ETV Bharat / state

ಎಲ್ಲರೂ ಬೆಂಗಳೂರನ್ನು ಟೀಕಿಸುವ ಬದಲು, ಅದರ ಬೆಳವಣಿಗೆಗೆ ಸಹಕರಿಸಿ: ಡಿಸಿಎಂ ಡಿ.ಕೆ.ಶಿವಕುಮಾರ್

ಎಲ್ಲರೂ ಬೆಂಗಳೂರನ್ನು ಟೀಕಿಸುವ ಬದಲು, ಅದರ ಬೆಳವಣಿಗೆಗೆ ಸಹಕರಿಸಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಕರೆ ನೀಡಿದ್ದಾರೆ.

Instead of criticizing Bengaluru, everyone should contribute to its development: DCM DK Shivakumar
ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿ (ETV Bharat)
author img

By ETV Bharat Karnataka Team

Published : November 18, 2025 at 10:29 PM IST

2 Min Read
Choose ETV Bharat

ಬೆಂಗಳೂರು: ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಎಲ್ಲರೂ ಬೆಂಗಳೂರನ್ನು ಟೀಕಿಸುವ ಬದಲು, ಅದರ ಬೆಳವಣಿಗೆಗೆ ಸಹಕರಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ಮೀಸಲಿಡುತ್ತಿದೆ. 41 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ, ಅವಳಿ ಸುರಂಗ, ಎಲಿವೇಟೆಡ್ ಕಾರಿಡಾರ್, ಬಫರ್ ರಸ್ತೆಗಳು ಸೇರಿದಂತೆ 117 ಕಿ.ಮೀ ಉದ್ಧದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ ರೂಪಿಸಲಾಗಿದೆ. ಇದರ ಜೊತೆಗೆ ಬಿಡದಿಯಲ್ಲಿ ಎಐ ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇನ್ನು ಬೆಂಗಳೂರಿನ ದಕ್ಷಿಣ ಭಾಗದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಅತ್ಯುತ್ತಮ ಹವಾಮಾನ ಹಾಗೂ ಸಂಸ್ಕೃತಿಗೆ ಬೆಂಗಳೂರನ್ನು ಮೀರಿಸುವ ಮತ್ತೊಂದು ನಗರ ಬೇರೊಂದಿಲ್ಲ. ನಮ್ಮ ಸರ್ಕಾರ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಇಲಾಖೆಯನ್ನು ಆರಂಭಿಸಲಿದೆ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಿಎಸ್ಆರ್ ಶಾಲೆಗಳನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕೆ ನೀವೆಲ್ಲರೂ ಹೆಚ್ಚಿನ ಸಹಕಾರ ನೀಡಬೇಕಾಗಿದೆ. ಜೊತೆಗೆ ಬೆಂಗಳೂರಿನಿಂದಾಚೆಗೆ ಕೈಗಾರಿಕೆಗಳ ಅಭಿವೃದ್ಧಿಗೆ ಹೊಸ ನೀತಿ ರೂಪಿಸಲಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ನೀವು ಬಲಿಷ್ಠವಾದರೆ, ನಾವು ಬಲಿಷ್ಠವಾಗುತ್ತೇವೆ. ನಿಮ್ಮ ಜೊತೆಗಿನ ಸಹಭಾಗಿತ್ವಕ್ಕೆ ನಾವು ಎದುರು ನೋಡುತ್ತೇವೆ. ನಾವೆಲ್ಲರೂ ಸೇರಿ ಉತ್ತಮ ಬೆಂಗಳೂರು, ಉತ್ತಮ ಕರ್ನಾಟಕ ಹಾಗೂ ಉತ್ತಮ ಭಾರತದ ನಿರ್ಮಾಣ ಮಾಡೋಣ. ಬೆಂಗಳೂರು ಜಾಗತಿಕ ನಗರ, ಜಾಗತಿಕ ಮಟ್ಟದಲ್ಲಿ ನಾವು ಸ್ಪರ್ಧಿಸಲು ಬಯಸುತ್ತೇವೆ. ಇದು ನಿಮ್ಮ ನಗರ, ಈ ನಗರವನ್ನು ಮತ್ತಷ್ಟು ಬಲವಾಗಿ ಬೆಳೆಸಲು ಸಹಕರಿಸಿ ಎಂದು ಅವರು ಕರೆ ನೀಡಿದರು.

