ಮನೆ ಮಂದಿ ಸಿನಿಮಾಕ್ಕೆ, ಕಳ್ಳ ಮನೆಯೊಳಗೆ: ಚಿನ್ನಾಭರಣ ಕದ್ದು ಮಂಚದ ಕೆಳಗಿ ಅವಿತುಕೊಂಡಿದ್ದ ಕಳ್ಳನನ್ನು ಹಿಡಿದ ಮನೆ ಮಾಲೀಕ
ಚಿನ್ನ ಕಳುವು ಮಾಡಿದ ಕೋಣೆಯ ಮಂಚದ ಕೆಳಗೆ ಅವಿತು ಕುಳಿತಿದ್ದ ಕಳ್ಳನನ್ನು ಸೆರೆ ಹಿಡಿದು ವಿಜಯಪುರ ಪೊಲೀಸರಿಗೆ ಒಪ್ಪಿಸಲಾಗಿದೆ.

Published : October 12, 2026 at 11:37 AM IST
ದೇವನಹಳ್ಳಿ(ಬೆಂಗಳೂರು): ವಾರದ ರಜೆ ಹಿನ್ನೆಲೆ ಮನೆ ಮಂದಿ ಸಿನಿಮಾಕ್ಕೆ ಹೋಗಿದ್ದರೆ, ಮನೆ ಯಜಮಾನ ಮನೆಗೆ ಬೀಗ ಹಾಕಿ ತೋಟಕ್ಕೆ ತೆರಳಿದ್ದರು. ಇದೇ ಸಮಯಕ್ಕೆ ಕಾದು ಕುಳಿತ್ತಿದ್ದ ಕಳ್ಳ, ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿ ಪರಾರಿಯಾಗುವ ಯತ್ನ ನಡೆಸಿದ್ದ. ಅಷ್ಟರಲ್ಲೇ ಮನೆ ಯಜಮಾನ ಬಂದು ಕಳ್ಳನನ್ನು ರೆಡ್ ಹ್ಯಾಂಡಾಗಿ ಹಿಡಿದಿರುವ ಘಟನೆ ದೇವನಹಳ್ಳಿಯಲ್ಲಿ ಶನಿವಾರ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನಲ್ಲಿ ಗೊಬ್ಬರಗುಂಟೆ ಗ್ರಾಮದಲ್ಲಿ ಭಾನುವಾರ ಘಟನೆ ನಡೆದಿದೆ. ಕೃಷ್ಣಪ್ಪ ಎಂಬುವರ ಮನೆಗೆ ನುಗ್ಗಿದ ಕಳ್ಳ ಮನೆಯಲ್ಲಿ ಯಾರು ಇಲ್ಲದ ಅವಕಾಶ ಬಳಸಿಕೊಂಡು ಬೀರುವಿನಲ್ಲಿದ್ದ 130 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಯಾಗುವ ಯತ್ನದಲ್ಲಿದ್ದ. ಅಷ್ಟರಲ್ಲಿ ಮನೆಯೊಳಗೆ ಬಂದ ಕೃಷಪ್ಪ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿ ಕೇರಳ ಮೂಲದ ಅಜಯ್ ಎಂದು ಗುರುತಿಸಲಾಗಿದೆ. ಕೇರಳದ ತ್ರಿಶೂರ್ ಜಿಲ್ಲೆಯ ಚಿತ್ತಿಲಪಲ್ಲಿ ಮೂಲದ ಅಜಯ್, ಯಲಹಂಕ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತರೊಂದಿಗೆ ವಾಸವಾಗಿದ್ದ ಎನ್ನಲಾಗಿದೆ. ಓಲಾ ಮತ್ತು ಉಬರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ, ಕಳ್ಳತನಕ್ಕೂ ಮುನ್ನ ಎರಡರಿಂದ ಮೂರು ದಿನಗಳ ಕಾಲ ಮನೆಯವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದನು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಕಳ್ಳತನ ಮಾಡಲು ಬಂದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ಆರೋಪಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಮನೆ ಮಾಲೀಕ ಕೃಷ್ಣಪ್ಪ, "ಮನೆ ಮಂದಿಯೆಲ್ಲ ಪ್ರೇಮದ ಊರಲ್ಲಿ ಸಿನಿಮಾಕ್ಕೆ ಹೋಗಿದ್ದರು. ನಾನು ಮಾತ್ರ ತೋಟಕ್ಕೆ ಹೋಗಿದ್ದೆ. ತೋಟದಿಂದ ಮನೆಗೆ ವಾಪಸ್ ಬಂದಾಗ ಮನೆ ಬಾಗಿಲನ್ನು ಯಾರೋ ಒಳಗಿಂದಲೇ ಲಾಕ್ ಮಾಡಿಕೊಂಡಿರುವುದು ಗಮನಿಸಿದೆ. ಅನುಮಾನ ಬಂದ ನಾನು ಅಕ್ಕಪಕ್ಕದ ಮನೆಯವರನ್ನು ಕರೆದು ಮನೆ ಬಾಗಿಲನ್ನು ಒಡೆದು ಮನೆ ಒಳಗಡೆ ಹೋದೆವು. ರೂಂನ ಒಳಗೆ ಹೋದಾಗ ಕಳ್ಳತನವಾಗಿರುವುದು ಖಚಿತವಾಯಿತು. ಮನೆಯ ಪ್ರತಿಯೊಂದು ಕಡೆ ಹುಡುಕಾಡಿದರೂ ಕಳ್ಳನ ಸುಳಿವು ಸಿಕ್ಕಿರಲಿಲ್ಲ. ಮತ್ತೆ ಅದೇ ಕಳ್ಳತನವಾದ ಕೋಣೆಗೆ ಬಂದು ಮಂಚದ ಕೆಳಗೆ ನೋಡಿದಾಗ ಖದೀಮ ಅವಿತಿಟ್ಟುಕೊಂಡಿರುವುದು ಕಂಡಿತು. ತಕ್ಷಣ ಕಳ್ಳನನ್ನು ಆಚೆ ಎಳೆತಂದು ಕಟ್ಟಿಹಾಕಿದೆವು" ಎಂದು ತಿಳಿಸಿದರು.
ಲಕ್ಷಾಂತರ ಮೌಲ್ಯದ ಚಿನ್ನವನ್ನು ಆರೋಪಿಯಿಂದ ವಶಕ್ಕೆ ಪಡೆದ ಪೊಲೀಸರು ಬಳಿಕ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ವಿಜಯಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಪಿ: ಎಸ್ಐಆರ್ ನೆಪದಲ್ಲಿ ವೃದ್ಧೆಯ ಮನೆಗೆ ನುಗ್ಗಿ ಚಿನ್ನದ ಸರ ಕದ್ದ ಇಬ್ಬರ ಬಂಧನ

