300ಕ್ಕೂ ಹೆಚ್ಚು ತೂಗುಸೇತುವೆಗಳ ನಿರ್ಮಾತೃ, ಭಾರತದ 'ಬ್ರಿಡ್ಜ್ ಮ್ಯಾನ್' ಸುಳ್ಯದ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಇನ್ನಿಲ್ಲ
ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ನಿರ್ಮಿಸಬಹುದಾದ ಪರಿಸರಸ್ನೇಹಿ 300ಕ್ಕೂ ಹೆಚ್ಚು ತೂಗುಸೇತುವೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿನ್ಯಾಸಗೊಳಿಸಿ ಡಾ. ಗಿರೀಶ್ ಭಾರದ್ವಾಜ್ ದೇಶಾದ್ಯಂತ ಕ್ರಾಂತಿ ಸೃಷ್ಟಿಸಿದ್ದರು.

Published : July 7, 2026 at 9:28 AM IST
|Updated : July 7, 2026 at 9:35 AM IST
ಸುಳ್ಯ(ದಕ್ಷಿಣ ಕನ್ನಡ): ಕೇವಲ ತಂತ್ರಜ್ಞಾನದಿಂದಷ್ಟೇ ಅಲ್ಲ, ಗ್ರಾಮೀಣ ಜನರ ಬದುಕಿಗೆ ಆಸರೆಯಾಗುವ ಮೂಲಕ ದೇಶದ ಗಮನ ಸೆಳೆದಿದ್ದ ಅಪರೂಪದ ತಾಂತ್ರಿಕ ಯೋಗಿ, ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನದಿ, ಹಳ್ಳ-ಕೊಳ್ಳಗಳಿಂದಾಗಿ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡಿದ್ದ ನೂರಾರು ಹಳ್ಳಿಗಳಿಗೆ ತೂಗುಸೇತುವೆಗಳ ಮೂಲಕ ಗಿರೀಶ್ ಭಾರದ್ವಾಜ್ ಕೊಂಡಿಯಾಗಿದ್ದರು. ಅವರ ಅಗಲಿಕೆ ಗ್ರಾಮೀಣ ಭಾರತಕ್ಕೆ ತುಂಬಲಾರದ ನಷ್ಟವಾಗಿದೆ.
'ತೂಗುಸೇತುವೆಗಳ ಸರದಾರ', ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ತೀವ್ರ ಆಘಾತ ಉಂಟುಮಾಡಿದೆ. ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರ ಅಗಲಿಕೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ.
— DK Shivakumar (@DKShivakumar) July 7, 2026
ದೇಶದಾದ್ಯಂತ 140ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿದ್ದ ಭಾರದ್ವಾಜ್ ಅವರು, ಮೂಲಸೌಕರ್ಯ… pic.twitter.com/YGgjthCTKr
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಇಂಜಿನಿಯರಿಂಗ್ ಪದವೀಧರರಾಗಿದ್ದ ಅವರು, ಬಹುದೊಡ್ಡ ಕಂಪನಿಗಳ ಆಕರ್ಷಕ ಉದ್ಯೋಗದ ಆಫರ್‌ಗಳನ್ನು ಬದಿಗೊತ್ತಿ ಗ್ರಾಮೀಣ ಜನರ ಸಬಲೀಕರಣಕ್ಕೆ ಶ್ರಮಿಸಿದರು. ಸರ್ಕಾರಿ ವ್ಯವಸ್ಥೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕೈಚೆಲ್ಲುವ ಜಾಗದಲ್ಲಿ, ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ನಿರ್ಮಿಸಬಹುದಾದ ಪರಿಸರಸ್ನೇಹಿ ತೂಗುಸೇತುವೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿನ್ಯಾಸಗೊಳಿಸಿ ದೇಶಾದ್ಯಂತ ಕ್ರಾಂತಿ ಸೃಷ್ಟಿಸಿದ್ದರು.
