ETV Bharat / state

ನಾನು ಯಾವುದೇ ಪ್ರಯತ್ನ ಮಾಡಬೇಕಿಲ್ಲ, ನನಗೆ ಬರಬೇಕಾದ್ದು ಬರುತ್ತೆ: ಡಿಕೆಶಿ

ಪಕ್ಷಕ್ಕೆ ಹೊಸಬರು ಬರಲಿ. ಹೊಸ ರಕ್ತ ಬರಬೇಕು. ಹೊಸ ಆಲೋಚನೆ ಬರಬೇಕು. ನನಗೆ ಆರು ವರ್ಷ ಸಾಕು. ಮಾರ್ಚ್ 10ರಂದು ಭೋಜನ ಕೂಟ ಇಟ್ಟುಕೊಂಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

DCM DK SHIVAKUMAR
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)
author img

By ETV Bharat Karnataka Team

Published : March 4, 2026 at 7:21 AM IST

3 Min Read
Choose ETV Bharat

ಬೆಂಗಳೂರು: ''ನಾನು ಸ್ಟ್ರೀಟ್ ಫೈಟರ್. ಹೇಗೆ ಹೋರಾಟ ಮಾಡಬೇಕೆಂದು ಗೊತ್ತಿದೆ. ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಪಕ್ಷದ ಒಳಗಲ್ಲ. ನನ್ನ ಹೋರಾಟ ಪಕ್ಷದ ಹೊರಗೆ. ನಾನು ಸುಮ್ಮನಾಗಿದ್ದೇನೆಂದು ಭಾವಿಸಿದರೆ ಅದು ಅವರಿಗೆ ಬಿಟ್ಟ ವಿಚಾರ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದ ತಮ್ಮ ಸರ್ಕಾರಿ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

''ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕಾರ್ಮಿಕರಿಂದ ಮೂರು ಪಟ್ಟು ಟಿಕೆಟ್ ಹಣ ಸುಲಿಗೆ ಮಾಡುತ್ತಿದೆ ಎಂದು ಗೊತ್ತಾದ ತಕ್ಷಣ ಪಕ್ಷದ ವತಿಯಿಂದ 1 ಕೋಟಿ ರೂ ಚೆಕ್ ವಿತರಣೆ ನೀಡಲು ಮುಂದಾದವ. ನಾನೇ ಖುದ್ದಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೂತು ಸಂಜೆ ವೇಳೆಗೆ ಇಡೀ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದೆ. ಉಚಿತ ಬಸ್ ವ್ಯವಸ್ಥೆ ಜತೆಗೆ ರೈಲ್ವೆ ದರ ಕಡಿಮೆ ಮಾಡಿಸಿದವ ನಾನು. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಜಿಲ್ಲಾ ಸಚಿವರು ಹೆದರಿ ಬಂದು ಕೇವಲ ಇಬ್ಬರು ಮಾತ್ರ ಸತ್ತಿದ್ದಾರೆ ಎಂದಾಗ, ನಾನು ಆ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದೆ. ಅವರಿಗೆಲ್ಲಾ ಈಗ ಕೆಲಸವನ್ನು ಕೊಡಿಸುತ್ತಿದ್ದೇನೆ. ಈ ವಿಚಾರವಾಗಿ ವಿಧಾನಸಭೆಯಲ್ಲಿ ಏನು ಮಾತನಾಡಿದ್ದೇನೆಂದು ಎಲ್ಲರಿಗೂ ಗೊತ್ತಿದೆ. ನಾನು ಹೀಗೆ ಹೋರಾಟ ಮಾಡಿಕೊಂಡು ಬಂದವ'' ಎಂದರು.

ಬಜೆಟ್ ನಂತರ ಕ್ರಾಂತಿ ಮಾಡುತ್ತೀರಾ?: ''ನಾನು ಯಾಕೆ ಕ್ರಾಂತಿ ಮಾಡಲಿ?. ನನಗೆ ನನ್ನ ಮೇಲೆ ನಂಬಿಕೆ ಇದೆ. ನಾನು ಭರವಸೆ ಮೇಲೆ ಬದುಕುತ್ತೇನೆ. ನಾನು ಪ್ರಯತ್ನ ಮಾಡುವ ಅಗತ್ಯವಿಲ್ಲ. ನನಗೆ ಯಾವಾಗ ಯಾವುದು ಬರಬೇಕೋ ಅದು ಬರುತ್ತದೆ. ಆ ಆತ್ಮವಿಶ್ವಾಸ ನನಗಿದೆ. ಸದ್ಯದಲ್ಲೇ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ" ಎಂದು ತಿಳಿಸಿದರು.