ನಮ್ಮ ಮೂಲಸೌಕರ್ಯ ವ್ಯವಸ್ಥೆ ಉತ್ತಮವಾಗಿರುವುದಕ್ಕೆ ವಿಶ್ವದ ಅನೇಕ ರಾಷ್ಟ್ರಗಳ ಸಂಸ್ಥೆಗಳು ಇಲ್ಲಿಗೆ ಆಗಮಿಸಲು ಉತ್ಸುಕವಾಗಿವೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಸಮಸ್ಯೆಗಳು ಉದ್ಭವಿಸಿವೆ. ಆದರೂ ಚಿಂತಿಸುವ ಅಗತ್ಯವಿಲ್ಲ. ಎಲ್ಲರೂ ಬೆಂಗಳೂರನ್ನು ಟೀಕಿಸುವ ಬದಲು, ಅದರ ಬೆಳವಣಿಗೆಗೆ ಸಹಕರಿಸಿ ಎಂದು ಕರೆ ನೀಡಿದರು.

ಬೆಂಗಳೂರಿನ ಜನಸಂಖ್ಯೆಯಲ್ಲಿ ಶೇ. 20ರಷ್ಟು ಮಂದಿ ಐಟಿ ವೃತ್ತಿಪರರು: ಈ ಸಮ್ಮೇಳನದಲ್ಲಿ ವಿಶ್ವದ ನಾನಾ ಭಾಗಗಳಿಂದ 550 ಮಂದಿ ತಮ್ಮ ಅಭಿಪ್ರಾಯಗಳನ್ನು ಈ ಸಮ್ಮೇಳನದಲ್ಲಿ ಹಂಚಿಕೊಳ್ಳಲಿದ್ದಾರೆ. ಕರ್ನಾಟಕ ಐಟಿ ಕ್ಷೇತ್ರದ ದಿಗ್ಗಜನಾಗಿ ಬೆಳೆದಿಲ್ಲ, ಖಾಸಗಿ ವಲಯಕ್ಕೆ ಸರ್ಕಾರದ ನೆರವು ಇಂದು ಈ ಸ್ಥಿತಿಗೆ ತಲುಪಲು ಕಾರಣವಾಗಿದೆ. ದೇಶದಲ್ಲಿ ಮೊದಲು ಐಟಿ ನೀತಿ ಜಾರರಿಗೊಳಿಸಿದ ರಾಜ್ಯ ಕರ್ನಾಟಕ. ಐಟಿ ಇಲಾಖೆ ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. ಬೆಂಗಳೂರನ್ನು ಗಾರ್ಡನ್ ಸಿಟಿ, ಸಿಲಿಕಾನ್ ವ್ಯಾಲಿ ಆಫ್​ ಇಂಡಿಯಾ, ಏಷ್ಯಾದ ನವೋದ್ಯಮಗಳ ರಾಜಧಾನಿ ಎಂಬ ಖ್ಯಾತಿ ಪಡೆದಿದೆ ಎಂದು ಶ್ಲಾಘಿಸಿದರು.

ಬೆಂಗಳೂರು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬೆಳೆದಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರಿದ್ದಾರೆ. ಇದು ಬೆಂಗಳೂರಿನ ಐಟಿ ಕ್ಷೇತ್ರದ ಸಾಮರ್ಥ್ಯ. ಬೆಂಗಳೂರಿನಲ್ಲಿ 1.40 ಲಕ್ಷ ಜನರಿದ್ದು, ಆ ಪೈಕಿ 20% ಜನರು ಐಟಿ ವೃತ್ತಿಪರರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ದೇಶದ ಐಟಿ ರಫ್ತಿನಲ್ಲಿ ಶೇ.40-45ರಷ್ಟು ಪಾಲು ಬೆಂಗಳೂರಿನದ್ದಾಗಿದೆ. ನಮ್ಮಲ್ಲಿ ಹೆಚ್ಚು ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್, ಮೆಡಿಕಲ್ ಕಾಲೇಜುಗಳಿವೆ. ಇಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ. ನಮ್ಮ ಸರ್ಕಾರ ಅನ್ವೇಷಣೆ, ತಂತ್ರಜ್ಞಾನ, ಬಂಡವಾಳ ಹೂಡಿಕೆ, ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ನೀವು ನಮ್ಮ ಮೇಲೆ ನಂಬಿಕೆ ಇಟ್ಟು ಬೆಂಗಳೂರಿಗೆ ಆಗಮಿಸಿದ್ದೀರಿ. ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಹೀಗಾಗಿ ನಾವು ನಿಮಗೆ ಅತ್ಯುತ್ತಮ ಮೂಲ ಸೌಕರ್ಯ ಒದಗಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