ಎಂಥದ್ದೇ ಹಾಸ್ಯಕ್ಕೂ ನಗುವುದಿಲ್ಲ ಪಾತ್ರಧಾರಿಗಳು: ಈ ಬಾರಿ ನಗಿಸಿದರೆ ಸಿಗಲಿದೆ 13 ಲಕ್ಷ ರೂ ಬಹುಮಾನ!
ಹಾವೇರಿ ಜಿಲ್ಲೆಯಲ್ಲಿ ಕಳೆದ ಏಳು ದಶಕಗಳಿಂದ ಜೀವಂತ ಕಾಮರತಿ ಕೂರಿಸಲಾಗುತ್ತಿದೆ.

Published : March 3, 2026 at 2:17 PM IST
|Updated : March 3, 2026 at 2:31 PM IST
ವರದಿ: ಶಿವಕುಮಾರ್ ಸಿ ಹೆಚ್
ಹಾವೇರಿ: ಹೋಳಿ ಹುಣ್ಣಿಮೆ ಬಂದರೆ ಸಾಕು, ಕಟ್ಟಿಗೆಯ ಹುಲ್ಲಿನಲ್ಲಿ ಮಾಡಿರುವ ಕಾಮರತಿ ಸ್ಥಾಪನೆ ಮಾಡುವುದು ಸಾಮಾನ್ಯ. ಆದರೆ, ಜಿಲ್ಲೆಯಲ್ಲಿ ಕಳೆದ ಏಳು ದಶಕಗಳಿಂದ ಜೀವಂತ ಕಾಮರತಿ ಕೂರಿಸಲಾಗುತ್ತದೆ. ರಾಣೆಬೆನ್ನೂರಲ್ಲಿ 68 ವರ್ಷದಿಂದ ಮತ್ತು ಹಾವೇರಿ ನಗರದಲ್ಲಿ ಕಳೆದ 16 ವರ್ಷಗಳಿಂದ ಜೀವಂತ ಕಾಮರತಿ ಕೂರಿಸಲಾಗುತ್ತಿದೆ.
ಜೀವಂತ ಕಾಮರತಿ ನಗಿಸುವ ಸ್ಪರ್ಧೆ: ಒಂದು ವೇದಿಕೆ ಸಿದ್ದಪಡಿಸಿ ಅದರಲ್ಲಿ ಸಿಂಗಾರಗೊಂಡ ಕಾಮ ಮತ್ತು ರತಿಯನ್ನು ಕುಳ್ಳಿರಿಸಲಾಗುತ್ತದೆ. ಈ ರೀತಿ ಸಜೀವವಾಗಿ ಕುಳ್ಳಿರಿಸಿ ಮನರಂಜನೆಗಾಗಿ ಅವರನ್ನು ನಗಿಸುವ ಸ್ಪರ್ಧೆ ಆಯೋಜಿಸಲಾಗುತ್ತದೆ. ಯಾವುದೇ ಅಶ್ಲೀಲ ಪದ, ಹಾಡು ಬಳಸದೇ ಜೀವಂತ ಕಾಮರತಿಯನ್ನು ನಗಿಸಬೇಕು. ಈ ರೀತಿ ಸ್ಪರ್ಧೆ ಆಯೋಜಿಸಿ, ಲಕ್ಷಾಂತರ ರೂಪಾಯಿ ಬಹುಮಾನ ಘೋಷಣೆ ಮಾಡಲಾಗುತ್ತದೆ.
ರಾಣೆಬೆನ್ನೂರಲ್ಲಿ ಕಾಮರತಿಯನ್ನು ನಗಿಸಿದರೆ 13 ಲಕ್ಷ ರೂಪಾಯಿ, ಹಾವೇರಿಯಲ್ಲಿ ಕಾಮರತಿ ನಗಿಸಿದರೆ 11 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ. ಈ ಹಣ ಪಡೆಯಲು ಪ್ರೇಕ್ಷಕರು, ಅಭಿಮಾನಿಗಳು ದೂರ ದೂರದ ಊರುಗಳಿಂದ ಆಗಮಿಸಿ, ಜೀವಂತ ಕಾಮರತಿ ನಗಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ.
ಮಹಿಳೆಯರು, ಮಕ್ಕಳು, ವೃದ್ದರು ಸೇರಿದಂತೆ ಎಲ್ಲರೂ ಪ್ರಯತ್ನಿಸಿದರೂ ಕಾಮರತಿ ಮಾತ್ರ ಇದುವರೆಗೆ ನಕ್ಕಿಲ್ಲ. ಹಾಡು, ಹಾಸ್ಯಚಟಾಕಿ ಸೇರಿದಂತೆ ನೃತ್ಯ, ಡೈಲಾಗ್ ಪಂಚ್ ನೀಡಿದರೂ ಸಹ ಕಾಮರತಿ ನಕ್ಕಿಲ್ಲ. ನಗಿಸಲು ಬಂದವರು, ನೋಡಲು ಬಂದವರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆಯೇ ವಿನಃ ಕಾಮರತಿ ನಗುವುದಿಲ್ಲ.
