ETV Bharat / state

ಕನ್ನಡದ ಪ್ರಮುಖ ಕಾದಂಬರಿಕಾರ್ತಿ, ಪ್ರಕಾಶಕಿ ಆಶಾ ರಘು ಆತ್ಮಹತ್ಯೆ

ಇವರ ಪತಿ ಆಹಾರ ತಜ್ಞರಾಗಿದ್ದ ಕೆ.ಸಿ.ರಘು ಅವರು ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅಂದಿನಿಂದ ಆಶಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

Writer Asha Raghu
ಲೇಖಕಿ ಆಶಾ ರಘು (ETV Bharat)
author img

By ETV Bharat Karnataka Team

Published : January 11, 2026 at 7:16 AM IST

|

Updated : January 11, 2026 at 7:22 AM IST

3 Min Read
Choose ETV Bharat

ಬೆಂಗಳೂರು: ಪ್ರಸಿದ್ಧ ಕಾದಂಬರಿಕಾರ್ತಿ ಹಾಗು ಪ್ರಕಾಶಕಿಯಾಗಿದ್ದ ಆಶಾ ರಘು (48) ಅವರು ಬೆಂಗಳೂರಿನ ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ಶುಕ್ರವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇವರ ಪತಿ, ಆಹಾರ ತಜ್ಞರಾಗಿದ್ದ ಕೆ.ಸಿ.ರಘು ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅಂದಿನಿಂದ ಆಶಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಪದವಿ ವ್ಯಾಸಂಗ ಮಾಡುತ್ತಿರುವ ಪುತ್ರಿ ಮತ್ತು ಮಹಿಳಾ ಕೇರ್‌ ಟೇಕರ್‌ ಆಶಾ ಅವರನ್ನು ನೋಡಿಕೊಳ್ಳುತ್ತಿದ್ದರು. ಒಂದೂವರೆ ವರ್ಷದಿಂದ ಚಿಕಿತ್ಸೆಯ ಜತೆಗೆ ಆಪ್ತ ಸಮಾಲೋಚಕರಿಂದ ಕೌನ್ಸಿಲಿಂಗ್ ಮಾಡಿಸಲಾಗುತ್ತಿತ್ತು. ಹೀಗಿದ್ದೂ ಕಳೆದ ಕೆಲವು ತಿಂಗಳಿಂದ ಬಹಳ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

ಜ.8ರಂದು ರಾತ್ರಿ ಹೆಸರುಘಟ್ಟದಲ್ಲಿ ನೆಲೆಸಿರುವ ಸಹೋದರಿಗೆ ಕರೆ ಮಾಡಿ ತಾವು ಸಾಯುವುದಾಗಿ ಹೇಳಿದ್ದರಂತೆ. ಕೂಡಲೇ ಮಲ್ಲೇಶ್ವರಕ್ಕೆ ಬಂದ ಅವರು, ಆಶಾರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಶುಕ್ರವಾರ ಬೆಳಗ್ಗೆ ಆಪ್ತ ಸಮಾಲೋಚಕರಿಂದ ಕೌನ್ಸಿಲಿಂಗ್ ಮಾಡಿಸಲಾಗಿತ್ತು. ಆಗ ಆರೋಗ್ಯವಾಗಿದ್ದೇನೆ ಎಂದಿದ್ದರಂತೆ. ಪ್ರತಿದಿನ ಊಟದ ಬಳಿಕ ತಮ್ಮ ಕೋಣೆಗೆ ಹೋಗಿ ಕೆಲ ಹೊತ್ತು ಓದಿ, ಬರೆದು ಮಲಗುತ್ತಿದ್ದರು. ಅದೇ ರೀತಿ ಶುಕ್ರವಾರ ರಾತ್ರಿಯೂ ಪುತ್ರಿ ಹಾಗೂ ಕೇರ್‌ ಟೇಕರ್‌ ಜತೆ ಊಟ ಮಾಡಿದ್ದ ಆಶಾ, ತಮ್ಮ ಕೋಣೆಗೆ ಹೋಗಿ ಕೆಲ ಹೊತ್ತು ಬರವಣಿಗೆ, ಓದುವಿಕೆ ಮಾಡಿದ್ದಾರೆ. ಇದಾದ ಬಳಿಕ ಕೇರ್ ಟೇಕರ್ ಅವರು ಆಶಾ ಕೋಣೆಗೆ ಹೋದಾಗ ಬಾಗಿಲು ತೆರೆಯಲಿಲ್ಲ. ಇದರಿಂದ ಅನುಮಾನಗೊಂಡು ಪುತ್ರಿಯನ್ನು ಕರೆದು ಕೋಣೆಯ ಮತ್ತೊಂದು ಕೀ ಮೂಲಕ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಕೂಡಲೇ ನೇಣು ಕುಣಿಕೆಯಿಂದ ಇಳಿಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಅಸಹಜ ಸಾವು ಪ್ರಕರಣ UDR) ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಹೀಗೊಂದು ಕನಸಾಯಿತು..'- ಭಾವನಾತ್ಮಕ ಫೇಸ್‌ಬುಕ್ ಪೋಸ್ಟ್‌: ಹತ್ತು ದಿನಗಳ ಹಿಂದೆ ಆಶಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದರು. ಇದರಲ್ಲಿ "ಹೀಗೊಂದು ಕನಸಾಯಿತು. ಇಂದು ಬೆಳಗಿನ ಜಾವ ನನ್ನವರು ಕನಸಿನಲ್ಲಿ ಕಾಣಿಸಿಕೊಂಡರು. ಬಹಳ ಸಹಜವಾಗಿದ್ದರು. ನನಗೆ ಅವರು ತೀರಿಕೊಂಡ ಮೇಲೆ ನೋಡಲು ಬಂದಿದ್ದಾರೆಂಬ ಸಂಪೂರ್ಣ ಅರಿವಿತ್ತು. ಸಡಗರದಲ್ಲಿ ಮಾತನಾಡಿಸಿದೆ. ಉಳಿದವರನ್ನು ಕನಸಿನಲ್ಲೇ 'ಕಾಣ್ತಿದ್ದಾರಾ ನಿಮಗೆ?' ಅಂತೆಲ್ಲಾ ಕೇಳಿದೆ. ಅವರು ತಿಣುಕಾಡಿದರು. ಆದರೆ ಮಗಳು ನೇರವಾಗಿ ಬಂದು ತನ್ನಪ್ಪನನ್ನು ತಟ್ಟಿ, 'How are you?' ಅಂತ ಮಾತನಾಡಿಸಿದಳು. ಅವರೂ ಅವಳೊಂದಿಗೆ ಮಾತನಾಡಿಸಿದರು. ಕನಸಿನಲ್ಲಿ ನನ್ನ ತಲೆಗೂದಲು ತುಂಡಾಗಿತ್ತು. ನನ್ನ ಕೂದಲಲ್ಲಿ ಬೆರಳಾಡಿಸಿ ಯಾವುದೋ ಶ್ಯಾಂಪೂ ಹೆಸರು ಹೇಳಿದರು. ನಾನು ನಕ್ಕೆ. ನಂತರ 'ನಾನು ಈಗ ಫ್ರಾನ್ಸ್‌ಗೆ ಹೋಗ್ತಿದ್ದೀನಿ' ಅಂದರು. 'ಮಾರಿಷಸ್' ಅಂತಾ ಕೂಡಾ ಜತೆಗೆ ಸೇರಿಸಿದರೋ ಅಂತ ಅರೆಬರೆ ನೆನಪು. ಇಷ್ಟಾಗುವುದರಲ್ಲಿ ಸಂತೋಷಕ್ಕೆ ಫಳ್ಳನೆ ಕಣ್ಣು ಬಿಟ್ಟುಬಿಟ್ಟೆ! ಸಂತೋಷಕ್ಕೆ ಮೊದಲು, ಆ ನಂತರ ಅವರ ಫೋಟೋ ನೋಡಿಕೊಂಡು ಭಾವವುಕ್ಕಿ ಅತ್ತೂ ಅತ್ತೂ ಕೆಡವಿದೆ. ಫ್ರಾನ್ಸಿಗೆ ಹೋದರೆ ನಿಜಕ್ಕೂ ಸಿಕ್ಕರೂ ಸಿಗಬಹುದು ಅನ್ನುವ ಲಹರಿಯಲ್ಲಿಯೇ ಇನ್ನೂ ಇದ್ದೇನೆ' ಎಂದು ಬರೆದುಕೊಂಡಿದ್ದರು.

ಆಶಾ ರಘು ಕನ್ನಡದ ಪ್ರಮುಖ ಕಾದಂಬರಿಗಾರ್ತಿ. ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಯ ಹಿರಿ ಮಗಳಾಗಿ 1979ರ ಜೂನ್ 18ರಂದು ಬೆಂಗಳೂರಿನಲ್ಲಿ ಹುಟ್ಟಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದು, ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದ್ದರು. ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ ಉಪಾಸನಾ ಎಂಬ ಪ್ರಕಾಶನವನ್ನೂ ಆರಂಭಿಸಿ ಯುವ ಲೇಖಕ/ಲೇಖಕಿಯರ ಪುಸ್ತಕಗಳನ್ನು ಪ್ರಕಟಿಸಿದ್ದರು.

ಆವರ್ತ, ಗತ, 'ಮಾಯೆ', 'ಚಿತ್ತರಂಗ', ಕೆಂಪು ದಾಸವಾಳ, ವಕ್ಷ ಸ್ಥಲ ಕಾದಂಬರಿಗಳನ್ನು, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು' 'ಪೂತನಿ ಮತ್ತಿತರ ನಾಟಕಗಳು', ಮೊದಲಾದ ನಾಟಕ ಕೃತಿಗಳನ್ನು ಇವರು ರಚಿಸಿದ್ದಾರೆ.

ಇದನ್ನೂ ಓದಿ: 'ಗೌರಿ' ಧಾರವಾಹಿ ನಟಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

Last Updated : January 11, 2026 at 7:22 AM IST