ETV Bharat / state

ಬೆಂಗಳೂರಲ್ಲಿ 55 ಕೋಟಿ ಮೌಲ್ಯದ ಡ್ರಗ್ಸ್​ ವಶ ಎನ್ನುವುದು ಸತ್ಯಕ್ಕೆ ದೂರ: ಸಚಿವ ಪರಮೇಶ್ವರ್

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ 58 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

G PARAMESHWAR
ಸಚಿವ ಡಾ.ಜಿ ಪರಮೇಶ್ವರ್ (ETV Bharat)
author img

By ETV Bharat Karnataka Team

Published : December 28, 2025 at 4:38 PM IST

|

Updated : December 28, 2025 at 6:00 PM IST

2 Min Read
Choose ETV Bharat

ಬೆಂಗಳೂರು: ಮಹಾರಾಷ್ಟ್ರದ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ATNF) ಪೊಲೀಸರು, ನಮ್ಮ ಪೊಲೀಸರು, ಎನ್‌ಸಿಬಿ ಅಧಿಕಾರಿಗಳು ಹಾಗೂ ಸೋಕೋ (Scene of Crime Officers) ತಂಡದ ಅಧಿಕಾರಿಗಳ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ದಾಳಿ ನಡೆಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಅವರು ಸಭೆ‌ ನಡೆಸಿ ಮಾತನಾಡಿದರು.

ಹೊಸ ವರ್ಷ ಸಮೀಪಿಸುತ್ತಿರುವುದರಿಂದ ಡ್ರಗ್ಸ್ ದಂಧೆಯ ವಿರುದ್ಧ ಅಕ್ಟೋಬರ್, ನವೆಂಬರ್ ತಿಂಗಳಿಂದ ಪೊಲೀಸರು ರಾಜ್ಯದಾದ್ಯಂತ ಹೆಚ್ಚಿನ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ. ನಿನ್ನೆ ಮಹಾರಾಷ್ಟ್ರ ಪೊಲೀಸರು ಮುಂಬೈನಲ್ಲಿ ಸಿಕ್ಕ ಆರೋಪಿಯ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಆರೋಪಿಯೊಬ್ಬನನ್ನು ಹಿಡಿದಿದ್ದಾರೆ ಎಂದು ಹೇಳಿದರು.

ಮುಂಬೈ ಪೊಲೀಸರು ಮತ್ತು ಬೆಂಗಳೂರು ನಗರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಡ್ರಗ್ಸ್ ತಯಾರಿಸಲು ಬೇಕಾದ ಮೆಫೆಡ್ರಿನ್ ಎಂಬ ಕೆಮಿಕಲ್ ಸಂಗ್ರಹಿಸಿಟ್ಟುಕೊಂಡಿದ್ದ.‌ ಮುಂಬೈನಲ್ಲಿ ಸಿಕ್ಕಿದ್ದ ಆರೋಪಿಯು ನೀಡಿದ ಸುಳಿವಿನ ಮೇರೆಗೆ ಬೆಂಗಳೂರು ನಗರ ಪೊಲೀಸ್, ಮುಂಬೈ ಪೊಲೀಸ್, ಎನ್‌ಸಿಬಿ, ಸೋಕೋ ಟೀಮ್‌ನವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸರು ಏನು ಕ್ರಮ ಕೈಗೊಂಡಿಲ್ಲ‌ ಎಂಬ ಮಾತುಗಳು ಸರಿಯಲ್ಲ ಎಂದರು.

