ಯಾರೋ ಖಾಸಗಿ ವ್ಯಕ್ತಿಗಳಿಂದ ಫೈರ್ ಆಗಿದ್ದು, ಬುಲೆಟ್ನ್ನು FSLಗೆ ಕಳುಹಿಸಿದ್ದಾರೆ: ಸಚಿವ ಪರಮೇಶ್ವರ್
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬಳ್ಳಾರಿ ಗಲಾಟೆ ವಿಚಾರದ ಕುರಿತು ಪ್ರತಿಕ್ರಿಯಿಸಿದ್ದಾರೆ.

Published : January 3, 2026 at 5:54 PM IST
ತುಮಕೂರು : ಬಳ್ಳಾರಿ ಗಲಾಟೆ ವಿಚಾರವಾಗಿ ಈಗಾಗಲೇ ನಾನು ಅಲ್ಲಿಗೆ ಲಾ ಅಂಡ್ ಆರ್ಡರ್ ಎಡಿಜಿಪಿ ಅವರನ್ನು ಕಳುಹಿಸಿದ್ದೇನೆ. ಈಗಲೂ ಅವರು ಸ್ಪಾಟ್ನಲ್ಲಿಯೇ ಇದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಫೈರ್ ಮಾಡಿದ ಬುಲೆಟ್ ಪೊಲೀಸರದ್ದು ಅಲ್ಲ ಅಂತ ತಿಳಿದುಬಂದಿದೆ. ಯಾವುದೇ ಪೊಲೀಸನವರ ಗನ್ಗಳಿಂದ ಫೈರ್ ಆಗಿಲ್ಲ. ಮೃತನ ದೇಹಕ್ಕೆ ಹೊಕ್ಕ ಬುಲೆಟ್ ಸಂಗ್ರಹ ಮಾಡಿ ಪರಿಶೀಲನೆ ನಡೆಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, 'ಅದು ರೆಗ್ಯುಲರ್ ಪೊಲೀಸ್ ಬುಲೆಟ್ಗೆ ಮ್ಯಾಚ್ ಆಗ್ತಿಲ್ಲ. ಯಾರೋ ಖಾಸಗಿ ವ್ಯಕ್ತಿಗಳಿಂದ ಫೈರ್ ಆಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆ ಬುಲೆಟ್ ಅನ್ನ ಈಗ FSLಗೆ ಕಳುಹಿಸಿದ್ದಾರೆ. ಅಲ್ಲಿದ್ದಂತಹ ಎಲ್ಲಾ ರಿವಾಲ್ವಾರ್ ಅಥವಾ ಗನ್ಗಳನ್ನು ಸೀಜ್ ಮಾಡಿದ್ದಾರೆ. ಪರಿಶೀಲನೆ ಬಳಿಕ ಯಾರ ಬುಲೆಟ್ ಎಂದು ಗೊತ್ತಾಗಲಿದೆ. FSL ಎಕ್ಸ್ಫರ್ಟ್ಗಳು ಅದನ್ನು ಪತ್ತೆ ಹಚ್ಚುತ್ತಾರೆ. ಈಗ ಎರಡು ಕಡೆಯಿಂದಲೂ ದೂರು, ಪ್ರತಿದೂರು ಕೊಟ್ಟಿದ್ದಾರೆ' ಎಂದರು.
ಆ ದೂರು ಪಡೆದು ಎರಡು ಕಡೆ ಎಫ್ಐಆರ್ ದಾಖಲಾಗಿವೆ. ನೂರಾರು ಜನರ ಹೆಸರನ್ನು ದೂರಿನಲ್ಲಿ ಕೊಟ್ಟಿದ್ದಾರೆ. ಒಬ್ಬೊಬ್ಬರನ್ನು ತನಿಖೆ ಮಾಡಲಾಗ್ತಿದೆ. ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕು ಅಂತ ಸಿಎಂ ಸೂಚನೆ ಕೊಟ್ಟಿದ್ದಾರೆ. ನಾನು ಕೂಡಾ ನಮ್ಮ ಅಧಿಕಾರಿಗಳಿಗೆ ಹೇಳಿದ್ದೇನೆ. ಈ ಮಧ್ಯೆ ರಾಜಕೀಯ ಮುಖಂಡರುಗಳು ಅಲ್ಲಿಗೆ ಹೋಗಿ ಹೇಳಿಕೆಗಳನ್ನು ಕೊಡ್ತಿದ್ದಾರೆ. ನಮಗೆ ರಾಜಕೀಯ ಮುಖಂಡರ ಹೇಳಿಕೆಗಿಂತ ಅಲ್ಲಿ ನಡೆದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಿ ಅದನ್ನು ಹೊರಗೆ ತರುತ್ತೇವೆ ಎಂದು ಹೇಳಿದ್ದಾರೆ.
ರಾಜಕೀಯ ಮುಖಂಡರುಗಳು ಅನಾವಶ್ಯಕವಾಗಿ ಹೇಳಿಕೆ ನೀಡಿದರೆ ಅದರಿಂದ ಯಾವುದೇ ಪ್ರಯೋಜನ ಆಗೋದಿಲ್ಲ. ಪ್ರಚೋದನಕಾರಿ ಹೇಳಿಕೆಗಳನ್ನು ಕೊಟ್ಟರೆ ಅಂತವರ ವಿರುದ್ಧ ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳಲು ಅವಕಾಶ ಇದೆಯೋ ಅದರಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಹಾಗಂತ ಅದು ನಿರ್ಬಂಧ ಅಂತ ಅಲ್ಲ. ಪ್ರಚೋದನಕಾರಿ ಹೇಳಿಕೆ ಕೊಟ್ರೆ ಅದಕ್ಕೆ ನಾವು ಕಾನೂನು ಚೌಕಟ್ಟಿನಲ್ಲಿ ಏನ್ ಮಾಡಬೇಕು ಅದನ್ನು ಮಾಡ್ತಿವಿ. ಇದು ಸಣ್ಣದಾಗಿ ಆರಂಭವಾಗಿ ದೊಡ್ಡದಾಗಿ ತಲುಪಿದೆ. ಇದು ರೆಗ್ಯುಲೇಟ್ ಮಾಡಲು ಏನ್ ಬೇಕು ಅದನ್ನು ಮಾಡ್ತಿವಿ ಎಂದಿದ್ದಾರೆ.
ವರದಿ ಬಂದ ಮೇಲೆ ನಾನು ಡಿಸೈಡ್ ಮಾಡ್ತಿನಿ : ಬಳ್ಳಾರಿಗೆ ನೀವು ಭೇಟಿ ಕೊಡ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ವರದಿ ಬಂದ ಮೇಲೆ ನಾನು ಡಿಸೈಡ್ ಮಾಡ್ತಿನಿ. ಹೋಗಬೇಕೋ ಬೇಡವೋ ಅನ್ನೊದನ್ನು ತೀರ್ಮಾನ ಮಾಡ್ತಿನಿ. ನನ್ನ ಅವಶ್ಯಕತೆ ಇದ್ರೆ ಹೋಗಿ ರಿವ್ಯೂವ್ ಮಾಡಿ ಏನೇನು ಕ್ರಮ ತೆಗೆದುಕೊಳ್ಳಬೇಕು ಮಾಡ್ತಿನಿ. ವರದಿ ಬರೋವರೆಗೂ ಅಲ್ಲಿಗೆ ಭೇಟಿ ಕೊಡುವ ಯೋಚನೆ ಮಾಡಲ್ಲ' ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಎಸ್‌ಪಿ ಸಸ್ಪೆಂಡ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ಎಸ್‌ಪಿ ಅವರು ಆ ಸ್ಪಾಟ್ನಲ್ಲಿ ಇದ್ದು, ಡೈರೆಕ್ಷನ್ ಕೊಟ್ಟು, ಅದನ್ನೆಲ್ಲ ಕಂಟ್ರೋಲ್ ಮಾಡಬೇಕಿತ್ತು. ಅದನ್ನು ಅವರು ಮಾಡಿಲ್ಲ. ಅದಕ್ಕಾಗಿ ಅವರನ್ನ ಸಸ್ಪೆಂಡ್ ಮಾಡಿದ್ದೇವೆ. ಯಾವಾಗಲಾದರೂ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಲಿ, ಡ್ಯೂಟಿ ಡ್ಯೂಟಿನೇ ಅಲ್ವ. ಅವರೇನು ಪೊಲೀಸ್ ಇಲಾಖೆಗೆ ಹೊಸಬರಲ್ಲವಲ್ಲ. ಒಬ್ಬ ಎಸ್‌ಪಿ ಆದವರು ಚಾರ್ಜ್ ತೆಗೆದುಕೊಂಡು ಹೋದ ಬಳಿಕ ಕೆಲಸದ ಪ್ರವೃತ್ತಿ ಆಗಬೇಕು. ಚಾರ್ಜ್ ತೆಗೆದುಕೊಂಡ ತಕ್ಷಣ ಅವರಿಗೆ ಚಾಲೆಂಜಸ್ ಬಂದೇ ಬರುತ್ತವೆ. ಅದನ್ನು ಅವರು ಕಂಟ್ರೋಲ್ ಮಾಡಬೇಕಿತ್ತು, ಅವರು ಮಾಡಿಲ್ಲ. ಹಾಗಾಗಿ, ಅವರನ್ನ ಸಸ್ಪೆಂಡ್ ಮಾಡಿದ್ದೇವೆ' ಎಂದು ಸ್ಪಷ್ಟನೆ ನೀಡಿದರು.
ಇಂತಹ ಚಾಲೆಂಜಸ್ ಬಂದೇ ಬರುತ್ತೆ : 'ಸೋಷಿಯಲ್ ಮೀಡಿಯಾದಲ್ಲಿ ಅದರ ಬಗ್ಗೆ ಏನೇ ಚರ್ಚೆ ಆಗಲಿ. ಎಸ್‌ಪಿ ಅವರೇನು ಪೊಲೀಸ್ ಇಲಾಖೆಗೆ ಹೊಸಬರಲ್ಲ.ಈ ಊರಲ್ಲಿ ಕೆಲಸ ಮಾಡೋದು, ಇನ್ನೊಂದು ಊರಲ್ಲಿ ಕೆಲಸ ಮಾಡ್ತಾರೆ ಅಷ್ಟೇ. ಘಟನೆ ಆದಾಗ ಆ ಘಟನೆಯನ್ನ ಹೇಗೆ ಹ್ಯಾಂಡಲ್ ಮಾಡೋದು ಗೊತ್ತಿದೆ ಅಲ್ವಾ. ಇಂತಹ ಸನ್ನಿವೇಶವನ್ನ ಹೇಗೆ ಹ್ಯಾಂಡಲ್ ಮಾಡಬೇಕು ಅನ್ನೋದು ಗೊತ್ತಿಗೆ ಅಲ್ವಾ. ಅವರೆಲ್ಲಾ ಟ್ರೈನ್ಡ್ ಪೀಪಲ್. ಅವರಿಗೆ ಐಪಿಎಸ್ನಲ್ಲಿ ಇಂತಹ ವಿಚಾರಕ್ಕೆ ಟ್ರೈನಿಂಗ್ ಕೊಟ್ಟಿರ್ತಾರೆ. ಮತ್ತೆ ಫೀಲ್ಡ್ ನಲ್ಲಿ ಅವರಿಗೆ ಇಷ್ಟು ವರ್ಷ ಅನುಭವ ಆಗಿದೆ. ಒಂದು ಜಿಲ್ಲೆಗೆ ಒಬ್ಬ ಪೊಲೀಸ್ ವರಿಷ್ಠಾಧಿಕಾರಿಯನ್ನು ನೇಮಕ ಮಾಡಬೇಕಾದರೆ ಇದನ್ನೆಲ್ಲ ನಾವು ಯೋಚನೆ ಮಾಡಿಯೇ ಮಾಡಿರುತ್ತೇವೆ' ಎಂದು ತಿಳಿಸಿದ್ದಾರೆ.
'ಒಮ್ಮೆ ಡ್ಯೂಟಿಗೆ ಜಾಯಿನ್ ಆಗಿ ಚಾರ್ಜ್ ತೆಗೆದುಕೊಂಡ ಬಳಿಕ ಇಂತಹ ಚಾಲೆಂಜಸ್ ಬಂದೇ ಬರುತ್ತವೆ. ಮೊದಲ ದಿನವೇ ಈ ಸವಾಲನ್ನು ನೀವು ಎದುರಿಸಬೇಕಿತ್ತು. ಘಟನೆಯಲ್ಲಿ ಕಲ್ಲು ಹೊಡೆದ್ರು. ಕಲ್ಲು ಹೊಡೆದ ತಕ್ಷಣವೇ ಅಲ್ಲಿಗೆ ಹೋಗಿ, ಎರಡು ಗುಂಪನ್ನ ಚದುರಿಸಿ, ನೀವು ಏನೇನು ಮಾಡಬೇಕಿತ್ತು ಮಾಡಿದ್ರೆ. ಘಟನೆ ಫೈರಿಂಗ್ ಮಾಡುವ ಹಂತಕ್ಕೆ ಹೋಗ್ತಿರಲಿಲ್ಲ. ಸತ್ಯಾಸತ್ಯತೆ ಏನಿದೆ ಆಮೇಲೆ ಗೊತ್ತಾಗುತ್ತೆ. ಪೊಲೀಸರು ಜಾಗೃತಿ ವಹಿಸಿದ್ರೆ ಇದು ಆಗ್ತಿರಲಿಲ್ಲ ಅನ್ನೊದಿಲ್ವ ನಾವು. ಹಾಗಾಗಿ, ಎಸ್‌ಪಿ ಕೂಡಲೇ ಆಕ್ಷನ್ ತಗೊಂಡು ಕಂಟ್ರೋಲ್ ಮಾಡಬೇಕಿತ್ತು. ಆದರೆ ಅವರು ಮಾಡಿಲ್ಲ. ಅದಕ್ಕೋಸ್ಕರ ನಾವು ಸಸ್ಪೆಂಡ್ ಮಾಡಿದ್ದೇವೆ. ಅವರ ಜಾಗದಲ್ಲಿ ಚಿತ್ರದುರ್ಗ ಎಸ್ಪಿಗೆ ಚಾರ್ಜ್ ಹಾಕಿದ್ದೇವೆ. ಅವರು ಮೊದಲು ಅಲ್ಲಿಯೇ ಇದ್ರು. ದಾವಣಗೆರೆ ಐಜಿ ಅಲ್ಲಿಯೇ ಇದ್ದಾರೆ. ಕೂಡಲೇ ಒಳ್ಳೆಯ ಅನುಭವವುಳ್ಳ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡ್ತಿವಿ' ಎಂದಿದ್ದಾರೆ.
'ಪೊಲೀಸರು ಫೈರ್ ಮಾಡಿಲ್ವ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಜಿ ಪರಮೇಶ್ವರ್, ತನಿಖೆ ಆದ ಮೇಲೆ ಎಲ್ಲ ಹೇಳಬಹುದು. ಪ್ರಾಥಮಿಕ ವರದಿ ಪ್ರಕಾರ ಬುಲೆಟ್ ಪೊಲೀಸರದ್ದು ಅಲ್ಲ ಅಂತ ಡಿಐಜಿ ಹೇಳಿದ್ದಾರೆ. ಹಾಗಾಗಿ, ಅದು ಒಂದು ಮಾಹಿತಿ. ಅದರ ಜೊತೆಗೆ ಪ್ರೈವೇಟ್ನವರದ್ದು ಎಲ್ಲಾ ಪಿಸ್ತೂಲ್ಗಳನ್ನ ಸೀಜ್ ಮಾಡಿದ್ದೇವೆ. ಯಾರೆಲ್ಲಾ ಇದ್ರು ಅವರೆಲ್ಲರಿಂದ ಸ್ಟೇಟ್ಮೆಂಟ್ ತಗೊಂಡಿದ್ದಾರೆ, ತನಿಖೆ ನಡೆಯುತ್ತಿದೆ' ಎಂದು ಹೇಳಿದ್ದಾರೆ.
ಎಸ್‌ಪಿ ಆರೋಗ್ಯವಾಗಿದ್ದಾರೆ : ಅಮಾನತುಗೊಂಡಿರುವ ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರು ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ. ಬಳ್ಳಾರಿಯಿಂದ ಬೆಂಗಳೂರಿನ ಕಡೆ ಹೋಗುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.
ಅವರು ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಅವರು ಡಿಪ್ರೆಶನ್ಗೆ ಹೋಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಅವರು ನಿದ್ರೆ ಮಾತ್ರೆ ತೆಗೆದುಕೊಂಡಿದ್ದಾರೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ, ಆ ಕುರಿತು ನಾನು ವಿಚಾರಿಸಿ ಹೇಳುತ್ತೇನೆ. ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ : ಇಡೀ ಪಕ್ಷ ನಮ್ಮ ಶಾಸಕ ಭರತ್ ರೆಡ್ಡಿ ಬೆನ್ನಿಗೆ ಇದೆ, ತನಿಖೆಯಿಂದ ಸತ್ಯ ಹೊರಬರಲಿದೆ: ಡಿ.ಕೆ. ಶಿವಕುಮಾರ್

