ಗಂಗಾವತಿ - ವಿನೂತನ ಪ್ರಯೋಗ: ಶಾಲಾ ಮಕ್ಕಳಿಂದ ಚುಕುಬುಕು ರೈಲಿನಲ್ಲಿ ಗದಗ ಜಿಲ್ಲಾ ಪ್ರವಾಸ
ಶಾಲೆಯೊಂದು ಮಕ್ಕಳನ್ನು ರೈಲಿನಲ್ಲಿ ಪ್ರವಾಸಕ್ಕೆ ಕರೆದೊಯ್ದು ಹೊಸದೊಂದು ಅನುಭೂತಿ ನೀಡಿದೆ.


Published : January 8, 2026 at 10:28 PM IST
ಗಂಗಾವತಿ, ಕೊಪ್ಪಳ: ಶಾಲಾ ಮಕ್ಕಳ ಪ್ರವಾಸ ಎಂದರೆ ಸಹಜವಾಗಿ ಆಯಾ ಶಾಲಾ ಆಡಳಿತ ಮಂಡಳಿಯವರು ಮಕ್ಕಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು ಪ್ರತ್ಯೇಕ ವಾಹನಗಳನ್ನು ಇಲ್ಲವೇ ಸಾರಿಗೆ ಇಲಾಖೆ ವಾಹನಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ನಗರದ ಶಾಲೆಯೊಂದು ತನ್ನ ತನ್ನ ಸಂಸ್ಥೆಯಲ್ಲಿ ಓದುತ್ತಿರುವ ನೂರಾರು ಮಕ್ಕಳನ್ನು ರೈಲಿನಲ್ಲಿಯೇ ಕರೆದೊಯ್ದು ಗದಗ ಜಿಲ್ಲಾ ಪ್ರವಾಸ ಮಾಡಿಸಿಕೊಂಡು ಬರುವ ಮೂಲಕ ಹೊಸದೊಂದು ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯಾಗಿದೆ.
ಜಯನಗರದ ಬೈಪಾಸ್ ರಸ್ತೆಯಲ್ಲಿರುವ ಮಹಾನ್ ಕಿಡ್ಸ್ ಶಾಲೆಯ ಆಡಳಿತ ಮಂಡಳಿಯು ಮಕ್ಕಳನ್ನು ರೈಲಿನಲ್ಲಿ ಪ್ರವಾಸಕ್ಕೆ ಕರೆದೊಯ್ದು ಹೊಸದೊಂದು ಅನುಭೂತಿ ನೀಡಿದೆ. ಅದರಲ್ಲೂ ಗಂಗಾವತಿಯಿಂದ ಕೊಪ್ಪಳಕ್ಕೆ ಹೋಗುವ ರೈಲಿನ ಮಾರ್ಗದಲ್ಲಿನ ಪ್ರಾಕೃತಿಕ ದೃಶ್ಯಗಳನ್ನು ಮಕ್ಕಳು ಎಂಜಾಯ್ ಮಾಡಿದ್ದಾರೆ.

ರೈಲು ಪ್ರಯಾಣದ ಸಂದರ್ಭದಲ್ಲಿ ಎದುರಾಗುವ ವಿಶಾಲ ಬಯಲು ಪ್ರದೇಶ, ಅದರ ಬೆನ್ನಲ್ಲೆ ಬೃಹತ್ ಬೆಟ್ಟಗುಡ್ಡಗಳ ಸಾಲು, ಕಣ್ಣು ಹಾಯಿಸಿದುದ್ದಕ್ಕೂ ತಂಪು ನೀಡುವ ಹಚ್ಚ ಹಸುರಿನ ಭತ್ತದ ಪೈರಿನ ದೃಶ್ಯಗಳನ್ನು ಮಕ್ಕಳು ಎಂಜಾಯ್ ಮಾಡಿದರು.

