ETV Bharat / state

ವೈವಾಹಿಕ ವಿವಾದದಲ್ಲಿ ಆದಾಯ ತೆರಿಗೆ ಪಾವತಿಯ ವಿವರವನ್ನು ಆರ್‌ಟಿಐ ಅಡಿಯಲ್ಲಿ ಪಡೆಯಲಾಗದು: ಹೈಕೋರ್ಟ್

ದಂಪತಿಯ ಆದಾಯ ತೆರಿಗೆ ಪಾವತಿಯ ವಿವರವನ್ನು ಆರ್​ಟಿಐ ಅಡಿಯಲ್ಲಿ ಪಡೆಯಲಾಗದು ಎಂದು ಹೈಕೋರ್ಟ್​ ಹೇಳಿದೆ.

High court
ಹೈಕೋರ್ಟ್​ (ETV Bharat)
author img

By ETV Bharat Karnataka Team

Published : February 26, 2026 at 5:57 PM IST

3 Min Read
Choose ETV Bharat

ಬೆಂಗಳೂರು: ಆದಾಯ ತೆರಿಗೆ ಪಾವತಿಸುವುದು ವ್ಯಕ್ತಿಯ ಗೌಪ್ಯತೆಯ ವಿಷಯವಾಗಿದ್ದು, ವೈವಾಹಿಕ ವಿವಾದಗಳಲ್ಲಿ ದಂಪತಿಗಳ ಆದಾಯ ತೆರಿಗೆ ಪಾವತಿ ಕುರಿತ ವಿವರವನ್ನು ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿಯಲ್ಲಿ ಪಡೆಯುವುದಕ್ಕೆ ಅವಕಾಶವಿಲ್ಲ ಹೈಕೋರ್ಟ್ ಹೇಳಿದೆ. ಅಲ್ಲದೆ, ಈ ಸಂಬಂಧ ದಂಪತಿಗಳ ಆದಾಯ ತೆರಿಗೆ ಮತ್ತು ಹಣಕಾಸು ದಾಖಲೆಗಳನ್ನು ಪಡೆಯಲು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಪತಿಯ ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ವಿವರವನ್ನು ಪತ್ನಿಗೆ ಒದಗಿಸುವಂತೆ ಕೇಂದ್ರ ಮಾಹಿತಿ ಆಯೋಗ ಹೊರಡಿಸಿದ್ದ ಆದೇಶ ಪ್ರಶ್ನಿಸಿ, ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ರದ್ದುಪಡಿಸಿದೆ.

ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಜೀವನಾಂಶ ಅಥವಾ ನಿರ್ವಹಣಾ ವೆಚ್ಚ ಕುರಿತ ನಿರ್ಧಾರ ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಪಕ್ಷಗಾರರ ಆದಾಯದ ಕುರಿತ ದಾಖಲೆಗಳನ್ನು ಪರಿಶೀಲಿಸದೆ ಮೌಖಿಕ ಹೇಳಿಕೆಗಳನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯಗಳು, ಪ್ರಕರಣದಲ್ಲಿ ಪರಿಣಾಮಕಾರಿ ಆದೇಶ ನೀಡುವ ಸಲುವಾಗಿ ಎರಡೂ ಪಕ್ಷಗಾರರ ಅರ್ಥಿಕ ಸ್ಥಿತಿಗತಿಯ ಮಾಹಿತಿ ಪಡೆಯಲು ಅವಕಾಶವಿರಲಿದೆ. ಈ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ಇಲ್ಲವೇ ಯಾವುದೇ ಇತರೆ ಪ್ರಾಧಿಕಾರದಿಂದ ಮಾಹಿತಿ ಕೋರಬಹುದಾಗಿದೆ ಎಂದು ಪೀಠ ಹೇಳಿದೆ.

ಪಕ್ಷಗಾರರ ಆದಾಯಕ್ಕೆ ಸಂಬಂಧಿಸಿದಂತೆ ವಿವಾದಗಳಿದ್ದಲ್ಲಿ ಆದಾಯ ತೆರಿಗೆ ಪಾವತಿ ಮತ್ತು ಹಣಕಾಸು ದಾಖಲೆಗಳನ್ನು ಸೇರಿದಂತೆ ಸಾಕ್ಷ್ಯಾಧಾರಗಳನ್ನು ಪಡೆದುಕೊಳ್ಳಲು ಆದಾಯ ತೆರಿಗೆ ಇಲಾಖೆ, ಬ್ಯಾಂಕ್‌ ಸೇರಿದಂತೆ ಆರ್ಥಿಕ ವ್ಯವಹಾರಗಳ ಸಂಸ್ಥೆಗಳಿಗೆ ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿ ಮಾಡುವ ಅಧಿಕಾರವನ್ನು ಸ್ವಯಂ ಪ್ರೇರಿತವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.

ಆದಾಯ ತೆರಿಗೆ ಪಾವತಿ, ಮೌಲ್ಯಮಾಪನ ವಿವರಗಳು ಮತ್ತು ತೆರಿಗೆದಾರರ ಸಂಬಂಧಿತ ಹಣಕಾಸಿನ ವಿವರಗಳು ಆರ್‌ಟಿಐ ಸೆಕ್ಷನ್ 8(1)(ಜೆ)ಯ ಅಡಿಯಲ್ಲಿ ವೈಯಕ್ತಿಕ ಮಾಹಿತಿಯಾಗಿದೆ. ಈ ಮಾಹಿತಿಯನ್ನು ಬಹಿರಂಗಪಡಿಸುವಿಕೆಯಿಂದ ವಿನಾಯ್ತಿ ನೀಡಲಾಗಿದೆ. ಆದರೆ, ಸಾರ್ವಜನಿಕ ಹಿತಾಸಕ್ತಿ ಅಡಗಿದ್ದಲ್ಲಿ ಸೂಕ್ತ ಪ್ರಾಧಿಕಾರಗಳ ಸೂಚನೆ ಆಧಾರದಲ್ಲಿ ಮಾತ್ರ ಆರ್​ಟಿಐ ಅಡಿಯಲ್ಲಿ ಮಾಹಿತಿ ನೀಡಬಹುದಾಗಿದೆ.

ಜತೆಗೆ, ವ್ಯಕ್ತಿಯ ವೈಯಕ್ತಿಕ ಹಣಕಾಸಿನ ವಿಚಾರವನ್ನು ಆರ್‌ಟಿಐ ಅಡಿಯಲ್ಲಿ ಒದಗಿಸಲಾಗುವುದಿಲ್ಲ. ವೈವಾಹಿಕ ವಿವಾದಗಳ ಅಥವಾ ಜೀವನಾಂಶದ ಹಕ್ಕುಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿರುವುದಿಲ್ಲ. ಆದ್ದರಿಂದ, ಜೀವನಾಂಶ/ ನಿರ್ವಹಣಾ ವೆಚ್ಚ ಪಡೆಯುವ ಪ್ರಕ್ರಿಯೆಯಲ್ಲಿ ಸಂಗಾತಿಗಳ ಆದಾಯ ತೆರಿಗೆ ಮಾಹಿತಿ ಪಡೆಯಲು ಆರ್‌ಟಿಐ ಬದಲಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪೀಠ ಹೇಳಿದೆ.

ಅಲ್ಲದೆ, ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಜೀವನಾಂಶ/ ನಿರ್ವಹಣಾ ವೆಚ್ಚ ನಿರ್ಧರಿಸುವ ಸಂದರ್ಭದಲ್ಲಿ ಪತಿ/ಪತ್ನಿಯ ತಮ್ಮ ನಿಜವಾದ ಆದಾಯ ಮಾಹಿತಿ ಪಡೆಯಲು ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ವಿಚಾರಣಾ ನ್ಯಾಯಾಲಯಗಳು ಮತ್ತು ಆದಾಯ ತೆರಿಗೆ ಇಲಾಖೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸಿದೆ.


ಮಾರ್ಗಸೂಚಿಗಳು:

  • ಪತಿ ಅಥವಾ ಪತ್ನಿಯ ಹಣಕಾಸಿಗೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲೆಗಳನ್ನು ಪಡೆಯಬೇಕಾದಲ್ಲಿ ಅವರ ಸಂಗಾತಿಗಳು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು.
  • ಅರ್ಜಿಯ ಸಂಬಂಧ ಆದಾಯ ತೆರಿಗೆ ಪಾವತಿ ಮಾಡುವ ಮಾಹಿತಿ ಪಡೆದುಕೊಳ್ಳುವ ಅಗತ್ಯತೆಯ ಕುರಿತು ನ್ಯಾಯಾಲಯ ಪರಿಶೀಲನೆ ನಡೆಸಬೇಕು.
  • ಮಾಹಿತಿ ಪಡೆಯಬೇಕಾದ ಅಗತ್ಯವಿದ್ದಲ್ಲಿ ಮುಚ್ಚಿದ ಲಕೋಟೆಯಲ್ಲಿ ವಿವರ ಒದಗಿಸಲು ಆದೇಶ ನೀಡಬೇಕು.
  • ಈ ಸಂಬಂಧ ಪ್ರತಿವಾದಿ(ಪತಿ/ಪತ್ನಿ)ಗೆ ನೋಟಿಸ್‌ ಜಾರಿ ಮಾಡಿ 14 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು.
  • ಆದಾಯ ತೆರಿಗೆ ಇಲಾಖೆ ನೇಮಿಸಿರುವ ನೋಡಲ್‌ ಅಧಿಕಾರಿಗಳ ಮೂಲಕ 21 ದಿನಗಳಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕು.
  • ಆದಾಯ ತೆರಿಗೆ ಇಲಾಖೆ ಮಾಹಿತಿ ಪಡೆದುಕೊಳ್ಳುವ ಸಂದರ್ಭದಲ್ಲಿ ಗೌಪ್ಯತೆ ಕಾಯ್ದುಕೊಂಡಿರಬೇಕು.
  • ಗೌಪ್ಯತೆ ಕಾಪಾಡುವ ಸಂಬಂಧ ಉಭಯ ಪಕ್ಷಗಾರರಿಂದ ಪ್ರಮಾಣ ಪತ್ರ ಪಡೆದುಕೊಳ್ಳಬೇಕು.
  • ಈ ಮಾಹಿತಿಯನ್ನು ಜೀವನಾಂಶ/ನಿರ್ವಹಣಾ ವೆಚ್ಚ ಪಾವತಿ ವಿಷಯಕ್ಕೆ ಮಾತ್ರ ಬಳಸಿಕೊಳ್ಳಬೇಕು.
  • ಆದಾಯ ತೆರಿಗೆ ಇಲಾಖೆ ಮುಚ್ಚಿದ ಲಕೋಟೆಯನ್ನು ಇಬ್ಬರೂ ಪಕ್ಷಗಾರರ ಸಮ್ಮುಖದಲ್ಲಿ ತೆಗೆದು ಪರಿಶೀಲನೆ ಮಾಡಬೇಕು.
  • ಮೂರನೇ ವ್ಯಕ್ತಿಗೆ ಗೊತ್ತಾಗದಂತೆ ನಿರ್ವಹಣೆ ಮಾಡಬೇಕು. ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದು ಷರತ್ತು ಒದಗಿಸಬೇಕು.
  • ನ್ಯಾಯಾಲಯ ಎಲ್ಲ ದಾಖಲೆಗಳನ್ನು ಪಕ್ಷಗಾರರಿಗೆ ನೀಡುವುದಕ್ಕೆ ನಿರಾಕರಿಸಬಹುದು. ಆದರೆ, ಪರಿಶೀಲನೆ ಮತ್ತು ಅದಕ್ಕೆ ಸಂಬಂಧಿಸಿದ ಟಿಪ್ಪಣಿಗಳನ್ನು ಮಾತ್ರ ಒದಗಿಸಬಹುದಾಗಿದೆ.
  • ನಿರ್ವಹಣಾ ವೆಚ್ಚ ಪಾವತಿಯನ್ನು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಬಳಸಿ ಮಾಹಿತಿ ದುರುಪಯೋಗ ಪಡಿಸಿಕೊಳ್ಳುವುದನ್ನು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಪರಿಗಣಿಸಬೇಕು.
  • ಈ ಮಾರ್ಗಸೂಚಿಗಳು ಲಿಂಗ ತಟಸ್ಥವಾಗಿದ್ದು, ಗಂಡನ ಮಾಹಿತಿ ಕೋರಿ ಪತ್ನಿ ಸಲ್ಲಿಸುವ ಮತ್ತು ಪತ್ನಿ ಮಾಹಿತಿ ಕೋರಿ ಪತಿ ಸಲ್ಲಿಸುವ ಅರ್ಜಿಗಳಿಗೆ ಸಮಾನವಾಗಿ ಅನ್ವಯಿಸಲಿದೆ.
  • ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಇಲಾಖೆ, ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಬ್ಯಾಂಕುಗಳು ಮತ್ತು ಸಂಗಾತಿಯ ಆರ್ಥಿಕ ವ್ಯವಹಾರಗಳನ್ನು ಹೊಂದಿರುವ ಇತರೆ ಸಂಸ್ಥೆಗಳಿಂದ ಕೋರಿದ ಹಣಕಾಸು ದಾಖಲೆಗಳನ್ನು ಪಡೆಯುವುದಕ್ಕೆ ಈ ಮಾರ್ಗಸೂಚಿಗಳು ಅನ್ವಯವಾಗಲಿವೆ ಎಂದು ಪೀಠ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ಬೈಲಾ ನಿಯಮಗಳ ಉಲ್ಲಂಘನೆ ಆರೋಪ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿರುದ್ಧದ ತನಿಖೆಗೆ ತಡೆ