ರಾಣೆಬೆನ್ನೂರಲ್ಲಿ ಕಳೆದ 68 ವರ್ಷದಿಂದ ಜೀವಂತ ಕಾಮರತಿ ಕುಳ್ಳಿರಿಸಲಾಗುತ್ತಿದೆ. ಪ್ರತಿವರ್ಷ ನಗರದ ಒಂದೊಂದು ಪ್ರದೇಶದಲ್ಲಿ ಕುಳ್ಳಿರಿಸಿ ಅವರನ್ನು ನಗಿಸುವ ಪ್ರಯತ್ನ ನಡೆಯುತ್ತದೆ. ಈ ವರ್ಷ ರತಿ ಪಾತ್ರಧಾರಿಯಾಗಿ ಕುಮಾರ ಹಡಪದ ಮತ್ತು ಕಾಮನ ಪಾತ್ರಧಾರಿಯಾಗಿ ಗದಿಗೆಪ್ಪ ದೊಡ್ಡಪ್ಪನವರ ಅವರನ್ನು ಕುಳ್ಳಿರಿಸಲಾಗಿತ್ತು. ಇಬ್ಬರನ್ನು ನಗಿಸಿದವರಿಗೆ 13 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಹಾವೇರಿ ನಗರದಲ್ಲಿ ಈ ರೀತಿ ಜೀವಂತ ಕಾಮ ರತಿಯನ್ನು ಕಳೆದ 16 ವರ್ಷದಿಂದ ಕೂರಿಸಲಾಗುತ್ತಿದೆ.
ಪ್ರಸ್ತುತ ವರ್ಷ ಹಾವೇರಿಯ ಸುಭಾಶ್ ವೃತ್ತದಲ್ಲಿ ಜೀವಂತ ಕಾಮ ರತಿಯನ್ನು ಕುಳ್ಳಿರಿಸಲಾಗಿತ್ತು. ಗೂರಪ್ಪ ಶೀಮಿಕೇರಿ ಮತ್ತು ರತಿಯಾಗಿ ಜೋಗತಿ ಮಂಜುಳಾ ಅವರನ್ನು ಕುಳ್ಳಿರಿಸಲಾಗಿತ್ತು. ಹಾವೇರಿಯಲ್ಲಿ ಕುಳ್ಳಿರಿಸಿದ ಜೀವಂತ ಕಾಮರತಿ ನಗಿಸಲು ಆರಂಭದಲ್ಲಿ 11 ಸಾವಿರ ಬಹುಮಾನ ಇಡಲಾಗಿತ್ತು, ಅದಾದ ನಂತರ ಬಹುಮಾನದ ಮೊತ್ತವನ್ನು ಹೆಚ್ಚಿಗೆ ಮಾಡಿದರೂ ಸಹ ಕಾಮರತಿ ತುಟಿಕ್ ಪಿಟಿಕ್ ಎನ್ನಲಿಲ್ಲ.
ಈ ಸಂದರ್ಭದಲ್ಲಿ ಚಿಕ್ಕಮಕ್ಕಳು ಹಾಡು ಹೇಳುವ ಮೂಲಕ ನಗಿಸಲು ಮುಂದಾದರು. ಇನ್ನು ಕೆಲವರು ಸಿನಿಮಾ ಡೈಲಾಗ್ ಹೇಳಿದರು. ಕೆಲವರು ಮೈಚಳಿ ಬಿಟ್ಟು ನರ್ತಿಸಿದರೂ ಸಹ ಕಾಮರತಿ ನಗಲಿಲ್ಲ. ಕಾಮರತಿ ನೋಡಲು ಬಂದಿದ್ದ ಸಾವಿರಾರು ಜನ ಹೊಟ್ಟೆ ಹುಣ್ಣಾಗುವಂತೆ ನಕ್ಕರು.
