ETV Bharat / state

3 ವರ್ಷದಲ್ಲಿ 9,639 ಮಕ್ಕಳ ಅಪಹರಣ: ಶೇ.71.50ರಷ್ಟು ಬಾಲಕಿಯರು; ಬೆಂಗಳೂರಲ್ಲಿ ಹೆಚ್ಚು ಪ್ರಕರಣ

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ವರದಿಯಾದ ಮಕ್ಕಳ ಅಪಹರಣ ಪ್ರಕರಣಗಳ ಅಂಕಿಅಂಶಗಳು ಕಳವಳಕಾರಿಯಾಗಿವೆ.

home-department-statistics-says-9639-children-kidnapped-in-karnataka-in-last-three-years
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : December 14, 2025 at 3:28 PM IST

3 Min Read
Choose ETV Bharat

ಬೆಂಗಳೂರು: ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ಮಕ್ಕಳ ಅಪಹರಣ ಪ್ರಕರಣಗಳು ರಾಜ್ಯವನ್ನು ಕಂಗೆಡಿಸುವಂತೆ ಮಾಡಿದೆ. ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯತೆ ಕಂಡು ಬರುತ್ತಿದೆ.

ಮಕ್ಕಳ ಅಪಹರಣ ಪ್ರಕರಣಗಳಿಗೆ ಕೇವಲ ಪೊಲೀಸರ ಮೇಲೆ ಬೊಟ್ಟು ಮಾಡುವ ಹಾಗಿಲ್ಲ‌. ಇದರಲ್ಲಿ ಪೋಷಕರ ಪಾತ್ರವೂ ಅತಿ ಹೆಚ್ಚಿದೆ. ಮಕ್ಕಳನ್ನು ನಿಗಾ ವಹಿಸಿ, ಜಾಗರೂಕತೆಯಿಂದ ನೋಡಿಕೊಳ್ಳಬೇಕು. ರಾಜ್ಯದ ಪ್ರತಿ ಪೊಲೀಸ್ ಠಾಣೆಯಲ್ಲಿ ವಿಶೇಷ ಬಾಲ ಪೊಲೀಸ್ ಘಟಕ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಇರುತ್ತಾರೆ. ಆದರೆ, ಅಪಹರಣವಾದ ಅಥವಾ ನಾಪತ್ತೆಯಾಗಿರುವ ಮಕ್ಕಳನ್ನು ಶೋಧಿಸುವ ಕೆಲಸ ಕೇವಲ ಪೊಲೀಸರದ್ದು ಮಾತ್ರವಲ್ಲ, ಸಮುದಾಯ, ಪೋಷಕರು ಇದಕ್ಕೆ ಹೆಚ್ಚಿನ ಸಹಕಾರ ನೀಡುವ ಅವಶ್ಯಕತೆ ಇದೆ.

9,639 ಮಕ್ಕಳ ಅಪಹರಣ: ಕಳೆದ ಮೂರು ವರ್ಷಗಳಲ್ಲಿ, 2023, 2024 ಹಾಗೂ 2025ರ ನವೆಂಬರ್ 15ರ ವರೆಗೆ ರಾಜ್ಯದಲ್ಲಿ ಒಟ್ಟು 9,639 ಮಕ್ಕಳು ಅಪಹರಣಕ್ಕೊಳಗಾಗಿರುವ ವರದಿಯಾಗಿದೆ ಎಂದು ಗೃಹ ಇಲಾಖೆ ಅಂಕಿ-ಅಂಶ ನೀಡಿದೆ. 2023ರಲ್ಲಿ ರಾಜ್ಯದಲ್ಲಿ 3,039 ಮಕ್ಕಳು, 2024ರಲ್ಲಿ 3,411 ಮಕ್ಕಳು ಹಾಗೂ 2025ರಲ್ಲಿ ಇದುವರೆಗೆ 3,189 ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ.

