ETV Bharat / state

ಮರ್ಯಾದಾ ಹತ್ಯೆ ನಡೆದ ಇನಾಂ ವೀರಾಪುರ ಸಹಜ ಸ್ಥಿತಿಗೆ: ಸಿಸಿಟಿವಿ ಕಣ್ಗಾವಲಿನಲ್ಲಿ ಗ್ರಾಮ

ಮರ್ಯಾದಾ ಹತ್ಯೆ ಘಟನೆ ನಡೆದ ಇನಾಂ ವೀರಾಪುರ ಗ್ರಾಮದಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

INAM VEERAPURA CCTV SURVEILLANCE
ಮರ್ಯಾದಾ ಹತ್ಯೆ ನಡೆದ ಇನಾಂ ವೀರಾಪುರ ಗ್ರಾಮದಲ್ಲಿ ಸಿಸಿಟಿವಿ ಕಣ್ಗಾವಲು (ETV Bharat)
author img

By ETV Bharat Karnataka Team

Published : January 5, 2026 at 7:29 PM IST

3 Min Read
Choose ETV Bharat

ಹುಬ್ಬಳ್ಳಿ: ಅನ್ಯ ಜಾತಿಯ ಯುವಕ‌ನನ್ನು ಮದುವೆಯಾದಳು ಎಂಬ ಕಾರಣಕ್ಕೆ ತಂದೆಯೇ ತನ್ನ ಏಳು ತಿಂಗಳ ಗರ್ಭಿಣಿ ಮಗಳನ್ನು ಕೊಚ್ಚಿ ಕೊಲೆ ಮಾಡಿದ್ದ ಘಟನೆಯಿಂದ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಡಿ.21ರಂದು ಘಟನೆ ನಡೆದಾಗ ಪುಟ್ಟ ಗ್ರಾಮದ ಜನರು ಭಯದಿಂದ ‌ಮನೆ ಬಿಟ್ಟು ಹೊರ ಬಂದಿರಲಿಲ್ಲ. ಈಗ ಗ್ರಾಮದಲ್ಲಿ ಭಯದ ವಾತಾವರಣ ದೂರವಾಗಿದೆ‌.

ಗ್ರಾಮದ ಜನರು ನಿತ್ಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಚಟುವಟಿಕೆ, ಅಂಗಡಿ ಮುಂಗಟ್ಟು ತೆರೆದಿದ್ದು, ಗ್ರಾಮದಲ್ಲಿ ಈಗಲೂ ಪೊಲೀಸರು ಮೊಕ್ಕಾಂ ಹೂಡಿದ್ದು, ಗ್ರಾಮದ ಜನರು ಈ ವಿಷಯದ ಬಗ್ಗೆ ಮಾತನಾಡಲು ಹಿಂಜರಿಕೆ ಹಾಗೂ ಭಯ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ಆಗಬಾರದಿತ್ತು. ಏನು ಮಾಡಲಿಕ್ಕೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ‌.

ಇನಾಂ ವೀರಾಪುರ ಗ್ರಾಮದಲ್ಲಿ ಸಿಸಿಟಿವಿ ಕಣ್ಗಾವಲು (ETV Bharat)

ಪ್ರತಿ ಗಲ್ಲಿಗೂ ಸಿಸಿಟಿವಿ ಕಣ್ಗಾವಲು: ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನಾಂ ವೀರಾಪುರ ಗ್ರಾಮದಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಗಲ್ಲಿ ಗಲ್ಲಿಯಲ್ಲಿ ಸಿಸಿಟಿವಿಗಳನ್ನು ಅಳವಡಿಕೆ ಮಾಡುವ ಮೂಲಕ ಕಟ್ಟೆಚ್ಚರ ವಹಿಸಿದೆ. ಎಂಟು ಸಿಸಿಟಿವಿಗಳನ್ನು ಪೊಲೀಸ್ ಇಲಾಖೆ ಅಳವಡಿಸಿದ್ದು, ಗ್ರಾಮದಲ್ಲಿನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ. ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಠಾಣೆಯಲ್ಲಿ ಕುಳಿತುಕೊಂಡು ಗ್ರಾಮದಲ್ಲಿನ ಆಗುಹೋಗುಗಳನ್ನು ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಈ ಕುರಿತು ಗ್ರಾಮಸ್ಥರಾದ ಪ್ರಕಾಶ ಹರಿಜನ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಘಟನೆ ನಡೆದಾಗ ಆತಂಕ‌, ಭಯ ಇದ್ದದ್ದು ನಿಜ. ಆದರೆ ನಮ್ಮ ಗ್ರಾಮದಲ್ಲಿ ಎಲ್ಲ ಜಾತಿ‌, ಜನಾಂಗದವರು ಅಣ್ಣ ತಮ್ಮಂದಿರಂತೆ ಇದ್ದೇವೆ. ಇದೊಂದು ಘಟನೆ ಆಗಬಾರದಿತ್ತು, ಆಗಿದೆ. ಅದು ಅವರ ವೈಯಕ್ತಿಕ ಕಾರಣಕ್ಕೆ ಆಗಿದೆ. ಗ್ರಾಮದಲ್ಲಿ ಸದ್ಯ ಯಾವುದೇ ಭಯದ ವಾತಾವರಣವಿಲ್ಲ. ಕರ್ನಾಟಕ ಸರ್ಕಾರ ಕಾನೂನು ಪ್ರಕಾರ ಕ್ರಮ ತಗೆದುಕೊಳ್ಳಲಿದೆ. ಎಲ್ಲಾ ಸಮಾಜದ 150 ಮನೆಗಳಿದ್ದು, 600 ಜನಸಂಖ್ಯೆ ಗ್ರಾಮದಲ್ಲಿ ಇದೆ ಎಂದರು.

