ಹಣೆಯಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ: ಮಾಜಿ ಸಂಸದ ಡಿ.ಕೆ. ಸುರೇಶ್
ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ವಿಚಾರ ತೀವ್ರ ಚರ್ಚೆಯಾಗ್ತಿದೆ. ಈ ಮಧ್ಯೆ ಉಪಮುಖ್ಯಮಂತ್ರಿ ಡಿಕೆಶಿ ಸಹೋದರ, ಮಾಜಿ ಸಂಸದ ಡಿ ಕೆ ಸುರೇಶ್, ಹಣೆಯಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ ಎಂದಿದ್ದಾರೆ.

Published : February 28, 2026 at 3:46 PM IST
ಬೆಂಗಳೂರು: "ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ. ಹಣೆಬರಹ ಇಲ್ಲ ಎಂದರೆ ಯಾರೂ ಏನೂ ಮಾಡಲು ಆಗುವುದಿಲ್ಲ" ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಇಂದು ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು. ನೀವು ಶಸ್ತ್ರತ್ಯಾಗ ಮಾಡಿದ್ದೀರಾ ಎಂದು ಕೇಳಿದಾಗ, "ತ್ಯಾಗ ಮಾಡಲು ಶಸ್ತ್ರ ಇರಬೇಕಲ್ಲವೇ? ಶಸ್ತ್ರವೇ ಇಲ್ಲವಲ್ಲ. ಶಸ್ತ್ರ ಇದೆ ಎಂದು ನಾನು ಯಾವಾಗ ಹೇಳಿದ್ದೆ. ಶಸ್ತ್ರವೇ ಇಲ್ಲದಿದ್ದಾಗ ಶಸ್ತ್ರತ್ಯಾಗದ ಪ್ರಶ್ನೆಯೇ ಬಾರದು" ಎಂದರು. ಶಸ್ತ್ರ, ತಂತ್ರ, ಯುದ್ಧ ಇಲ್ಲದೇ ಬಗೆಹರಿಯುವುದೇ ಎಂದಾಗ, "ಇದು ರಾಜಕಾರಣ. ಇಲ್ಲಿ ಶಸ್ತ್ರ ಹಾಗೂ ಅಸ್ತ್ರ ಬೇಕಾಗಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.
ಇನ್ನು, ಶಾಸಕರ ದೆಹಲಿ ಯಾತ್ರೆ ವಿಚಾರ ನನಗೆ ಗೊತ್ತಿಲ್ಲ ಎಂದರು. ಈ ವೇಳೆ ಪಕ್ಷದ ವರಿಷ್ಠರನ್ನು ಕೇಳುವ ಬಗ್ಗೆ ಪ್ರಶ್ನಿಸಿದಾಗ, "ಶಾಸಕರು ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಶಾಸಕರನ್ನೇ ಕೇಳಿ" ಎಂದು ಹೇಳಿದರು.
ಭೋಜನಕೂಟ ಸೇರಿದ ಶಾಸಕರು ನಾಯಕತ್ವದ ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎಂದಾಗ, "ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಅದನ್ನು ಗಮನಿಸಲಿದೆ" ಎಂದು ತಿಳಿಸಿದರು.
ಹೀಗೆ ಆದರೆ 2028ರ ಚುನಾವಣೆ ಪಕ್ಷಕ್ಕೆ ಕಷ್ಟವಾಗಲಿದೆ ಎಂದಾಗ, "ಚುನಾವಣೆಗೆ ಸ್ಪರ್ಧಿಸುವವರಿಗೆ ಕಷ್ಟವಾಗಬಹುದು. ನನಗೆ ಕಷ್ಟ ಆಗುವುದಿಲ್ಲ. ಈ ಬಗ್ಗೆ ನಾನು ಹೇಗೆ ಹೇಳಲಿ" ಎಂದರು.
