ಹಾವೇರಿ: ಅಣ್ಣನ ಮನೆಗೆ ಕನ್ನ ಹಾಕಿದ್ದ ತಮ್ಮ, ಪ್ರಕರಣ ನಡೆದು ಮೂರೇ ದಿನಗಳಲ್ಲಿ ಆರೋಪಿಯ ಬಂಧನ
ಅಣ್ಣನ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ತಮ್ಮನನ್ನು ಬಂಧಿಸುವಲ್ಲಿ ಹಾನಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ನಡೆದು ಮೂರೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Published : February 18, 2026 at 12:17 PM IST
ಹಾವೇರಿ: ತಮ್ಮನೇ ಅಣ್ಣನ ಮನೆಯನ್ನು ಕಳ್ಳತನ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ. ಮಹಮ್ಮದ ಗೌಸ್ ಹಂಚಿನಮನಿ ಎಂಬುವರ ಮನೆಯನ್ನು ಅವರ ತಮ್ಮ 36 ವರ್ಷದ ಮಹಮ್ಮದ ಅಲಿ ಹಂಚಿನಮನಿ ಎಂಬಾತನೇ ಕಳ್ಳತನ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣ ನಡೆದು ಮೂರೇ ದಿನಗಳಲ್ಲಿ ಅಣ್ಣನ ಮನೆಗೆ ಕನ್ನ ಹಾಕಿದ್ದ ತಮ್ಮನನ್ನು ಬಂಧಿಸುವಲ್ಲಿ ಹಾನಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ: ಫೆಬ್ರುವರಿ 14, 2026ರ ಶನಿವಾರ ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆಯ ನಡುವಿನ ಅವಧಿಯಲ್ಲಿ ಹೇರೂರು ಗ್ರಾಮದ ಮಹಮ್ಮದ ಗೌಸ್ ಹಂಚಿನಮನಿ ಎಂಬುವರ ಮನೆಯ ಹಿಂದಿನ ಅಡುಗೆ ಕೋಣೆಯ ಮೇಲಿನ ಹೆಂಚನ್ನು ತೆಗೆದು ಯಾರೋ ಕಳ್ಳರು ಮನೆಯಲ್ಲಿದ್ದ 15 ಲಕ್ಷದ 42 ಸಾವಿರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣವನ್ನು ಕದ್ದು ಪರಾರಿ ಆಗಿದ್ದರು. ವಿಷಯ ಗೊತ್ತಾಗಿ ಮನೆಯ ಮಾಲೀಕರು ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಹಾನಗಲ್ ಠಾಣೆಯ ಪೊಲೀಸರು, ಬೆರಳಚ್ಚು, ಶ್ವಾನದಳ ಹಾಗೂ ಜಿಲ್ಲಾ ತಾಂತ್ರಿಕ ಸಿಬ್ಬಂದಿಗಳ ತಂಡ ಪರಿಶೀಲನೆ ನಡೆಸಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ, ಶಿಗ್ಗಾಂವ್ ಡಿವೈಎಸ್‌ಪಿ ಗುರುಶಾಂತಪ್ಪ ಕೆ.ವಿ ಮತ್ತು ಹಾನಗಲ್ ಸಿಪಿಐ ಬಸವರಾಜ ಹಳಬಣ್ಣವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಂಪತ್ ಎಸ್ ಆನಿಕಿವಿ ನೇತೃತ್ವದ ಪೊಲೀಸರ ತಂಡ ಪ್ರಕರಣ ನಡೆದ ಮೂರು ದಿನಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯಿಂದ ಕಳ್ಳತನ ಮಾಡಿದ್ದ 4 ಲಕ್ಷದ 56 ಸಾವಿರ ರೂಪಾಯಿ ಮೌಲ್ಯದ 38 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 2 ಲಕ್ಷದ 76 ಸಾವಿರ ರೂಪಾಯಿ ಮೌಲ್ಯದ 23 ಗ್ರಾಂ ಚಿನ್ನದ ನೆಕ್ಲೆಸ್, 96 ಸಾವಿರ ರೂಪಾಯಿ ಮೌಲ್ಯದ 8 ಗ್ರಾಂ ತೂಕದ ಬಂಗಾರದ ಚೈನ್, 1 ಲಕ್ಷದ 80 ಸಾವಿರ ರೂಪಾಯಿ ಮೌಲ್ಯದ 15 ಗ್ರಾಂ ತೂಕದ ಬಂಗಾರದ ಪದಕದ ಸರ, ಎರಡೂವರೆ ಲಕ್ಷ ರೂಪಾಯಿ ಮೌಲ್ಯದ 22 ಗ್ರಾಂ ತೂಕದ 9 ಬಂಗಾರದ ಉಂಗುರುಗಳು, 35 ಸಾವಿರ ರೂಪಾಯಿ ಮೌಲ್ಯದ 135 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ಕಾಲು ಚೈನು, 24 ಸಾವಿರ ರೂಪಾಯಿ ಮೌಲ್ಯದ 2 ಗ್ರಾಂ ತೂಕದ ಬಂಗಾರದ ಕಿವಿಯೋಲೆ, 31 ಸಾವಿರ ರೂಪಾಯಿ ನಗದು ಹಣ ಸೇರಿದಂತೆ ಕಳ್ಳತನವಾಗಿದ್ದ ಒಟ್ಟು 15 ಲಕ್ಷದ 42 ಸಾವಿರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಹಾಗೂ ನಗದು ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 2 ಸಾವಿರ ಮೌಲ್ಯದ ಟಿವಿ ಕಳ್ಳತನ: ತಲೆಮರೆಸಿಕೊಂಡಿದ್ದ ಆರೋಪಿ 28 ವರ್ಷಗಳ ಬಳಿಕ ಬಂಧನ

