ETV Bharat / state

ಮುಂದುವರಿದ ಮಳೆ ಬೆಳಗಾವಿ, ಖಾನಾಪುರ ಮತ್ತು ನಿಪ್ಪಾಣಿ ತಾಲೂಕಿನ ಶಾಲೆಗಳಿಗೆ ನಾಳೆಯೂ ರಜೆ ಘೋಷಣೆ

ಮಳೆ ಮುಂದುವರಿದ ಹಿನ್ನೆಲೆ ಬೆಳಗಾವಿ, ಖಾನಾಪುರ ಮತ್ತು ನಿಪ್ಪಾಣಿ ತಾಲೂಕಿನ ಶಾಲೆಗಳಿಗೆ ನಾಳೆಯೂ ರಜೆ ಘೋಷಣೆ ಮಾಡಲಾಗಿದೆ.

Holiday declared for schools in Belagavi,  Khanapur and Nippani taluk tomorrow due to continued rain
ಗಾಳಿ-ಮಳೆಗೆ ಧರೆಗುರುಳಿದ ಮರ (ETV Bharat)
author img

By ETV Bharat Karnataka Team

Published : July 7, 2026 at 8:20 PM IST

2 Min Read
Choose ETV Bharat

ಬೆಳಗಾವಿ: ನಿರಂತರವಾಗಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ನಾಳೆ ಬೆಳಗಾವಿ, ಖಾನಾಪುರ ಹಾಗೂ ನಿಪ್ಪಾಣಿ ತಾಲೂಕಿನ ಶಾಲೆಗಳಿಗೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ರಜೆ ಘೋಷಿಸಿದ್ದಾರೆ.

ನಿಪ್ಪಾಣಿ, ಖಾನಾಪುರ ತಾಲೂಕುಗಳ ಮತ್ತು ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿನ ಎಲ್ಲ ಅಂಗನವಾಡಿ ಕೇಂದ್ರಗಳು/ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪಿಯುಸಿ ಮತ್ತು ಸಮವರ್ತಿತ ಕಾಲೇಜುಗಳಿಗೆ ಬುಧವಾರ ರಜೆಯನ್ನು ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Holiday declared for schools in Belagavi,  Khanapur and Nippani taluk tomorrow due to continued rain
ಗಾಳಿ-ಮಳೆಗೆ ಧರೆಗುರುಳಿದ ಮರ (ETV Bharat)

ಮಂಗಳವಾರವೂ ಬೆಳಗಾವಿ, ಖಾನಾಪುರ, ನಿಪ್ಪಾಣಿ ಸೇರಿದಂತೆ ವಿವಿಧೆಡೆ ನಿರಂತರ ಮಳೆ ಆಗಿದೆ. ಜನರು ಮನೆಬಿಟ್ಟು ಹೊರಗೆ ಬಾರದಂತೆ ಧೋ ಎಂದು ಮಳೆ ಬೀಳುತ್ತಿದೆ. ಮಳೆ ಜೊತೆಗೆ ಗಾಳಿಯೂ ಬೀಸುತ್ತಿರುವುದರಿಂದ ಮರಗಳು ಬೀಳುತ್ತಿವೆ. ನಗರದ ಪ್ರೆಸ್ ಕಾಲೋನಿ, ಓಂಕಾರ ನಗರ, ಭಾಗ್ಯನಗರ ಸೇರಿ ವಿವಿಧ ಕಡೆ ಮರಗಳು ಬಿದ್ದಿದ್ದು, ಕಾರು - ಆಟೋ, ವಿದ್ಯುತ್ ಕಂಬಗಳ ಮೇಲೆ ಉರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಬಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ.

ಸಂಭವನೀಯ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ರೆಡಿ ಆಗುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ: ಕಳೆದ ಮೂರು ದಿನಗಳಿಂದ ನೆರೆಯ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯ 9 ತಾಲೂಕುಗಳಲ್ಲಿ ವ್ಯಾಪಕ ಮಳೆ ಆಗುತ್ತಿರುವ ಹಿನ್ನೆಲೆ ಜಿಲ್ಲೆಯ ನದಿ ಪಾತ್ರದ ಗ್ರಾಮಗಳಲ್ಲಿ ಎದುರಾಗಬಹುದಾದ ಸಂಭವನೀಯ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.

Holiday declared for schools in Belagavi,  Khanapur and Nippani taluk tomorrow due to continued rain
ಗಾಳಿ-ಮಳೆಗೆ ಧರೆಗುರುಳಿದ ವಿದ್ಯುತ್ ಕಂಬ (ETV Bharat)

ಜಿಲ್ಲಾಧಿಕಾರಿಗಳ ಕಚೇರಿ‌ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ನದಿ ಪಾತ್ರಗಳಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೇತುವೆಗಳು ಮುಳಗುವ‌ ಭೀತಿ‌ ಇದ್ದು ಅಂತಹ ಸೇತುವೆಗಳ ಮೇಲೆ ಜನ, ಜಾನುವಾರು ಸಂಚಾರ ನಿರ್ಬಂಧಿಸಬೇಕು. ಈ ಕಾರ್ಯಕ್ಕೆ ಪೊಲೀಸ್ ಇಲಾಖೆ ಸಹಕಾರ ಪಡೆಯಲು ತಿಳಿಸಿದರು.

ಸಂಭವನೀಯ ಪ್ರವಾಹ ಎದುರಾದಲ್ಲಿ ನದಿ ಪಾತ್ರದಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಬೋಟ್​ಗಳ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಎಸ್.ಡಿ.ಆರ್.ಎಫ್ ಹಾಗೂ ಅಗ್ನಿ ಶಾಮಕ ತಂಡಗಳು ಪ್ರವಾಹದಂತಹ ಪರಿಸ್ಥಿತಿಯನ್ನು ಎದುರಿಸಲು ಸದಾ ಸನ್ನದ್ಧವಾಗಿರಬೇಕು. ತಹಶಿಲ್ದಾರರು, ಎಸ್.ಡಿ.ಆರ್.ಎಫ್. ತಂಡದೊಂದಿಗೆ ನಿರಂತರ ಸಮನ್ವಯ ಸಾಧಿಸಿ, ಅಗತ್ಯವಿದ್ದಲ್ಲಿ ಕೂಡಲೇ ಮಾಹಿತಿ ನೀಡಲು ಸೂಚಿಸಿದರು.

ಇದನ್ನೂ ಓದಿ: ಜುಲೈ ಮೊದಲ ವಾರದಿಂದ ಚುರುಕು ಪಡೆದ ಮುಂಗಾರು: ಜೀವಕಳೆ ಪಡೆದ ರಾಜ್ಯದ ಪ್ರಮುಖ ಜಲಾಶಯಗಳು; ಹೀಗಿದೆ ವಿವರ!