ಶಾಸಕರ ಆಗ್ರಹದಲ್ಲಿ ನ್ಯಾಯ ಇದೆ ಅಲ್ಲವೇ ಎಂದು ಕೇಳಿದಾಗ, "ಶಾಸಕರ ವಿಚಾರಧಾರೆ ಅವರಿಗೆ ಸಂಬಂಧಿಸಿದ್ದೇ ಹೊರತು, ನನಗಲ್ಲ. ಪಕ್ಷ ಅವರ ವಿಚಾರಗಳನ್ನು ಗಮನಿಸಲಿದೆ. ನಾವು ಆ ವಿಚಾರದಲ್ಲಿ ಹೇಳಲು ಬರುವುದಿಲ್ಲ" ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ ದಲಿತ ಸಿಎಂ ಮಾಡಬೇಕು ಎಂಬ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಎಲ್ಲರಿಗೂ ಆಸೆ ಇದೆ. ಇದರಲ್ಲಿ ತಪ್ಪೇನಿಲ್ಲ" ಎಂದರು.
ನಿಮ್ಮ ಸಹೋದರರನ್ನು ಸಿಎಂ ಹುದ್ದೆಯಲ್ಲಿ ಕೂರಿಸಲು ನಿಮ್ಮ ಪ್ರಯತ್ನ ಹೇಗಿದೆ, ನಿಮ್ಮ ಬಳಿ ಶಾಸಕರ ಸಂಖ್ಯೆ ಹೆಚ್ಚಾಗಿದೆಯೇ ಎಂದು ಕೇಳಿದಾಗ, "ನನಗೆ ಆ ಬಗ್ಗೆ ಗೊತ್ತಿಲ್ಲ. ಶಾಸಕರ ವಿಚಾರ ಬಿಟ್ಟು ಬಮೂಲ್ ವಿಚಾರ ಏನಾದರೂ ಇದ್ದರೆ ಕೇಳಿ, ಪ್ರತಿಕ್ರಿಯೆ ನೀಡುವೆ' ಎಂದು ಹೇಳಿದರು.
ಪಕ್ಷದಿಂದ ಕೆಎಂಎಫ್ಗೆ ಅಭ್ಯರ್ಥಿ ಆಯ್ಕೆಗೆ ಮಾರ್ಚ್ 6 ರಂದು ಚುನಾವಣೆ ನಡೆಯಲಿದೆಯೇ ಎಂದು ಕೇಳಿದಾಗ, "ಚುನಾವಣೆ ಯಾವಾಗ ಮಾಡಬೇಕು ಎಂದು ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಆಗ ಪಕ್ಷ ತೀರ್ಮಾನ ಮಾಡುವ ವ್ಯಕ್ತಿಯೇ ಸ್ಪರ್ಧೆ ಮಾಡಲಿದ್ದಾರೆ." ನೀವು ಕೆಎಂಎಫ್ ಚುನಾವಣೆ ಆಕಾಂಕ್ಷಿಯಾ ಎಂದಾಗ, "ನಾನು ಯಾವುದಕ್ಕೂ ಆಕಾಂಕ್ಷಿ ಅಲ್ಲ" ಎಂದು ಸ್ಪಷ್ಟನೆ ನೀಡಿದರು.
ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ ಎಂದು ಡಿಸಿಎಂ ಅವರು ಹೇಳಿರುವ ಬಗ್ಗೆ ಪ್ರಶ್ನಿಸಿದಾಗ, "ನಾನು ಶಿವಕುಮಾರ್ ಅವರನ್ನು ಭೇಟಿ ಮಾಡಿಲ್ಲ. ಹೀಗಾಗಿ ಈ ವಿಚಾರ ನನಗೆ ಗೊತ್ತಿಲ್ಲ" ಎಂದು ತಿಳಿಸಿದರು.
ಕೊಟ್ಟ ಗ್ಯಾರಂಟಿ ವಾಗ್ದಾನ ಉಳಿಸಿಕೊಳ್ಳಬೇಕು, ಗ್ಯಾರಂಟಿ ಯೋಜನೆಗಳಿಗೆ ₹1.20 ಲಕ್ಷ ಕೋಟಿ ಖರ್ಚಾಗಿದೆ ಎಂದು ಕೇಳಿದಾಗ, "ಗ್ಯಾರಂಟಿಯು ರಾಜ್ಯದ ಜನತೆಗೆ ಕೊಟ್ಟ ನಮ್ಮ ವಾಗ್ದಾನ. ನಾವು ಅದರಂತೆ ನಡೆಯಬೇಕು. ಪಕ್ಷದ ಅಧ್ಯಕ್ಷರು, ಸಿಎಂ ಸೇರಿದಂತೆ ಚುನಾವಣೆ ಎದುರಿಸಿದ ಎಲ್ಲರೂ ಗ್ಯಾರಂಟಿ ನೀಡುವುದಾಗಿ ಹೇಳಿದ್ದಾರೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು" ಎಂದರು.
ಗ್ಯಾರಂಟಿಗಳು ಹೊರೆ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಹೊರೆಯಾದರೂ ಆಗಲಿ, ಬೇರೆಯಾದರೂ ಆಗಲಿ. ಮಾತು ಕೊಡುವ ಮುನ್ನ ಚಿಂತನೆ ಮಾಡಬೇಕಿತ್ತು. ಮಾತು ಕೊಟ್ಟಾಗಿದೆ. ಅದರಂತೆ ನಡೆಯಬೇಕು. ಐದು ವರ್ಷಗಳ ಕಾಲ ಎಷ್ಟೇ ಕಷ್ಟ ಆದರೂ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಕೊಡಬೇಕು. ಅದು ನಮ್ಮ ನಂಬಿಕೆ" ಎಂದು ತಿಳಿಸಿದರು.
ಸಿರಿವಂತರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳುವುದು ಬೇಡ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, "ಸಿರಿವಂತರು ಇದನ್ನು ಪಡೆಯುತ್ತಿದ್ದರೆ ಅದು ತಪ್ಪು. ಬಡವರಿಗಾಗಿ ಗ್ಯಾರಂಟಿ ಯೋಜನೆ ತರಲಾಗಿದೆ. ಈ ಯೋಜನೆ ಎಲ್ಲರೂ ಬಳಸುತ್ತಿರುವ ಬಗ್ಗೆ ಕೆಲವರು ಮಾತನಾಡಿರಬಹುದು. ನಾವು ಕೊಟ್ಟಿರುವ ವಾಗ್ದಾನವನ್ನು ಅನುಷ್ಠಾನ ಮಾಡಲಾಗಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಹಿಂದೆ ಸರಿದರೆ ಮಾತಿಗೆ ತಪ್ಪಿದಂತೆ ಆಗುತ್ತದೆ" ಎಂದು ಡಿ ಕೆ ಸುರೇಶ್ ಹೇಳಿದರು.
ಇವುಗಳನ್ನೂ ಓದಿ:
ಹೈಕಮಾಂಡ್ಗೆ ಕಾಂಗ್ರೆಸ್ ನೂತನ ಶಾಸಕರ ಪತ್ರ: ರಾಣೆಬೆನ್ನೂರು ಶಾಸಕ, ಬಳ್ಳಾರಿ ಶಾಸಕರ ಪ್ರತಿಕ್ರಿಯೆ ಹೀಗಿದೆ
ಹೊಸ ಪೀಳಿಗೆ ಬೆಳೆಯಬೇಕಲ್ವಾ?, ಎಷ್ಟು ದಿನ ನಾವೇ ಗೂಟ ಹೊಡೆದು ಕುಳಿತುಕೊಳ್ಳಲು ಆಗುತ್ತದೆ?: ಡಿಕೆಶಿ

