ನಾನು ಹೆಚ್ಚೆಂದರೆ ಒಂದು ಬಾರಿ ಶಾಸಕ ಆಗಬೇಕೆಂದುಕೊಂಡಿದ್ದೆ: ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುವ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Published : January 6, 2026 at 1:31 PM IST
ಮೈಸೂರು: ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯ. ದೇವರಾಜ ಅರಸು ಅವರು ಎಷ್ಟು ವರ್ಷ ಆಡಳಿತ ಮಾಡಿದ್ದಾರೆಂದು ತಿಳಿದಿರಲಿಲ್ಲ. ಜನರ ಆಶೀರ್ವಾದದಿಂದ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, ದೇವರಾಜ ಅರಸು ಹಾಗೂ ನಾನು ಮೈಸೂರಿನವರೇ. ಇಬ್ಬರೂ ದೀರ್ಘಾವಧಿ ಮುಖ್ಯಮಂತ್ರಿಗಳಾಗಿದ್ದು, ಕಾಲಘಟ್ಟ ಬೇರೆ ಬೇರೆ. ದೇವರಾಜ ಅರಸು ಅವರು 1972 ರಿಂದ 80ವರೆಗೆ ಮುಖ್ಯಮಂತ್ರಿಯಾಗಿದ್ದರು. ನಾನು ಎರಡನೇ ಅವಧಿಗೆ ಸಿಎಂ ಆಗಿದ್ದೇನೆ ಎಂದರು.
ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸಬೇಕಿದೆ. ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುವ ವಿಶ್ವಾಸವಿದೆ ಎಂದರು. ಇದೇ ವೇಳೆ ಸಂಪುಟ ಪುನಾರಚನೆ ಬಗ್ಗೆ ದೆಹಲಿಯಿಂದ ಕರೆ ಬಂದಾಗ ಮಾತನಾಡುವುದಾಗಿ ಸಿಎಂ ತಿಳಿಸಿದರು.
ರಾಜಕಾರಣ ತೃಪ್ತಿ ತಂದಿದೆ: ಇಷ್ಟು ವರ್ಷಗಳ ರಾಜಕಾರಣ ತೃಪ್ತಿ ತಂದಿದೆ. ಜನರ ಕೆಲಸ ಮಾಡುವುದು ಖುಷಿಯ ಸಂಗತಿ. ರಾಜಕಾರಣ ಎಂದರೆ ಬಡವರು, ದಲಿತರು, ಹಿಂದುಳಿದವರ ಕೆಲಸ ಮಾಡಿಕೊಡುವುದು. ಹೆಚ್ಚೆಂದರೆ ಶಾಸಕನಾಗಬೇಕೆಂದು ಅಂದುಕೊಂಡಿದ್ದೆ. ಶಾಸಕನಾದೆ, ಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿಯೂ ಆದೆ. ಅವಕಾಶಗಳು ಸಿಕ್ಕಿದ್ದರಿಂದ ಇವೆಲ್ಲ ಆಗಲು ಸಾಧ್ಯವಾಯಿತು ಎಂದು ಹೇಳಿದರು.
ಸೋಮವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ನಡೆದ ಮಾತುಕತೆ ಕುರಿತ ಮಾಧ್ಯಮಗಳ ಪ್ರಶ್ನೆಗೆ, ವಯನಾಡ್ನಿಂದ ಬೆಂಗಳೂರು ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದ ಕೆ.ಸಿ.ವೇಣುಗೋಪಾಲ್ ಅವರನ್ನು ಮೈಸೂರಿನಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಲಾಯಿತು ಎಂದರು.
ಈ ಬಾರಿಯ ಬಜೆಟ್ನಲ್ಲಿ ವಿಶೇಷ ಕಾರ್ಯಕ್ರಮಗಳ ಘೋಷಣೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, ಬಜೆಟ್ ಆಗುವವರೆಗೂ ಕಾದು ನೋಡಿ ಎಂದು ಹೇಳಿದರು.
ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಇತಿಹಾಸವು ಹನ್ನೆರಡನೆಯ ಶತಮಾನದಲ್ಲಿ ಶರಣರಿಂದ ಆರಂಭಗೊಂಡದ್ದು. ಬಳಿಕ ಅನೇಕ ಸಮಾಜ ಸುಧಾರಕರು, ಸೂಫಿ ಸಂತರು, ದಾರ್ಶನಿಕರು, ಅರಸರು ಸಾಮಾಜಿಕ ನ್ಯಾಯದ ಈ ರಥವನ್ನು ಬಹಳಷ್ಟು ಮುಂದಕ್ಕೆ ತರುವ ಪ್ರಯತ್ನವನ್ನು ಮಾಡಿದರೂ ಅದಕ್ಕೆ ಒಂದು ಸಾಂವಿಧಾನಿಕ ಮಾನ್ಯತೆ ಇರಲಿಲ್ಲ. ಇದರಿಂದಾಗಿ ಸಮಸಮಾಜದ ಕನಸು ಕನಸಾಗಿಯೇ… pic.twitter.com/PJMTARqwDz
— CM of Karnataka (@CMofKarnataka) January 6, 2026
ಬಳ್ಳಾರಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಗೃಹ ಸಚಿವರೊಂದಿಗೆ ಮಾತನಾಡುತ್ತೇನೆ. ತನಿಖೆ ನಡೆಯುತ್ತಿದ್ದು, ಕೆಲವರನ್ನು ಬಂಧಿಸಲಾಗಿದೆ ಎಂದರು.
ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಘಟನೆಯ ಬಗ್ಗೆ ಮಾಡಿರುವ ಆರೋಪಗಳ ಪ್ರತಿಕ್ರಿಯಿಸಿ, ಜೆಡಿಎಸ್ ಹಾಗೂ ಬಿಜೆಪಿಯವರು ಕಾನೂನಿನ ಪ್ರಕಾರ ಮಾತನಾಡದೇ ರಾಜಕೀಯವಾಗಿ ಮಾತನಾಡುತ್ತಾರೆ ಎಂದು ಕಿಡಿಕಾಡಿದರು.
ತಮ್ಮ ಅಭಿಮಾನಿಗಳು ನಾಟಿ ಕೋಳಿ ಪಲಾವ್ ಹಂಚಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, ನನಗೆ ಈ ಬಗ್ಗೆ ತಿಳಿದಿಲ್ಲ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ನೆಂಟರು ಬಂದಾಗ ಮಾತ್ರ ನಾಟಿ ಕೋಳಿ ಅಡುಗೆ ಮಾಡುತ್ತಾರೆ. ನಾನೂ ಹಳ್ಳಿಯವನಾಗಿರುವುದರಿಂದ ಸಹಜವಾಗಿ ನಾಟಿ ಕೋಳಿ, ರಾಗಿ ಮುದ್ದೆ ತಿನ್ನುತ್ತಿದ್ದೆ. ಹಳ್ಳಿಯವರ ಊಟದ ಕ್ರಮ ಇದಾಗಿದ್ದು, ನಾನು ಮುಖ್ಯಮಂತ್ರಿಯಾಗಿರುವುದರಿಂದ ಸ್ವಲ್ಪ ಪ್ರಚಾರ ಸಿಗುತ್ತಿದೆ ಎಂದರು.

ಸಾಮಾಜಿಕ ನ್ಯಾಯದ ಬಂಡಿಯನ್ನು ಇನ್ನಷ್ಟು ಮುಂದಕ್ಕೆ ಎಳೆದುಕೊಂಡು ಹೋಗುವ ಅವಕಾಶ ನನಗೆ ಸಿಕ್ಕಿದೆ:
ಸುದೀರ್ಘ ಸಿಎಂಗಾದಿ ದಾಖಲೆ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಅವರು ಸಾಮಾಜಿಕ ನ್ಯಾಯದ ಬಂಡಿಯನ್ನು ಇನ್ನಷ್ಟು ಮುಂದಕ್ಕೆ ಎಳೆದುಕೊಂಡು ಹೋಗುವ ಅವಕಾಶ ನನಗೆ ಸಿಕ್ಕಿದೆ. ಈ ಅವಕಾಶವನ್ನು ಬದಲಾಗಿರುವ ಸಾಮಾಜಿಕ ಮತ್ತು ರಾಜಕೀಯದ ಸ್ಥಿತ್ಯಂತರಗಳ ಇತಿ-ಮಿತಿಯಲ್ಲಿ ಜವಾಬ್ದಾರಿಯಾಗಿ ನಾನು ಸ್ವೀಕರಿಸಿ, ಮುನ್ನಡೆಯುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯದ ಬಂಡಿಯ ಪಯಣಕ್ಕೆ ಕರ್ನಾಟಕದಲ್ಲಿ ದೀರ್ಘ ಪರಂಪರೆ ಇದೆ. ಬಸವಣ್ಣನವರಿಂದ ಪ್ರಾರಂಭಗೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಿ.ದೇವರಾಜ ಅರಸುವರೆಗೆ ಹಲವಾರು ಮಹನೀಯರು ಈ ಬಂಡಿಯನ್ನು ಎಳೆದುಕೊಂಡು ಬಂದಿದ್ದಾರೆ. ಇದನ್ನು ಇನ್ನಷ್ಟು ಮುಂದಕ್ಕೆ ಎಳೆದುಕೊಂಡು ಹೋಗುವ ಅವಕಾಶ ನನಗೆ ಸಿಕ್ಕಿದೆ. ಈ ಅವಕಾಶವನ್ನು ಬದಲಾಗಿರುವ ಸಾಮಾಜಿಕ ಮತ್ತು ರಾಜಕೀಯದ ಸ್ಥಿತ್ಯಂತರಗಳ ಇತಿ-ಮಿತಿಯಲ್ಲಿ ಜವಾಬ್ದಾರಿಯಾಗಿ ನಾನು ಸ್ವೀಕರಿಸಿ, ಮುನ್ನಡೆಯುತ್ತಿದ್ದೇನೆ ಎಂದಿದ್ದಾರೆ.
ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿ ಏಳು ವರ್ಷ ಏಳು ತಿಂಗಳು ಇಪ್ಪತ್ತಮೂರು ದಿನಗಳ ಕಾಲ ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ರಾಜ್ಯದ ಜನತೆ ನನಗೆ ನೀಡಿದ್ದಾರೆ. ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ, ಯಾರೂ ನೋಡಬಾರದು ಕೂಡಾ. ಇದು ಜನರ ಸೇವೆಗೆ ಸಿಕ್ಕಿರುವ ಅವಕಾಶದ ಭಾಗ್ಯ ಎಂದು ತಿಳಿದುಕೊಂಡಿದ್ದೇನೆ ಎಂದಿದ್ದಾರೆ.

ನನ್ನ ರಾಜಕೀಯ ಜೀವನಕ್ಕೆ ಹಲವು ಹಿರಿಯರ ಚಿಂತನೆ ಮತ್ತು ಸಾಧನೆಗಳು ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿವೆ. ಆ ಹಿರಿಯರ ಸಾಲಿನಲ್ಲಿ ದೇವರಾಜ ಅರಸು ಪ್ರಮುಖರು. ನಮ್ಮಿಬ್ಬರ ನಡುವಿನ ಸೈದ್ಧಾಂತಿಕ ಸಹಮತ ಮತ್ತು ನಾನು ಕೂಡಾ ಅವರಂತೆ ಮೈಸೂರಿನ ಮಣ್ಣಿನ ಮಗ ಎನ್ನುವ ಕಾರಣಕ್ಕೆ ನನ್ನ ಹೃದಯದಲ್ಲಿ ಅವರಿಗೆ ವಿಶೇಷವಾದ ಸ್ಥಾನ ಇದೆ. ಅಧಿಕಾರ, ಸಂಪತ್ತು ಮತ್ತು ಅವಕಾಶಗಳ ಹೆಬ್ಬಾಗಿಲನ್ನು ಸರ್ವರಿಗೂ ತೆರೆದು ಸಮಾನವಾಗಿ ಹಂಚಿಕೆ ಮಾಡದ ಹೊರತು ಸುಸ್ಥಿರವಾದ ಅಭಿವೃದ್ದಿಯನ್ನು ಕಾಣಲು ಸಾಧ್ಯ ಇಲ್ಲ ಎನ್ನುವುದು ಅರಸರ ಅಚಲ ನಂಬಿಕೆಯಾಗಿತ್ತು. ಇದಕ್ಕಾಗಿಯೇ ಅವಕಾಶ ವಂಚಿತ ಸಮುದಾಯಗಳಿಗೆ ಸೇರಿರುವ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದರು ಎಂದು ವಿವರಿಸಿದ್ದಾರೆ.
ಭೂಸುಧಾರಣೆಯ ಮೂಲಕ ಸಂಪತ್ತಿನ ಸಮಾನ ಹಂಚಿಕೆಯ ಪ್ರಕ್ರಿಯೆ ಪ್ರಾರಂಭಿಸಿದರು. ಮೀಸಲಾತಿಯ ಮೂಲಕ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೂಡಾ ಹೆಚ್ಚಿನ ಪ್ರಾತಿನಿಧ್ಯ ಸಿಗುವಂತೆ ಮಾಡಿದರು. ಜನಪ್ರತಿನಿಧಿಗಳೆಲ್ಲರಿಗೂ ಈ ಸಾಧನೆ ಪ್ರೇರಣೆಯಾಗಬೇಕು. ಇಂದಿನ ದಿನದ ವಿಶೇಷ ಸಂದರ್ಭದಲ್ಲಿ ನಮಗೆಲ್ಲ ಪ್ರೇರಣಾದಾಯಿ ಆಗಿರುವ ಡಿ.ದೇವರಾಜ ಅರಸು ಅವರಿಗೆ ನಾನು ಗೌರವ ನಮನಗಳನ್ನು ಸಲ್ಲಿಸುತ್ತೇನೆ ಎಂದು ಸ್ಮರಿಸಿದ್ದಾರೆ.
ಇವುಗಳನ್ನೂ ಓದಿ:

