ದಾವಣಗೆರೆ: ಕುಸ್ತಿ ಆಡಿ ಬಹುಮಾನ ಗೆದ್ದು ಬೀಗಿದ ಇರಾನ್ ಕುಸ್ತಿ ಪಟು ಮಿರ್ಜಾ, ಜಲಾಲ್
ದಾವಣಗೆರೆಯ ಬೀರಲಿಂಗೇಶ್ವರ ದೇವಾಲಯದ ಬಳಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಗೆಲ್ಲುವ ಮೂಲಕ ಇರಾನ್ ಕುಸ್ತಿ ಪಟು ಮಿರ್ಜಾ ಹಾಗೂ ಜಲಾಲ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

Published : March 2, 2026 at 6:50 PM IST
ದಾವಣಗೆರೆ : ನಗರದ ದೇವತೆ ದುರ್ಗಾಂಭಿಕ ದೇವಿ ಜಾತ್ರೆ ನಿಮಿತ್ತ ಬೀರಲಿಂಗೇಶ್ವರ ದೇವಾಲಯದ ಬಳಿ ಮೂರು ದಿನಗಳ ಕಾಲ ನಡೆದ ಕುಸ್ತಿ ಕಳೆದ ದಿನ ತಡ ರಾತ್ರಿ ಕೊನೆಗೊಂಡಿತು. ತನ್ನೂರು ಇರಾನ್ನಲ್ಲಿ ಯುದ್ಧ ಭೀತಿ ಮನೆ ಮಾಡಿರುವ ನಡುವೆ ಇರಾನ್ ಪ್ರಜೆ ಕುಸ್ತಿ ಪಟು ಮಿರ್ಜಾ ನಗರದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಸೆಣಸಾಡಿ ಬಹುಮಾನ ಗೆದ್ದು ಬೀಗಿದ್ದಾರೆ.
ಭಾನುವಾರ ಕುಸ್ತಿ ಪಂದ್ಯಾಟಕ್ಕೆ ಕೊನೆ ದಿನ ಆಗಿದ್ದರಿಂದ ಇರಾನ್ ದೇಶದ ಕುಸ್ತಿ ಪಟು ಮಿರ್ಜಾ ಕೆಂಪು ಮಣ್ಣಿನ ಅಖಾಡಕ್ಕೆ ಇಳಿದಿದ್ದರು. ಮಹಾರಾಷ್ಟ್ರದ ರವಿರಾಜ್ ವಿರುದ್ಧ ಸೆಣಸಾಡಿದರು.
3 ಲಕ್ಷ ರೂಪಾಯಿ ಮೌಲ್ಯದ 1.25 ಕೆಜಿ ತೂಕದ ಬೆಳ್ಳಿ ಗದೆಯನ್ನು ಗೆದ್ದವರಿಗಾಗಿ ಪ್ರಶಸ್ತಿಯನ್ನಾಗಿ ಇಟ್ಟಿದ್ದರು. ಭಾನುವಾರ ರಾತ್ರಿ ನಡೆದ ಅಂತಿಮ ಪಂದ್ಯದಲ್ಲಿ ಇರಾನ್ ದೇಶದ ಮಿರ್ಜಾ ಹಾಗೂ ಮಹಾರಾಷ್ಟ್ರದ ರವಿರಾಜ್ ಪೈಲ್ವಾನ್ಗಳ ನಡುವೆ ಪಂದ್ಯಾಟ ನಡೆಯಿತು.
ಧಡೂತಿ ಕಾಯದ ಇರಾನ್‌ನ ಮಿರ್ಜಾ ಪೈಲ್ವಾನ್, ಸಾಧಾರಣ ಮೈಕಟ್ಟಿನ ಮಹಾರಾಷ್ಟ್ರದ ಪೈಲ್ವಾನ್ ರವಿರಾಜ್ ಬೆಳ್ಳಿ ಗದೆಗಾಗಿ ಸಮಬಲದ ಹೋರಾಟ ನಡೆಸಿದರು. 43 ನಿಮಿಷ ಕಾದಾಟ ನಡೆಸಿದ್ರು. ಇಬ್ಬರೂ ಪೈಲ್ವಾನ್ಗಳಿಗೆ ಗೆಲುವು ಸಿಗಲಿಲ್ಲ. ಬದಲಿಗೆ ಪಂದ್ಯಾಟ ಡ್ರಾದಲ್ಲಿ ಕೊನೆಗೊಂಡಿತು.
