ಜನಾರ್ದನ ರೆಡ್ಡಿ ಚಲಾವಣೆ ಇಲ್ಲದ ನಾಣ್ಯ: ನಾಗೇಂದ್ರ ವಾಗ್ದಾಳಿ
ತಮ್ಮ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ಮಾಜಿ ಸಚಿವ ಬಿ.ನಾಗೇಂದ್ರ ತಿರುಗೇಟು ನೀಡಿದ್ದಾರೆ.

Published : September 1, 2026 at 6:59 PM IST
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಮಾಜಿ ಸಚಿವ ಬಿ.ನಾಗೇಂದ್ರ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಹಾಗೂ ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದ ಅವರು, 'ಜನಾರ್ದನ ರೆಡ್ಡಿ ಚಲಾವಣೆ ಇಲ್ಲದ ನಾಣ್ಯ' ಎಂದು ವ್ಯಂಗ್ಯವಾಡಿದರು.
ನಗರದಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಸಂಸದರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗೇಂದ್ರ, 'ಬಳ್ಳಾರಿಯ ಜನರು ಈಗಾಗಲೇ ನಿಮ್ಮನ್ನು ತಿರಸ್ಕರಿಸಿದ್ದಾರೆ. ಆದರೂ ಸುಳ್ಳು ಆರೋಪಗಳನ್ನು ಮಾಡಿಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.
'ಬಳ್ಳಾರಿ ಜಿಲ್ಲೆಯ ಹತ್ತು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಜನಾರ್ದನ ರೆಡ್ಡಿ ತಿರುಕನ ಕನಸು ಕಾಣುತ್ತಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅವರೇ ಉಸ್ತುವಾರಿಯಾಗಿದ್ದರು. ಹಾಗಿದ್ದರೆ ಬಿಜೆಪಿ ಏಕೆ ಸೋತಿತು?' ಎಂದು ಪ್ರಶ್ನಿಸಿದರು.
ಜನಾರ್ದನ ರೆಡ್ಡಿ ಅವರನ್ನು 'ಸೋಕಾಲ್ಡ್ ಲೀಡರ್' ಎಂದು ಕರೆದ ನಾಗೇಂದ್ರ, 'ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ನಾನು ಮಾಡದ ತಪ್ಪಿಗೆ ನನ್ನ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ' ಎಂದು ದೂರಿದರು.
'ನಾನು ಆರೋಪಿಯಷ್ಟೇ; ಅಪರಾಧಿಯಲ್ಲ': ತಮ್ಮ ವಿರುದ್ಧದ ಹಣದ ಅವ್ಯವಹಾರ ಆರೋಪಗಳಿಗೆ ಪ್ರತಿಕ್ರಿಯಿಸಿದ ನಾಗೇಂದ್ರ, ಪ್ರಕರಣ ನ್ಯಾಯಾಲಯದಲ್ಲಿದೆ. ₹187 ಕೋಟಿ ಹಣವನ್ನು ತಾವು ಸಹಿ ಮಾಡಿ ಪಡೆದಿದ್ದಾಗಿ ಹೇಳುತ್ತಿರುವುದು ಸುಳ್ಳು ಎಂದರು.
"ನಾನು ತಪ್ಪು ಮಾಡಿಲ್ಲ. ಪ್ರಕರಣದ ತನಿಖೆ ನಡೆದಿದೆ. ಎಸ್‌ಐಟಿ ಎಲ್ಲ ಹಣವನ್ನು ವಸೂಲಿ ಮಾಡಿದೆ. ಸಿದ್ದರಾಮಯ್ಯ ಅವರು ನಾನು ತಪ್ಪು ಮಾಡಿದ್ದೇನೆ ಎಂದು ಎಲ್ಲಿಯಾದರೂ ಹೇಳಿದ್ದಾರೆಯೇ?" ಎಂದು ಪ್ರಶ್ನಿಸಿದರು.
"ನಾನು ಕೇವಲ ಆರೋಪಿ. ನನ್ನನ್ನು ಅಪರಾಧಿ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ದಾಖಲೆಗಳೊಂದಿಗೆ ಮಾತನಾಡಲಿ" ಎಂದು ಸವಾಲು ಹಾಕಿದರು.
ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರವನ್ನೂ ಪ್ರಸ್ತಾಪಿಸಿದ ಅವರು, "ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ನಾಯಕರು ರಾಜೀನಾಮೆ ನೀಡಬೇಡಿ ಎಂದಿದ್ದರು. ಆದರೆ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದೆ. ಹತ್ತು ದಿನಗಳ ಹಿಂದೆಯೇ ರಾಜೀನಾಮೆ ನೀಡಿದ್ದೆ. ಇದು ಪಕ್ಷಕ್ಕಾಗಿ ಮಾಡಿದ ತ್ಯಾಗ" ಎಂದು ಹೇಳಿದರು.
'ಬಹಿರಂಗ ಚರ್ಚೆಗೆ ಬನ್ನಿ': ಜನಾರ್ದನ ರೆಡ್ಡಿ ತಮ್ಮನ್ನು ‘ಶಂಭೂಕ’ ಎಂದು ಕರೆದಿರುವ ವಿಚಾರವನ್ನು ಪ್ರಸ್ತಾಪಿಸಿದ ನಾಗೇಂದ್ರ, "ಶಂಭೂಕ ಯಾರು ಎಂಬ ಕನಿಷ್ಠ ಜ್ಞಾನವೂ ನಿಮಗಿಲ್ಲ. ಮನುಸ್ಮೃತಿ ಹಾಗೂ ಮನುವಾದದ ಕುರಿತು ಮಾಧ್ಯಮಗಳ ಮುಂದೆ ಬಹಿರಂಗ ಚರ್ಚೆಗೆ ಬನ್ನಿ" ಎಂದು ಸವಾಲು ಹಾಕಿದರು.
"2008ರಲ್ಲಿ ನಿಮ್ಮೊಂದಿಗೆ ಇದ್ದೆ. ನಿಮ್ಮ ನಡೆ - ನುಡಿಗಳ ಬಗ್ಗೆ ತಿಳಿದುಕೊಂಡ ಬಳಿಕ 2013ರಲ್ಲಿ ನಿಮ್ಮನ್ನು ತೊರೆದೆ. ನಿಮ್ಮೊಂದಿಗೆ ಇದ್ದಾಗ ನಿಮಗೆ ಹಲವು ಬಾರಿ ಗೌರವದಿಂದ ಮಾತನಾಡಿದ್ದೇನೆ. ಈಗ ದ್ವೇಷ ಮತ್ತು ಅಸೂಯೆಯಿಂದ ಆರೋಪ ಮಾಡಲಾಗುತ್ತಿದೆ" ಎಂದು ಹೇಳಿದರು.
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಉದ್ದೇಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, "ನನ್ನ ಕಣ್ಣೀರಿನ ಬಗ್ಗೆಯೂ ಕೆಟ್ಟದಾಗಿ ಮಾತನಾಡಲಾಗಿದೆ. ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಿ. ಪದೇ ಪದೇ ಸುಳ್ಳು ಹೇಳಬೇಡಿ" ಎಂದರು.
'ಗಂಗಾವತಿಯಲ್ಲಿ ರಾಜೀನಾಮೆ ನೀಡಿ, ಚುನಾವಣೆಗೆ ಬನ್ನಿ': "ತಾಕತ್ತಿದ್ದರೆ ಗಂಗಾವತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ. ನೀವು ಎಲ್ಲೇ ಸ್ಪರ್ಧಿಸಿದರೂ ನಾನು ಅಲ್ಲಿರುತ್ತೇನೆ. ಪಕ್ಷ ಒಪ್ಪಿದರೆ ಈಗಲೂ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ' ಎಂದು ನಾಗೇಂದ್ರ ಸವಾಲು ಹಾಕಿದರು.
'ಬಿಜೆಪಿ ಪಾದಯಾತ್ರೆ ಯಶಸ್ವಿಯಾಗುವುದಿಲ್ಲ. ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ. ಪಕ್ಷದ ವರಿಷ್ಠರು ಸೂಚಿಸಿದ ರೀತಿಯಲ್ಲಿ ಕೌಂಟರ್ ಕೊಡುತ್ತೇವೆ. ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿರುವುದರಿಂದ ನಾವು ಪ್ರತಿಯಾಗಿ ಪಾದಯಾತ್ರೆ ಮಾಡುವುದಿಲ್ಲ' ಎಂದರು.
"ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ನಡುವೆ ಪಾದಯಾತ್ರೆಯ ಕ್ರೆಡಿಟ್‌ಗಾಗಿ ಪೈಪೋಟಿ ನಡೆಯುತ್ತಿದೆ’ ಎಂದು ವ್ಯಂಗ್ಯವಾಡಿದರು. ‘ನಾನು ಬಳ್ಳಾರಿಯ ಮನೆಯ ಮಗ. ನಮ್ಮದು ಸಂಸ್ಕಾರವಂತ ಕುಟುಂಬ. ಬಳ್ಳಾರಿ ಜಿಲ್ಲೆಯ ಹತ್ತು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ನಿಮ್ಮನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ" ಎಂದು ನಾಗೇಂದ್ರ ಹೇಳಿದರು.
'2028ರಲ್ಲಿ ಹತ್ತು ಕ್ಷೇತ್ರ ಗೆಲ್ಲುತ್ತೇವೆ': ಶಾಸಕ ಭರತ್ ರೆಡ್ಡಿ ಮಾತನಾಡಿ, "ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಸಂಡೂರು ಉಪಚುನಾವಣೆ ನಡೆದರೂ ಕಾಂಗ್ರೆಸ್ ಗೆದ್ದಿದೆ. ಅವರು ಗಂಗಾವತಿಗೆ ರಾಜೀನಾಮೆ ನೀಡಿ ಚುನಾವಣೆಗೆ ಬಂದರೆ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರೂ ಗೆಲ್ಲುತ್ತಾರೆ" ಎಂದು ಹೇಳಿದರು.
"ಬಳ್ಳಾರಿ ಜಿಲ್ಲೆಯ ಹತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿ ನಾಯಕರು ಯಾವುದೇ ತಂತ್ರ-ರಣತಂತ್ರ ರೂಪಿಸಿದರೂ ಕಾಂಗ್ರೆಸ್ ಗೆಲುವನ್ನು ತಡೆಯಲು ಸಾಧ್ಯವಿಲ್ಲ. 2028ರ ಚುನಾವಣೆಯಲ್ಲಿ ಜನರು ತೀರ್ಪು ನೀಡಲಿದ್ದಾರೆ" ಎಂದರು.
'ಸದನದಲ್ಲಿ ಚರ್ಚಿಸದೆ ಪಾದಯಾತ್ರೆ': ಸಂಸದ ಇ.ತುಕಾರಾಂ ಮಾತನಾಡಿ, ‘ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಬಿಜೆಪಿ, ವಿಧಾನಸಭೆಯಲ್ಲಿ ಚರ್ಚೆ ನಡೆಸದೇ ಹತಾಶೆಯಿಂದ ಪಾದಯಾತ್ರೆ ಮಾಡುತ್ತಿದೆ. ಹತ್ತು ದಿನಗಳ ಕಾಲ ಸದನದ ಕಲಾಪ ವ್ಯರ್ಥವಾಗಿದೆ’ ಎಂದು ಆರೋಪಿಸಿದರು.
'ಜನಾರ್ದನ ರೆಡ್ಡಿ ಅವರು 2023ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಸಂಡೂರು ಉಪಚುನಾವಣೆಯಲ್ಲೂ ಅವರ ನೇತೃತ್ವದಲ್ಲಿ ಬಿಜೆಪಿ ಸೋತಿದೆ. ಧೈರ್ಯವಿದ್ದರೆ ಗಂಗಾವತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬನ್ನಿ' ಎಂದು ಸವಾಲು ಹಾಕಿದರು.
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಮಾತನಾಡಿ, "ನಾಗೇಂದ್ರ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದರು. ತನಿಖೆ ಹಾಗೂ ಕಾನೂನು ಅಭಿಪ್ರಾಯ ಪಡೆದ ಬಳಿಕವೇ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಲಾಗಿತ್ತು. ಆದರೆ ಬಿಜೆಪಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸುತ್ತಿದೆ" ಎಂದರು.
"ನಾಗೇಂದ್ರ ವಿರುದ್ಧ ದಾಖಲೆಗಳಿದ್ದರೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಅವುಗಳನ್ನು ಬಿಡುಗಡೆ ಮಾಡಲಿ. ವಿಧಾನಸಭೆಯಲ್ಲಿ ಈ ಕುರಿತು ಚರ್ಚೆಗೆ ಬನ್ನಿ. ಅಗತ್ಯವಿದ್ದರೆ ಮತ್ತೊಮ್ಮೆ ಸದನ ಕರೆಯುವಂತೆ ಒತ್ತಾಯಿಸುತ್ತೇವೆ" ಎಂದು ಹೇಳಿದರು.
ಕಂಪ್ಲಿ ಶಾಸಕ ಗಣೇಶ ಮಾತನಾಡಿ, "ಸವಾಲು–ಪ್ರತಿ ಸವಾಲುಗಳಲ್ಲೇ ಬಿಜೆಪಿ ನಾಯಕರು ಕಾಲ ಕಳೆಯುತ್ತಿದ್ದಾರೆ. ರೈತರ, ಬಡವರ ಹಾಗೂ ಬರಗಾಲದ ಸಮಸ್ಯೆಗಳ ಕುರಿತು ಅವರಿಗೆ ಕನಿಷ್ಠ ಕಾಳಜಿಯೂ ಇಲ್ಲ. ಬಳ್ಳಾರಿಯಲ್ಲಿ ಅವರ ಅಧಿಕಾರದ ಅವಧಿಯಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ" ಎಂದರು.
"2028ರ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ" ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಸಂಸದ ಇ.ತುಕಾರಾಂ, ಶಾಸಕರಾದ ಕಂಪ್ಲಿ ಗಣೇಶ, ಭರತ್ ರೆಡ್ಡಿ, ಅನ್ನಪೂರ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಂಜನೇಯಲು, ಲಿಡ್ಕರ್ ಅಧ್ಯಕ್ಷ ಮುಂಡ್ರಗಿ ನಾಗರಾಜ್ ಹಾಗೂ ಮೇಯರ್ ಗಾದೆಪ್ಪ ಉಪಸ್ಥಿತರಿದ್ದರು.
ಇದನ್ನೂ ಓದಿ: ಪಾದಯಾತ್ರೆ ವಿಷಯದಲ್ಲಿ ಗೊಂದಲ ಇಲ್ಲ, ಹೆಚ್ಡಿಕೆ ಜೊತೆ ಮಾತನಾಡಿದ್ದೇನೆ: ವಿಜಯೇಂದ್ರ