ಹನುಮಂತಪ್ಪ ವಾಲಿಕಾರ ಪ್ರತಿಕ್ರಿಯಿಸಿ, ಗ್ರಾಮದಲ್ಲಿ ಎಲ್ಲಾ ಸಮಾಜದವರು ಸಾಮರಸ್ಯದಿಂದ ಇದ್ದೇವೆ. ಮೊದಲಿನಿಂತೆ ಈಗಲೂ ಇದ್ದೇವೆ. ಗಣೇಶ ಹಬ್ಬ ಸೇರಿದಂತೆ ಎಲ್ಲಾ ಹಬ್ಬ ಹರಿದಿನಗಳಲ್ಲಿ ಒಗ್ಗಟ್ಟಿನಿಂದ‌ ಕೂಡಿಕೊಂಡು ಆಚರಿಸುತ್ತಾ ಎಲ್ಲಾ ಒಂದಾಗಿ ಇದ್ದೆವು. ಜಾತಿ ಭೇದ ಭಾವ ಇಲ್ಲ. ಗ್ರಾಮದಲ್ಲಿ ‌ಇದೀಗ ಸಿಸಿಟಿವಿ ಹಾಕಿದ್ದಾರೆ.‌ ಇದರಿಂದ ಭಯದ ವಾತಾವರಣ ದೂರಾಗಿದೆ ಎಂದು ಹೇಳಿದರು.

ಸ್ಥಳೀಯ ನಿವಾಸಿ‌ ಖಾಸಿಂಸಾಬ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಗ್ರಾಮದಲ್ಲಿ ಘಟನೆ ನಡೆದ ಮೇಲೆ ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಂಟು ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಗ್ರಾಮ ಪ್ರವೇಶಿಸುವ ಮುಖ್ಯರಸ್ತೆ, ಘಟನೆ ‌ನಡೆದ ಸ್ಥಳವಾದ ವಿವೇಕಾನಂದ ದೊಡ್ಡಮನಿ ಅವರ ಮನೆ ಸುತ್ತ ಎರಡು, ಗ್ರಾಮದ ಮಧ್ಯಭಾಗ, ಶಾಲೆ ಸೇರಿದಂತೆ ಜನನಿಬಿಡ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಅಳವಡಿಕೆ ಮಾಡಿದ್ದು, ಸರಿಯಾಗಿದೆ ಎಂದರು.

ಈ ಬಗ್ಗೆ ಎಸ್​ಪಿ ಹೇಳಿದ್ದಿಷ್ಟು: ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಘಟನೆ ನಂತರ ಗ್ರಾಮದಲ್ಲಿ 8 ಸಿಸಿಟಿವಿ ಕ್ಯಾಮರಾಗಳನ್ನು ಗ್ರಾಮ ಪಂಚಾಯಿತಿ ಸಹಯೋಗದಿಂದ ಅಳವಡಿಸಲಾಗಿದೆ. ಗ್ರಾಮದಲ್ಲಿ ‌ನಡೆಯುವ ಪ್ರತಿ ಕ್ಷಣದ ದೃಶ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿರುವ ಕಂಟ್ರೋಲ್ ರೂಂಗೆ ರವಾನೆ ಮಾಡಲಾಗುತ್ತದೆ. 24/7 ಸಮಯ ಪೊಲೀಸ್ ಸಿಬ್ಬಂದಿ ಮಾನಿಟರಿಂಗ್ ಮಾಡುತ್ತಿದೆ. ಗ್ರಾಮದಲ್ಲಿ ಘಟನೆ ‌ನಡೆದ ಮೇಲೆ ಸಹಜ ಸ್ಥಿತಿಗೆ ‌ಬರಲು ಕೆಲ ಸಮಯ ಬೇಕಾಗುತ್ತದೆ. ಹೀಗಾಗಿ ಸಾರ್ವಜನಿಕರಲ್ಲಿ ಭಯ ದೂರ ಮಾಡುವ ದೃಷ್ಟಿಯಿಂದ ‌ಹಾಗೂ ಸಂತ್ರಸ್ಥ ಕುಟುಂಬಕ್ಕೂ ಧೈರ್ಯ ತುಂಬಲು ಜನಜೀವನ ಸಹಜ ಸ್ಥಿತಿಗೆ ಬರಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಘಟನೆ ಹಿನ್ನೆಲೆ: ಕಳೆದ ಡಿ. 21 ರಂದು ಮರ್ಯಾದಾ ಹತ್ಯೆ ನಡೆದಿತ್ತು. ಅನ್ಯಜಾತಿಯ ಯುವಕನನ್ನ ಮದುವೆಯಾಗಿದ್ದಕ್ಕೆ ತಂದೆ ತನ್ನ ಮಗಳನ್ನೇ ಕೊಚ್ಚಿ ಕೊಲೆ ಮಾಡಿ ಐವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಆರೋಪಿ ತಂದೆ ಪ್ರಕಾಶಗೌಡ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ.

ಇವುಗಳನ್ನೂ ಓದಿ: