ಸುಲಭವಾಗಿ ಸಿಗುವ ಹರಳೆಣ್ಣೆ ತಯಾರಿಸಲು ಎಷ್ಟು ದಿನ ಬೇಕು? ಮೈಸೂರಿನಲ್ಲಿ ಹರಳೆಣ್ಣೆ ತಯಾರಿಸುವ ವಿಧಾನ ಹೀಗೆ
ಜನರ ಕೈಗೆ ಸುಲಭವಾಗಿ ಸಿಗುವ ಹರಳೆಣ್ಣೆ ತಯಾರಿಸಲು ಎಷ್ಟು ದಿನ ಬೇಕು? ಹರಳೆಣ್ಣೆಯಲ್ಲಿ ಯಾವ ಗುಣವಿದೆ? ಎಂಬ ಬಗ್ಗೆ ಹರಳೆಣ್ಣೆ ತಯಾರಕರು ಮಾಹಿತಿ ನೀಡಿದ್ದಾರೆ.

Published : March 2, 2026 at 2:54 PM IST
|Updated : March 2, 2026 at 3:33 PM IST
ವರದಿ - ಕೇಶವ ಎಂ.
ಮೈಸೂರು: ದೇಶಿ ಪರಿಮಳ ಭರಿತ ಹರಳೆಣ್ಣೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ವೃದ್ಧರಿಂದ ಹಿಡಿದು ಸಣ್ಣ ಮಕ್ಕಳ ಆರೋಗ್ಯ ಕಾಪಾಡಲು ಬಳಸುವ ಹರಳೆಣ್ಣೆ ಎಲ್ಲರ ಕೈಗೆ ಸುಲಭವಾಗಿ ಸಿಗುತ್ತದೆ. ಆದರೆ, ಅದರ ತಯಾರಿಕೆ ಅಷ್ಟು ಸುಲಭವಲ್ಲ.
ಗ್ರಾಮಾಂತರ ಪ್ರದೇಶಗಳಲ್ಲಿ ಹರಳೆಣ್ಣೆ ತಯಾರಿಸುವುದರ ಬಗ್ಗೆ ಕೇಳಿದ್ದೇವೆ. ಆದರೆ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದ ಪ್ರಸಾರಾಂಗದ ಸಹಯೋಗದಲ್ಲಿ ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟ(ಆಶಾ) ವತಿಯಿಂದ ಆಯೋಜಿಸಲಾಗಿದ್ದ 6ನೇ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಹರಳೆಣ್ಣೆ ತಯಾರಿಸುವ ವಿಧಾನವನ್ನು ನೋಡಿದ ಗ್ರಾಹಕರು ಅಚ್ಚರಿ ವ್ಯಕ್ತಪಡಿಸಿದರು.
ಈ ಹಿಂದೆ ಹಳ್ಳಿಗಾಡಿನ ಪ್ರದೇಶದಲ್ಲಿ ಹರಳೆಣ್ಣೆಯನ್ನು ತಮ್ಮ ಮನೆಗಳಲ್ಲಿ ಮಾಡಿಕೊಂಡು ಕುಟುಂಬಸ್ಥರೇ ಮಾತ್ರ ಬಳಸಿಕೊಳ್ಳುತ್ತಿದ್ದರು. ಆದರೆ, ಕಾಲ ಬದಲಾದಂತೆ, ಹರಳೆಣ್ಣೆ ಮಾಡುವುದನ್ನು ಬಿಟ್ಟು ಅದನ್ನು ಅಂಗಡಿಗಳಲ್ಲಿ ಹುಡುಕಲು ಶುರು ಮಾಡಿದರು. ಅಂತಹ ಸಾಂಪ್ರದಾಯಿಕ ಹರಳೆಣ್ಣೆಯನ್ನು ಉಳಿಸಲು ಮುಂದಾಗಿರುವ ದೇಸಿರಿ ಕಂಪನಿ ಗಾಣದ ಎಣ್ಣೆಯ ಜೊತೆಯಲ್ಲಿ ಹರಳೆಣ್ಣೆ ತಯಾರಿಸಿ, ಗ್ರಾಹಕರಿಗೆ ನೀಡುತ್ತದೆ.
ಹರಳೆಣ್ಣೆ ತಯಾರಿಸುವುದು ಕಷ್ಟ: ಹರಳು ಕಾಯಿಯನ್ನು (ಔಡಲ) ಮೊದಲು ಬೇಯಿಸಿ, ಮೊರದಲ್ಲಿ ಸೋಸಬೇಕು. ನಂತರ ಅದನ್ನು ಒಳಕಲ್ಲಿನಲ್ಲಿ ಹಾಕಿ ನುಣ್ಣಗೆ ಮಾಡಬೇಕು. ಬಳಿಕ ಕುದಿಯುತ್ತಿರುವ ನೀರಿಗೆ ಸುರಿಯಬೇಕು. ನೀರು ಆವಿಯಾಗಿ ಹೋಗಿ, ಶುದ್ಧವಾದ ಹರಳೆಣ್ಣೆ ಪಾತ್ರೆಯಲ್ಲಿ ಮಾತ್ರ ಉಳಿಯುತ್ತದೆ. ಪಾತ್ರೆಯಲ್ಲಿನ ಹರಳೆಣ್ಣೆಯನ್ನು ಸೋಸಿ ಶುದ್ಧಗೊಳಿಸಿ ಜನರಿಗೆ ನೀಡಲಾಗುತ್ತದೆ.
ಸತತ ಮೂರು ಗಂಟೆಗಳ ಕಾಲ ಹರಳು ಕಾಯಿಯನ್ನು ಸೌದೆ ಒಲೆಯಲ್ಲಿ ಬೇಯಿಸಲಾಗುವುದು. ಮೂರ್ನಾಲ್ಕು ಲೀಟರ್ ಎಣ್ಣೆ ತೆಗೆಯಲು ಒಂದು ದಿನ ಬೇಕು. ಯಾವುದೇ ಕೆಮಿಕಲ್ ಹಾಗೂ ಬಣ್ಣ ಹಾಕದೇ ಗ್ರಾಹಕರಿಗೆ ನೀಡಲಾಗುತ್ತದೆ. ಒಂದು ವರ್ಷ ಕಳೆದರೂ ಈ ಎಣ್ಣೆ ಕೆಡುವುದಿಲ್ಲ. ಮೈಸೂರಿನಲ್ಲಿ ದೇಸಿರಿ ಎಂಬ ಸಂಸ್ಥೆಯಲ್ಲಿ ಇಂದಿಗೂ ಹರಳೆಣ್ಣೆ ತಯಾರಿಸಲಾಗುತ್ತಿದೆ. ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಪ್ರಾತ್ಯಕ್ಷಿಕೆ ತೋರಿಸಲಾಯಿತು. ಬೇಸಿಗೆ ಬಂದರೆ ಹರಳೆಣ್ಣೆಗೆ ಬಹಳ ಡಿಮ್ಯಾಂಡ್. ಕಾರಣ ಇದು ಬೇಸಿಗೆಯಲ್ಲಿ ನೆತ್ತಿಗೆ ತಂಪು ನೀಡುತ್ತದೆ. ಹಾಗಾಗಿ ಇದನ್ನು ವೃದ್ಧರು-ಮಕ್ಕಳು ತಲೆಗೆ ಹಚ್ಚಿಕೊಳ್ಳುತ್ತಾರೆ. ಅಲ್ಲದೇ, ಪೋಷಕರು ಮಕ್ಕಳಿಗೆ ಮೈಗೆ ಹಚ್ಚಿ ಸ್ನಾನ ಮಾಡಿಸುತ್ತಾರೆ.

ಹರಳೆಣ್ಣೆಯಲ್ಲಿ ಯಾವ ಗುಣವಿದೆ? ಹರಳೆಣ್ಣೆ ಆ್ಯಂಟಿವೈರಲ್, ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣ ಹೊಂದಿದೆ. ವೈರಸ್, ಬ್ಯಾಕ್ಟೀರಿಯಾಗಳು, ಈಸ್ಟ್‌ಗಳ ಬೆಳವಣಿಗೆಯನ್ನು ತಡೆಗಟ್ಟಿ ಕೂದಲಿನ ಸೋಂಕು ದೂರು ಮಾಡುತ್ತವೆ. ಇದರ ಸೇವನೆಯಿಂದ ಹೊಟ್ಟೆ ಸ್ವಚ್ಛಗೊಳ್ಳುತ್ತೆ ಎನ್ನುತ್ತಾರೆ ಹರಳೆಣ್ಣೆ ತಯಾರಕರು.
ನಾವು ಸಂಪ್ರದಾಯ ಪದ್ಧತಿಯಂತೆ ಹರಳೆಣ್ಣೆಯನ್ನು ತಯಾರಿಸುತ್ತೇವೆ. ಮಷಿನ್ ಅಥವಾ ಯಂತ್ರದಿಂದ ಬರುವ ಎಣ್ಣೆ ಅಷ್ಟು ಪರಿಶುದ್ಧವಾಗಿ ಇರುವುದಿಲ್ಲ. ಈ ಹರಳೆಣ್ಣೆಯನ್ನು ಪರೀಕ್ಷಿಸುವ ಜನ ಮೊದಲು ತಮ್ಮ ಕೈಗೆ ಹಚ್ಚಿಕೊಂಡು ವಾಸನೆ ಗಮನಿಸುತ್ತಾರೆ. ಬಳಿಕ ಖರೀದಿ ಮಾಡುತ್ತಾರೆ. ಅದು ಪರಿಮಳ ಭರಿತ ಹರಳೆಣ್ಣೆ ಆಗಿರಬೇಕು ಎನ್ನುತ್ತಾರೆ ದೇಸಿರಿ ಸಂಸ್ಥೆಯ ಸಹ ಸಂಸ್ಥಾಪಕ ನವೀನ್ ಕುಮಾರ್.
