ರಾಜ್ಯದಲ್ಲಿ ಗಮನಾರ್ಹವಾಗಿ ವಿಸ್ತರಣೆಯಾಗುತ್ತಿದೆ.
ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯು (ಕೆಐಟಿಎಸ್), ಜೈವಿಕ ತಂತ್ರಜ್ಞಾನ ಉದ್ಯಮಗಳ ಸಂಘದ (ಎಬಿಎಲ್‌ಇ) ಸಹಯೋಗದಲ್ಲಿ ಸಿದ್ಧಪಡಿಸಿರುವ ರಾಜ್ಯದ ಜೈವಿಕ ಆರ್ಥಿಕತೆಯ ವರದಿ 2025ʼಯಲ್ಲಿ ಈ ಸಂಗತಿ ಉಲ್ಲೇಖವಾಗಿದೆ. ದೇಶದ ಅತ್ಯಂತ ಪ್ರಬುದ್ಧ ಮತ್ತು ನಾವೀನ್ಯತೆ ಆಧಾರಿತ ಜೈವಿಕ ತಂತ್ರಜ್ಞಾನ ವ್ಯವಸ್ಥೆಯಾಗಿ ಕರ್ನಾಟಕವು ಸುಸ್ಥಿರ ರೀತಿಯಲ್ಲಿ ತನ್ನ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವುದರ ಮೇಲೆ ಈ ವರದಿಯು ಬೆಳಕು ಚೆಲ್ಲಿದೆ.
The Karnataka BioEconomy Report 2025 is out and it clearly reflects the scale, depth and momentum of Karnataka’s biotechnology ecosystem.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 23, 2026
- Karnataka’s BioEconomy has crossed ₹3.53 lakh crore in 2025, marking strong and sustained growth over the last two years.
- The State… pic.twitter.com/MXbTz4asK9
ವರದಿ ಬಿಡುಗಡೆ ಮಾಡಿ ಮಾತನಾಡಿದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ʼಈ ವರದಿಯು ರಾಜ್ಯದ ಜೈವಿಕ ಆರ್ಥಿಕತೆಯ ಅಂಕಿ - ಸಂಖ್ಯೆಗಳಲ್ಲಿನ ಹೆಚ್ಚಳವನ್ನಷ್ಟೇ ಪ್ರತಿಬಿಂಬಿಸುತ್ತಿಲ್ಲ. ರಾಜ್ಯದ ಸಮಗ್ರ ಆರ್ಥಿಕ ವ್ಯವಸ್ಥೆಯಲ್ಲಿ ಜೈವಿಕ ಆರ್ಥಿಕತೆಯು ಗಮನಾರ್ಹ ಪಾಲು ಹೊಂದಿರುವುದನ್ನೂ ಸೂಚಿಸುತ್ತದೆ. ಜೈವಿಕ ತಂತ್ರಜ್ಞಾನವು ಇನ್ನು ಮುಂದೆ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಿರದೆ, ಆರ್ಥಿಕ ಬೆಳವಣಿಗೆ, ಕೈಗಾರಿಕಾ ನಾವೀನ್ಯತೆ ಮತ್ತು ಸಾಮಾಜಿಕ ಪ್ರಭಾವದ ಕೇಂದ್ರ ಚಾಲಕ ಶಕ್ತಿಯಾಗಿ ಅಭಿವೃದ್ಧಿಗೊಳ್ಳುತ್ತ ಮುನ್ನಡೆಯುತ್ತಿದೆ. ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ, ನಾವೀನ್ಯತೆ ಮೂಲಸೌಕರ್ಯಗಳ ಬಲಪಡಿಸುವಿಕೆ ಮತ್ತು ಬೆಳವಣಿಗೆಯು ಬೆಂಗಳೂರು ಆಚೆಗಿನ ಪ್ರತಿಯೊಂದು ಪ್ರದೇಶಕ್ಕೂ ತಲುಪುವಂತೆ ನೋಡಿಕೊಳ್ಳುವ ಮೂಲಕ ಸಮಗ್ರ ಜೈವಿಕ ಉತ್ಪಾದನಾ ಆರ್ಥಿಕತೆ ನಿರ್ಮಿಸುವುದರತ್ತ ರಾಜ್ಯ ಸರ್ಕಾರವು ಹೆಚ್ಚು ಗಮನ ನೀಡಲಿದೆ ಎಂದು ಹೇಳಿದ್ದಾರೆ.
ವರದಿಯ ಮುಖ್ಯಾಂಶಗಳು:
ರಾಜ್ಯ ಜೈವಿಕ ಆರ್ಥಿಕತೆಯು (BioEconomy) 2025 ರಲ್ಲಿ ₹ 3.53 ಲಕ್ಷ ಕೋಟಿಗಳಿಗೆ (39.2 ಶತಕೋಟಿ ಡಾಲರ್) ತಲುಪಿದ್ದು, ಇದು ಹಿಂದಿನ ವರ್ಷಗಳಿಗಿಂತ ಗರಿಷ್ಠ ಬೆಳವಣಿಗೆ ದಾಖಲಿಸಿದೆ. ದೇಶದ ಜೈವಿಕ ಆರ್ಥಿಕತೆಗೆ ರಾಜ್ಯವು ಶೇಕಡ 21 ರಷ್ಟು ಕೊಡುಗೆ ನೀಡುತ್ತಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಶೇಕಡ 10 ಕ್ಕಿಂತ ಹೆಚ್ಚು ಪಾಲು ಹೊಂದಿದೆ, ಜೈವಿಕ ತಂತ್ರಜ್ಞಾನವು ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿರುವುದಕ್ಕೆ ನಿದರ್ಶನವಾಗಿದೆ.
ಜೈವಿಕ ಆರ್ಥಿಕತೆಯು 2023 ರಲ್ಲಿದ್ದ 31 ಶತಕೋಟಿ ಡಾಲರ್‌ನಿಂದ ಈಗ 39.2 ಶತಕೋಟಿ ಡಾಲರ್‌ಗೆ ವಿಸ್ತರಿಸಿದೆ, ಇದು ಒಟ್ಟಾರೆ ಶೇಕಡಾ 26.5ರಷ್ಟು ಬೆಳವಣಿಗೆ ಸೂಚಿಸುತ್ತದೆ. ಈಗ ರಾಜ್ಯದ ʼಜಿಡಿಪಿʼ ಗೆ ಪ್ರತಿ ತ್ರೈಮಾಸಿಕದಲ್ಲಿ ಸರಿಸುಮಾರು 10 ಶತಕೋಟಿ ಡಾಲರ್ ಸೇರ್ಪಡೆ ಮಾಡುತ್ತಿದೆ.
ಜೈವಿಕ ಔಷಧಗಳು, ಕಡಿಮೆ ವೆಚ್ಚದ ಪರ್ಯಾಯ ಜೈವಿಕ ಔಷಧಗಳು (ಬಯೊಸಿಮಿಲರ್ಸ್), ಲಸಿಕೆಗಳು ಮತ್ತು ರೋಗ ಪತ್ತೆ ವಲಯಗಳು ಒಳಗೊಂಡಂತೆ ಶೇಕಡ 40 ಕ್ಕಿಂತ ಹೆಚ್ಚು ಪಾಲು (ಸುಮಾರು 16.44 ಶತಕೋಟಿ ಡಾಲರ್) ಹೊಂದಿವೆ.
ಸುಮಾರು 11.46 ಶತಕೋಟಿ ಡಾಲರ್ ಮೊತ್ತದ ಜೈವಿಕ ಕೈಗಾರಿಕಾ ತಂತ್ರಜ್ಞಾನ ವಲಯವು ಶೇಕಡ 29ರಷ್ಟು ಪಾಲು ಹೊಂದುವುದರ ಜೊತೆಗೆ ವೇಗವಾಗಿ ಬೆಳೆಯುತ್ತಿದೆ. ಇದು ರಾಜ್ಯವು ಬಲವಾದ ಜೈವಿಕ ತಯಾರಿಕಾ ಆರ್ಥಿಕತೆಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ.
ಶೇಕಡ 25.8 ಪಾಲು ಹೊಂದಿರುವ ಜೈವಿಕ ಸೇವೆಗಳು ಸ್ಥಿರವಾಗಿ ಬೆಳೆಯುತ್ತಲೇ ಇವೆ. ಜಾಗತಿಕ ಸಂಶೋಧನಾ ಸೇವೆಗಳು, ಡಿಜಿಟಲ್ ಆರೋಗ್ಯ ಮತ್ತು ನಾವೀನ್ಯತೆ - ನೇತೃತ್ವದ ಹೊರಗುತ್ತಿಗೆಯಲ್ಲಿ ಕರ್ನಾಟಕದ ಸ್ಥಾನವನ್ನು ಬಲಪಡಿಸುತ್ತಿವೆ. ಜೈವಿಕ ಕೃಷಿಯು ಸುಸ್ಥಿರ ಕೃಷಿ ಚಟುವಟಿಕೆ ಮತ್ತು ಕಚ್ಚಾ ಸಾಮಗ್ರಿಗಳ ನಾವೀನ್ಯತೆಗಳಿಗೆ ಕೊಡುಗೆ ನೀಡುತ್ತಿದೆ.
ರಾಜ್ಯದ ಜೈವಿಕ ಆರ್ಥಿಕತೆಯ ಬೆಳವಣಿಗೆಯು ವಿಕೇಂದ್ರಿಕರಣ ಆಗುತ್ತಿರುವುದರ ಬಗ್ಗೆಯೂ ವರದಿಯು ಬೆಳಕು ಚೆಲ್ಲಿದೆ. ಬೆಂಗಳೂರು ನಗರವು ರಾಜ್ಯದ ಜೈವಿಕ ಆರ್ಥಿಕತೆಯಲ್ಲಿ ಗಮನಾರ್ಹ ಎನ್ನಬಹುದಾದ ಶೇಕಡ 54ರಷ್ಟು ರಷ್ಟು ಪಾಲು ಹೊಂದಿದೆ. ಮೈಸೂರು ಶೇಕಡ 8.7ರಷ್ಟು ಕೊಡುಗೆ ನೀಡುತ್ತಿದೆ. ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಒಟ್ಟಾಗಿ ಶೇಕಡ 9 ಕ್ಕಿಂತ ಹೆಚ್ಚು ಪಾಲು ಹೊಂದಿವೆ. ಉತ್ತರ ಕರ್ನಾಟಕದ ಜಿಲ್ಲೆಗಳು ಕೃಷಿ - ಜೈವಿಕ ತಂತ್ರಜ್ಞಾನ ವಲಯಗಳಾಗಿ ಗಮನ ಸೆಳೆಯುತ್ತಿವೆ.
ಬೆಂಗಳೂರು ಆಚೆಗಿನ ಪ್ರಾದೇಶಿಕ ಜೈವಿಕ ತಂತ್ರಜ್ಞಾನ ಕಾರಿಡಾರ್‌ಗಳ ಬೆಳವಣಿಗೆಯು ಜೈವಿಕ ಆರ್ಥಿಕತೆಯು ರಾಜ್ಯವ್ಯಾಪಿ ಬೆಳವಣಿಗೆಯ ಎಂಜಿನ್ ಆಗಿ ಬದಲಾಗುತ್ತಿರುವುದನ್ನು ಸೂಚಿಸುತ್ತದೆ. ಇದು ಅಂತರ್ಗತ ಅಭಿವೃದ್ಧಿ, ಪ್ರಾದೇಶಿಕ ಉದ್ಯೋಗ ಮತ್ತು ಕೃಷಿ ಉತ್ಪನ್ನಗಳಿಗೆ ಹೊಸ ಮೌಲ್ಯ ಸೇರ್ಪಡೆ ಮಾಡಲು ನೆರವಾಗುತ್ತಿದೆ. ರಾಜ್ಯದಲ್ಲಿ 2025 ರಲ್ಲಿ 218 ಹೊಸ ಜೈವಿಕ ತಂತ್ರಜ್ಞಾನ ನವೋದ್ಯಮಗಳು ಸೇರ್ಪಡೆಯಾಗಿವೆ. ಅವುಗಳ ಒಟ್ಟಾರೆ ಸಂಖ್ಯೆ 1,451 ಕ್ಕೆ ತಲುಪಿದ್ದು, ಶೇಕಡಾ 75 ಕ್ಕಿಂತ ಹೆಚ್ಚು ನವೋದ್ಯಮಗಳು ಜೀವ ವಿಜ್ಞಾನ ಮತ್ತು ಆರೋಗ್ಯ ತಂತ್ರಜ್ಞಾನದ ಮೇಲೆ ಗಮನ ಕೇಂದ್ರೀಕರಿಸಿವೆ. ಬೆಂಗಳೂರಿನಲ್ಲಿ ಸುಮಾರು ಶೇಕಡ 54 ರಷ್ಟು ಸ್ಟಾರ್ಟ್ಅಪ್‌ಗಳಿದ್ದರೆ, ರಾಜ್ಯದಾದ್ಯಂತ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟ್‌ಅಪ್ ಕ್ಲಸ್ಟರ್‌ಗಳೂ ವೇಗ ಪಡೆಯುತ್ತಿವೆ.
ಬಂಡವಾಳ ಹೂಡಿಕೆ ಹೆಚ್ಚಳ: ಜನವರಿ 2024 ಮತ್ತು ಅಕ್ಟೋಬರ್ 2025 ರ ಮಧ್ಯದ ಅವಧಿಯಲ್ಲಿ ರಾಜ್ಯವು ಜೈವಿಕ ಔಷಧ, ವೈದ್ಯಕೀಯ ತಂತ್ರಜ್ಞಾನ, ಕಿಣ್ವ ಆಧಾರಿತ ಕೈಗಾರಿಕೆಗಳು (ಫರ್ಮಂಟೇಷನ್), ಡಿಜಿಟಲ್ ಆರೋಗ್ಯ, ಜೈವಿಕ ಕೃಷಿ ವಲಯಗಳು ಸೇರಿದಂತೆ ಸೇರಿದಂತೆ ಸುಮಾರು 40 ಒಪ್ಪಂದಗಳಲ್ಲಿ 1.14 ಶತಕೋಟಿ ಡಾಲರ್ ಮೊತ್ತದ ಬಂಡವಾಳ ಆಕರ್ಷಿಸಿದೆ. ಇದು ರಾಜ್ಯದ ಜೈವಿಕ ಉತ್ಪಾದನೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಹೂಡಿಕೆದಾರರ ಹೆಚ್ಚುತ್ತಿರುವ ವಿಶ್ವಾಸವನ್ನು ಸೂಚಿಸುತ್ತದೆ.
ಸಮಾರಂಭದಲ್ಲಿ ಉಪಸ್ಥಿತರಿದ್ದ ʼಎಬಿಎಲ್‌ಇʼ ಗೌರವ ಅಧ್ಯಕ್ಷ ಜಿ.ಎಸ್. ಕೃಷ್ಣನ್ ಅವರು ಮಾತನಾಡಿ, "ಈ ವರದಿಯು ರಾಜ್ಯದ ಜೈವಿಕ ಆರ್ಥಿಕತೆಯು ವಲಯವಾರು ಸಮತೋಲನ ಮತ್ತು ನವೋದ್ಯಮ ವ್ಯವಸ್ಥೆಯ ಹೆಚ್ಚುತ್ತಿರುವ ಮಹತ್ವವನ್ನು ಒತ್ತಿಹೇಳುತ್ತದೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯಲಹಂಕದಲ್ಲಿ ಅಮೆಜಾನ್ನ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಕಾರ್ಪೊರೇಟ್ ಪ್ರಧಾನ ಕಚೇರಿ ಉದ್ಘಾಟನೆ