ಇಬ್ಬರೂ ಕುಸ್ತಿಪಟುಗಳಿಗೂ ತಲಾ ಒಂದು ಲಕ್ಷ ರೂ. ಬಹುಮಾನ ವಿತರಿಸಲಾಯಿತು. ಆದರೆ, ನಿರ್ದಿಷ್ಟ ಜಯಶಾಲಿ ಯಾರೂ ಆಗದೇ ಇದ್ದರಿಂದ ಮೂರನೇ ಬಾರಿಗೆ ಬೆಳ್ಳಿ ಗದೆ ದೇವಸ್ಥಾನದ ಕಮಿಟಿ ವಶದಲ್ಲೇ ಉಳಿಯುವಂತಾಯಿತು.
ತನ್ನ ದೇಶದಲ್ಲಿ ಯುದ್ಧದ ಸಂದಿಗ್ಧ ಪರಿಸ್ಥಿತಿ ಇರುವ ಕಾರಣ ಅವಸರದಲ್ಲಿದ್ದ ಪೈಲ್ವಾನ್ ಮಿರ್ಜಾ ಪಂಜಾಬ್ ಕಡೆ ಪಯಾಣ ಬೆಳೆಸಿದರು. ಇರಾನ್ನಿಂದ ಆಗಮಿಸಿದ್ದ ಮತ್ತೋರ್ವ ಕುಸ್ತಿ ಪಟು ಜಲಾಲ್ ಹಾಗೂ ಲಕ್ಕಿ ಕೊಯಿಲಿ ನಡುವೆ ಎರಡನೇ ಕುಸ್ತಿ ಪಂದ್ಯಾಟ ನಡೆಯಿತು. ಈ ಪಂದ್ಯದಲ್ಲೂ ಯಾರೂ ಜಯಶಾಲಿ ಆಗದೇ. ಈ ಎರಡನೇ ಪಂದ್ಯಾಟ ಕೂಡ ಡ್ರಾನಲ್ಲಿ ಕೊನೆಗೊಂಡಿತು.
ಅಪಾರ ಜನಸ್ತೋಮದ ನಡುವೆ ಪೈಲ್ವಾನ್ಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಈ ವೇಳೆ, ಪ್ರೇಕ್ಷಕರು ಸಿಳ್ಳೆ, ಕೇಕೆ ಹೊಡೆದು ಪೈಲ್ವಾನ್ಗಳನ್ನು ಹುರಿದುಂಬಿಸಿದರು.
ವಿವಿಧ ರಾಜ್ಯ, ರಾಷ್ಟ್ರಗಳಿಂದ ಬಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಜಗಜಟ್ಟಿಗಳ ಜಂಗಿ ಕುಸ್ತಿ ಪಂದ್ಯಾವಳಿ ರೋಚಕವಾಗಿತ್ತು. ಮೂರು ದಿನಗಳ ಕಾಲ ಜರುಗಿದ ಕುಸ್ತಿ ಅಖಾಡದಲ್ಲಿ ಸೆಣಸಾಡಲು ಬರೋಬ್ಬರಿ 500ಕ್ಕೂ ಹೆಚ್ಚು ಪೈಲ್ವಾನ್ಗಳು ಆಗಮಿಸಿದ್ದರು.
ಶುಕ್ರವಾರದಿಂದ ಆರಂಭವಾದ ಕುಸ್ತಿಗೆ ನಿರೀಕ್ಷೆಗೂ ಮೀರಿ ಯಶಸ್ಸು ಸಿಕ್ಕಿತ್ತು. ಭಾನುವಾರ ಕೊನೆ ದಿನದಂದು ದೊಡ್ಡ ದೊಡ್ಡ ಪೈಲ್ವಾನ್ಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ತಮ್ಮ ನೆಚ್ಚಿನ ಪೈಲ್ವಾನ್ಗಳ ಆಟ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಕುಸ್ತಿ ವೀಕ್ಷಣೆ ಮಾಡಲು ಆಸನದ ವ್ಯವಸ್ಥೆ ಮಾಡಲಾಗಿತ್ತು. ಹಳ್ಳಿ ಹಾಗೂ ನಗರದಿಂದ ಜನ ಕುಸ್ತಿ ನೋಡಲು ಆಗಮಿಸಿದ್ದರು.
ಇದನ್ನೂ ಓದಿ : ಬೆಣ್ಣೆನಗರಿಯಲ್ಲಿ ಜಂಗಿ ಕುಸ್ತಿ: ದೇಶ-ವಿದೇಶದ ಪೈಲ್ವಾನ್ಗಳ ಕಾದಾಟ, ಇಂದು ಅಂತಿಮ ಸೆಣಸಾಟ