6,891 ಬಾಲಕಿಯರ ಅಪಹರಣ: ಮೂರು ವರ್ಷ ವರದಿಯಾಗಿರುವ ಅಪಹರಣ, ನಾಪತ್ತೆಯಾದ ಒಟ್ಟು ಮಕ್ಕಳಲ್ಲಿ ಹೆಣ್ಣುಮಕ್ಕಳ ಪ್ರಮಾಣವೇ ಹೆಚ್ಚಿರುವುದು ಆಘಾತಕಾರಿ ವಿಚಾರವಾಗಿದೆ. ಈ ಅವಧಿಯಲ್ಲಿ ಸುಮಾರು 6,891 ಬಾಲಕಿಯರು ಅಪಹರಣ, ನಾಪತ್ತೆಯಾಗಿದ್ದಾರೆ. ಅಂದರೆ ಒಟ್ಟಾರೆ ಮಕ್ಕಳ ಅಪಹರಣದಲ್ಲಿ 71.50%ರಷ್ಟು ಬಾಲಕಿಯರಿದ್ದಾರೆ. ಅಲ್ಲದೆ, ಒಟ್ಟು 2,748 ಗಂಡು ಮಕ್ಳಳು ಕಣ್ಮರೆ, ಅಪಹರಣಗೊಂಡಿದ್ದಾರೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

ವರ್ಷವಾರು ಮಕ್ಕಳ ಅಪಹರಣ ಹೀಗಿದೆ: 2023ರಲ್ಲಿ ಒಟ್ಟು 3,039 ಮಕ್ಕಳು ಅಪಹರಣಕ್ಕೀಡಾಗಿದ್ದಾರೆ. ಈ ಪೈಕಿ 2,131 ಹೆಣ್ಣು ಮಕ್ಳಳು ಹಾಗೂ 903 ಗಂಡು ಮಕ್ಕಳಿದ್ದಾರೆ. 2024ರಲ್ಲಿ ಒಟ್ಟು 3,411 ಮಕ್ಕಳು ನಾಪತ್ತೆ, ಅಪಹರಣಕ್ಕೀಡಾಗಿದ್ದಾರೆ. ಅವರಲ್ಲಿ 2,436 ಹೆಣ್ಣು ಮಕ್ಳಳು ಮತ್ತು 975 ಗಂಡು ಮಕ್ಕಳಿದ್ದಾರೆ. 2025ರ ನವೆಂಬರ್ 15ರ ವರೆಗೆ ರಾಜ್ಯದಲ್ಲಿ ಒಟ್ಟು 3,189 ಮಕ್ಕಳ ಅಪಹರಣವಾಗಿದೆ. ಇದರಲ್ಲಿ 2,324 ಹೆಣ್ಣು ಮಕ್ಕಳು ಹಾಗೂ 865 ಗಂಡು ಮಕ್ಕಳ ಅಪಹರಣ ಮಾಡಲಾಗಿದೆ.

ಪತ್ತೆಯಾದ, ಪತ್ತೆಯಾಗದ ಪ್ರಕರಣಗಳು: ಮಾಹಿತಿ ಪ್ರಕಾರ, 2023ರಲ್ಲಿ ಅಪಹರಣವಾದ 908 ಬಾಲಕರ ಪೈಕಿ, 873 ಬಾಕಲರು ಪತ್ತೆಯಾಗಿದ್ದು, 35 ಪ್ರಕರಣಗಳಲ್ಲಿ ಪತ್ತೆಯಾಗದೆ ಬಾಕಿ ಉಳಿದುಕೊಂಡಿವೆ. ಒಟ್ಟು 2,131 ಬಾಲಕಿಯರ ಅಪಹರಣ ಕೇಸುಗಳ ಪೈಕಿ, 2,089 ಪತ್ತೆಯಾಗಿದ್ದರೆ, 42 ಇನ್ನೂ ಪತ್ತೆಯಾಗಿಲ್ಲ.

2024ರಲ್ಲಿ ಒಟ್ಟು 975 ಗಂಡು ಮಕ್ಕಳ ಅಪಹರಣಗಳ ಪೈಕಿ 930 ಪತ್ತೆಯಾಗಿದ್ದರೆ, 45 ಬಾಲಕರು ಇನ್ನೂ ಪತ್ತೆಯಾಗಿಲ್ಲ. ಅದೇ ರೀತಿ ಒಟ್ಟು 2,436 ಹೆಣ್ಣು ಮಕ್ಕಳ ಅಪಹರಣ ಪೈಕಿ, 2,336 ಪತ್ತೆಯಾಗಿದ್ದು, 100 ಬಾಲಕಿಯರು ಇನ್ನೂ ಕಂಡುಬಂದಿಲ್ಲ.