ಬ್ರಿಡ್ಜ್ ಮ್ಯಾನ್ ಎಂದೇ ಖ್ಯಾತಿ: ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಗಿರೀಶ್ ಅವರು ಸುಳ್ಯದಲ್ಲೇ ತಂದೆಯವರ ಜೊತೆಗೂಡಿ ಸಣ್ಣದೊಂದು ವರ್ಕ್‌ಶಾಪ್ ಆರಂಭಿಸಿದರು. ಆದರೆ ಅವರ ಇಂಜಿನಿಯರಿಂಗ್ ಜ್ಞಾನ ಬರೀ ಕಬ್ಬಿಣದ ಕೆಲಸಕ್ಕೆ ಸೀಮಿತವಾಗಲಿಲ್ಲ. ಹಳ್ಳಿಗಳ ಜನರು ಮಳೆಗಾಲದಲ್ಲಿ ದಾಟಲಾಗದ ನದಿಗಳ ಎದುರು ಅನುಭವಿಸುತ್ತಿದ್ದ ಯಾತನೆ, ಶಾಲೆಗೆ ಹೋಗಲಾಗದ ಮಕ್ಕಳ ಪರದಾಟ ಅವರನ್ನು ಚಿಂತನೆಗೆ ಹಚ್ಚಿತು.
ಮೊದಲ ಪ್ರಯೋಗ ಮತ್ತು ಯಶೋಗಾಥೆ: 1989ರಲ್ಲಿ ಸುಳ್ಯದ ಅರಂಬೂರಿನ ಪಯಸ್ವಿನಿ ನದಿಗೆ ಮೊದಲ ಬಾರಿಗೆ ಅವರು ನಿರ್ಮಿಸಿದ ತೂಗುಸೇತುವೆ ಅವರ ಬದುಕಿನ ಮಹತ್ತರ ತಿರುವಾಗಿತ್ತು. ಕೇವಲ ಸ್ಥಳೀಯ ಸಾಮಗ್ರಿ ಮತ್ತು ಸೀಮಿತ ಬಜೆಟ್‌ನಲ್ಲಿ ಅವರು ನಿರ್ಮಿಸಿದ ಆ ಸೇತುವೆ ಯಶಸ್ವಿಯಾದಾಗ, ಇಡೀ ದೇಶವೇ ಇವರ ಕಡೆ ತಿರುಗಿ ನೋಡುವಂತಾಯಿತು. ಅಲ್ಲಿಂದ ಆರಂಭವಾದ ಅವರ ಈ ಪಯಣ ನಿರಂತರವಾಗಿ ಸಾಗಿತು.
300ಕ್ಕೂ ಅಧಿಕ ಸೇತುವೆಗಳು: ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 300ಕ್ಕೂ ಹೆಚ್ಚು ತೂಗುಸೇತುವೆಗಳನ್ನು ಇವರು ನಿರ್ಮಿಸಿದ್ದಾರೆ. ಆದ್ದರಿಂದ ಇವರು ಬ್ರಿಡ್ಜ್ ಮ್ಯಾನ್, ತೂಗುಸೇತುವೆಗಳ ಸರದಾರ ಎಂದು ಖ್ಯಾತಿಯಾಗಿದ್ದಾರೆ.
ಕಡಿಮೆ ವೆಚ್ಚ, ಹೆಚ್ಚು ಬಾಳಿಕೆ: ಸಾಂಪ್ರದಾಯಿಕ ಕಾಂಕ್ರೀಟ್ ಸೇತುವೆಗಳಿಗೆ ಹೋಲಿಸಿದರೆ ಇವರ ತೂಗುಸೇತುವೆಗಳು ಅತ್ಯಲ್ಪ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದವು. ಸೇತುವೆ ಕಟ್ಟುವಾಗ ಕೇವಲ ಕಾರ್ಮಿಕರನ್ನಷ್ಟೇ ಬಳಸದೆ, ಆಯಾ ಹಳ್ಳಿಯ ಜನರನ್ನು ಒಟ್ಟುಗೂಡಿಸಿ "ಶ್ರಮದಾನ"ದ ಮೂಲಕ ಕಾಯಕ ಮಾಡುತ್ತಿದ್ದರು. ಇದರಿಂದ ಹಳ್ಳಿಯ ಜನರಿಗೆ ಆ ಸೇತುವೆ ತಮ್ಮದೇ ಎಂಬ ಭಾವನೆ ಮೂಡುತ್ತಿತ್ತು.
ಸಂದ ಪ್ರಶಸ್ತಿ-ಗೌರವಗಳು: ಅವರ ಈ ನಿಸ್ವಾರ್ಥ ಸಾಮಾಜಿಕ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 2017ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಪದ್ಮಶ್ರೀ" ನೀಡಿ ಗೌರವಿಸಿತು. ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಸಂಸ್ಥೆಗಳು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿವೆ.