58 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾಹಿತಿ. ಪತ್ತೆಯಾಗಿರುವ ಡ್ರಗ್ಸ್ ಕೆಮಿಕಲ್ ಮೌಲ್ಯ 1 ಕೆಜಿಗೆ 30 ಲಕ್ಷ ರೂ. ಬೆಲೆಬಾಳುತ್ತದೆ. ಒಟ್ಟು 4 ಕೆಜಿಗೆ 1.20 ಕೋಟಿ ರೂ. ಮೌಲ್ಯವಾಗುತ್ತದೆ ಎಂದ ಅವರು, ಮೈಸೂರು ಘಟನೆಯ ಬಳಿಕ ಎಚ್ಚರಿಕೆಯಿಂದ‌ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಡ್ರಗ್ಸ್ ದಂಧೆಯ ವಿರುದ್ಧ ಅಕ್ಟೋಬರ್‌ನಿಂದ ಹೆಚ್ಚಿನ ರೀತಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮಾದಕ ಪದಾರ್ಥಗಳನ್ನು ಸಿದ್ಧಪಡಿಸಲು ಅಗತ್ಯವಿರುವ ಕಚ್ಚಾ ಪದಾರ್ಥಗಳು ಇಲ್ಲಿ ಆರೋಪಿಗಳ ಬಳಿ ಪತ್ತೆಯಾಗಿವೆ. ಒಟ್ಟಾರೆ ಸರಿಸುಮಾರು 1.20 ಕೋಟಿ ಮೌಲ್ಯದ ನಾಲ್ಕು ಕೆ.ಜಿ ಕಚ್ಚಾವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರು ತಿಂಗಳುಗಳಿಂದಲೂ ನಗರದಲ್ಲಿನ ಡ್ರಗ್ ಪೆಡ್ಲರ್‌ಗಳ ಮೇಲೆ ನಿಗಾವಹಿಸಲಾಗಿದೆ. ಅವರ ಸಂಪರ್ಕದಲ್ಲಿರುವವರ ಮೇಲೆಯೂ ಕ್ರಮ‌ ತೆಗೆದುಕೊಳ್ಳುತ್ತಿದ್ದೇವೆ ಎಂದರು.

ನಿನ್ನೆಯ ಘಟನೆಯ ಬಗ್ಗೆ ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ. ಅನೇಕ‌ ಸಂದರ್ಭಗಳಲ್ಲಿ ನಮ್ಮ ಪೊಲೀಸರು, ಇಲ್ಲಿ ಸಿಕ್ಕ ಆರೋಪಿಗಳು ನೀಡಿರುವ ಮಾಹಿತಿ ಆಧರಿಸಿ ಬೇರೆ ರಾಜ್ಯಗಳಲ್ಲಿ ಕಾರ್ಯಾಚರಣೆ ಕೈಗೊಂಡಿರುತ್ತೇವೆ. ಈಗಾಗಲೇ ಬೇರೆಬೇರೆ ಪ್ರಕರಣಗಳಲ್ಲಿ ನಾಲ್ಕು ಪೊಲೀಸರ ತಂಡಗಳು ಕಾಯುತ್ತಿವೆ‌. ಆಗ ಅಲ್ಲಿನ ಪೊಲೀಸರ ವೈಫಲ್ಯ ಎಂದು ಹೇಳಲಾಗುತ್ತಿದಯೇ? ಮೂರು ಕಡೆಗಳಲ್ಲಿ ಫ್ಯಾಕ್ಟರಿ ಇತ್ತು ಎಂಬುದು ಸುಳ್ಳು. ಕಾರ್ಯಾಚರಣೆ ವೇಳೆ ನಮ್ಮ ಡಿಸಿಪಿಯವರು ಮುಂಬೈ ಪೊಲೀಸರೊಂದಿಗೆ ಇದ್ದರು. ಡ್ರಗ್ಸ್ ದಂಧೆಯ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತವಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮುಂದೆ ಇಂತಹ ಘಟನೆ ಆಗಬಾರದು. ಡಿಸಿಪಿ ಆಗಲಿ, ಎಸಿಪಿ ಅಥವಾ ಸ್ಥಳೀಯ ಅಧಿಕಾರಿಗಳು ಯಾರೇ ಇರಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅಮಾನತು ಅಷ್ಟೇ ಅಲ್ಲದೇ ಬೇರೆ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.

ಇವುಗಳನ್ನೂ ಓದಿ:

Last Updated : December 28, 2025 at 6:00 PM IST