ETV Bharat / state

ದಾವಣಗೆರೆಯಲ್ಲಿ ಐಎಂಡಿಯಿಂದ ಹವಾಮಾನ ಕೇಂದ್ರ ಕಾರ್ಯಾರಂಭ; ರೈತರಿಗೆ ಸಿಗಲಿದೆ ಕ್ಷಣ ಕ್ಷಣದ ಉಪಯುಕ್ತ ಮಾಹಿತಿ

ದಾವಣಗೆರೆ ಜಿಲ್ಲೆಯಲ್ಲಿ ಭಾರತ ಹವಾಮಾನ ಇಲಾಖೆಯಿಂದ ಅತ್ಯುನ್ನತ ತಂತ್ರಜ್ಞಾನ ಆಧಾರಿತ ಕೇಂದ್ರ ಕಾರ್ಯಾರಂಭ ಮಾಡಿದೆ. ಇದು 15 ನಿಮಿಷಕ್ಕೊಮ್ಮೆ ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲಿದೆ. ವಿಶೇಷ ವರದಿ: ನೂರುಲ್ಲಾ ಡಿ.

INDIA METEOROLOGICAL DEPARTMENT
ದಾವಣಗೆರೆಯಲ್ಲಿ ಅತ್ಯುನ್ನತ ತಂತ್ರಜ್ಞಾನದ ಕೃಷಿ ಸ್ವಯಂಚಾಲಿತ ಹವಾಮಾನ ಕೇಂದ್ರ (ETV Bharat)
author img

By ETV Bharat Karnataka Team

Published : June 3, 2026 at 8:40 PM IST

4 Min Read
Choose ETV Bharat

ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಅತ್ಯುನ್ನತ ತಂತ್ರಜ್ಞಾನದ ಕೃಷಿ ಸ್ವಯಂಚಾಲಿತ ಹವಾಮಾನ ಕೇಂದ್ರ ತಲೆ ಎತ್ತಿದೆ. ಇದು ರೈತರಿಗೆ ಅವಶ್ಯಕವಾದ ಮಾಹಿತಿಯನ್ನು ಪ್ರತಿ 15 ನಿಮಿಷಕ್ಕೊಮ್ಮೆ ನೀಡಲಿದ್ದು, ಸಾಕಷ್ಟು ಉಪಯೋಗವಾಗಲಿದೆ.

ಹೌದು, ಭಾರತ ಹವಾಮಾನ ಇಲಾಖೆ (IMD) ಸ್ಥಾಪಿಸಿರುವ ಈ ಕೇಂದ್ರ ಶುಭಾರಂಭ ಮಾಡಿದೆ. ನಗರದ ಆಂಜನೇಯ ಬಡಾವಣೆಯಲ್ಲಿರುವ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಭಾರತ ಹವಾಮಾನ ಇಲಾಖೆ (India Meteorological Department) ಸ್ಥಾಪಿಸಿದ 'ಕೃಷಿ ಸ್ವಯಂಚಾಲಿತ ಹವಾಮಾನ ಕೇಂದ್ರ ತನ್ನ ಕಾರ್ಯ ಆರಂಭಿಸಿದೆ. ಇದು ವಿಶೇಷವಾಗಿ ಮಳೆ, ಗಾಳಿ, ತೇವಾಂಶ ಹಾಗೂ ತಾಪಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ಒದಗಿಸಲಿದೆ. ಈ ಹವಾಮಾನ ಕೇಂದ್ರ ದಾವಣಗೆರೆಗೆ ಅತ್ಯವಶ್ಯಕವಾಗಿತ್ತು. ಇದೀಗ ರೈತರ ಕನಸು ನನಸಾಗಿದೆ.

ಈ ಹವಾಮಾನ ಕೇಂದ್ರದ ಉಪಯೋಗಗಳ ಕುರಿತು ವಿಜ್ಞಾನಿಗಳು ಮಾಹಿತಿ ನೀಡಿದರು (ETV Bharat)

ಐಎಂಡಿಯಿಂದ ಜಿಲ್ಲೆಯಲ್ಲಿ ಮೊದಲ ಹವಾಮಾನ ಕೇಂದ್ರ: ಐಎಂಡಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕೃಷಿ ಕೇಂದ್ರಿತವಾದ ಹವಾಮಾನ ಕೇಂದ್ರವನ್ನು ಸ್ಥಾಪಿಸಿದೆ. ಇದರಿಂದ ರೈತರಿಗೆ ಹವಾಮಾನದ ಬಗ್ಗೆ, ಬೆಳೆ, ಕೀಟಬಾಧೆ, ಮಳೆ, ಉಷ್ಣಾಂಶದ ಬಗ್ಗೆ ಮಾಹಿತಿ ಕಲೆಹಾಕಲು ಸುಲಭವಾಗಲಿದೆ. ಇಷ್ಟು ದಿನಗಳ ಕಾಲ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಹಾಗೂ ಹಿರಿಯೂರಿನ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರವು ದಾವಣಗೆರೆ ಜಿಲ್ಲೆಯ ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿ ಬಗ್ಗೆ ಮುನ್ಸೂಚನೆಯನ್ನು ನೀಡುತ್ತಿತ್ತು. ಇದೀಗ 'ಎಡಬ್ಲ್ಯೂಎಸ್'ಗೆ ಸ್ಥಾಪಿಸಲು ಅಗತ್ಯ ಸ್ಥಳಾವಕಾಶವನ್ನು ನೀಡಿದ್ದು, ಸೆನ್ಸಾರ್ ಆಧಾರಿತ ಉಪಕರಣ ಇದಾಗಿದೆ. ಉಪಕರಣಗಳು ಮಾಹಿತಿ ಒದಗಿಸುವ ಸ್ವಯಂಚಾಲಿತವಾಗಿ ಹವಾಮಾನ ಇಲಾಖೆಯ ಜಾಲತಾಣಕ್ಕೆ ರವಾನೆಯಾಗಲಿದೆ. ಇನ್ನು, ಮಳೆ ಗಾಳಿಯ ಮಾಪನ, ವೇಗ, ತೇವಾಂಶದ ಪ್ರಮಾಣ, ತಾಪಮಾನ ಅಳೆಯುವ ಸ್ವಯಂಚಾಲಿತ ಉಪಕರಣಗಳು ಈ ಕೇಂದ್ರದಲ್ಲಿವೆ.

India Meteorological Department
ದಾವಣಗೆರೆಯ ಐಎಂಡಿ ಕೇಂದ್ರದ ಅಧಿಕಾರಿಗಳು (ETV Bharat)

ಪ್ರತಿ 15 ನಿಮಿಷಕ್ಕೊಮ್ಮೆ ಮಾಹಿತಿ ರವಾನೆ: ಈ ಹವಾಮಾನ ಘಟಕದ ಸುತ್ತಮುತ್ತಲಿನ ಪ್ರದೇಶದ ವಾತಾವರಣದ ಮಾಹಿತಿಯನ್ನು ಉಪಕರಣಗಳು ಪ್ರತಿ 15 ನಿಮಿಷಕ್ಕೊಮ್ಮೆ ರವಾನಿಸಲಿದೆ. ಇದರ ಆಧಾರದ ಮೇರೆಗೆ ದತ್ತಾಂಶ ವಿಶ್ಲೇಷಣೆ ಮಾಡಲಾಗುತ್ತದೆ. ಕೃಷಿ ಚುಟುವಟಿಕೆಗಳಿಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಇದರಿಂದ ಅನುಕೂಲವಾಗಲಿದೆ. ರಸ ಹೀರುವ ಕೀಟಗಳ ಬಾಧೆ ಬಗ್ಗೆ, ಕೀಟ, ರೋಗಗಳ ಹಾವಳಿಯ ಸಾಧ್ಯತೆ ಬಗ್ಗೆ ರೈತರಿಗೆ ಸಲಹೆ ನೀಡಲು ನಿಖರ ಮಾಹಿತಿ ಕಲ್ಪಿಸಲಿದೆ. ವರ್ಷವಿಡೀ ಸುರಿದ ಮಳೆಯ ದತ್ತಾಂಶ ಗಮನಿಸಿ ಅಂತರ್ಜಲ ಮಟ್ಟ ನಿರ್ಧರಿಸಲು ಸಾಧ್ಯವಾಗಲಿದೆ. ಆವಿಯಾದ ನೀರಿನಲ್ಲಿ ಎಷ್ಟು ಪ್ರಮಾಣ ಮಳೆಯ ರೂಪದಲ್ಲಿ ಭೂಮಿಗೆ ಮರಳಿತು ಎಂಬ ಜಲಚಕ್ರದ ವಿಶ್ಲೇಷಣೆ, ಕೃಷಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು ಈ ಕೇಂದ್ರ ಸಹಕಾರಿ ಆಗಲಿದೆ.

