ತ್ಯಾಜ್ಯ ಪ್ರಮಾಣಕ್ಕೆ ತಕ್ಕಂತೆ ಶುಲ್ಕ, ಬೃಹತ್ ತ್ಯಾಜ್ಯ ಉತ್ಪಾದಕ ಸಂಸ್ಥೆಗೆ ನೋಂದಣಿ ಕಡ್ಡಾಯಗೊಳಿಸಿದ ಹು-ಧಾ ಪಾಲಿಕೆ
ಹುಬ್ಬಳ್ಳಿ -ಧಾರವಾಡ ಪಾಲಿಕೆಯು ನಿತ್ಯ 100 ಕೆ.ಜಿ.ಗೂ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಸಂಸ್ಥೆಗಳ ನೋಂದಣಿಯನ್ನು ಕಡ್ಡಾಯಗೊಳಿಸಿದೆ.

Published : August 28, 2026 at 11:01 AM IST
ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಕಸದಿಂದ ರಸ ತಗೆಯುವ ಕಾರ್ಯಕ್ಕೆ ಕೈ ಹಾಕಿದ್ದು, ಆದಾಯ ಹೆಚ್ಚಳದ ಗುರಿ ಇಟ್ಟುಕೊಂಡಿದೆ. ಪಾಲಿಕೆಯು ನಿತ್ಯ 100 ಕೆ.ಜಿ.ಗೂ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಸಂಸ್ಥೆಗಳ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ಇದರನ್ವಯ ನಿತ್ಯ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಶುಲ್ಕ ಆಕರಣೆ ಜಾರಿಗೆ ತರಲಾಗಿದೆ.
ಹುಬ್ಬಳ್ಳಿ - ಧಾರವಾಡ ಅವಳಿನಗರದಲ್ಲಿ ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕ 17 ಸಂಸ್ಥೆಗಳು ಇಲ್ಲಿಯವರೆಗೆ ನೋಂದಣಿ ಮಾಡಿಸಿಕೊಂಡಿವೆ. ಇವು ಪಾಲಿಕೆ ನಿಗದಿಪಡಿಸಿರುವ ಶುಲ್ಕ (ಪ್ರತಿ ಕೆ.ಜಿ.ಗೆ 4 ರೂ.) ಪಾವತಿಸುತ್ತಿವೆ. ಗೋಕುಲ ರಸ್ತೆ ಇನಾರ್ಬಿಟ್ ಮಾಲ್ ನಿತ್ಯ ಸರಾಸರಿ 600 ಕೆ.ಜಿ. ತ್ಯಾಜ್ಯ ವಿಲೇವಾರಿ ಮಾಡುತ್ತಿದೆ.
ಕಾರ್ಪೊರೇಟ್ ಆಸ್ಪತ್ರೆ, ಮಾಲ್, ದೊಡ್ಡ ಪ್ರಮಾಣದ ಹೋಟೆಲ್‌ಗಳು ನಿತ್ಯವೂ ನಿಗದಿತ ಪ್ರಮಾಣದಲ್ಲಿ ತ್ಯಾಜ್ಯ ಹೊರ ಹಾಕುವುದಿಲ್ಲ. ಪ್ರತಿ ದಿನದ ಪ್ರಮಾಣದಲ್ಲಿ ವ್ಯತ್ಯಾಸ ಇರುತ್ತದೆ. ಶ್ರಾವಣ ಮಾಸ, ಸೋಮವಾರ, ಹಬ್ಬಗಳ ದಿನದಂದು ಮಾಂಸಾಹಾರಿ ಹೋಟೆಲ್‌ಗಳಲ್ಲಿ ತ್ಯಾಜ್ಯ ಉತ್ಪಾದನೆ ಗಣನೀಯವಾಗಿ ಕಡಿಮೆ ಇರುತ್ತದೆ. ವೀಕೆಂಡ್, ಹಬ್ಬದ ದಿನಗಳಂದು ಮಾಲ್, ಬೃಹತ್ ವಾಣಿಜ್ಯ ಸಂಕೀರ್ಣಗಳಲ್ಲಿ ತ್ಯಾಜ್ಯ ಉತ್ಪಾದನೆ ಅಧಿಕವಾಗಿರುತ್ತದೆ.
ಮನೆ ಮತ್ತು ವಾಣಿಜ್ಯ ಮಳಿಗೆಗಳಿಂದ (ನಿತ್ಯ 100 ಕೆ.ಜಿ.ಗಿಂತ ಕಡಿಮೆ ಪ್ರಮಾಣ) ಪ್ರತಿ ವರ್ಷ ಆಸ್ತಿ ತೆರಿಗೆಯೊಂದಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಘನ ತ್ಯಾಜ್ಯ ನಿರ್ವಹಣೆ ಶುಲ್ಕ ಸೆಸ್ ಸಂಗ್ರಹಿಸುತ್ತ ಬರಲಾಗಿದೆ. ಹಾಗೂ ನಿತ್ಯ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣ ಗಣನೆಗೆ ಬರುವುದಿಲ್ಲ. ಆದರೆ, ಇದೀಗ ಮೇ ತಿಂಗಳಿಂದ ನಿತ್ಯ 100 ಕೆ.ಜಿ.ಗೂ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಕಾರ್ಪೊರೇಟ್ ಆಸ್ಪತ್ರೆ, ಮಾಲ್, ದೊಡ್ಡ ಪ್ರಮಾಣದ ಹೋಟೆಲ್‌ಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026ರ ಪ್ರಕಾರ ಇದನ್ನು ಇದೇ ರೀತಿ ಕಾರ್ಪೊರೇಟ್ ಆಸ್ಪತ್ರೆಗಳಲ್ಲೂ ವ್ಯತ್ಯಾಸವನ್ನು ಗುರುತಿಸಲಾಗಿದೆ. ಈ ಕಾರಣಕ್ಕಾಗಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯು ನಿರ್ದಿಷ್ಟ ಕಾರ್ಪೊರೇಟ್ ಆಸ್ಪತ್ರೆ, ಮಾಲ್, ದೊಡ್ಡ ಪ್ರಮಾಣದ ಹೋಟೆಲ್‌ಗಳಿಂದ ಒಂದು ವಾರ ಅಥವಾ 15 ದಿನಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ಪ್ರಮಾಣವನ್ನು ಭೌತಿಕವಾಗಿ ಪರಿಶೀಲಿಸಿ, ದಿನದ ಸರಾಸರಿ ಲೆಕ್ಕಾಚಾರದಲ್ಲಿ ಪ್ರಮಾಣವನ್ನು ನಿಗದಿಪಡಿಸಿದೆ. ಅದರ ಪ್ರಕಾರ ನೋಂದಣಿ ಪ್ರಕ್ರಿಯೆ ನಡೆಸಲಾಗಿದೆ.
ಎಸ್‌ಐಆರ್ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಈ ನೋಂದಣಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ವೇಗ ಪಡೆಯಲಿದೆ. ಹುಬ್ಬಳ್ಳಿ -ಧಾರವಾಡ ಅವಳಿನಗರದಲ್ಲಿ ನಿತ್ಯ 100 ಕೆ.ಜಿ.ಗೂ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಕಾರ್ಪೊರೇಟ್ ಆಸ್ಪತ್ರೆ, ಮಾಲ್, ದೊಡ್ಡ ಪ್ರಮಾಣದ ಹೋಟೆಲ್‌ಗಳ ಸಂಖ್ಯೆ 80ಕ್ಕೂ ಹೆಚ್ಚು ಇವೆ ಎಂದು ಅಂದಾಜಿಸಲಾಗಿದೆ.
53 ಬೃಹತ್ ಘನತ್ಯಾಜ್ಯ ಉತ್ಪಾದಕರು: ಈ ಕುರಿತಂತೆ ಘನತ್ಯಾಜ್ಯ ಹಾಗೂ ಪರಿಸರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಯರಂಗಳಿ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿದ್ದು, ''ಪ್ರತಿದಿನ 100 ಕೆ.ಜಿ. ಘನತ್ಯಾಜ್ಯ ಉತ್ಪಾದನೆ ಮಾಡುವವರಿಂದ ಕೆ.ಜಿ.ಗೆ 4 ರೂ. ಪಡೆಯಲಾಗುತ್ತದೆ. ಘನತ್ಯಾಜ್ಯ ವಿಭಾಗದ ನಿಯಮ-2026 ಪ್ರಕಾರ ಸ್ವಚ್ಚತಂ ಪೋರ್ಟಲ್ನಲ್ಲಿ ನೋಂದಣಿ ಮಾಡಿರಬೇಕು. ಅವಳಿ ನಗರದಲ್ಲಿ 53 ಬೃಹತ್ ಘನತ್ಯಾಜ್ಯ ಉತ್ಪಾದಕರನ್ನು ಗುರುತಿಸಿದ್ದೇವೆ. ಈಗಾಗಲೇ 17 ಸಂಸ್ಥೆಗಳು ನೋಂದಣಿ ಮಾಡಿಸಿಕೊಂಡಿವೆ. ಇವು ಪಾಲಿಕೆ ನಿಗದಿಪಡಿಸಿರುವ ಶುಲ್ಕ (ಪ್ರತಿ ಕೆ.ಜಿ.ಗೆ 4 ರೂ.) ಪಾವತಿಸುತ್ತಿವೆ. ಹಿಂಬಾಕಿ ಬಗ್ಗೆ ಪರಿಶೀಲನೆ ನಡೆಯುತ್ತಿದೆ'' ಎಂದರು.
ಪ್ರತಿ ವರ್ಷ 120 ಕೋಟಿ ರೂ. ಖರ್ಚು: ''ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026 ಪಾಲಿಸದ ದೊಡ್ಡ ಮಾಲ್, ಹೋಟೆಲ್, ಆಸ್ಪತ್ರೆ, ವಾಣಿಜ್ಯ ಸಂಕೀರ್ಣಗಳ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯ (ಆ. 22) ತೀರ್ಪು ನೀಡಿದೆ. ಘನತ್ಯಾಜ್ಯದಿಂದ ಆಕರಣೆಯಾಗುವ ಹಣದಿಂದ ಈಗಾಗಲೇ ಕಳೆದ 20 ವರ್ಷಗಳಿಂದ ಶೇಖರಣೆಯಾಗಿರುವ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಬಳಸಲಾಗುತ್ತದೆ. ಪೌರ ಕಾರ್ಮಿಕರ ಸಂಬಳ, ಕಸ ಸಾಗಿಸುತ್ತಿರುವ ವಾಹನಗಳ ಇಂಧನ, ಪೌರಕಾರ್ಮಿಕರು ಬಳಸುವ ಉಪಕರಣ ಸೇರಿದಂತೆ ಪ್ರತಿ ವರ್ಷ 120 ಕೋಟಿ ರೂ. ಖರ್ಚು ಮಾಡುತ್ತದೆ. ಇದಕ್ಕೆ ಪಾಲಿಕೆಯ ಸ್ವಂತ ಸಂಪನ್ಮೂಲದಿಂದ ನಿರ್ವಹಣೆ ಮಾಡಬೇಕಾಗಿದ್ದು, ಇದರಿಂದ ಸಂಗ್ರಹವಾಗುವ ಹಣವನ್ನು ಬಳಕೆ ಮಾಡಲಾಗುತ್ತದೆ'' ಎಂದು ಸಂತೋಷ ಯರಂಗಳಿ ಮಾಹಿತಿ ನೀಡಿದರು.
ಇದನ್ನೂ ಓದಿ: ಗ್ರಾಮಸ್ಥರ ಆಕ್ಷೇಪ: ಪಾಲಿಕೆ ಜಾಗದಲ್ಲೇ ಬಯೋಗ್ಯಾಸ್ ಘಟಕ ಆರಂಭಕ್ಕೆ ಸಚಿವ ಜೋಶಿ ಸೂಚನೆ

