ಜೀವನಾಂಶ ಕೇಳಿದ ಪತ್ನಿಯನ್ನು ಸುಪಾರಿ ಕೊಟ್ಟು, ವಾಹನ ಹರಿಸಿ ಕೊಂದ ಪತಿ! ಬಸ್ ಡ್ಯಾಶ್ ಬೋರ್ಡ್ ಕ್ಯಾಮೆರಾದಿಂದ ಸಂಚು ಬಯಲು
ಡಿಕ್ಕಿ ಹೊಡೆದ ವಾಹನದ ಹಿಂದಿದ್ದ ಬಸ್ಸಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಿಂದ ಪತಿ ಸಂಚು ರೂಪಿಸಿ ಪತ್ನಿಯನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

Published : March 3, 2026 at 10:03 AM IST
ಧಾರವಾಡ: ಹೆಂಡತಿಯ ಕೊಲೆಗೆ ಸುಪಾರಿ ನೀಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಹೋದ ಪತಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ತಾಲೂಕಿನ ಸೋಮಾಪೂರ ಗ್ರಾಮದ ಮಹಿಳೆ ಲಲಿತಾ (43) ಎಂಬವರ ಕೊಲೆಗೆ ಅದೇ ತಾಲೂಕಿನ ನರೇಂದ್ರ ಗ್ರಾಮದ ಆಕೆಯ ಪತಿ ಉದಯ ದ್ಯಾಮಪ್ಪ ಹಾತರಗಿ ಸುಪಾರಿ ನೀಡಿದ್ದರು. ಉದಯ ಸುಪಾರಿ ನೀಡಿದ್ದ ಆತನ ಗೆಳೆಯ ನಾಗಪ್ಪ ಪಡೇಕಲ್, ಅಭಿಷೇಕ್ ವರಗಣ್ಣವರ್, ನಾಗರಾಜ ಉಪ್ಪಿನ್ ಮೂವರು ಸೇರಿಕೊಂಡು ಮಹಿಳೆಯ ಮೇಲೆ ಥಾರ್ ಕಾರು ಹಾಯಿಸಿ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬಸ್ ಡ್ಯಾಶ್ ಬೋರ್ಡ್ನಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಬಳಿಕ ತನಿಖೆ ಆರಂಭಿಸಿ ನಾಲ್ವರನ್ನು ಹೆಡೆಮುರಿ ಕಟ್ಟಿದ್ದಾರೆ.
ಫೆ.26ರಂದು ಸವದತ್ತಿ ರಸ್ತೆಯ ದುರ್ಗಾದೇವಿ ದೇವಸ್ಥಾನದ ಬಳಿ ಅಪಘಾತ ನಡೆದಿತ್ತು. ಅದರಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಅಂದು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಳಿಕ ಡಿಕ್ಕಿ ಹೊಡೆದ ವಾಹನದ ಹಿಂದಿದ್ದ ಬಸ್ ಡ್ಯಾಶ್ ಬೋರ್ಡ್‌ನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾ ಪರಿಶೀಲಿಸಿದ್ದಾರೆ. ಆಗ ಪತಿಯೇ ಪತ್ನಿಯ ಹತ್ಯೆಗೆ ಸುಪಾರಿ ನೀಡಿರುವ ಮಾಹಿತಿ ಬಹಿರಂಗಗೊಂಡಿದೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಗುಂಜನ್ ಆರ್ಯ, ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ಮಹಿಳೆ ಲಲಿತಾ ಅವರನ್ನು ನರೇಂದ್ರ ಗ್ರಾಮದ ಉದಯ ಹತ್ತರಗಿ 2000ರಲ್ಲಿ ಮದುವೆಯಾಗಿದ್ದರು. ಹತ್ತು ವರ್ಷಗಳಿಂದ ಪತಿ- ಪತ್ನಿ ಸಂಬಂಧ ಹದಗೆಟ್ಟಿತ್ತು. ಇದರಿಂದ ಜೀವನಾಂಶ ನೀಡಬೇಕು ಎಂದು ಲಲಿತಾ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ನಲ್ಲಿ ವಿಚಾರಣೆ ಸಹ ನಡೆದಿತ್ತು. ಇದೀಗ ವಿಚಾರಣೆ ಕೊನೆಯ ಹಂತಕ್ಕೆ ಬಂದಿದೆ. ಜೀವನಾಂಶಕ್ಕೆ ಲಲಿತಾ ಎರಡು ಎಕರೆ ಜಮೀನು ಕೇಳಿದ್ದರು. ಜಮೀನು ಕೊಡಲು ಉದಯ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪತಿ ಉದಯ ಕೊಲೆಗೆ ಸುಪಾರಿ ನೀಡಿದ್ದಾನೆ ಎಂದು ತಿಳಿಸಿದರು.
ಹೀಗೆ ನಡೆದಿತ್ತು ಮಹಿಳೆಯ ಕೊಲೆ: ಇಬ್ಬರ ಮಧ್ಯೆ ಸಂಬಂಧ ಹಳಸಿತ್ತು. ಉದಯ್ ಫೋನ್ ಕಾಲ್ ಮಾಡುತ್ತಲೇ ಇದ್ದನಂತೆ. ಒಂದು ದಿನ ಕರೆ ಮಾಡಿ ಅಮ್ಮಿನಬಾವಿ ಗ್ರಾಮದ ಬಳಿ ಬಾ ಮಾತನಾಡುವುದಿದೆ ಎಂದು ಹೇಳಿದ್ದಾನೆ. ಪತಿ ಹೇಳಿದ್ದ ಸ್ಥಳಕ್ಕೆ ಆಗಮಿಸಿದ ಲಲಿತಾ ಅವರನ್ನು ಕೊಲೆ ಮಾಡಲು ಸುಪಾರಿ ಪಡೆದುಕೊಂಡಿದ್ದ ಆರೋಪಿಗಳು ಕಾಯುತ್ತಾ ಕುಳಿತಿದ್ದರು. ಪತಿ ಫೋನ್ ಮಾಡಿ ಮುಂದೆ ಬಾ ಮುಂದೆ ಬಾ ಹೇಳಿದಾಗ ಆಕೆ ಬಂದಿದ್ದಾರೆ. ಆಗ ಮಹೇಂದ್ರ ಥಾರ್ ವಾಹನ ಡಿಕ್ಕಿ ಹೊಡೆಸಿ ಲಲಿತಾರನ್ನು ಕೊಲೆ ಮಾಡಿದ್ದರು. ಆಕೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿತ್ತು. ಇದು ಹಿಂದೆ ಬರುತ್ತಿದ್ದ ಬಸ್‌ಗೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿಕ್ಕಿ ನೋಡಿದ್ದ ಬಸ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅನುಮಾನದ ಹಿನ್ನೆಲೆಯಲ್ಲಿ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಇದೀಗ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಕೊಲೆಗೆ ಬಳಸಿದ್ದ ಥಾರ್ ವಾಹನವನ್ನೂ ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗದಗ: ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ ತಂದೆಯನ್ನ ಕೊಂದು ಠಾಣೆಗೆ ಶರಣಾದ ಮಗ

