ETV Bharat / state

ಉತ್ತರ ಕನ್ನಡದಲ್ಲಿ ಭಾರಿ ಮಳೆ: ರಸ್ತೆ ಕುಸಿತ, ಮರ ಬಿದ್ದು ಸಂಚಾರ ವ್ಯತ್ಯಯ; ಶಾಲೆಗಳಿಗೆ ರಜೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಐದು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

holiday-declared-for-schools-in-five-taluks-of-uttara-kannada-district
ಯಲ್ಲಾಪುರ-ಹಳಿಯಾಳ ರಸ್ತೆಯಲ್ಲಿ ಮರ ಬಿದ್ದಿರುವುದು (ಎಡಬದಿ) ರಾಮನಗರದಲ್ಲಿ ರಸ್ತೆ ಕುಸಿದಿರುವುದು (ಬಲಬದಿ) (ETV Bharat)
author img

By ETV Bharat Karnataka Team

Published : July 7, 2026 at 9:37 AM IST

2 Min Read
Choose ETV Bharat

ಕಾರವಾರ (ಉತ್ತರ ಕನ್ನಡ): ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಮುಂದಿನ ಎರಡು ದಿನಗಳ ಕಾಲ ಬಲವಾದ ಗಾಳಿಯೊಂದಿಗೆ ನಿರಂತರವಾಗಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಜಿಲ್ಲಾಡಳಿತ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಶಾಲೆ, ಅಂಗನವಾಡಿಗಳಿಗೆ ರಜೆ ಘೋಷಣೆ : ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಐದು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಕುಸಿತ ಉಂಟಾಗಿದೆ (ETV Bharat)

​ಯಾವೆಲ್ಲಾ ತಾಲೂಕುಗಳಿಗೆ ರಜೆ? : ಭಾರತೀಯ ಹವಾಮಾನ ಇಲಾಖೆ (IMD) ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿರುವ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ​ಶಿರಸಿ, ​ಸಿದ್ದಾಪುರ, ಯಲ್ಲಾಪುರ, ​ಜೋಯಿಡಾ, ​ದಾಂಡೇಲಿ ಶಾಲೆ ಅಂಗನವಾಡಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಜುಲೈ 6 ರಿಂದ ಮುಂದಿನ ಎರಡು ದಿನಗಳ ಕಾಲ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಹಾಗೂ ಯಾವುದೇ ಅನಾಹುತಗಳು ಸಂಭವಿಸದಂತೆ ತಡೆಯಲು ಈ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜುಲೈ 7 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಜೋಯಿಡಾ: ರಾಮನಗರದಲ್ಲಿ ರಸ್ತೆ ಕುಸಿತ, ಕಾರು ಜಖಂ : ಜೋಯಿಡಾ ತಾಲೂಕಿನ ರಾಮನಗರದ ಗಣೇಶ್ ಗಲ್ಲಿಗೆ ಹೋಗುವ ಮುಖ್ಯ ರಸ್ತೆ ಮಳೆಯ ಅಬ್ಬರಕ್ಕೆ ಮತ್ತೆ ಕುಸಿದಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ರಸ್ತೆ ಕುಸಿದ ಭಾಗದಲ್ಲಿ ಸಂಚರಿಸುತ್ತಿದ್ದ ಕಾರೊಂದು ಸಿಲುಕಿಕೊಂಡು ಜಖಂಗೊಂಡ ಘಟನೆ ನಡೆದಿದೆ.

ಕಳೆದ ಮೂರು ವರ್ಷಗಳಿಂದಲೂ ಮಳೆಗಾಲದಲ್ಲಿ ಇದೇ ಸಮಸ್ಯೆ ಮರುಕಳಿಸುತ್ತಿದೆ. ಕಳೆದ ವರ್ಷ ಇಲ್ಲಿ ಟ್ರ್ಯಾಕ್ಟರ್ ಹಾಗೂ ಅದಕ್ಕೂ ಮುನ್ನ ಟಿಪ್ಪರ್ ಸಿಲುಕಿಕೊಂಡಿದ್ದವು. ಈ ಮಾರ್ಗದಲ್ಲಿ ಶಾಲಾ ಮಕ್ಕಳ ಬಸ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಹಲವಾರು ಬಾರಿ ದೂರು ನೀಡಿದರೂ ಅಧಿಕಾರಿಗಳು ಕೇವಲ ತಾತ್ಕಾಲಿಕ ದುರಸ್ತಿ ಮಾಡುತ್ತಿದ್ದಾರೆಯೇ ಹೊರತು, ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದೊಡ್ಡ ಅನಾಹುತವಾಗುವ ಮುನ್ನ ಕಾಮಗಾರಿ ನಡೆಸಲು ಒತ್ತಾಯಿಸಿದ್ದಾರೆ. ರಾತ್ರಿ ವೇಳೆ ವಾಹನ ಸವಾರರಿಗೆ ಅಪಾಯ ತಪ್ಪಿಸಲು ಸ್ಥಳೀಯ ನಿವಾಸಿಯಾದ ದೀಪಕ್ ದುಗಾಣೆ ಎಂಬುವವರು ಕುಸಿದ ಜಾಗದಲ್ಲಿ ಕಡ್ಡಿಗಳನ್ನು ನೆಟ್ಟು ತಾತ್ಕಾಲಿಕ ಎಚ್ಚರಿಕೆ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಯಲ್ಲಾಪುರ-ಹಳಿಯಾಳ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಬಂದ್ : ಮಳೆಯೊಂದಿಗೆ ಬೀಸುತ್ತಿರುವ ಬಿರುಗಾಳಿಗೆ ಯಲ್ಲಾಪುರದಿಂದ ಹಳಿಯಾಳಕ್ಕೆ ಸಾಗುವ ಕಣ್ಣಿಗೇರಿ ಬಳಿ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ಇದರಿಂದಾಗಿ ಯಲ್ಲಾಪುರ-ಹಳಿಯಾಳ ಮಾರ್ಗದಲ್ಲಿ ಸುಮಾರು ಒಂದರಿಂದ ಎರಡು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಮರವನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಜಾಗರೂಕರಾಗಿರಲು ಮತ್ತು ತುರ್ತು ಕೆಲಸಗಳಿಲ್ಲದಿದ್ದರೆ ಪ್ರಯಾಣವನ್ನು ಮುಂದೂಡಲು ಕೋರಲಾಗಿದೆ.

ಇದನ್ನೂ ಓದಿ : ಶಿವಮೊಗ್ಗ ಜಿಲ್ಲೆಯಲ್ಲಿ ವರುಣನ ಅಬ್ಬರ: ಮೂರು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಇಂದು ರಜೆ