''ನಾನು ಇದುವರೆಗೂ ಸಿಎಂ ವಿಚಾರವಾಗಿ ಮಾತನಾಡಿಲ್ಲ. ನನ್ನ ವಿಚಾರದಲ್ಲಿ ನಾನುಂಟು, ಸಿಎಂ ಉಂಟು, ಪಕ್ಷದ ಹೈಕಮಾಂಡ್ ಉಂಟು. ಕೆಲವು ನಿರ್ಧಾರ ಕೈಗೊಂಡಾಗ ನಾನು ಭಾಗಿಯಾಗಿದ್ದೆ ಎಂದು ಹೇಳಿರುವುದನ್ನು ಬಿಟ್ಟು ಉಳಿದಂತೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಸಿಎಂ ಹುದ್ದೆ ಖಾಲಿಯಾಗುತ್ತದೆ. ಸಿಎಂ ಹುದ್ದೆಯಿಂದ ಇಳಿಯುತ್ತಾರೆ. ದಲಿತರಿಗೆ ಸಿಎಂ ಹುದ್ದೆ ಸಿಗಬೇಕು, ಬೇರೆಯವರಿಗೆ ಸಿಗಬೇಕು ಎಂದು ಎಲ್ಲಿಯೂ ಹೇಳಿಲ್ಲ'' ಎಂದು ಸ್ಪಷ್ಟಪಡಿಸಿದರು.

ನಮ್ಮಿಬ್ಬರ ಮಧ್ಯೆ ಹಾಲು-ಜೇನಿನಂಥ ಸಂಬಂಧವಿದೆ ಎಂದು ಸಿಎಂ ಹೇಳಿದ್ದಾರಲ್ಲಾ?: ಖಂಡಿತಾ. 2023ರ ಚುನಾವಣೆ ಮಾತ್ರವಲ್ಲ, 2028ರ ಚುನಾವಣೆಯಲ್ಲೂ ಇದು ಹಾಗೇ ಇರುತ್ತದೆ" ಎಂದರು.

"ಸಿಎಂ ಹುದ್ದೆ ಖಾಲಿ ಮಾಡಿಸಲು ಹೊರಟಿರುವವರು ಬೇರೆಯವರು. ಅವರು ಮಾತಾಡಿದ್ದಾರೆ. ಸಿಎಂ ಸ್ಥಾನ ಖಾಲಿ ಆದರೆ ಅಲ್ಲವೇ ಬೇರೆಯವರಿಗೆ ನೀಡುವುದು?. ನಾನು ಪಕ್ಷದ ಅಧ್ಯಕ್ಷನಾಗಿ ನನಗೆ ನನ್ನ ಜವಾಬ್ದಾರಿಗಳು ತಿಳಿದಿದೆ. ಈ ಪಕ್ಷಕ್ಕೆ ನನ್ನಿಂದ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು. ನನ್ನಿಂದ ಶಿಸ್ತು ಉಲ್ಲಂಘನೆ ಆಗಬಾರದು. ಅಧ್ಯಕ್ಷ ಸ್ಥಾನದಲ್ಲಿ ಕೂತು, ಆ ಸ್ಥಾನಕ್ಕೆ ಅನ್ಯಾಯ ಮಾಡಬಾರದು. ನನ್ನಿಂದ ತಪ್ಪಾಗಿದೆ ಎಂದು ಬೇರೆಯವರು ನನ್ನ ಕಡೆ ಬೆರಳು ತೋರಬಾರದು. ನಾನು ಬಹಳ ತಾಳ್ಮೆಯಿಂದ ಇದ್ದೇನೆ. ಏನೆಲ್ಲಾ ಆಗುತ್ತಿದೆ ಎಂದು ನನಗೆ ಅರಿವಿದೆ. ನಾವು ಕಟ್ಟಿ ಬೆಳೆಸಿರುವ ಪಕ್ಷ ಇದು. ನನ್ನಂತೆ ಸುಮಾರು ಲಕ್ಷಾಂತರ ಜನ ಕಾರ್ಯಕರ್ತರಿಗೆ ತೊಂದರೆಯಾಗಬಾರದು. ಅವರೆಲ್ಲಾ ಸೇರಿ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ. ಸ್ವಾರ್ಥಕ್ಕಾಗಿ ನಾನು ಬ್ಲಾಕ್ ಮೇಲೆ ಮಾಡುವುದಿಲ್ಲ. ಪಕ್ಷಕ್ಕೆ ತೊಂದರೆ ಮಾಡುವುದಿಲ್ಲ'' ಎಂದು ತಿಳಿಸಿದರು.