ಹರಳೆಣ್ಣೆ ಒಂದು ರೀತಿ ಆರೋಗ್ಯಕ್ಕೆ ಒಳ್ಳೆಯದು ಅಂದ್ರೆ ತಪ್ಪಾಗಲಾರದು. ಅದನ್ನು ತಲೆಗೆ ಹಚ್ಚಿಕೊಂಡರೆ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ಅಲ್ಲದೇ, ತಲೆ ಕೂದಲಿಗೆ ಸಿಗಬೇಕಾದ ಪೌಷ್ಠಿಕಾಂಶಗಳು ಸಿಗುತ್ತವೆ. ಹಳೆಯ ಕಾಲದಲ್ಲಿ ಯಾವ ಔಷಧಿಯೂ ಇರಲಿಲ್ಲ. ಹಾಗಾಗಿ ಹರಳೆಣ್ಣೆಯನ್ನೇ ಕೊಡುತ್ತಿದ್ದರು. ಚರ್ಮ, ಕೀಲು ನೋವು, ಬೆನ್ನು ಮೋವು, ದೇಹದ ನೋವು, ಕಾಲುಗಳ ಆರೈಕೆ ಹೀಗೆ... ಇತ್ಯಾದಿ ಸಮಸ್ಯೆಗಳನ್ನು ಗುಣಪಡಿಸುವ ಅಂಶಗಳು ಹರಳೆಣ್ಣೆಯಲ್ಲಿವೆ. ಆಗಿನ ಕಾಲದಲ್ಲಿ ಈ ಎಣ್ಣೆಯನ್ನು ಹಚ್ಚಿಕೊಳ್ಳುತ್ತಿದ್ದರಿಂದ ದೇಹದ ನೋವುಗಳು ಕಾಣಿಸಿಕೊಳ್ಳುತ್ತಿರಲಿಲ್ಲ. ಬೇಸಿಗೆ ಕಾಲದಲ್ಲಿ ಹರಳೆಣ್ಣೆಯನ್ನು ತಲೆಗೆ ಹಚ್ಚುವುದರಿಂದ ಒಳ್ಳೆಯದು. ಇಡೀ ದೇಹ ತಂಪಾಗುತ್ತದೆ. ವಾರಕ್ಕೆ ಒಂದು ಸಾರಿಯಾದರೂ ಹರಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಚರ್ಮಕ್ಕೂ ಒಳ್ಳೆಯದು. ಆದರೆ, ಇಂದು ಹರಳೆಣ್ಣೆ ಬಳಕೆ ಕಣ್ಮರೆ ಆಗುತ್ತಿರುವುದು ಬೇಸರದ ವಿಚಾರ. ಕಲಬೆರಕೆ ಕೂಡ ಇದಕ್ಕೆ ಮುಖ್ಯ ಕಾರಣ ಇರಬಹುದು. ಯುಗಾದಿ, ದೀಪಾವಳಿ ಸೇರಿದಂತೆ ಹಬ್ಬ-ಹರಿದಿನಗಳಲ್ಲಿ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಲಾಗುತ್ತದೆ. ಹೀಗೆ ಮಾಡಲು ಅದಕ್ಕೆ ವೈಜ್ಞಾನಿಕ ಕಾರಣ ಕೂಡ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅದರ ಜಾಗದಲ್ಲಿ ನಾನಾ ರೀತಿಯ ಎಣ್ಣೆಗಳು ಬರುತ್ತಿದ್ದರೂ, ಹರಳೆಣ್ಣೆಗೆ ಸರಿಸಾಟಿ ಯಾವುದೂ ಇಲ್ಲ. ಕೆಲವು ಮೆಡಿಷಿನ್ಗಳು ಹರಳೆಣ್ಣೆಯಿಂದ ತಯಾರಾಗುತ್ತಿವೆ ಎಂಬ ಮಾಹಿತಿ ಕೂಡ ಇದೆ. ಹರಳೆಣ್ಣೆ ನಾನಾ ಕಾಯಿಲೆಗಳಿಗೆ ಮದ್ದು ಕೂಡ ಹೌದು ಎನ್ನುತ್ತಾರೆ ಸ್ಥಳೀಯರಾದ ನಾಲಾಬೀದಿ ರವಿ.
ಇವುಗಳನ್ನೂ ಓದಿ:

