ETV Bharat / state

ಹರಿಹರ ಬ್ರ್ಯಾಂಡ್ ಇಟ್ಟಿಗೆ ದರ ಕುಸಿದು ಮಾಲೀಕರಿಗೆ ನಷ್ಟ; ಸಾವಿರಾರು ಕಾರ್ಮಿಕರಿಗೆ ಬದುಕು ಕೊಟ್ಟ ಉದ್ಯಮಕ್ಕೆ ಸಂಕಷ್ಟ

ಗುತ್ತೂರು ಗ್ರಾಮ ಇಟ್ಟಿಗೆ ಉದ್ಯಮದ ಹಬ್ ಆಗಿ ಬೆಳೆದಿದೆ. ಇಲ್ಲಿನ ಇಟ್ಟಿಗೆ ತಯಾರಿಕೆಗೆ 50ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಗ್ರಾಮದ ಬಹುಪಾಲು ಜನರಿಗೆ ಇಟ್ಟಿಗೆ ಉದ್ಯಮವೇ ಮುಖ್ಯ ಉದ್ಯೋಗ.

Huge demand for Harihara bricks, which created a brand
ಹರಿಹರದ ಇಟ್ಟಿಗೆ (ETV Bharat)
author img

By ETV Bharat Karnataka Team

Published : March 3, 2026 at 2:12 PM IST

4 Min Read
Choose ETV Bharat

ವಿಶೇಷ ವರದಿ - ನೂರುಲ್ಲಾ ಡಿ

ದಾವಣಗೆರೆ: ಮನೆ ‌ಕಟ್ಟಲು ಹರಿಹರದ ಇಟ್ಟಿಗೆಗಳು ಅತ್ಯವಶ್ಯಕ. ಬ್ರ್ಯಾಂಡ್ ಸೃಷ್ಟಿಸಿದ ಇಲ್ಲಿನ ಇಟ್ಟಿಗೆಗೆ ಎಲ್ಲಿಲ್ಲದ ಬೇಡಿಕೆ ಇದೆ. ಹರಿಹರದ ಇಟ್ಟಿಗೆ ಇಲ್ಲವೆಂದರೆ ಮನೆ ಅಪೂರ್ಣ ಎನ್ನುವ ಮಾತಿದೆ. ಅಷ್ಟರ ಮಟ್ಟಿಗೆ ಇಲ್ಲಿಯ ಇಟ್ಟಿಗೆಗಳು ಖ್ಯಾತಿ ಗಳಿಸಿವೆ.

ವಿವಿಧೆಡೆ ತಯಾರಾಗುವ ಇಟ್ಟಿಗೆಗಳು ಹರಿಹರದಿಂದಲೇ ರಾಜ್ಯಾದ್ಯಂತ ಸರಬರಾಜಾಗುತ್ತವೆ. ಬಿಸಿಲು ಲೆಕ್ಕಿಸದೇ ಕಾರ್ಮಿಕರು ಇದರ ತಯಾರಿಕೆಯಲ್ಲಿ ತೊಡಗಿರುತ್ತಾರೆ. ಆದರೆ, ಗ್ರಾಹಕರು ಕಡಿಮೆ ಬೆಲೆಗೆ ಇಟ್ಟಿಗೆ ಕೇಳುತ್ತಿರುವುದರಿಂದ ಮಾಲೀಕರಿಗೆ ಆತಂಕ ಸೃಷ್ಟಿಯಾಗಿದೆ.

ಬ್ರ್ಯಾಂಡ್ ಸೃಷ್ಟಿಸಿದ ಹರಿಹರದ ಇಟ್ಟಿಗೆ ಬಗ್ಗೆ ಮಾಹಿತಿ ನೀಡುತ್ತಿರುವುದು (ETV Bharat)

ಒಂದು ಇಟ್ಟಿಗೆ ತಯಾರಿಗೆ 6 ರೂಪಾಯಿ ವೆಚ್ಚ ಆಗುತ್ತದೆ. ಆದರೆ, ಗ್ರಾಹಕರು ಆರೂವರೆ ರೂಪಾಯಿಗೆ ಕೇಳುತ್ತಿದ್ದು, ಮಾಲೀಕರಿಗೆ ನಷ್ಟ. ಆದರೂ, ವಿಧಿಯಿಲ್ಲದೆ ಆರೂವರೆ ರೂಪಾಯಿಗೇ ಮಾರಾಟ ಮಾಡಲಾಗುತ್ತಿದೆ. ಕಲಬುರಗಿ, ವಿಜಯಪುರ ಭಾಗದ ಕಾರ್ಮಿಕರು ವರ್ಷದಲ್ಲಿ ನಾಲ್ಕು ತಿಂಗಳು ಇಲ್ಲೇ ಇದ್ದು ದಿನಕ್ಕೆ ಐದಾರು ಸಾವಿರ ಇಟ್ಟಿಗೆಗಳನ್ನು ತಯಾರು ಮಾಡುತ್ತಾರೆ.

Huge demand for Harihara bricks, which created a brand
ಹರಿಹರದ ಇಟ್ಟಿಗೆ (ETV Bharat)

ನಾಲ್ಕಾಣೆ-ಎಂಟಾಣೆಗೆ ದುಡಿಮೆ: ತುಂಗಭದ್ರಾ ನದಿ ದಡದುದ್ದಕ್ಕೂ ಇಟ್ಟಿಗೆ ಭಟ್ಟಿಗಳನ್ನು ಕಾಣಬಹುದು. ಹರಪನಹಳ್ಳಿ ರಸ್ತೆ, ರಾಷ್ಟ್ರೀಯ ಹೆದ್ದಾರಿ, ರಾಜನಹಳ್ಳಿ ಬಳಿಯ ಇಟ್ಟಿಗೆ ಭಟ್ಟಿಗಳು ಹೆಸರುವಾಸಿ. ಇಲ್ಲಿನ ಒಂದು ಭಟ್ಟಿಯಲ್ಲಿ ದಿನಕ್ಕೆ 5-6 ಸಾವಿರ ಇಟ್ಟಿಗೆಗಳು ತಯಾರಾಗುತ್ತವೆ. ಅಂತಹ ನೂರಾರು ಭಟ್ಟಿಗಳು ಇಲ್ಲಿವೆ. ಅಷ್ಟರ ಮಟ್ಟಿಗೆ ಈ ಇಟ್ಟಿಗೆಗಳಿಗೆ ಬೇಡಿಕೆ ಇದೆ.

Huge demand for Harihara bricks, which created a brand
ಇಟ್ಟಿಗೆಗೆ ಬಳಸಲಾಗುವ ಬಾಕ್ಸ್​ (ETV Bharat)

ಒಂದು ಬಾರಿ ಇಟ್ಟಿಗೆ ಜೋಡಿಸಿ ಕರಿ ಇದ್ದಿಲು ಹಾಕಿ ಸುಟ್ಟರೆ ಎರಡ್ಮೂರು ಲಕ್ಷ ಇಟ್ಟಿಗೆ ತೆಗೆಯಬಹುದು. ಬೆಂಗಳೂರು, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ದಾವಣಗೆರೆ, ಹರಪನಹಳ್ಳಿ, ರಾಣೇಬೆನ್ನೂರು, ಜಗಳೂರು, ಚನ್ನಗಿರಿ ಹೀಗೆ... ಬೇರೆ ಬೇರೆ ಕಡೆ ಇಲ್ಲಿಯ ಇಟ್ಟಿಗೆಗಳು ಸರಬರಾಜಾಗುತ್ತವೆ. ಸದ್ಯ ದರ ಕುಸಿದಿದೆ. ಮಾಲೀಕರಿಗೆ ಒಂದು ಇಟ್ಟಿಗೆಯಿಂದ ಕೇವಲ ಎಂಟಾಣೆ, ನಾಲ್ಕಾಣೆ ಉಳಿಯುತ್ತದೆ ಎಂಬುದು ಇಟ್ಟಿಗೆ ಭಟ್ಟಿ ಮಾಲೀಕ ಬಸವರಾಜ್ ಅವರು ಅಳಲು.‌

Huge demand for Harihara bricks, which created a brand
ಹರಿಹರದ ಇಟ್ಟಿಗೆ (ETV Bharat)

ಹರಿಹರ-ರಾಣೇಬೆನ್ನೂರಿನಲ್ಲಿ ಬೇರು ಬಿಟ್ಟ ಉದ್ಯಮ: ಹರಿಹರ ತಾಲೂಕಿನ ಸಾರಥಿ, ಗುತ್ತೂರು, ಕರ್ಲಹಳ್ಳಿ, ಹರ್ಲಾಪುರ, ದೀಟೂರು, ಹರಗನಹಳ್ಳಿ, ಚಿಕ್ಕಬಿದರಿ, ಪಾಮೇನಹಳ್ಳಿ, ಕುರುಬರಹಳ್ಳಿ, ರಾಜನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಊರುಗಳಲ್ಲಿ ಬೆಂಕಿ ಪೊಟ್ಟಣದಂತಹ ಇಟ್ಟಿಗೆ ಭಟ್ಟಿಗಳು ಕಾಣಸಿಗುತ್ತವೆ. ತಾಲೂಕಿನ ಗುತ್ತೂರು ಗ್ರಾಮ ಇಟ್ಟಿಗೆ ಉದ್ಯಮದ ಹಬ್ ಆಗಿ ಗುರುತಿಸಿಕೊಂಡಿದೆ. ಈ ಗ್ರಾಮಕ್ಕೆ ಇಟ್ಟಿಗೆ ತಯಾರಿಕೆಯಲ್ಲಿ 50ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಇಲ್ಲಿನ ಬಹುಪಾಲು ನಿವಾಸಿಗಳಿಗೆ ಇದೇ ಮುಖ್ಯ ಉದ್ಯೋಗ. ಹಾಗಾಗಿ ಗುತ್ತೂರನ್ನು 'ಇಟ್ಟಿಗೆ ಭಟ್ಟಿಯ ಕಣಜ' ಎನ್ನುತ್ತಾರೆ. ತಾಲೂಕಿನ ವಿವಿಧೆಡೆಯ ಇಟ್ಟಿಗೆ ತಯಾರಿಕೆ ಉದ್ಯಮವು ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿದೆ. ಸ್ಥಳೀಯ ಕಾರ್ಮಿಕರು ಮಾತ್ರವಲ್ಲದೇ ಹೊರ ರಾಜ್ಯಗಳಾದ ಉತ್ತರ ಪ್ರದೇಶ, ಒಡಿಶಾ, ಬಿಹಾರದ ಕಾರ್ಮಿಕರೂ ಇಲ್ಲಿ ಬಂದು ದುಡಿಯುತ್ತಿದ್ದಾರೆ.

Huge demand for Harihara bricks, which created a brand
ಹರಿಹರದ ಇಟ್ಟಿಗೆ (ETV Bharat)

ಇಟ್ಟಿಗೆ ತಯಾರಿಸುತ್ತಿದ್ದೇವೆ, ಮಾರಾಟ ಆಗ್ತಿಲ್ಲ: ಇಟ್ಟಿಗೆ ಭಟ್ಟಿಯ ಮಾಲೀಕ ಬಸವರಾಜ್ ಮಾತನಾಡಿ, "ಬೇರೆ ಬೇರೆ ಕಾರಣಗಳಿಂದ ಸದ್ಯ ಸರಿಯಾಗಿ ಇಟ್ಟಿಗೆ ಮಾರಾಟವಾಗುತ್ತಿಲ್ಲ. ತಯಾರು ಮಾಡೋದು ಮಾಡುತ್ತಿದ್ದೇವೆ. ಹಾಕಿದ ಬಂಡವಾಳ ಬರುವುದು ಕಷ್ಟವಾಗಿದೆ. ಒಂದು ಇಟ್ಟಿಗೆ ತಯಾರಿಸಲು ಆರು ರೂಪಾಯಿ ಖರ್ಚು ಬರುತ್ತದೆ.‌ ಜನ ಆರೂವರೆ ರೂಪಾಯಿಗೆ ಒಂದು ಇಟ್ಟಿಗೆ ಕೇಳ್ತಿದ್ದಾರೆ. ನಾಲ್ಕಾಣೆ-ಎಂಟಾಣೆ ಲಾಭಕ್ಕೆ ದುಡಿಮೆ ಮಾಡುತ್ತಿದ್ದೇವೆ‌. ಏಳು ವರ್ಷಗಳಿಂದ ಇಟ್ಟಿಗೆ ತಯಾರು ಮಾಡುತ್ತಿದ್ದೇವೆ. ಬಿಸಿಲಿನಲ್ಲಿ ಇಟ್ಟಿಗೆ ಮಾಡಬೇಕಾಗು. ಇಲ್ಲಿಗೆ ದುಡಿಯಲೆಂದು ಕಲಬುರಗಿ, ವಿಜಯಪುರ ಜಿಲ್ಲೆಯಿಂದ ಕಾರ್ಮಿಕರು ಆಗಮಿಸುತ್ತಾರೆ. ಕೆರೆ ಹೂಳು ತೆಗೆದ ಮಣ್ಣನ್ನು ಖರೀದಿಸುತ್ತೇವೆ. ಅದೇ ಮಣ್ಣಿನಿಂದ ಇಟ್ಟಿಗೆ ಮಾಡುತ್ತೇವೆ. ದಿನಕ್ಕೆ ಐದು ಸಾವಿರ ಇಟ್ಟಿಗೆ ತಯಾರಿಸುತ್ತೇವೆ. ಕಳೆದ ಎರಡು ವರ್ಷಗಳಿಂದ ದರ ಕುಸಿದಿದೆ. ಮುಂಚೆ ಒಂದು ರೂಪಾಯಿಯಷ್ಟು ಲಾಭ ಉಳಿಯುತ್ತಿತ್ತು. ಈಗ ನಾಲ್ಕಾಣೆ-ಎಂಟಾಣೆ ಉಳಿಯುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದರು.

Huge demand for Harihara bricks, which created a brand
ಹರಿಹರದ ಇಟ್ಟಿಗೆ (ETV Bharat)

ವರ್ಷಕ್ಕೆ 15 ಲಕ್ಷ ರೂ ಬಂಡವಾಳ ಹಾಕಿದರೆ ಎಲ್ಲ ಖರ್ಚು, ಕಾರ್ಮಿಕರ ಕೂಲಿ ತೆಗೆದು 5-6 ಲಕ್ಷ ರೂ ಲಾಭ ಸಿಗುತ್ತದೆ. ಒಳ್ಳೆಯ ದರ ಇದ್ದಲಿ ಮಾತ್ರ ಲಾಭ. ಎರಡು ವರ್ಷದ ಹಿಂದೆ ಒಂದು ಇಟ್ಟಿಗೆಗೆ 8 ರೂಪಾಯಿ ಇತ್ತು. ಈಗ ಆರೂವರೆ ರೂಪಾಯಿಗೆ ಬಂದಿದೆ. ಎಂಟಾಣೆ, ನಾಲ್ಕಾಣೆ ಉಳಿಯುತ್ತಿದೆ. ಒಂದು ಟ್ರಕ್​ನಲ್ಲಿ 2,500 ಇಟ್ಟಿಗೆಗಳು ಇರಲಿದ್ದು, ಅದಕ್ಕೆ ಒಟ್ಟು 18-20 ಸಾವಿರ ರೂ ದರ ಇದೆ. 3,500 ಟ್ರಕ್ ಬಾಡಿಗೆ ಕೂಡ ಇರಲಿದೆ. - ಬಸವರಾಜ್, ಇಟ್ಟಿಗೆ ಭಟ್ಟಿಯ ಮಾಲೀಕ

ಇಟ್ಟಿಗೆ ತಯಾರಿಕೆ ಬಗ್ಗೆ ಕಾರ್ಮಿಕರ ಮಾತು: ಕಾರ್ಮಿಕ ಪ್ರಕಾಶ್ ಮಾತನಾಡಿ, "ಶೇಖರಿಸಿದ ಮಣ್ಣು ಜಗ್ದು, ಅದಕ್ಕೆ ಬೂದಿ ಕಟ್ಟಿ, ರೂಟರ್​ನಲ್ಲಿ ಕಲಿಸಿಕೊಂಡು ಮಿಶ್ರಣ ಮಾಡಲಾಗುತ್ತದೆ. ಬೆಳಗ್ಗೆ ಬ್ರಿಕ್ಸ್ ಬಾಕ್ಸ್​ನಲ್ಲಿ ಕಲಸಿದ ಮಣ್ಣು ಹಾಕಿ ದಿನ ನಿತ್ಯ ಇಟ್ಟಿಗೆ ಮಾಡುತ್ತೇವೆ. ಗಂಡ ಹೆಂಡತಿ ಇಬ್ಬರು ಎಂಬಂತೆ ಇಲ್ಲಿ ಇಟ್ಟಿಗೆ ಮಾಡಲು ಜೋಡಿಗಳಿವೆ. ನಿತ್ಯ ಒಂದು ಜೋಡಿ ಕಾರ್ಮಿಕರು 1,500 ಇಟ್ಟಿಗೆ ತಯಾರಿಸುತ್ತಾರೆ. ಮೂರ್ನಾಲ್ಕು ತಿಂಗಳಿಗೊಮ್ಮೆ ನಾವು ಇಲ್ಲಿಗೆ ಬಂದು ಇಟ್ಟಿಗೆ ತಯಾರು ಮಾಡುತ್ತೇವೆ. ನಮ್ಮದು ಕಲಬುರಗಿ. ಡಿಸೆಂಬರ್​ನಿಂದ ಮಾರ್ಚ್ ತನಕ ಅಲ್ಲಿ ಸುಗ್ಗಿ ಇರುತ್ತದೆ. ಈ ನಾಲ್ಕು ತಿಂಗಳಲ್ಲಿ ಮಾತ್ರ ಇಟ್ಟಿಗೆ ಮಾಡುತ್ತೇವೆ" ಎಂದು ಮಾಹಿತಿ ನೀಡಿದರು.

Huge demand for Harihara bricks, which created a brand
ಇಟ್ಟಿಗೆ ಸುಡಲು ಬೇಕಾದ ಕರಿ ಇದ್ದಿಲು (ETV Bharat)

ಇಟ್ಟಿಗೆ ಸುಡುವ ಕಾರ್ಮಿಕ ಹನುಮಂತ ಮಾತನಾಡಿ, "ಆರಂಭದಲ್ಲಿ ಇದ್ದಿಲು ಹಾಕಿ ಭಟ್ಟಿಯಲ್ಲಿ ಇಟ್ಟಿಗೆ ಸುಡುತ್ತೇವೆ. ಅದನ್ನು ಸುಟ್ಟಾಗ ಗುಲಾಬಿ ಬಣ್ಣಕ್ಕೆ ಇಟ್ಟಿಗೆ ತಿರುತ್ತದೆ. ಒಂದು ಭಟ್ಟಿಯಲ್ಲಿ ಒಟ್ಟು 2-3 ಲಕ್ಷ ಇಟ್ಟಿಗೆ ಜೋಡಿಸಿ ಸುಡಲಾಗುತ್ತದೆ. ಮೊದಲು ಕಾರ್ಮಿಕರು ಇಟ್ಟಿಗೆ ತಂದು ಕೊಟ್ಟಾಗ ನಾವು ಸರಿಯಾದ ಕ್ರಮಾಂಕದಲ್ಲಿ ಜೋಡಿಸುತ್ತೇವೆ. ಬಳಿಕ ಇಟ್ಟಿಗೆ ಒಟ್ಟುತ್ತೇವೆ. ಆ ಬಳಿಕ ಇದ್ದಿಲು ಹಾಕಿ ಸುಡುತ್ತೇವೆ. ಅದನ್ನು ಸುಟ್ಟರೆ ಮಾತ್ರ ಗುಲಾಬಿ ರೀತಿ ಬಣ ಬರಲಿದೆ. ನಾವು ಇದನ್ನು ನಾಲ್ಕೈದು ವರ್ಷಗಳಿಂದ ಮಾಡುತ್ತಿದ್ದೇವೆ. ಕೆಲಸಕ್ಕೆ ಇಲ್ಲಿಗೆ ಐದಾರು ಜೋಡಿ ಬಂದಿದ್ದೇವೆ. ಎರಡ್ಮೂರು ಲಕ್ಷ ಇಟ್ಟಿಗೆ ಜೋಡಿಸಿ ಬೆಂಕಿ ಕೊಡಲಾಗುತ್ತದೆ. ಆ ಬೆಂಕಿ ಒಂದು ತಿಂಗಳ ಕಾಲ ಉರಿಯುತ್ತದೆ. ಬಳಿಕ ಇಟ್ಟಿಗೆಯ ಬಣ್ಣ ಬದಲಾಗುತ್ತದೆ" ಎಂದರು.

Huge demand for Harihara bricks, which created a brand
ಹರಿಹರದ ಇಟ್ಟಿಗೆ (ETV Bharat)

ಇದನ್ನೂ ಓದಿ: ಇಟ್ಟಿಗೆ ಭಟ್ಟಿಯಲ್ಲಿ ಪೋಷಕರ ಕೂಲಿ ಕೆಲಸ: ಐಐಟಿ ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪರೀಕ್ಷೆಯಲ್ಲಿ 1201ನೇ ರ‍್ಯಾಂಕ್‌ ಪಡೆದ ಪುತ್ರ