ಈ ಕುರಿತಂತೆ ಮಾತನಾಡಿದ ಕಾಮ ಪಾತ್ರಧಾರಿ ಗೂರಣ್ಣ ಶೀಮಿಕೇರಿ, "ಕಳೆದ 16 ವರ್ಷಗಳಿಂದ ನಾನು ಕಾಮನ ಪಾತ್ರಧಾರಿಯಾಗಿ ನಟನೆ ಮಾಡುತ್ತಿದ್ದೇನೆ. ರತಿ ಪಕ್ಕ ನನ್ನನ್ನು ಕುಳ್ಳಿರಿಸುತ್ತಿದ್ದಂತೆ ನನಗೆ ಯಾವುದೇ ರೀತಿಯ ಹಾಸ್ಯ ಬರುವುದಿಲ್ಲ. ರತಿ ಪಕ್ಕದಲ್ಲಿರುವವರೆಗೆ ಮುಖದಲ್ಲಿ ಗಂಭೀರತೆ ಇರುತ್ತೆ. ಪ್ರೇಕ್ಷಕರು ಯಾವುದೇ ರೀತಿಯ ನಗೆ ಚಟಾಕಿ ಹಾರಿಸಿದರೂ ನಾನು ನಗುವುದಿಲ್ಲ. ಅದೇನು ಅಂತ ಗೊತ್ತಿಲ್ಲ. ಉಳಿದ ದಿನ ನಾನು ಸರಿಯಾಗಿಯೇ ಇರುತ್ತೇನೆ. ಈ ರೀತಿ ಪಾತ್ರ ಮಾಡಿದ ಮೇಲೆ ಹಾಸ್ಯ ಕಲಾವಿದರಿಂದ ನನ್ನ ನಗಿಸುವ ಪ್ರಯತ್ನ ನಡೆದಿದೆ. ಆದರೆ ನಾನು ನಕ್ಕಿಲ್ಲ. ಈ ರೀತಿಯ ಪಾತ್ರ ಮಾಡಲು ನನಗೆ ಬೆಂಗಳೂರಿನಿಂದ ಬೇಡಿಕೆ ಬಂದಿದೆ" ಎಂದಿದ್ದಾರೆ.
ಇದೇ ಪ್ರಥಮ ಬಾರಿಗೆ ಜೋಗತಿ ಸಂಗೀತಾ ಅವರು ರತಿ ಪಾತ್ರ ನಿರ್ವಹಿಸಿದರು. ಈ ಕುರಿತು ಮಾತನಾಡಿದ ಸಂಗೀತಾ ಅವರು, "ಕಲಾವಿದನಿಗೆ ದುಃಖ ತಡೆಯುವ, ದುಃಖ ಬರಿಸುವ, ನಗಿಸುವ ಹಾಗೂ ನಗೆ ತಡೆಯುವ ಶಕ್ತಿ ಇರಬೇಕು. ಅಂದಾಗ ಮಾತ್ರ ಕಲಾವಿದನಿಗೆ ಗೌರವ ಸಿಗುತ್ತದೆ" ಎಂದ ಹೇಳಿದರು.
ಇನ್ನೂ ಮದುವೆಯಾಗದೆ ಇರುವ ಪುರುಷ ಮತ್ತು ಮಹಿಳೆಯರಿಗೆ ಈ ಸಂದರ್ಭದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಂದ ಕಂಕಣ ಕಟ್ಟಿಸಲಾಗುತ್ತದೆ. ಈ ರೀತಿ ಮಾಡಿದರೆ ಮದುವೆಯಾಗದವರಿಗೆ ಮದುವೆಯಾಗುತ್ತೆ. ಮಕ್ಕಳಾಗದ ದಂಪತಿಗೆ ಲೈಂಗಿಕ ಅಲ್ಪಸಂಖ್ಯಾತರಿಂದ ಉಡಿ ತುಂಬಲಾಗುತ್ತದೆ. ಈ ರೀತಿ ಉಡಿ ತುಂಬಿಸಿಕೊಂಡರೆ ಮಕ್ಕಳಾಗುತ್ತವೆ, ಮಕ್ಕಳಾದ ಉದಾಹರಣೆಗಳಿವೆ ಎನ್ನಲಾಗುತ್ತದೆ.
ಹಾವೇರಿ ನಗರದಲ್ಲಿ ಬುಧವಾರ ಹೋಳಿ ಹುಣ್ಣಿಮೆ ಆಚರಿಸಲಾಗುತ್ತಿದ್ದು, ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಬಿಳಿಚಿನ್ನ ಹತ್ತಿಯಿಂದ ವಿಮುಖರಾಗಿ ರೇಷ್ಮೆಯತ್ತ ಹೆಜ್ಜೆ ಇಡುತ್ತಿರುವ ಹಾವೇರಿ ರೈತ; ಶ್ರೀಕಾಂತ್ಗೆ ರೇಷ್ಮೆ ಬೆಳೆಯಿಂದ ಅಧಿಕ ಲಾಭ

