ETV Bharat / state

'ಪೊಲೀಸ್ ರನ್' 3ನೇ ಆವೃತ್ತಿಗೆ ಗೃಹ ಸಚಿವ ಜಿ ಪರಮೇಶ್ವರ್​ ಚಾಲನೆ

'ಪೊಲೀಸ್ ರನ್' 3ನೇ ಆವೃತ್ತಿಯ ಮ್ಯಾರಥಾನ್‌ಗೆ ವಿಧಾನಸೌಧದ ಮುಂದೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

POLICE RUN
ಪೊಲೀಸ್ ರನ್' 3ನೇ ಆವೃತ್ತಿಗೆ ಗೃಹ ಸಚಿವ ಜಿ ಪರಮೇಶ್ವರ್​ ಚಾಲನೆ (ETV Bharat)
author img

By ETV Bharat Karnataka Team

Published : March 1, 2026 at 4:20 PM IST

2 Min Read
Choose ETV Bharat

​ಬೆಂಗಳೂರು: 'ಪೊಲೀಸ್ ರನ್' 3ನೇ ಆವೃತ್ತಿಯ ಮ್ಯಾರಥಾನ್‌ಗೆ ವಿಧಾನಸೌಧದ ಮುಂದೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಮ್ಯಾರಥಾನ್‌ನಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮಂದಿ ಉತ್ಸಾಹದಿಂದ ಭಾಗವಹಿಸಿದರು.

3 ಸಾವಿರಕ್ಕೂ ಅಧಿಕ ಪೊಲೀಸರು ಭಾಗಿಯಾಗಿದ್ದು ವಿಶೇಷವಾಗಿತ್ತು. ಮಾದಕ ಮುಕ್ತ ಕರ್ನಾಟಕ ಮತ್ತು ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಧ್ಯೇಯವಾಕ್ಯದಡಿ ಈ ಬಾರಿ ಮ್ಯಾರಥಾನ್ ಆಯೋಜಿಸಲಾಗಿತ್ತು. 5 ಕಿಲೋಮೀಟರ್ ಮತ್ತು 10 ಕಿಲೋಮೀಟರ್ ವಿಭಾಗಗಳಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು.

Police Run
ಪೊಲೀಸ್ ರನ್ ಮ್ಯಾರಥಾನ್‌ (ETV Bharat)

ಡಿಜಿ & ಐಜಿಪಿ ಡಾ. ಸಲೀಂ, ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಓಟದಲ್ಲಿ ಪಾಲ್ಗೊಂಡಿದ್ದರು. ​​ಮ್ಯಾರಥಾನ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗ್ಗೆಯಿಂದಲೇ ನಮ್ಮ ಮೆಟ್ರೋ ಆರಂಭಿಸಲಾಗಿತ್ತು. ಮುಂಜಾನೆ 5 ಗಂಟೆಯಿಂದಲೇ ಮೆಟ್ರೋ ಸೇವೆ ಆರಂಭವಾಗಿದ್ದರಿಂದ ಸಾವಿರಾರು ಜನರಿಗೆ ವಿಧಾನಸೌಧ ತಲುಪಲು ಸುಲಭವಾಯಿತು.

ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮ: ​ಮ್ಯಾರಥಾನ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ​"ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಹೆಚ್ಚು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯವಾಗಿ ಚಿಕ್ಕಬಳ್ಳಾಪುರ ಮೂಲದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅವರೆಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿ ಕರೆತರಲು ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಅಗತ್ಯ ಸೌಲಭ್ಯ ಒದಗಿಸಲು ಮತ್ತು ಅವರ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಸರ್ಕಾರವು ಕಾರ್ಯಪ್ರವೃತ್ತವಾಗಿದೆ" ಎಂದು ಸ್ಪಷ್ಟಪಡಿಸಿದರು.

Police Run
ಪೊಲೀಸ್ ರನ್ (ETV Bharat)

ರಾಜ್ಯ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಸಹಯೋಗದಲ್ಲಿ ಮಾರ್ಚ್ 1ರಂದು ನಡೆಯಲಿರುವ ಪೊಲೀಸ್ ಓಟ (KSP Run) ಪ್ರಯುಕ್ತ ಮುಂಜಾನೆ 5 ರಿಂದಲೇ ಮೆಟ್ರೋ ರೈಲುಗಳ ಸೇವೆ ಆರಂಭವಾಗಲಿದೆ. ಪೊಲೀಸ್ ರನ್‌ನಲ್ಲಿ ಭಾಗಿಯಾಗಲು ನಗರದ ವಿವಿಧೆಡೆಯಿಂದ ಸಾಕಷ್ಟು ಜನ ಭಾಗಿಯಾಗಲಿರುವುದರಿಂದ ಮಾರ್ಚ್ 1ರಂದು ಪ್ರತಿದಿನದಂತೆ ಮುಂಜಾನೆ 7ರ ಬದಲು 5 ಗಂಟೆಯಿಂದಲೇ ಎಲ್ಲಾ ಟರ್ಮಿನಲ್‌ಗಳಿಂದ ರೈಲು ಸೇವೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು.

ತೃತೀಯ ಆವೃತ್ತಿಯ 'ಪೊಲೀಸ್ ರನ್' ಅನ್ನು 'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಎಂಬ ಘೋಷವಾಕ್ಯದಡಿ ರನ್ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ 'ಹಸಿರು ಬೆಂಗಳೂರು', 'ಮಾದಕ ಮುಕ್ತ ಕರ್ನಾಟಕ', 'ಸೈಬರ್ ಅಪರಾಧ'ದ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಲಾಗಿತ್ತು. ಈ ಬಾರಿ ಎಲ್ಲ ವಯೋಮಾನದವರಿಗೂ ಓಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಸ್ಪರ್ಧೆಗೆ 9 ಸಾವಿರಕ್ಕೂ ಅಧಿಕ ಮಂದಿ ರನ್‌ನಲ್ಲಿ ಭಾಗಿಯಾಗಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು.

ಇವುಗಳನ್ನೂ ಓದಿ: