ETV Bharat / state

ಬೆಂಗಳೂರಲ್ಲಿ ಸಮನ್ವಯತೆ ಸಾಧಿಸಲು GPS ಆಧಾರಿತ ಡ್ಯಾಷ್​ ಬೋರ್ಡ್ ಆರಂಭಿಸಲು ಸೂಚನೆ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು ಕಾರ್ಯವ್ಯಾಪ್ತಿಯ ಎಲ್ಲ ಏಜೆನ್ಸಿಗಳ ಜೊತೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಜಿಪಿಎಸ್ ಆಧಾರಿತ ಡ್ಯಾಷ್ ಬೋರ್ಡ್ ಆರಂಭಿಸಲು ಜಿಬಿಎ ಮುಖ್ಯ ಆಯಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

KRISHNA BYREGOWDA
ಅಧಿಕಾರಿಗಳೊಂದಿಗೆ ಸಚಿವ ಕೃಷ್ಣ ಬೈರೇಗೌಡ ಸಭೆ (ETV Bharat)
author img

By ETV Bharat Karnataka Team

Published : July 3, 2026 at 7:36 PM IST

4 Min Read
Choose ETV Bharat

ಬೆಂಗಳೂರು: ಬೆಂಗಳೂರು ಕಾರ್ಯವ್ಯಾಪ್ತಿಯ ಎಲ್ಲ ಏಜೆನ್ಸಿಗಳ ಜೊತೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಜಿಪಿಎಸ್ ಆಧಾರಿತ ಡ್ಯಾಷ್ ಬೋರ್ಡ್ ಆರಂಭಿಸಲು ಜಿಬಿಎ ಮುಖ್ಯ ಆಯಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿವಿಧ ಇಲಾಖೆಗಳನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ವಿಕಾಸಸೌಧದಲ್ಲಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಇಂದು ಮಹತ್ವದ ಸಭೆ ನಡೆಸಿದರು.

ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ನಿತೀಶ್, ಬಿಡಿಎ ಆಯುಕ್ತರಾದ ಮಣಿವಣ್ಣನ್, ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಲಮಂಡಳಿ ಅಧ್ಯಕ್ಷರಾದ ಮಂಜುಳಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ನಗರ ಪಾಲಿಕೆ ಆಯುಕ್ತ ರಮೇಶ್ ಡಿ.ಎಸ್., ಪೊಮ್ಮಲ್ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್, ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಇಲಾಖೆಗಳು ಅವರ ಅವರ ಚಟುವಟಿಕೆಗಳನ್ನು ವೆಬ್​​ಸೈಟ್​ನಲ್ಲಿ ಘೋಷಣೆ ಮಾಡಬೇಕು, ಅದು ಜಿಪಿಎಸ್ ಆಧಾರಿತ ಡ್ಯಾಷ್ ಬೋರ್ಡ್ ಆರಂಭಿಸಲು ಸೂಚನೆ‌‌ ನೀಡಿದ್ದೇನೆ. ಅಲ್ಲಿ ಇಲಾಖೆಗಳು ಬೆಂಗಳೂರಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯ, ಕಾರ್ಯಯೋಜನೆಗಳನ್ನು ಅಪ್​ಲೋಡ್ ಮಾಡಬೇಕು. ಈ ಡ್ಯಾಷ್ ಬೋರ್ಡ್ ಬೆಂಗಳೂರು ರಸ್ತೆ ಇತಿಹಾಸದ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.‌ ಈ ಮೂಲಕ ಸಮನ್ವಯತೆ ಸಾಧಿಸಿ ಪರಿಹಾರ ಕಂಡುಕೊಳ್ಳುವ ಯತ್ನ ನಡೆಯಲಿದೆ ಎಂದರು.

ಬೆಂಗಳೂರಲ್ಲಿ ನಾನಾ ಸರ್ಕಾರಿ ಏಜೆನ್ಸಿಗಳು ಕೆಲಸ ಮಾಡಿದರೂ, ಸಮನ್ವಯತೆ ಇಲ್ಲ. ಹಾಗಾಗಿ ಇದರ ಪರಿಣಾಮ‌ ನಾಗರಿಕರ ಮೇಲೆ ಬೀಳುತ್ತಿದೆ. ಜಿಬಿಎ ರಸ್ತೆ ಹಾಕಿದರೆ ಮರುದಿನ ಜಲಮಂಡಳಿ ಅಥವಾ ಬೆಸ್ಕಾಂ ಅವರು ರಸ್ತೆ ಅಗೆಯುತ್ತಾರೆ. ಇದನ್ನು ಮನಗಂಡು ಜಿಬಿಎ ಕಾಯ್ದೆ ಮಾಡುವಾಗ ಈ ಸಮಸ್ಯೆಯನ್ನು ಪರಿಹರಿಸುವ ಯತ್ನ ಆಗಬೇಕು ಎಂದು ಜಿಬಿಎ ಕಾಯ್ದೆಯಡಿಯೇ ಕಾರ್ಯಕಾರಿ ಸಮಿತಿ ರಚಿಸಲಾಗಿದೆ. ಕನಿಷ್ಠ ಎರಡು ತಿಂಗಳಲ್ಲಿ ಕಾರ್ಯಕಾರಿ ಸಮಿತಿಯ ಒಂದು ಸಭೆ ಆಗಬೇಕು‌. ಅಲ್ಲಿ ವಿವಿಧ ಇಲಾಖೆಗಳು ಕಾರ್ಯಯೋಜನೆಗಳ ಬಗ್ಗೆ ಚರ್ಚೆ ಮಾಡಬೇಕು. ಆ ಮೂಲಕ ಸಮನ್ವಯತೆ ಸಾಧಿಸಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಇದು ಎರನಡನೇ ಸಭೆ ಆಗಿದೆ. ಎಲ್ಲಾ ಇಲಾಖೆಗಳನ್ನು ಒಟ್ಟಿಗೆ ಕೂರಿಸಿ ಚರ್ಚೆ ನಡೆಸಲಾಗುವುದು. ತಿಂಗಳಿಗೆ ಕನಿಷ್ಠ ಒಂದು ಸಭೆ ನಡೆಸಲು ಯೋಜಿಸಲಾಗಿದೆ. ಮೂಲಸೌಕರ್ಯ ಸಮಸ್ಯೆ, ಮೆಟ್ರೋದಿಂದ‌ ಫೀಡರ್ ಸಂಪರ್ಕ ಹೀಗೆ ಒಬ್ಬೊಬ್ಬರೊಂದಿಗೆ ಚರ್ಚೆ ಮಾಡಿ ಸಮಗ್ರ ಪರಿಹಾರ ನೀಡಲು ಯತ್ನಿಸಲಾಗುವುದು. ಸಮನ್ವಯತೆ ಸಾಧಿಸಿ ಸುಧಾರಣೆ ತರಲು ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಪ್ರಯತ್ನ ಮಾಡಲಿದ್ದೇವೆ ಎಂದರು.

ಹತ್ತಿದ ಕುದುರೆಯನ್ನು ಇಳಿಯುವ ಜಾಯಮಾನ ನನ್ನದಲ್ಲ: ವಹಿಸಿಕೊಂಡ ಜವಾಬ್ದಾರಿಗೆ ನ್ಯಾಯ ಒದಗಿಸದೆ, ಹತ್ತಿದ ಕುದುರೆಯನ್ನು ಇಳಿಯುವ ಜಾಯಮಾನ ನನ್ನದಲ್ಲ. ನಾನು ಇಷ್ಟಂತೂ ಹೇಳ್ತೇನೆ ಬೆಂಗಳೂರಿನ ಜನರಿಗೆ ಅತ್ಯುತ್ತಮ ಸಹಕಾರದ ಅಗತ್ಯತೆ ಇದೆ. ಹೀಗಾಗಿ ಬೆಂಗಳೂರಿನ ವ್ಯವಸ್ಥೆಯನ್ನು ಸುಧಾರಿಸಲು ಟ್ರಾಫಿಕ್ ಪೊಲೀಸ್ ಸೇರಿದಂತೆ ನಗರದ ಎಲ್ಲಾ ಸಂಸ್ಥೆಗಳೂ ಒಟ್ಟಾಗಿ ಸಮನ್ವಯದಿಂದ ಕೆಲಸ ನಿರ್ವಹಿಸಬೇಕಿದೆ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು.

ಜನರ ಭಾವನೆ ಅರ್ಥ ಮಾಡಿಕೊಂಡು ಎಲ್ಲಾ ಅಧಿಕಾರಿಗಳು ಒಟ್ಟಾಗಿ ಕೆಲಸ ನಿರ್ವಹಿಸಬೇಕಿದೆ. ನಾವೆಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸದಿದ್ದರೆ, ಬೆಂಗಳೂರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಬೆಂಗಳೂರಲ್ಲಿ ಒಂದು ಏಜೆನ್ಸಿ ಜೊತೆಗೆ ಮತ್ತೊಂದು ಓಜೆನ್ಸಿಗೆ ಸಮನ್ವಯತೆ ಇಲ್ಲ ಎಂಬ ಟೀಕೆಯನ್ನ ನಾನು ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಕೇಳುತ್ತಿದ್ದೇನೆ ಎಂದರು. ಆದರೂ, ಆ ಕಾಲದಿಂದಲೂ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಉಲ್ಬಣವಾಗುತ್ತಿದೆಯೇ ವಿನಃ ಸಮಸ್ಯೆ ಬಗೆಹರಿದಿಲ್ಲ. ಆ ಸಮಸ್ಯೆಯನ್ನು ಬಗೆಹರಿಸುವ ದಿಕ್ಕಿನಲ್ಲಿ ಜಿಬಿಎ ಇಂದು ಒಂದು ಹೆಜ್ಜೆ ಮುಂದಿಟ್ಟಿದೆ. ಸಭೆಯ ಪ್ರಮುಖ ಕಾರ್ಯಸೂಚಿಯ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಎಲ್ಲಾ ಶಾಸಕರ ಒಮ್ಮತದ ನಿರ್ಯದಂತೆ ಫುಟ್​​ಪಾತ್ ತೆರವು: ಈವರೆಗೆ ಫುಟ್​ಪಾತ್​ ತೆರವು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೊದಲ ದಿನ 76.53 ಕಿ.ಮೀ. ಫುಟ್​ಪಾತ್​​ ಒತ್ತುವರಿ ತೆರವಾಗಿದೆ. ಎರಡನೇ ದಿನ 64.55 ಕಿ.ಮೀ ಫುಟ್​ಪಾತ್ ಒತ್ತುವರಿ ತೆರವಾಗಿದೆ. 141 ಕಿ.ಮೀ ಒಟ್ಟು ಫುಟ್​​ಪಾತ್ ಒತ್ತುವರಿ ತೆರವಾಗಿದೆ. ಮುಖ್ಯ ರಸ್ತೆಗಳಲ್ಲಿ ಮಾತ್ರ ಫುಟ್​ಪಾತ್ ಒತ್ತುವರಿ ತೆರವು ಮಾಡುತ್ತಿದ್ದೇವೆ. ಶೇ 20ರಷ್ಟು ಮುಖ್ಯ ರಸ್ತೆಯಲ್ಲಿನ ಫುಟ್​ಪಾತ್ ಒತ್ತುವರಿಗಳನ್ನು ಮಾತ್ರ ತೆರವು ಮಾಡುತ್ತಿದ್ದೇವೆ. ಉಳಿದ ಶೇ 80ರಷ್ಟು ರಸ್ತೆ ಭಾಗಗಳನ್ನು ನಾವು ತೆರವು ಮಾಡುತ್ತಿಲ್ಲ. ಅಲ್ಲಿಗೆ ಬೇಕಾದರೆ ಸ್ಥಳಾಂತರ ಮಾಡಬಹುದು ಎಂದರು.

ಬೆಂಗಳೂರು ಸುಧಾರಣೆ ಆಗಬೇಕಾ, ಬೇಡವಾ?. ಜನರು ಓಡಾಡಲು ಆಗುತ್ತಿಲ್ಲ. ವಯಸ್ಸಾದವರು ಓಡಾಡಲು ಆಗುತ್ತಿಲ್ಲ. ಇದರಿಂದ ನನಗೆ ಲಾಭ ಇದೆಯಾ?. ವೈಯ್ಯಕ್ತಿಕ ಹಿತಾಸಕ್ತಿ ಇಲ್ಲ. ಜನರ‌ ಜೊತೆ ಬೈಯಿಸಿಕೊಂಡು ಇದನ್ನು ಮಾಡಬೇಕಾ?. ಬೆಂಗಳೂರು ನಿಮಗೆ ನಮಗೆ ಆಶ್ರಯ ಕೊಟ್ಟಿದೆ. ಬೆಂಗಳೂರು ಜೀವಂತ ಇದ್ದರೆ ನಾವು ಜೀವಂತ ಇರುತ್ತೇವೆ. ಬೆಂಗಳೂರು ಭವಿಷ್ಯ ಕುಗ್ಗಿದರೆ ನಿಮ್ಮ ನಮ್ಮ ಭವಿಷ್ಯವೂ ಕುಗ್ಗಲಿದೆ. ಮಾಡಿದರೂ ತಪ್ಪು, ಮಾಡದಿದ್ದರೂ ತಪ್ಪು. ಹಲವರು ಈ ತೆರವು ಕಾರ್ಯಾಚರಣೆಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ತಿಳಿಸಿದರು.

ಮಾರ್ಚ್ ತಿಂಗಳಲ್ಲಿ ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಎಲ್ಲಾ ಪಕ್ಷಗಳ ಶಾಸಕರ ಸಭೆ ಕರೆಯಲಾಗಿತ್ತು‌. ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲಾ ಶಾಸಕರು ಕೈ ಎತ್ತಿ ಮುಖ್ಯ ರಸ್ತೆಗಳಲ್ಲಿನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತ ಮಾಡಿಸಬೇಕು ಎಂದು ಒಮ್ಮತದ ನಿರ್ಣಯ ಕೈಗೊಳ್ಳಲಾಗಿತ್ತು. ಅದನ್ನು ಇದೀಗ ಅನುಷ್ಠಾನ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಇವುಗಳನ್ನೂ ಓದಿ: