ETV Bharat / state

ತುಂಬು ಗರ್ಭಿಣಿ ಪತ್ನಿ, ಮಕ್ಕಳ ಮದುವೆಗೆ ಅಪ್ಪ - ಅವ್ವ ಹೆಣ್ಣು ಹುಡುಕುತ್ತಿದ್ದರು: ಇನಾಮದಾರ ಕಾರ್ಖಾನೆ ಕಾರ್ಮಿಕರ ಸಾವಿನ ಕಣ್ಣೀರಿನ ಕಥೆಯಿದು!

ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿ ಇರುವ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ‌ ಸಂಭವಿಸಿದ ದುರಂತದ ಕಣ್ಣೀರಿನ ಕಥೆ ಇದು.

Inamdar Sugar Factory Explosion; This is a story of tragic tears
ದುರಂತದಲ್ಲಿ ಗಾಯಗೊಂಡಿದ್ದ ಎಲ್ಲ 8 ಕಾರ್ಮಿಕರ ಸಾವು (ETV Bharat)
author img

By ETV Bharat Karnataka Team

Published : January 8, 2026 at 9:11 PM IST

|

Updated : January 8, 2026 at 10:14 PM IST

4 Min Read
Choose ETV Bharat

ವಿಶೇಷ ವರದಿ - ಸಿದ್ದನಗೌಡ ಪಾಟೀಲ

ಬೆಳಗಾವಿ: ಬೈಲಹೊಂಗಲ ತಾಲೂಕಿನ ಮರಕುಂಬಿಯ ಇನಾಮದಾರ ಸಕ್ಕರೆ ಕಾರ್ಖಾನೆ ದುರಂತದಲ್ಲಿ 8 ಜನ ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಕಾರ್ಮಿಕರದ್ದು ಒಂದೊಂದು ಕಣ್ಣೀರಿನ ಕಥೆ ಇದ್ದು, ಮನಕಲಕುವಂತಿದೆ.

ಮೂರು ದಿನ ಕಳೆದಿದ್ದರೆ ಪತ್ನಿಗೆ ಹೆರಿಗೆ ಆಗಿ, ಮಗುವನ್ನು ಆ ಯುವಕ ಎತ್ತಿಕೊಂಡು ಮುದ್ದಾಡಬೇಕಿತ್ತು. ಆದರೆ, ವಿಧಿ ಆತನ ಬಾಳಿಗೆ ಬೆಂಕಿ ಇಟ್ಟಿದೆ. ಇತ್ತ ಕೆಲಸಕ್ಕೆ ಹೋದ ಮಗ ಮನೆಗೆ ಮರಳಿ ಬರುವುದನ್ನೇ ಕಾಯುತ್ತಾ ಕುಳಿತಿದ್ದ ತಂದೆ - ತಾಯಿಗೆ, ಮಗ ಮನೆಗೆ ಬಾರದೇ ಮಸಣಕ್ಕೆ ಹೋಗಿದ್ದು ಬರಸಿಡಿಲು ಬಡಿದಂತಾಗಿದೆ.

ಮೃತ ಕಾರ್ಮಿಕರ ಕುಟುಂಬಸ್ಥರು (ETV Bharat)

ದಡ ಸೇರುವ ಮುನ್ನವೇ ಬಾರದ ಲೋಕಕ್ಕೆ ಪಯಣ: ಒಂದೆಡೆ ಬದುಕಿನಲ್ಲಿ ಹಲವು ಆಸೆ, ಕನಸು, ಗುರಿ ಇಟ್ಟುಕೊಂಡು ಕೆಲಸಕ್ಕೆ ಸೇರಿದ್ದ ಆ ಯುವಕರು ತಮ್ಮ ದಡ ಸೇರುವ ಮುನ್ನವೇ ಬೆಂಕಿಯ ಕೆನ್ನಾಲಿಗೆಯಲ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮಗನನ್ನು ನೆನೆದು ತಲೆ ತಲೆ ಚಚ್ಚಿಕೊಂಡು ಅಳುತ್ತಿರುವ ತಂದೆ. ಇದೇ ವೇಳೆ ಅಳಿಯನ ಸಾವಿನ ಸುದ್ದಿ ತಿಳಿದು ರಸ್ತೆ ಮೇಲೆ ಹೊರಳಾಡಿ ಕಣ್ಣೀರು ಹಾಕುತ್ತಿರುವ ಮಾವ. ಈ ಎಲ್ಲಾ ಮನಕಲಕುವ ದೃಶ್ಯ ಕಂಡು ಬಂದಿದ್ದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯ ಶವಾಗಾರದ ಮುಂದೆ.

ತುತ್ತಿನ ಚೀಲ ತುಂಬಿಸಿಕೊಳ್ಳಲು ಸಕ್ಕರೆ ಕಾರ್ಖಾನೆಯಲ್ಲಿ ಅವರೆಲ್ಲಾ ಕೆಲಸಕ್ಕೆ ಸೇರಿಕೊಂಡಿದ್ದರು. ಮನೆಗೆ ಆಧಾರಸ್ತಂಭವೇ ಆಗಿದ್ದರು. ಆದರೆ, ವಿಧಿ ಅವರ ಬಾಳನ್ನೇ ಮುಳುಗಿಸಿದೆ. ಇದು ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿ ಇರುವ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ‌ ಸಂಭವಿಸಿದ ದುರಂತದ ಕಣ್ಣೀರಿನ ಕಥೆ ಇದು.

ಇನಾಮದಾರ್ ಸಕ್ಕರೆ ಕಾರ್ಖಾನೆ ವಾಲ್​ನಲ್ಲಿ ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಕುದಿಯುತ್ತಿರುವ ದ್ರವ ಪದಾರ್ಥ ಸಿಡಿದು ಎಂಟು ಜನ ಕಾರ್ಮಿಕರ ಇಡೀ ದೇಹವೇ ಸುಟ್ಟು ಕರಕಲಾಗಿತ್ತು. ಗಾಯಗೊಂಡವರು ಚಿಕಿತ್ಸೆ ಫಲಕಾರಿ ಆಗದೇ ಉಸಿರು ಚೆಲ್ಲಿದ್ದಾರೆ. ಇವರಲ್ಲಿ ಬಹುತೇಕರು ಬಡವರೇ ಆಗಿದ್ದು, ಕುಟುಂಬಕ್ಕೆ ಆಧಾರವಾಗಿದ್ದರು. ಇದರಿಂದ ಕುಟುಂಬಸ್ಥರಿಗೆ ದಿಕ್ಕೆ ತೋಚದಂತಾಗಿದೆ.

Inamdar Sugar Factory Explosion; This is a story of tragic tears
ಮೃತ ವ್ಯಕ್ತಿಯ ತಂದೆಯ ಅಳಲು (ETV Bharat)