ಬೆಳಗ್ಗೆ ಆರು ಗಂಟೆಗೆ ಮುಂಜಾವಿನ ಚುಮುಚುಮು ಚಳಿ, ಸುತ್ತಲಿನ ಬೆಟ್ಟಗುಡ್ಡಗಳ ಮಧ್ಯೆ ಕವಿದ ಇಬ್ಬನಿಯ ಮಂಜು ಭೇದಿಸಿಕೊಂಡು ಬೆಳಗ್ಗೆ ಆರು ಗಂಟೆಗೆ ಹೊರಟ ರೈಲು, ಅಕ್ಕಪ್ಪಕದ ಹಳ್ಳಿಗಳನ್ನು ಹಿಂದಿಕ್ಕಿ ಓಡುತ್ತಿರುವುದನ್ನು ಕಂಡು ಮಕ್ಕಳು ಹರ್ಷೋದ್ಗಾರ ಮಾಡಿದರು. ಕೇಕೆ ಹಾಕಿದರು. ಚಪ್ಪಾಳೆ ತಟ್ಟಿದರು. ತಮ್ಮ ಶಾಲಾ ಮಕ್ಕಳಲ್ಲಿ ಕ್ರೀಯಾಶೀಲತೆ ತುಂಬುವ ನಿಟ್ಟಿನಲ್ಲಿ ಸದಾ ಹೊಸ ಅನುಭೂತಿ ಮೂಡಿಸುವ ಯೋಜನೆ ರೂಪಿಸುವ ಮಹಾನ್ ಕಿಡ್ಸ್ ಶಾಲೆಯ ಸಂಸ್ಥಾಪಕರು ಮಕ್ಕಳಿಗೆ ರೈಲು ಪ್ರವಾಸ ಹಮ್ಮಿಕೊಂಡು ವಿಶೇಷ ಅನುಭವ ಮೂಡಿಸಿದರು.

ಪ್ರತ್ಯೇಕ ತಂಡಗಳಾಗಿ ವಿಭಜನೆ ಮಾಡಿ ಜವಾಬ್ದಾರಿ ಹಂಚಿಕೆ: 5 ರಿಂದ 9ನೇ ತರಗತಿಯ ಮಕ್ಕಳಿಗಾಗಿ ಒಂದು ದಿನದ ಗದಗ ಪ್ರವಾಸ ಆಯೋಜಿಸಲಾಗಿತ್ತು. ಮಕ್ಕಳಿಗೆ ಭೌತಿಕವಾಗಿ ಪ್ರವಾಸದ ಅನುಭವ ನೀಡಲು ಅಂದಾಜು 160 ಮಕ್ಕಳನ್ನು ರೈಲಿನಲ್ಲಿ ಕರೆದೊಯ್ಯಲಾಗಿತ್ತು. ಇಂತಿಷ್ಟು ಮಕ್ಕಳ ತಂಡ ರಚಿಸಿ ಅವರ ಜವಾಬ್ದಾರಿಗೆ ಪ್ರತ್ಯೇಕ ಶಿಕ್ಷಕರನ್ನು ನಿಯೋಜಿಸಲಾಗಿತ್ತು.

ಗದಗಿನ ರೆಸಾರ್ಟ್ ಒಂದರಲ್ಲಿ ಮಕ್ಕಳಿಗೆ ಉಪಹಾರ, ಊಟ, ಮನೋರಂಜನೆಯ ವ್ಯವಸ್ಥೆ ಮಾಡಲಾಗಿತ್ತು. ಸ್ವಿಮ್ಮಿಂಗ್ ಪೂಲ್, ವಾಲ್ ಕ್ಲೈಂಬ್, ಮಡ್ ರೇಸ್ ಇನ್ನಿತರ ಮನೋರಂಜನಾ ಆಟಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ನಂತರ ಪ್ರಾಣಿಸಂಗ್ರಹಾಲಯಕ್ಕೆ ಮಕ್ಕಳನ್ನು ಕರೆದೊಯ್ಯಲಾಯಿತು.

ಇದನ್ನು ಓದಿ: ಮಕರ ಸಂಕ್ರಾಂತಿ ಸಂಭ್ರಮ ಡಬಲ್ ಮಾಡಲು ಭೇಟಿ ನೀಡಬೇಕಾದ ರಾಜ್ಯದ ಪ್ರಮುಖ ಐತಿಹಾಸಿಕ ತಾಣಗಳಿವು!