2025ರ ನವೆಂಬರ್ 15ರವರೆಗೆ ಒಟ್ಟು 865 ಅಪಹರಣವಾದ ಬಾಲಕರ ಪೈಕಿ 676 ಪತ್ತೆಯಾಗಿದ್ದರೆ, 189 ಬಾಲಕರು ಇನ್ನೂ ಪತ್ತೆಯಾಗಿಲ್ಲ. ಇತ್ತ ಅಪಹರಣವಾದ ಒಟ್ಟು 2,324 ಹೆಣ್ಣು ಮಕ್ಕಳ ಪೈಕಿ 1,641 ಪತ್ತೆಯಾಗಿದ್ದರೆ, 683 ಬಾಲಕಿಯರು ಇನ್ನೂ ಪತ್ತೆಯಾಗಿಲ್ಲ ಎಂಬ ಆತಂಕಕಾರಿ ಅಂಕಿ-ಅಂಶವನ್ನು ಪೊಲೀಸ್ ಇಲಾಖೆ ನೀಡಿದೆ.

ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಕಿಡ್ನಾಪ್: ಬೆಂಗಳೂರು ನಗರ ಮಕ್ಕಳ ಅಪಹರಣಗಳಲ್ಲಿ ಅಗ್ರಸ್ಥಾನಿ ಎಂಬ ಕುಖ್ಯಾತಿ ಪಡೆದಿದೆ. ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ಸುಮಾರು 3,268 ಮಕ್ಕಳ ಅಪಹರಣವಾಗಿದೆ. ಈ ಪೈಕಿ ಹೆಣ್ಣು ಮಕ್ಕಳ ಅಪಹರಣ ಸಂಖ್ಯೆ 2,290. ರಾಜ್ಯದಲ್ಲಿ ಮೂರು ವರ್ಷಗಳಲ್ಲಿ ವರದಿಯಾಗಿರುವ ಮಕ್ಕಳ ಅಪಹರಣದ ಪೈಕಿ ಸುಮಾರು 24%ರಷ್ಟು ಬೆಂಗಳೂರಿನಲ್ಲೇ ನಡೆದಿದೆ.

ಬೆಂಗಳೂರು ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಒಟ್ಟು 694 ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 493 ಬಾಲಕಿಯರು ಸೇರಿದ್ದಾರೆ. ಉಳಿದಂತೆ, ತುಮಕೂರು ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಒಟ್ಟು 450 ಮಕ್ಕಳ ಅಪಹರಣಗಳು ವರದಿಯಾಗಿವೆ. ಈ ಪೈಕಿ, 361 ಬಾಲಕಿಯರು ಕಿಡ್ನಾಪ್, ನಾಪತ್ತೆಯಾಗಿದ್ದಾರೆ. ರಾಮನಗರ ಜಿಲ್ಲೆ (ಬೆಂಗಳೂರು ದಕ್ಷಿಣ) ಯಲ್ಲಿ ಒಟ್ಟು 305 ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 226 ಹೆಣ್ಣು ಮಕ್ಕಳಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಒಟ್ಟು 301 ಮಕ್ಕಳ ಕಿಡ್ನಾಪ್ ಆಗಿದ್ದು, ಇದರಲ್ಲಿ 212 ಬಾಲಕಿಯರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 297 ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 216 ಹೆಣ್ಣು ಮಕ್ಕಳ ಕಿಡ್ನಾಪ್ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಒಟ್ಟು 283 ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 186 ಬಾಲಕಿಯಾಗಿದ್ದಾರೆ. ಹಾಸನದಲ್ಲಿ ಒಟ್ಟು 264 ಮಕ್ಕಳ ಅಪಹರಣ ವರದಿಯಾಗಿದ್ದು, ಈ ಪೈಕಿ 192 ಹೆಣ್ಣು ಮಕ್ಕಳ ಅಪಹರಣ ಕೇಸ್​ಗಳಾಗಿದೆ. ಚಿತ್ರದುರ್ಗದಲ್ಲಿ ಒಟ್ಟು 244 ಮಕ್ಕಳ ಕಿಡ್ನಾಪ್ ಆಗಿದ್ದು, ಈ ಪೈಕಿ 192 ಬಾಲಕಿಯರ ಅಪಹರಣ ವರದಿಯಾಗಿದೆ.

ಇದನ್ನೂ ಓದಿ: ಏರ್ ಗನ್​ನಿಂದ ಅಚಾನಕ್ಕಾಗಿ ಉದ್ಯಮಿಗೆ ಗುಂಡು ತಗುಲಿದ ಪ್ರಕರಣ: ಕಾನೂನು ವಿದ್ಯಾರ್ಥಿ ಬಂಧನ