ಬೇರೆಯವರಿಗೆ ಏನಾದ್ರೂ ನಮ್ಮ ಮಧ್ಯೆ ಹುಳಿ ಹಿಂಡಿ ಡಿ.ಕೆ.ಶಿವಕುಮಾರ್ ಅವರನ್ನು ಒಲಿಸಿಕೊಳ್ಳುವ ದುರಾಲೋಚನೆ ಇದ್ದರೆ, ಅದು ಹಗಲುಗನಸೆಂಬ ಸಿಎಂ ಹೇಳಿಕೆಗೆ, ''ಅದು ಅವರ ಅನುಭವದ ಮಾತು. ಅವರು ನನ್ನನ್ನು ನೋಡಿದ್ದಾರೆ. ಅವರು ಬೇರೆ ಪಕ್ಷದಲ್ಲಿದ್ದಾಗಲೂ ನನ್ನನ್ನು ನೋಡಿದ್ದಾರೆ. ನಮ್ಮ ಪಕ್ಷಕ್ಕೆ ಬಂದ ನಂತರವೂ ನನ್ನನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ನಾನು ಏನು ಎಂಬುದು ಅವರಿಗೆ ಗೊತ್ತಿದೆ'' ಎಂದರು.

ದೆಹಲಿಗೆ ಹೋಗಿ ಬಂದ ನಂತರ ನೀವು ಸಿಎಂ ಕುರ್ಚಿ ಬಗ್ಗೆ ಮಾತು ಆಡುತ್ತಿಲ್ಲವಲ್ಲ?: ''ಇದಕ್ಕೆ ಸಮಯವೇ ಉತ್ತರ ನೀಡಲಿದೆ. ಕಾಲ ನಿರ್ಣಯ ಮಾಡುತ್ತದೆ'' ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಪರಮೇಶ್ವರ್ ಅವರ ದಾಖಲೆ ಮುರಿಯುತ್ತೀರಾ?: ''ಹೊಸ ರಕ್ತ ಬರಬೇಕು. ಹೊಸ ಆಲೋಚನೆ ಬರಬೇಕು. ನಾವೆಲ್ಲಾ ಮೊದಲ ಬಾರಿ ಶಾಸಕರಾದಾಗಲೇ ಮಂತ್ರಿಯಾದವರು. ನಾನು ಪರಮೇಶ್ವರ್ ಅವರು, ಹೆಚ್.ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ, ಎಲ್ಲರೂ ಮಂತ್ರಿಯಾದವರೇ. ನಾವಿಗ ಹಿರಿಯ ನಾಗರಿಕರಾಗಿದ್ದೇವೆ. ಹೊಸಬರು ಬರಲಿ. ನನಗೆ ಆರು ವರ್ಷ ಸಾಕು. ಮಾ. 10ರಂದು ಭೋಜನ ಕೂಟ ಇಟ್ಟುಕೊಂಡಿದ್ದೇನೆ'' ಎಂದು ತಿಳಿಸಿದರು.

ಫೋನ್ ಕದ್ದಾಲಿಕೆ ವಿಚಾರವನ್ನು ಎತ್ತಿರುವ ಹಿಂದಿನ ಉದ್ದೇಶವೇನು?: ''ನನಗೆ ಯಾವುದೇ ಮಾಹಿತಿ ಇಲ್ಲ. ಸಿಎಂ ಈ ವಿಚಾರವಾಗಿ ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. ಜತೆಗೆ ಗೃಹ ಸಚಿವರು ಇದ್ದಾರೆ. ನನ್ನ ಜತೆ ಇರುವ ಪೊಲೀಸ್ ಸಿಬ್ಬಂದಿ ಹೊರತಾಗಿ ನಾನು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಲು ಹೋಗುವುದಿಲ್ಲ. ನಾನು ಜೈಲಲ್ಲಿ ಇದ್ದಾಗ, ಸ್ವಾಮೀಜಿಗಳ ದೂರವಾಣಿ ಕದ್ದಾಲಿಕೆ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ'' ಎಂದರು.

ಇದನ್ನೂ ಓದಿ: ಡಿಕೆಶಿ ಫೋನ್ ಕದ್ದಾಲಿಕೆ ಆರೋಪ; ತಾ ಕಳ್ಳ ಇತರರ ನಂಬ ಎಂಬಂತೆ ಅತೃಪ್ತ ಆತ್ಮಗಳ ಹತಾಶೆಯ ಹೇಳಿಕೆ: ಸಿಎಂ ಸಿದ್ದರಾಮಯ್ಯ