ETV Bharat / state

ಕಲಬುರಗಿಗೆ ಮರಳಿದ ಅಂತಾರಾಷ್ಟ್ರೀಯ ಟೆನಿಸ್: ಮಾರ್ಚ್ 1ರಿಂದ ITFW-35 ಟೂರ್ನಿ

​ಈ ಬಾರಿಯ ಟೂರ್ನಿಯಲ್ಲಿ ಭಾರತದ ಉದಯೋನ್ಮುಖ ತಾರೆ ವೈಷ್ಣವಿ ಅಡ್ಕರ್ ಭಾಗಿಯಾಗಲಿದ್ದಾರೆ.

Tennis player
ಟೆನಿಸ್​ ಆಟಗಾರ್ತಿ (KSLTA/ITF)
author img

By ETV Bharat Karnataka Team

Published : February 26, 2026 at 2:49 PM IST

1 Min Read
Choose ETV Bharat

​ಕಲಬುರಗಿ: ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗೆ ಕಲಬುರಗಿ ಸಜ್ಜಾಗಿದೆ. ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ITF W-35 ಮಹಿಳಾ ವೃತ್ತಿಪರ ಟೆನಿಸ್ ಪಂದ್ಯಾವಳಿ ಆಯೋಜನೆಯಾಗಿದೆ. ಮಾರ್ಚ್ 1ರಿಂದ 8ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಆಟಗಾರ್ತಿಯರು ಭಾಗಿಯಾಗುತ್ತಿದ್ದಾರೆ. $30,000 ಮೊತ್ತದ ಟೂರ್ನಿಯಲ್ಲಿ‌ ಥೈಲ್ಯಾಂಡ್, ನೆದರ್‌ಲ್ಯಾಂಡ್ಸ್ ಸೇರಿದಂತೆ 11 ದೇಶಗಳ ಖ್ಯಾತ ಆಟಗಾರ್ತಿಯರು ಕಣಕ್ಕಿಳಿಯಲಿದ್ದಾರೆ.

ಮಾರ್ಚ್ 1ರಂದು ಅರ್ಹತಾ ಪಂದ್ಯಗಳು ಹಾಗೂ ಮಾರ್ಚ್ 3ರಿಂದ 'ಮೇನ್ ಡ್ರಾ' ಪಂದ್ಯಗಳು ಆರಂಭವಾಗಲಿವೆ. ​ಈ ಬಾರಿಯ ಟೂರ್ನಿಯಲ್ಲಿ ಭಾರತದ ಉದಯೋನ್ಮುಖ ತಾರೆ ವೈಷ್ಣವಿ ಅಡ್ಕರ್ ಭಾಗಿಯಾಗಲಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ W-100 ಟೂರ್ನಿಯಲ್ಲಿ ಇವರು ಫೈನಲ್ ತಲುಪುವ ಮೂಲಕ ಸಾನಿಯಾ ಮಿರ್ಜಾ ನಂತರ ಈ ಸಾಧನೆ ಮಾಡಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ​ಅವರೊಂದಿಗೆ ಭಾರತದ ಅಗ್ರ ತಾರೆಯರಾದ ಅಂಕಿತಾ ರೈನಾ, ಶ್ರೀವಲ್ಲಿ ರಶ್ಮಿಕಾ ಭಮಿಡಿಪತಿ, ಜೀಲ್ ದೇಸಾಯಿ ಮತ್ತು ಸೋನಾಲ್ ಪಾಟೀಲ್ ಸಹ ಕಣಕ್ಕಿಳಿಯುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಥೈಲ್ಯಾಂಡ್‌ನ ಅಚಿಸಾ ಚಾಂಟಾ ಮತ್ತು ನೆದರ್‌ಲ್ಯಾಂಡ್ಸ್‌ನ ಜಾಸ್ಮಿಜ್ನ್ ಗಿಂಬ್ರೆರೆ ಪ್ರಮುಖ ಆಕರ್ಷಣೆಯಾಗಿದ್ದಾರೆ.

"ಕಲಬುರಗಿಯಲ್ಲಿ ಇಂಥ ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಯುತ್ತಿರುವುದು ನಮ್ಮ ಹೆಮ್ಮೆ. ಇದು ಸ್ಥಳೀಯ ಯುವ ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ಟೆನಿಸ್ ಅನ್ನು ಹತ್ತಿರದಿಂದ ನೋಡುವ ಮತ್ತು ಕಲಿಯುವ ಸುವರ್ಣಾವಕಾಶ. ಕಲಬುರಗಿಯ ಐತಿಹಾಸಿಕ ಭೂಮಿಯಲ್ಲಿ ಕ್ರೀಡಾಪಟುಗಳಿಗೆ ಅದ್ಭುತ ಅನುಭವ ಸಿಗಲಿದೆ" ಎಂದು ಐಟಿ-ಬಿಟಿ ಸಚಿವ ಹಾಗೂ ಕೆಎಸ್‌ಎಲ್‌ಟಿಎಯ ಹಿರಿಯ ಉಪಾಧ್ಯಕ್ಷ ಪ್ರಿಯಾಂಕ್ ಖರ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

​ಬೆಂಗಳೂರು ಓಪನ್, ಡೇವಿಸ್ ಕಪ್, ಬಿಲ್ಲಿ ಜೀನ್ ಕಿಂಗ್ ಕಪ್‌ನಂತಹ ಪ್ರಮುಖ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಕರ್ನಾಟಕ, ಈಗ ಕಲಬುರಗಿಯ ಮೂಲಕ ತನ್ನ ಕ್ರೀಡಾ ನಕ್ಷೆಯನ್ನು ಮತ್ತಷ್ಟು ವಿಸ್ತರಿಸಿದೆ. 2012 ಮತ್ತು 2015ರ ನಂತರ ಈಗ 2026ರಲ್ಲಿ ಕಲಬುರಗಿ ಮತ್ತೊಮ್ಮೆ ಜಾಗತಿಕ ಟೆನಿಸ್ ಭೂಪಟದಲ್ಲಿ ಮಿಂಚಲು ಸಿದ್ಧವಾಗಿದೆ.

ಇದನ್ನೂ ಓದಿ: ಆಸ್ಟ್ರೇಲಿಯನ್​ ಓಪನ್! ಟಿಯಾಂಟ್ಸೊವಾ ಮಣಿಸಿ ಸಬಲೆಂಕಾ ಶುಭಾರಂಭ, ಅಲ್ಕರಾಜ್​ಗೂ ಮುನ್ನಡೆ​