IMD Center
ನಿಖರ ಮಾಹಿತಿ ನೀಡಲಿದೆ ಹವಾಮಾನ ಕೇಂದ್ರ (ETV Bharat)
ಜಿಲ್ಲೆಯಲ್ಲಿವೆ 206 ಮಳೆ ಮಾಪನ, 30 ಹವಾಮಾನ ಮಾಪನ ಕೇಂದ್ರಗಳು: ದಾವಣಗೆರೆ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರಕ್ಕೆ ಸಂಬಂಧಿಸಿದ 206 ಮಳೆ ಮಾಪನ ಹಾಗೂ 30 ಹವಾಮಾನ ಮಾಪನ ಕೇಂದ್ರಗಳಿವೆ. ಪ್ರತಿ ಗ್ರಾಮ ಪಂಚಾಯತ್​ಗೆ ಒಂದು ಮಳೆ ಮಾಪನ ಕೇಂದ್ರವನ್ನು ರಾಜ್ಯ ಸರ್ಕಾರ ಅಳವಡಿಸಿದೆ. ಇಷ್ಟು ದಿನಗಳ ಕಾಲ ಇವು ಹವಾಮಾನದ ಬಗ್ಗೆ ಮಾಹಿತಿ ನೀಡುತ್ತಿದ್ದವು. ನಗರ ಪ್ರದೇಶದ ಹಲವೆಡೆ ಕೂಡ ಇಂತಹ ಕೇಂದ್ರಗಳಿವೆ. ತಾಪಮಾನ ಹಾಗೂ ಗಾಳಿಯ ವೇಗದ ಮಾಹಿತಿಯನ್ನು ಹವಾಮಾನ ಮಾಪನ ಕೇಂದ್ರಗಳು ಒದಗಿಸುತ್ತಿವೆ. ಈ ಮಾಹಿತಿಯನ್ನು ಅಧರಿಸಿ ಕೃಷಿ ಇಲಾಖೆ ರೈತರಿಗೆ ಮಾಹಿತಿ ಹಾಗೂ ಮುನ್ಸೂಚನೆ ನೀಡುತ್ತಿತ್ತು.
India Meteorological Department
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ (ETV Bharat)

ಇದು ಯಾವ ರೀತಿ ಕೆಲಸ ಮಾಡಲಿದೆ: ತರಳಬಾಳು ವಿಜ್ಞಾನ ಕೇಂದ್ರದ ಮುಖ್ಯ ವಿಜ್ಞಾನಿ ಡಾ. ದೇವರಾಜ್ ಅವರು ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ್ದು, "ಇದು ಕೃಷಿ ಸ್ವಯಂ ಚಾಲಿತ ಹವಾಮಾನ ಘಟಕ. ಇದರಲ್ಲಿ ಹವಾಮಾನಕ್ಕೆ ಸಂಬಂಧಿಸಿದಂತೆ ಹತ್ತಾರು ಗುಣಗಳನ್ನು ನೋಡಬಹುದು. ಮಳೆ ಎಷ್ಟು ಬಿದ್ದಿದೆ, ಉಷ್ಣತೆ, ಗಾಳಿಯ ವೇಗ, ತೇವಾಂಶದ ಬಗ್ಗೆ ಸ್ಯಾಟಲೈಟ್ ಮೂಲಕ ಅಳೆಯಲು ಸಾಧ್ಯವಾಗುತ್ತದೆ. ಪ್ರತಿ ನಿಮಿಷಕ್ಕೂ ದತ್ತಾಂಶ ಸಂಗ್ರಹ ಆಗುತ್ತದೆ. ಭಾರತ ಹವಾಮಾನ ಇಲಾಖೆ (IMD) ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಸಂಯಕ್ತ ಆಶ್ರಯದಲ್ಲಿ ಈ ಘಟಕವನ್ನು ಆರಂಭಿಸಲಾಗಿದೆ. ಈ ಘಟಕದಿಂದ ರೈತರಿಗೆ ಮುನ್ನೆಚ್ಚರಿಕೆ ವಿಚಾರಗಳನ್ನು ತಿಳಿಸಬಹುದಾಗಿದೆ.‌ ಅದರಲ್ಲೂ ಮಳೆ ಬಗ್ಗೆ, ಕೀಟ ರೋಗಬಾಧೆ ಬಗ್ಗೆ ರೈತರಿಗೆ ಮುನ್ನೆಚ್ಚರಿಕೆ ನೀಡಬಹುದು. ರಾಜ್ಯಾದ್ಯಂತ ಈ ಘಟಕಗಳನ್ನು ಅಳವಡಿಸಲಾಗಿದ್ದು, ಈ ವರ್ಷ ದಾವಣಗೆರೆಯಲ್ಲಿ ಕಾರ್ಯರಂಭ ಮಾಡಲಾಗಿದೆ. ನಮ್ಮ ಕೃಷಿ ವಿಜ್ಞಾನ ಕೇಂದ್ರಕ್ಕೆ ರೈತರು ಭೇಟಿ ನೀಡುತ್ತಾರೆ. ಮಳೆ ಬರುತ್ತೋ, ಇಲ್ವೋ ಎಂದು ಈ ಘಟಕದಿಂದ ತಿಳಿಯಬಹುದು. ಉಷ್ಣಾಂಶ ಎಷ್ಟಿದೆ, ಉಷ್ಣತೆ ಕಡಿಮೆಯಾದ್ರೇ ಯಾವ ರೀತಿ ಬೆಳೆಗಳಿಗೆ ಕೀಟಬಾಧೆ ಬರಲಿದೆ. ಉಷ್ಣಾಂಶ ಹೆಚ್ಚಾದ್ರೇ ಏನ್ ಆಗಲಿದೆ ಎಂಬುದನ್ನು ಮುಂಚೆಯೇ ತಿಳಿಸಲು ಈ ಘಟಕ ಸಹಕಾರಿಯಾಗಲಿದೆ. ದಾವಣಗೆರೆಯಲ್ಲಿ ರಾಜ್ಯ ಸರ್ಕಾರದ ಹವಾಮಾನ ಮಾಪನ ಕೇಂದ್ರಗಳಿದ್ದವು, ಇದು ಕೇಂದ್ರ ಸರ್ಕಾರದ ಹವಾಮಾನ ಇಲಾಖೆಯ ಮೊದಲ ( IMD) ಕೇಂದ್ರವಾಗಿದೆ'' ಎಂದು ತಿಳಿಸಿದರು.

India Meteorological Department
ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಕಚೇರಿ (ETV Bharat)
ನಿಮಿಷ ನಿಮಿಷಕ್ಕೂ ಮಾಹಿತಿ ನೀಡುವ ಘಟಕ! ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞರಾದ ಮಲ್ಲಿಕಾರ್ಜುನ ಅವರು ಮಾತನಾಡಿ "ಈ ಘಟಕದಿಂದ ಆಗುವ ಮಾಪಕಗಳ ಮಾಹಿತಿ ಆನ್‌ಲೈನ್​ನಲ್ಲೇ ಲಭ್ಯವಾಗಲಿದೆ. ಇದರಿಂದ ರೈತರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಒದಾಗಿಸಬಹುದು. ಇನ್ನು ನಗರ ನಾಲಿಕೆ ನೀರು ಬಿಡಬೇಕಾ, ಬೇಡ್ವಾ, ಮಳೆ ಬರುವ ಮುನ್ಸೂಚನೆ ಇದ್ರೆ ಈ ಘಟಕ ತಿಳಿಸಲಿದೆ. ಕೀಟ, ರೋಗದ ಬಗ್ಗೆ ಮಾಹಿತಿಯನ್ನು ರೈತರಿಗೆ ಕೊಡಬಹುದು. ಭತ್ತ ಮೆಕ್ಕೆಜೋಳ ಪ್ರಮುಖ ಬೆಳೆಗಳಾಗಿದ್ದು, ಮೆಕ್ಕೆಜೋಳಕ್ಕೆ ಸೈನಿಕ ಹುಳು ಕಾಟ ಕಾಡುತ್ತದೆ. ಇದರ ಬಗ್ಗೆಯೂ ಮಾಹಿತಿ ಕೊಡಬಹುದು. ಇನ್ನು ಬೆಳೆಗೆ ಗೊಬ್ಬರ ಕೊಡುವ ಬಗ್ಗೆ ಮಾಹಿತಿ ನೀಡಬಹುದು. ಮುನ್ನೆಚ್ಚರಿಕೆ ಕ್ರಮಗಳನ್ನು ಕೊಡುವುದರಿಂದ ಬೆಳೆ ನಷ್ಟ ತಪ್ಪಿಸಬಹುದು. ಬೆಳೆಗಳ ತಳಿಗಳನ್ನು ಬೆಳೆಯುವ ಅವಧಿ ಬಗ್ಗೆ ಮಾಹಿತಿ ರೈತರಿಗೆ ನೀಡಬಹುದು. ನಮಗೆ ಈ ಘಟಕದಿಂದ ಒಂದು ಸೆಕೆಂಡ್​ಗೂ ಮಾಹಿತಿ ಸಿಗುತ್ತಿರುತ್ತದೆ" ಎಂದು ತಿಳಿಸಿದರು.

ಇದನ್ನೂ ಓದಿ: ದಾವಣಗೆರೆಯಲ್ಲಿರುವ ಮಕ್ಕಳ ಪಾರ್ಕ್​ಗಳು ಮಕ್ಕಳಿಗೆ ಎಷ್ಟು ಸುರಕ್ಷಿತ? ಪುಟಾಣಿಗಳ ಉದ್ಯಾನವನದಲ್ಲಿ ವ್ಯವಸ್ಥೆ ಹೇಗಿದೆ?