ತುಂಬು ಗರ್ಭಿಣಿ ಬಿಟ್ಟು ಹೋದ ಪತಿ: ಅಥಣಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಮಂಜುನಾಥ ಗೋಪಾಲ ತೇರದಾಳ(31) ಕಾರ್ಖಾನೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಎರಡು ವರ್ಷಗಳ ಹಿಂದಷ್ಟೇ ವಿವಾಹ ಆಗಿದ್ದು, ಪತ್ನಿ ತುಂಬು ಗರ್ಭಿಣಿ. ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ಹೆರಿಗೆ ಕೂಡ ಆಗಲಿದೆ. ಮಗು ಕಣ್ಣು ಬಿಡುವ ಮುನ್ನವೇ ಮಂಜುನಾಥ ದುರಂತ ಸಾವು ಕಂಡಿದ್ದು, ಪತ್ನಿ ಮತ್ತು ತಂದೆ - ತಾಯಿಗೆ ದೊಡ್ಡ ಆಘಾತ ತಂದಿದೆ. ತಂದೆ - ತಾಯಿಗೆ ಒಬ್ಬನೇ ಮಗನಾಗಿದ್ದು, ಪ್ರತಿಭಾನ್ವಿತನಾಗಿದ್ದ. ಕಾರ್ಖಾನೆಯಲ್ಲಿ ಉತ್ತಮ ವೇತನ, ಹುದ್ದೆ ಇದ್ದಿದ್ದರಿಂದ ಒಳ್ಳೆಯ ಬದುಕು ಕಟ್ಟಿಕೊಂಡಿದ್ದರು. ಆದರೆ, ಇದನ್ನು ನೋಡಲು ಆಗದೇ ದೇವರು ಅನ್ಯಾಯ ಮಾಡಿದ ಅಂತಾ ಸಂಬಂಧಿಕರು ಕಣ್ಣೀರಾಗಿದ್ದಾರೆ.

ಮೃತ ಕಾರ್ಮಿಕ ಮಂಜುನಾಥ ತೇರದಾಳ ಸಹೋದರ ವಿಶ್ವನಾಥ ತೇರದಾಳ ಈಟಿವಿ ಭಾರತ ಜೊತೆಗೆ ಮಾತನಾಡಿ, ನಮ್ಮ ಅಣ್ಣನ ಪತ್ನಿ ತುಂಬು ಗರ್ಭಿಣಿ ಇದ್ದಾರೆ. ಇನ್ನೇನು ಮೂರು ದಿನಗಳಲ್ಲಿ ಹೆರಿಗೆ ಆಗುವುದಿದೆ. ಘಟನೆ ಬಗ್ಗೆ ಅವರಿಗೆ ಗೊತ್ತಾಗಿ ಆಘಾತಕ್ಕೆ ಒಳಗಾಗಿದ್ದಾರೆ. ಆದರೆ, ಸಾವಿನ ಬಗ್ಗೆ ಅವರಿಗೆ ನಾವು ಇನ್ನು ತಿಳಿಸಿಲ್ಲ. ಇನ್ನೂ 30 ವರ್ಷ ನಮ್ಮ ಅಣ್ಣಾ ದುಡಿಯುತ್ತಿದ್ದರು. ಈಗ ಅವರಿಗೆ 65 ಸಾವಿರ ರೂ. ಸಂಬಳ ಇತ್ತು. ನಿವೃತ್ತಿ ಆಗೋವರೆಗೆ ಏನಿಲ್ಲ ಅಂದರೂ 3 ಕೋಟಿ ರೂ. ದುಡಿಯುತ್ತಿದ್ದರು. ಹುಟ್ಟುವ ಮಗು, ಪತ್ನಿ ಮತ್ತು ಅವರ ತಂದೆ - ತಾಯಿ ಜೀವನಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಕಾರ್ಖಾನೆಯವರು ದೊಡ್ಡ ಮೊತ್ತದ ಪರಿಹಾರ ಘೋಷಿಸಬೇಕು. ಅಲ್ಲಿಯವರೆಗೂ ನಾವು ಶವ ಮುಟ್ಟಲ್ಲ ಎಂದು ಎಚ್ಚರಿಸಿದ್ದಾರೆ.

Bgm_Suger_Factory_story
ಇನಾಮದಾರ ಕಾರ್ಖಾನೆ ದುರಂತ (ETV Bharat)