ಹಳ್ಳಿಗಳ ನಡುವಿನ ಭೌತಿಕ ಅಂತರವನ್ನು ಮಾತ್ರವಲ್ಲದೆ, ಜನರ ಮನಸ್ಸುಗಳನ್ನು ಬೆಸೆದ ಕೀರ್ತಿ ಡಾ. ಗಿರೀಶ್ ಭಾರದ್ವಾಜ್ ಅವರದ್ದು. ಅವರು ಕಟ್ಟಿದ ಸೇತುವೆಗಳು ಇರುವ ತನಕವೂ ದೇಶದ ಗ್ರಾಮೀಣ ಜನರ ಮನಸ್ಸಿನಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ.
ಸುಳ್ಯ ತಹಶೀಲ್ದಾರ್ ಮಂಜುಳಾ ಅವರು 'ಈಟಿವಿ ಭಾರತ'ದ ಜೊತೆ ಮಾತನಾಡಿ, "ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ. ಗ್ರಾಮೀಣ ಪ್ರದೇಶಗಳ ಜನರ ಸಂಚಾರ ಸುಗಮಗೊಳಿಸಲು ಅವರು ನಿರ್ಮಿಸಿದ ತೂಗುಸೇತುವೆಗಳು ಅವರ ದೂರದೃಷ್ಟಿ ಮತ್ತು ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿವೆ. ತಮ್ಮ ಇಂಜಿನಿಯರಿಂಗ್ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿದ ಅಪರೂಪದ ವ್ಯಕ್ತಿತ್ವ ಅವರದು. ಅವರ ಸೇವೆಯನ್ನು ದೇಶ ಸದಾ ಸ್ಮರಿಸಲಿದೆ. ಅವರ ಅಗಲಿಕೆಯಿಂದ ಸಮಾಜ ಒಬ್ಬ ಶ್ರೇಷ್ಠ ಇಂಜಿನಿಯರ್ ಹಾಗೂ ಮಾನವತಾವಾದಿಯನ್ನು ಕಳೆದುಕೊಂಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಹೇಳಿದರು.
ಸಿಎಂ ಸಂತಾಪ: 'ತೂಗುಸೇತುವೆಗಳ ಸರದಾರ', ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ತೀವ್ರ ಆಘಾತ ಉಂಟುಮಾಡಿದೆ. ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರ ಅಗಲಿಕೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ದೇಶದಾದ್ಯಂತ 140ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿದ್ದ ಭಾರದ್ವಾಜ್ ಅವರು, ಮೂಲಸೌಕರ್ಯ ವಂಚಿತ ಗ್ರಾಮೀಣ ಭಾಗಗಳ ಜನರಿಗೆ ಸುಲಭ ಸಂಪರ್ಕ ಕಲ್ಪಿಸುವ ಮೂಲಕ ಜನರ ಬದುಕಿಗೆ ಆಸರೆಯಾಗಿದ್ದರು. ಇವರ ಈ ತಾಂತ್ರಿಕ ಚಾತುರ್ಯ ಹಾಗೂ ಜನಪರ ಸೇವೆಯನ್ನು ಗುರುತಿಸಿಯೇ ಸಾರ್ವಜನಿಕರು ಇವರನ್ನು ಪ್ರೀತಿಯಿಂದ 'ಸುಳ್ಯದ ವಿಶ್ವೇಶ್ವರಯ್ಯ' ಎಂದು ಗೌರವಿಸುತ್ತಿದ್ದರು. ಅಸಾಧಾರಣ ತಾಂತ್ರಿಕ ನೈಪುಣ್ಯತೆಯ ಮೂಲಕ ಜನಸಾಮಾನ್ಯರ ಸೇವೆ ಮಾಡಿದ ಡಾ. ಗಿರೀಶ್ ಭಾರದ್ವಾಜ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು ಹಾಗೂ ಹಿತೈಷಿಗಳಿಗೆ ಭಗವಂತ ನೀಡಲಿ ಎಂದು ಸಿಎಂ ಡಿಕೆ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿನಿಮಾ ನಿರ್ದೇಶಕ, ಹಿರಿಯ ಪತ್ರಕರ್ತ ಎನ್.ಎಸ್.ಶಂಕರ್ ನಿಧನ

