ಕುರುಬರನ್ನು ST ಪಟ್ಟಿಗೆ ಸೇರಿಸಲು ಆಗ್ರಹ: ಅ.24ರಂದು ವಿಜಯಪುರದಲ್ಲಿ ಸಭೆ- ಈಶ್ವರಪ್ಪ
ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಲಿದ್ದು, ಸಮುದಾಯದ ನಾಯಕರೊಂದಿಗೆ ಅ.24ರಂದು ವಿಜಯಪುರದಲ್ಲಿ ಸಭೆ ನಡೆಸಲಾಗುವುದು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Published : October 17, 2025 at 6:52 PM IST
ಬೆಂಗಳೂರು: "ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದ್ದು, ಅಕ್ಟೋಬರ್ 24ರಂದು ವಿಜಯಪುರದಲ್ಲಿ ಸಮುದಾಯದ ನಾಯಕರೊಂದಿಗೆ ಸಭೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, "ನಮ್ಮ ಬೇಡಿಕೆ ಹೊಸದಲ್ಲ. ಎಸ್ಟಿ ಮೀಸಲಾತಿ ಪಟ್ಟಿಗೆ ಬಿಟ್ಟು ಹೋಗಿರುವ ಸಮುದಾಯವನ್ನು ಸೇರಿಸಬೇಕೆಂದು ಎಂಬುದಷ್ಟೇ ನಮ್ಮ ಆಗ್ರಹ. ಈ ಬಗ್ಗೆ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಅ.24ರಂದು ವಿಜಯಪುರದಲ್ಲಿ ಕರೆಯಲಾಗಿರುವ ಸಭೆಗೆ ಸಮುದಾಯದ ಎಲ್ಲ ನಾಯಕರು ಬರಲಿದ್ದಾರೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡಲಾಗುವುದು" ಎಂದರು.
"ಕುರುಬ ಸಮುದಾಯ ತೀರಾ ಬಡ ಸಮುದಾಯವಾಗಿದೆ ಎಂದು ಕುಲಶಾಸ್ತ್ರದ ಅಧ್ಯಯನದಲ್ಲಿ ಹೇಳಿದೆ. ಕುರುಬ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಈ ಹಿಂದೆ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂದು ಪ್ರಸ್ತಾವನೆ ಸಿದ್ದಪಡಿಸಿತ್ತು. ಈ ಮಧ್ಯೆ ಸರ್ಕಾರ ಬದಲಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಕೇಂದ್ರ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು" ಎಂದು ಒತ್ತಾಯಿಸಿದರು.
ಸಿಎಂ ಬೆಂಬಲ ಕೊಡ್ತಾರೋ, ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲಿ-ಈಶ್ವರಪ್ಪ: "ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸಬೇಕೆಂದು ಆಗ್ರಹಿಸಿ 2021ರಲ್ಲಿ ಕಾಗಿನೆಲೆ ಶ್ರೀಗಳು ಹೋರಾಟಕ್ಕೆ ಬರುವಂತೆ ಸಿಎಂ ಕರೆದಾಗ ಬರುವುದಿಲ್ಲ ಎಂದು ಹೇಳಿದ್ದರು. ಅಲ್ಲದೇ ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ಕುರುಬ ಮೀಸಲಾತಿ ಹೋರಾಟ ನಾನು ಮಾಡಿಲ್ಲ. ಈಶ್ವರಪ್ಪ ಮಾಡಿದ್ದು ಎಂದಿದ್ದರು. ಯಾಕೆ ಹೀಗೆ ಹೇಳಿದರು ಎಂಬುದು ಗೊತ್ತಿಲ್ಲ. ಸದ್ಯ ನಮ್ಮ ಮುಂದಿನ ಹೋರಾಟಕ್ಕೆ ಬೆಂಬಲ ಕೊಡುತ್ತಾರೋ ಇಲ್ಲವೋ ಎಂಬುದನ್ನು ತಿಳಿಸಲಿ. ಈ ವಿಚಾರದಲ್ಲಿ ಸ್ಪಷ್ಟತೆ ಮುಖ್ಯ. ಸಮುದಾಯದ ಬೆಂಬಲವಿಲ್ಲದಿದ್ದರೆ ಸಿದ್ದರಾಮಯ್ಯನವರು ಸಿಎಂ ಆಗುತ್ತಿರಲಿಲ್ಲ" ಎಂದರು.
ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, "ಮೀಸಲಾತಿಯು ದೇಶ ಹಾಗೂ ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಎಲ್ಲರೂ ಮೀಸಲಾತಿ ಕೇಳುವ ಪರಿಸ್ಥಿತಿ ಎದುರಾಗಿದೆ. ಬ್ರಿಟಿಷರ ಕಾಲದಿಂದಲೂ ಮೀಸಲಾತಿ ಹಲವು ರೀತಿ ಸಿಗುತ್ತಿದೆ. ನಮ್ಮ ಸಮುದಾಯದ ಹಿಂದಿನ ಸ್ಥಿತಿಗತಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಕೊಡಗಿನಲ್ಲಿ ಕುರುಬ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ದೊರೆಯುತ್ತಿದೆ. ಇದಕ್ಕೆ ಮಿತಿ ಹಾಕಲಾಗಿದೆ. ಈ ಮಿತಿ ತೆಗೆದು ರಾಜ್ಯಾದ್ಯಂತ ವಿಸ್ತರಿಸಬೇಕಿದೆ" ಎಂದು ಆಗ್ರಹಿಸಿದರು.
RSS ತಂಟೆಗೆ ಹೋಗಬೇಡಿ, ಸುಟ್ಟು ಹೋಗುತ್ತೀರಾ?: "ರಾಷ್ಟ್ರಭಕ್ತಿ ನಿರ್ಮಾಣ ಮಾಡುವ ಸಂಸ್ಥೆ RSS. ಸಂಘದ ತಂಟೆಗೆ ಹೋದರೆ ಸುಟ್ಟು ಹೋಗುತ್ತೀರಾ" ಎಂದು ಅವರು ಇದೇ ವೇಳೆ ಎಚ್ಚರಿಸಿದರು. "ಸಿಎಂ ಹಾಗೂ ಡಿಸಿಎಂ ನಡುವಿನ ಆಂತರಿಕ ಗೊಂದಲ, ಅಭಿವೃದ್ಧಿ ಕಾರ್ಯ ಮರೆಮಾಚಲು, ಮುಸಲ್ಮಾನರಿಗೂ ಸಂತೃಪ್ತಿಪಡಿಸಲು ಆರ್ಎಸ್ಎಸ್ ವಿಚಾರವನ್ನು ಪ್ರಸ್ತಾಪ ಮಾಡಲಾಗಿದೆ. RSS ಮೇಲೆ ಉಗುಳಿದರೆ ಸೂರ್ಯನ ಮೇಲೆ ಉಗುಳಿದಂತೆ. ಉಗುಳಿರುವುದು ವಾಪಸ್ ನಿಮ್ಮ ಮೇಲೆಯೇ ಬೀಳಲಿದೆ" ಎಂದು ಕಿಡಿಕಾರಿದರು.
ಇದನ್ನೂ ಓದಿ: 'ಕುರುಬರನ್ನು ಎಸ್ಟಿಗೆ ಸೇರಿಸಲು ಸಿದ್ದರಾಮಯ್ಯರ ಹಿಂದಿನ ಅವಧಿಯಲ್ಲೇ ಕೇಂದ್ರಕ್ಕೆ ಪ್ರಸ್ತಾಪ'