ತಲೆ ಚಚ್ಚಿಕೊಂಡ ಅತ್ತ ಅಪ್ಪ: ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಮಂಜುನಾಥ ಮಡಿವಾಳಪ್ಪ ಕಾಜಗಾರ್​ಗೆ ಕೇವಲ 28 ವರ್ಷ. ಐಟಿಐ‌ ಮುಗಿಸಿದ್ದ ಅವರು ಕಾರ್ಖಾನೆಯಲ್ಲಿ ಹೆಲ್ಪರ್ ಆಗಿದ್ದರು. ಮನೆ ಕಟ್ಟಿ ಮದುವೆ ಆಗಿ, ತಂದೆ - ತಾಯಿಯನ್ನು ಚನ್ನಾಗಿ ನೋಡಿಕೊಳ್ಳುವ ಉಮೇದಿಯಲ್ಲಿದ್ದರು. ಆದರೆ, ಅದು ಈಡೇರುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಮಗನ ಸಾವಿನ ಸುದ್ದಿ ತಿಳಿದು ಅವರ ತಂದೆ ಮಡಿವಾಳಪ್ಪ ಮತ್ತು ಮಾವನ ಕಣ್ಣೀರಿನ ಕಟ್ಟೆ ಒಡೆದಿತ್ತು.‌ ಶವಾಗಾರದ ಮುಂದೆ ತಲೆ ಚಚ್ಚಿಕೊಂಡು ಗೋಳಾಡಿದರು. ಈ ದೃಶ್ಯ ನೋಡಿ ಎಂಥವರ ಕರುಳು ಕೂಡ ಚುರುಕ್ ಎನ್ನುವಂತಿತ್ತು.

ಮನಿ ಕಟ್ಟಿಸಿ ಮದುವಿ ಆಕ್ಕೇನಿ ಮಾವಾ ಅಂದಿದ್ದ: ನಮ್ಮ ಅಳಿಯ ಮಂಜುನಾಥ ಕಷ್ಟಪಟ್ಟು ದುಡಿದು, ಅವರ ತಂದೆ - ತಾಯಿಯನ್ನು ಸಂತೋಷದಿಂದ ನೋಡಿಕೊಳ್ಳುತ್ತಿದ್ದ. ಮನೆ ಕಟ್ಟಿಸಿ, ಮದುವಿ ಆಕ್ಕೇನಿ ಮಾವಾ ಅಂತಿದ್ದ. ಆದರೆ, ಅವನ ಬದುಕನ್ನು ಆ ದೇವರು ಕಸಿದುಕೊಂಡು ಬಿಟ್ಟ. ಈಗ ಅವರ ಅಪ್ಪ-ಅವ್ವ ಅನಾಥ ಆಗಿದ್ದಾರೆ. ಅವರಿಗೆ ಆಸರೆ ಆಗುವ ನಿಟ್ಟಿನಲ್ಲಿ ಕಾರ್ಖಾನೆಯವರು ಸೂಕ್ತ ಪರಿಹಾರ ಕೊಡುವಂತೆ ಮಂಜುನಾಥ ಮಾವ ಮಲ್ಲಿಕಾರ್ಜುನ ಒತ್ತಾಯಿಸಿದರು.

ಮಗಗ ಹೆಣ್ಣು ನೋಡುತ್ತಿದ್ದರು; ಮೃತ ಭರತ್ ಸಾರವಾಡಿ ತಂದೆ ಬಸಪ್ಪ‌ ಮಾತನಾಡಿ, ನನ್ನ ಇಬ್ಬರು ಗಂಡು ಮಕ್ಕಳು ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದರು. ಒಬ್ಬ ಹುದಲಿ ಫ್ಯಾಕ್ಟರಿ, ಇನ್ನೊಬ್ಬ ಮರಕುಂಬಿ ಫ್ಯಾಕ್ಟರಿಗೆ ಹೋಗ್ತಿದ್ದ. ಇಬ್ಬರಿಗೂ ಮದುವಿ ಮಾಡಬೇಕು ಅಂತ ಹೆಣ್ಣ ಹುಡುಕಾಡುತ್ತಿದ್ದೆವು ಈಗ ಮಗನ ಕಳೆದುಕೊಂಡಿದ್ದೇವೆ ಎಂದು ಕಣ್ಣೀರು ಹಾಕಿದರು.

ಇನ್ಮುಂದೆ ಆದರೂ ಕಾರ್ಖಾನೆಗಳಲ್ಲಿ ಸುರಕ್ಷತೆ ವಹಿಸಿ: ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದೇ ನನ್ನ ತಮ್ಮನ ಸಾವಿಗೆ ಕಾರಣ. ಇದೊಂದೇ ಅಲ್ಲಾ ಎಲ್ಲಾ ಫ್ಯಾಕ್ಟರಿಗಳಲ್ಲಿ ಕಾರ್ಮಿಕರಿಗೆ ಸುರಕ್ಷತೆ ಇಲ್ಲ. ಎರಡು ವರ್ಷದ ಹಿಂದೆ ನಿರಾಣಿ ಫ್ಯಾಕ್ಟರಿಯಲ್ಲಿ ಸ್ಫೋಟವಾಗಿ ಅಲ್ಲೂ ಕಾರ್ಮಿಕರು ಸತ್ತರು. ಹಾಗಾಗಿ, ಇನ್ಮುಂದೆ ಆದರೂ ಎಲ್ಲಾ ಕಾರ್ಖಾನೆಗಳಲ್ಲಿ ಸುರಕ್ಷತೆ ಕಲ್ಪಿಸಿ, ಕಾರ್ಮಿಕರ ಜೀವ ಹಾನಿ ಆಗದಂತೆ ಕ್ರಮ ವಹಿಸಿ. ಈಗ ನನ್ನ ತಮ್ಮನ ಸಾವಿಗೆ ಅವರ ಪತ್ನಿಗೆ ಕಾರ್ಖಾನೆಯವರು ಸೂಕ್ತ ಪರಿಹಾರ ನೀಡಬೇಕು ಎಂದು ಮೃತ ಕಾರ್ಮಿಕ ಗುರುನಾಥ ತಮ್ಮಣ್ಣವರ ಸಹೋದರ ಮಂಜುನಾಥ ಆಗ್ರಹಿಸಿದರು.

ಹೀಗೆ ಮೃತ ಕಾರ್ಮಿಕರದ್ದು ಒಬ್ಬೊಬ್ಬರದ್ದು ಒಂದೊಂದೆ ಕಥೆ. ಅವರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಕಾರ್ಖಾನೆ ಮಾಲೀಕರು ಸೌಜನ್ಯಕ್ಕೂ ಭೇಟಿಯಾಗಿ ಸಾಂತ್ವನ ಹೇಳದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಾರೆ ಕಾರ್ಖಾನೆಗಳಲ್ಲಿ ಕಟ್ಟು ನಿಟ್ಟಾಗಿ ಸುರಕ್ಷಿತ ಕ್ರಮ ಕೈಗೊಂಡಿದ್ದರೆ ಈ ಅಮಾಯಕ ಜೀವಗಳ ಬಲಿ ತಪ್ಪಿಸಬಹುದಿತ್ತು. ಕಾರ್ಖಾನೆ ಮಾಲೀಕರಿಗೆ ನೂರಾರು ಕಾರ್ಮಿಕರು. ಆದರೆ, ಕಾರ್ಮಿಕರ ಕುಟುಂಬಕ್ಕೆ ಇವರೊಬ್ಬರೇ ಆಸರೆ ಅಲ್ಲವೇ..? ಮೃತ ಕಾರ್ಮಿಕರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಆದರೂ ಕೊಡಲಿ ಅಂತಾ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಇನಾಮದಾರ ಸಕ್ಕರೆ ಕಾರ್ಖಾನೆ ದುರಂತದಲ್ಲಿ ಮತ್ತೆ ನಾಲ್ವರು ಸಾವು: ಓರ್ವ ಕಾರ್ಮಿಕನ ಪತ್ನಿ ತುಂಬು ಗರ್ಭಿಣಿ

Last Updated : January 8, 2026 at 10:14 PM IST