ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಪೊಲೀಸರ ಹಲ್ಲೆ ಆರೋಪ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಪೊಲೀಸರು ಥಳಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

Published : January 7, 2026 at 7:53 PM IST
ತುಮಕೂರು: ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಪೊಲೀಸರನ್ನು ಥಳಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ಆ ಪ್ರಕರಣದ ಬಗ್ಗೆ ಹುಬ್ಬಳಿ ಕಮಿಷನರ್ ಎನ್. ಶಶಿಕುಮಾರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅದನ್ನ ಬಿಟ್ಟು ನಾನೇನು ಹೇಳೋದಿದೆ ಎಂದರು.
ಬಳ್ಳಾರಿ ವಲಯ ಐಜಿ ವರ್ಗಾವಣೆ ವಿಚಾರವಾಗಿ ಮಾತನಾಡಿ, ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿ. ಆ ಜಾಗಕ್ಕೆ ಹರ್ಷ ಅವರನ್ನು ನೇಮಕ ಮಾಡಲಾಗಿದೆ. ವರ್ಗಾವಣೆಗೆ ಕಾರಣ ಏನು ಕೊಡಬೇಕು ಹೇಳಿ, ಇದನ್ನು ನೀವು ಹೇಗಾದರೂ ತಿಳಿದುಕೊಳ್ಳಿ. ಮುಖ್ಯಮಂತ್ರಿಗಳು ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿದರು.
ತುಮಕೂರು ಜಿಲ್ಲೆ ಅಧಿಕಾರಿಗಳಿಗೆ ಪ್ರಭಾರ ಹುದ್ದೆ ವಿಚಾರವಾಗಿ ಮಾತನಾಡಿ, ಇದೆಲ್ಲಾ ಶಾರ್ಟ್ ಟರ್ಮ್. ಅಧಿಕಾರಿಗಳ ಕೊರತೆ ಇಲ್ಲ. ರಾಜ್ಯದಲ್ಲಿ ಐಎಎಸ್ ಹಾಗೂ ಐಪಿಎಸ್ ಕೇಡರ್ಗಳಲ್ಲಿ ಯಾವುದೇ ರೀತಿಯ ಕೊರತೆ ಇಲ್ಲ. ಪ್ರತಿ ಬಾರಿ ಐಎಎಸ್ ಮತ್ತು ಐಪಿಎಸ್ ಕೇಡರ್ಗಳನ್ನು ನೇಮಕಾತಿ ಮಾಡುವ ಸಂದರ್ಭದಲ್ಲಿ ರಾಜ್ಯಕ್ಕೆ ಇಂತಿಷ್ಟು ಅಧಿಕಾರಿಗಳು ಎಂದು ನೇಮಕ ಮಾಡಲಾಗಿರುತ್ತದೆ. ಅನಂತರದಲ್ಲಿ ರಾಜ್ಯ ಸರ್ಕಾರ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಕೆಲವೊಂದು ಇಲಾಖೆಗಳಿಗೆ ಕೊರತೆ ಉಂಟಾಗಬಹುದು. ನಂತರ ಅದನ್ನು ಸರಿದೂಗಿಸಲಾಗುವುದು. ಅಧಿಕಾರಿಗಳನ್ನು ವರ್ಗಾವಣೆ ಹಾಗೂ ನೇಮಕ ಮಾಡುವ ಸಂದರ್ಭದಲ್ಲಿ ಕೆಲವೊಂದು ಇಲಾಖೆಗಳಲ್ಲಿ ಅಡ್ಜಸ್ಟ್ಮೆಂಟ್ ಮಾಡುವುದು ಸಹಜ ಎಂದು ತಿಳಿಸಿದರು.
ಬಳ್ಳಾರಿ ಘಟನೆಗೆ ಜನಾರ್ದನ ರೆಡ್ಡಿ ಕಾರಣ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಮೊದಲು ಇದನ್ನು ಬಿಡಿ. ಅವರು ಹೇಳಿದ್ದಾರೆ, ನಿಮ್ಮ ಅಭಿಪ್ರಾಯ ಏನು ಅಂತಾ ಕೇಳಿದ್ರೆ ಹೇಗೆ. ಅವರವರ ಅಭಿಪ್ರಾಯ ಹೇಳಿದ್ದಾರೆ. ನನ್ನನೇ ಕೇಳಿ ನನ್ನ ಅಭಿಪ್ರಾಯ ಹೇಳುವೆ ಎಂದು ತಿಳಿದರು.
ಅರೆಸ್ಟ್ ಮಾಡಿದಾಗ ಪೊಲೀಸರಿಗೆ ಕಚ್ಚಿ ತಾನೇ ಬಟ್ಟೆ ಬಿಚ್ಚಿಕೊಂಡರು - ಹು - ಧಾ ಪೊಲೀಸ್ ಕಮಿಷನರ್: ಮತ್ತೊಂದೆಡೆ, ಬಿಜೆಪಿ ಕಾರ್ಯಕರ್ತೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಸಂಬಂಧ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, ಬಿಜೆಪಿ ಕಾರ್ಯಕರ್ತೆಯೊಬ್ಬರನ್ನು ಬಂಧಿಸುವ ಸಂದರ್ಭದಲ್ಲಿ ನಮ್ಮ ಪೊಲೀಸರ ಮೇಲೆ ಅವರು ಹಲ್ಲೆ ಮಾಡಿದರು. ಬಂಧಿಸಿ ವಾಹನದಲ್ಲಿ ಕೂರಿಸಿದಾಗ ಅವರೇ ಬಟ್ಟೆ ತೆಗೆದರು ಎಂದರು.
ಪೊಲೀಸರು ವಶಕ್ಕೆ ಪಡೆದುಕೊಂಡ ಸಂದರ್ಭದಲ್ಲಿ ಆಕೆ ಬೆತ್ತಲಾಗಿಲ್ಲ ಅಥವಾ ಬಟ್ಟೆಗಳನ್ನು ಕಳಚುವಂಥದ್ದು ಮಾಡಿಲ್ಲ. ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಬಹಳಷ್ಟು ಪ್ರತಿರೋಧ ಮಾಡಿದರು. ಹಲ್ಲೆ ಮಾಡಿದರು. ಮಹಿಳಾ ಸಿಬ್ಬಂದಿಗೆ ಮಾತ್ರವಲ್ಲ, ನಮ್ಮ ಪುರುಷ ಸಿಬ್ಬಂದಿಯನ್ನೂ ತಳ್ಳಾಡಿ, ದಬ್ಬಿ, ರಂಪಾಟ ಮಾಡಿ, ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಿದರು ಎಂದು ತಿಳಿಸಿದ್ದಾರೆ.
ಇವುಗಳನ್ನೂ ಓದಿ:

