ಮೂರು ವರ್ಷಗಳ ಹಿಂದೆ ಮಕ್ಕಳು, ಈಗ ತಂದೆ - ತಾಯಿಯಿಂದ ಸನ್ಯಾಸ ದೀಕ್ಷೆ: ಪದವೀಧರರು ಸೇರಿ ನಾಲ್ವರಿಂದ ನಾಳೆ ಸನ್ಯಾಸತ್ವ
ದಂಪತಿ ಸೇರಿದಂತೆ ಜೈನ್ ಸಮಾಜದ ನಾಲ್ವರು ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದು, ಮಾರ್ಚ್ 4ರಂದು ಹೊಳೆಹೊನ್ನೂರು ತೋಟದಲ್ಲಿ ದೀಕ್ಷಾ ಮಹೋತ್ಸವ ಜರುಗಲಿದೆ.

Published : March 3, 2026 at 6:02 PM IST
ವರದಿ - ನೂರುಲ್ಲಾ ಡಿ
ದಾವಣಗೆರೆ: ದಾವಣಗೆರೆಯಲ್ಲಿ ಮಾರ್ಚ್ 4ರಂದು ಐತಿಹಾಸಿಕ ಜೈನ ದೀಕ್ಷಾ ಮಹೋತ್ಸವ ನಡೆಯಲಿದೆ. ದಂಪತಿ ಸೇರಿದಂತೆ ಎಂಬಿಎ ಮತ್ತು ಬಿಕಾಂ ಪದವೀಧರರಾದ ಇಬ್ಬರು ಯುವತಿಯರು ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಹೊಳೆಹೊನ್ನೂರು ತೋಟದಲ್ಲಿ ದೀಕ್ಷಾ ಮಹೋತ್ಸವ ಜರುಗಲಿದೆ.
ಮೂರು ವರ್ಷದ ಹಿಂದೆ ಮನೆಯಲ್ಲಿದ್ದ ಇಬ್ಬರು ಗಂಡು ಮಕ್ಕಳು ಸನ್ಯಾಸತ್ವದ ದೀಕ್ಷೆ ಪಡೆದಿದ್ದನ್ನು ನೋಡಿ ಪ್ರೇರಿತರಾದ ಪೋಷಕರು ಕೂಡ ದೀಕ್ಷೆ ಪಡೆಯಲು ಮುಂದಾಗಿದ್ದಾರೆ. ಸುದೀರ್ಘ ವರ್ಷಗಳ ಕಾಲ ಸಾಂಸಾರಿಕ ಜೀವನ ನಡೆಸಿದ್ದ ದಾವಣಗೆರೆಯ ಜೈನ ಸಮಾಜದ ದಂಪತಿಯು ತಮ್ಮ ಮುಂದಿನ ದಿನಗಳನ್ನು ಆಧ್ಯಾತ್ಮಿಕ ಪ್ರಪಂಚದಲ್ಲಿ ಕಳೆಯಲು ನಿರ್ಧರಿಸಿದ್ದು, ಬುಧವಾರ (ಮಾ.4) ದೀಕ್ಷೆ ಪಡೆಯಲಿದ್ದಾರೆ.
ಪದವೀಧರರಾದ ಮುಮುಕ್ಷು ಕ್ರುನಾಲಿ ಬೇನ್ (30), ಮುಮುಕ್ಷು ದೀಕ್ಷಿತಾ ಬೇನ್ (28) ಹಾಗೂ ದಂಪತಿಗಳಾದ ಮುಮುಕ್ಷು ಭರತ್ ಜೈನ್ (50) ಮತ್ತು ಮುಮಕ್ಷು ಆರತಿ ಜೈನ್ (50) ಈ ನಾಲ್ವರು ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಸನ್ಯಾಸತ್ವ ಪಡೆಯಲಿರುವ ನಾಲ್ವರನ್ನು ದಾವಣಗೆರೆ ತುಂಬಾ ಇಂದು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ವಿಶೇಷವಾಗಿ ಸನ್ಯಾಸ ಪಡೆಯುತ್ತಿರುವವರಿಗೆ ಬೀಳ್ಕೊಡುಗೆ ಕೂಡ ಕೊಡಲಾಯಿತು.
ಸನ್ಯಾಸತ್ವ ದೀಕ್ಷೆ ಪಡೆಯುತ್ತಿರುವ ಇವರೆಲ್ಲರೂ ತಮ್ಮ ತಮ್ಮ ಜೀವನದಲ್ಲಿ ಆರ್ಥಿಕವಾಗಿ ತುಂಬಾ ಸದೃಢವಾಗಿದ್ದರೂ, ಎಲ್ಲವನ್ನು ತೊರೆದು ಆಧ್ಯಾತ್ಮಿಕ ಜೀವನದ ಕಡೆ ಮುಖ ಮಾಡಿದ್ದಾರೆ. ದೀಕ್ಷೆ ಪಡೆದ ತಕ್ಷಣ ಇವರ ಜೀವನ ಶೈಲಿಯೇ ಬದಲಾಗಲಿದೆ.
ಮಾ. 04 ರಂದು ಸನ್ಯಾಸತ್ವದ ಸ್ವೀಕಾರ: ನಾಲ್ವರು ಮಾ.4ರಂದು ಜೈನ ಗುರುಗಳಾದ ಪರಮಪೂಜ್ಯ ಆಚಾರ್ಯ ಶ್ರೀ ಅಭಯ್ ಶೇಖರ್ ಸುರೀಶ್ವರ ಜೀ ಮಹಾರಾಜ್ ಅವರ ದಿವ್ಯ ಸಾನ್ನಿಧ್ಯದಲ್ಲಿ ಜೈನ ಸನ್ಯಾಸತ್ವ ದೀಕ್ಷೆ ಪಡೆಯಲಿದ್ದಾರೆ.
ನಗರದ ಅರುಣ್ ಕುಮಾರ್ ಜೈನ್ ಮತ್ತು ಅನ್ನಪೂರ್ಣ ಬಾಯಿ ದಂಪತಿಯ ಪುತ್ರಿ ದೀಕ್ಷಿತಾ ಇಲ್ಲಿಯೇ ಬಿಕಾಂ ಪದವಿ ಮುಗಿಸಿದ್ದರೆ, ಕಮಲೇಶ್ ಜೈನ್ ಮತ್ತು ಬಬಿತಾ ಜೈನ್ ಅವರ ಪುತ್ರಿಯಾದ ಕ್ರುನಾಲಿ ಪುಣೆಯ ಸಿಂಬೋಸಿಸ್ ಕಾಲೇಜಿನಲ್ಲಿ ಎಂಬಿಎ ಪದವಿ ಮುಗಿಸಿದ್ದಾರೆ.

ಇನ್ನು ಭರತ್ ಜೈನ್ ಹಾಗೂ ಆರತಿ ಜೈನ್ ದಂಪತಿ ಕೂಡ ದೀಕ್ಷೆ ಪಡೆಯಲಿದ್ದಾರೆ. ಇವರ ಇಬ್ಬರು ಪುತ್ರರು ಮೂರು ವರ್ಷದ ಹಿಂದೆ ಜೈನ ಸನ್ಯಾಸತ್ವ ದೀಕ್ಷೆ ಪಡೆದಿದ್ದರು. ಮಕ್ಕಳೇ ಸನ್ಯಾಸತ್ವ ಪಡೆದಾಗ ನಾವೇಕೆ ಪಡೆಯಬಾರದು ಎಂದು ನಿರ್ಧರಿಸಿ ಈ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೆ.
ಸನ್ಯಾಸತ್ವ ಸ್ವೀಕಾರ ಪ್ರಯುಕ್ತ ಇಂದು ಬೆಳಗ್ಗೆ ನಗರದ ಚೌಕೀಪೇಟೆಯಲ್ಲಿರುವ ಪಾರ್ಶ್ವನಾಥ ಜೈನ ಬಸದಿಯಿಂದ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಹಾಸಭಾವಿ ವೃತ್ತ, ಚಾಮರಾಜಪೇಟೆ ಸರ್ಕಲ್, ಮಂಡಿಪೇಟೆ, ವಸಂತ ರಸ್ತೆ, ಪಿಬಿ ರಸ್ತೆ ಮುಖಾಂತರ ರೇಣುಕಾ ಮಂದಿರದವರೆಗೆ ನಾಲ್ವರನ್ನು ಭವ್ಯ ಮೆರವಣಿಗೆ ಮಾಡಲಾಯಿತು. ಬುಧವಾರ (ಮಾ.4) ಬೆಳಗ್ಗೆ 6 ಗಂಟೆಗೆ ಬಾಳೆಹೊನ್ನೂರು ತೋಟದ ಆವರಣದಲ್ಲಿ ಈ ನಾಲ್ವರು ಜೈನ ಗುರುಗಳಾದ ಅಭಯ್ ಶೇಖರ್ ಸುರೀಶ್ವರ್ ಜೀ ಮಹಾರಾಜ್ ಅವರ ಸಮ್ಮುಖದಲ್ಲಿ ದೀಕ್ಷೆ ಸ್ವೀಕಾರ ಪಡೆಯಲಿದ್ದಾರೆ.
ಸಾಂಸಾರಿಕ ಜೀವನ ನಶ್ವರ, ಸನ್ಯಾಸಿ ಜೀವನ ಶಾಶ್ವತ: ಸನ್ಯಾಸತ್ವ ಪಡೆಯುತ್ತಿರುವ ಭರತ್ ಜೈನ್ ಮಾತನಾಡಿ "ಸಾಂಸಾರಿಕ ಜೀವನ ನಶ್ವರ, ಸನ್ಯಾಸಿ ಜೀವನ ಶಾಶ್ವತ. ನನಗೆ ಎಲ್ಲ ಸೌಕರ್ಯವೂ ಇದೆ. ಬೇಕಾದ ಸ್ಥಳಗಳಿಗೆ ಭೇಟಿ ನೀಡುವುದು, ಐಷಾರಾಮಿ ಹೋಟೆಲ್ಗಳಲ್ಲಿ ಇರುವುದು... ಇಂತಹ ಐಷಾರಾಮಿ ಜೀವನ ಕಳೆದವನು ನಾನು. ಆದರೆ, ಇದೆಲ್ಲ ಶಾಶ್ವತ ಅಲ್ಲ. ನಾನೊಂದು ದಿನ ನಮ್ಮ ಗುರುಗಳನ್ನು ಭೇಟಿಯಾದಾಗ ಅವರ ಸನ್ಯಾಸಿ ಜೀವನ ಗಮನಿಸಿದೆ. ಬಳಿಕ ದೀಕ್ಷೆ ಪಡೆಯಬೇಕು ಎಂದು ನಿರ್ಧರಿಸಿದೆ. ಮೂರು ವರ್ಷಗಳ ಹಿಂದೆ ನನ್ನ ಇಬ್ಬರು ಗಂಡು ಮಕ್ಕಳು ದೀಕ್ಷೆ ಪಡೆದಿದ್ದಾರೆ. ಅದನ್ನು ನೋಡಿ ಮತ್ತಷ್ಟು ಪ್ರೇರಿತರಾಗಿ ನಾನು ಹಾಗೂ ನನ್ನ ಹೆಂಡತಿ ದೀಕ್ಷೆ ಪಡೆಯಲು ನಿರ್ಧರಿಸಿದೆವು. ನಾಳೆ ದೀಕ್ಷೆ ಆಗಲಿದೆ. ನಾಳೆಯಿಂದ ಮಹಾವೀರರ ಜೈನ ಶಾಸನದಿಂದ ನಾನು ಸಾಧು ಆಗುತ್ತೇನೆ. ನನ್ನ ಮಡದಿ ಸಾಧು ಜೀ ಆಗುತ್ತಾರೆ. ಅವರೇ ಬೇರೆ, ನಾನೇ ಬೇರೆ. ಅಲ್ಲದೆ ನನ್ನ ಧರಿಸುವ ಉಡುಪು ಬದಲಾಗಲಿದೆ. ವಿಳಾಸ ಕೂಡ ಬದಲಾಗಲಿದೆ. ವೈರಾಗ್ಯಕ್ಕೆ ನಮಗೆ ಗುರುಗಳು ಒಪ್ಪಿಕೊಟ್ಟಿದ್ದಾರೆ" ಎಂದರು.
ಧೀಕ್ಷೆ ಪಡೆಯುತ್ತಿರುವ ಆರತಿ ಜೈನ್ ಮಾತನಾಡಿ "ನನ್ನ ಮಕ್ಕಳಿಬ್ಬರು ಈಗಾಗಲೇ ದೀಕ್ಷೆ ಪಡೆದಿದ್ದಾರೆ. ಅದರಿಂದ ಪ್ರೇರಿತರಾಗಿ ನಾನು ನನ್ನ ಪತಿ ಇಬ್ಬರು ಇದೀಗ ದೀಕ್ಷೆ ಪಡೆಯುತ್ತಿದ್ದೇವೆ. ಇಲ್ಲಿ ಸಾಂಸಾರಿಕ ಜಂಜಾಟ ಇದೆ. ಸನ್ಯಾಸಿಯಾದರೆ ಅಲ್ಲಿ ಸುಖ ಶಾಂತಿ ಇರಲಿದೆ. ಇಲ್ಲಿ ಸಂಬಂಧಿಕರು ಅವರನ್ನು ಕರೆದಿಲ್ಲ ಇವರನ್ನು ಕರೆದಿಲ್ಲ ಎಂಬ ಜಂಜಾಟ ಇರಲಿದೆ. ಅಲ್ಲಿ ಎಲ್ಲವು ಮುಕ್ತ" ಎಂದರು.
ಇದನ್ನೂ ಓದಿ: ಇಂಜಿನಿಯರಿಂಗ್ ಟಾಪರ್ ಈಗ ಜೈನ ಸನ್ಯಾಸಿನಿ: ದಾವಣಗೆರೆ ಯುವತಿಗೆ ಸೂರತ್ನಲ್ಲಿ ದೀಕ್ಷೆ

