ಬಣ್ಣದೋಕುಳಿಯಲ್ಲಿ ಮಿಂದೆದ್ದ ಬೆಳಗಾವಿ: ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು
ಬೆಳಗಾವಿಯಲ್ಲಿ ರಂಗಿನ ಹಬ್ಬ ಹೋಳಿ ಸಂಭ್ರಮದಿಂದ ಕೂಡಿತ್ತು. ಸೋಮವಾರ ರಾತ್ರಿಯೇ ನಗರದ ವಿವಿಧ ಬಡಾವಣೆಗಳು, ಮುಖ್ಯರಸ್ತೆಯಲ್ಲಿ ಕಾಮದಹನ ಮಾಡಿ, ಮಂಗಳವಾರ ಬೆಳಿಗ್ಗೆಯೇ ಹಬ್ಬ ಶುರು ಮಾಡಿದರು.

Published : March 3, 2026 at 9:29 PM IST
ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಮಂಗಳವಾರ ಅದ್ಧೂರಿಯಾಗಿ ಹೋಳಿ ಹಬ್ಬವನ್ನು ಆಚರಿಸಲಾಯಿತು. ನಗರದ ಬೀದಿಗಳು, ವೃತ್ತಗಳು, ಮೈದಾನಗಳಲ್ಲಿ ಬಣ್ಣದೋಕುಳಿಯಲ್ಲಿ ಯುವಕ-ಯುವತಿಯರು ಮಿಂದೆದ್ದರು. ಬೆಳಗ್ಗೆಯಿಂದ ಶುರುವಾದ ಬಣ್ಣದಾಟ ಮಧ್ಯಾಹ್ನದವರೆಗೂ ಸಡಗರದಿಂದ ನಡೆಯಿತು.
ಬಹು ಭಾಷೆ, ಬಹು ಸಂಸ್ಕೃತಿಗಳ ನಾಡು ಬೆಳಗಾವಿಯಲ್ಲಿ ಎಲ್ಲ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಲ್ಲೂ ಹೋಳಿ ಬಂತು ಎಂದರೆ ಸಾಕು ಎಲ್ಲ ವಯೋಮಾನದವರು ರಂಗಿನಾಟಕ್ಕೆ ಸಾಕ್ಷಿ ಆದರು. ಸೋಮವಾರ ರಾತ್ರಿಯೇ ನಗರದ ವಿವಿಧ ಬಡಾವಣೆಗಳು, ಮುಖ್ಯರಸ್ತೆಯಲ್ಲಿ ಕಾಮದಹನ ಮಾಡಿ, ಮಂಗಳವಾರ ಬೆಳಗ್ಗೆ ಹೋಳಿ ಹಬ್ಬ ಶುರು ಮಾಡಿದರು. ಮಕ್ಕಳು ಗಲ್ಲಿ ಗಲ್ಲಿ ಓಡಾಡಿ, ತಮ್ಮ ಸ್ನೇಹಿತರಿಗೆ ಬಣ್ಣದ ನೀರು ಎರಚಿ ಕುಣಿದು ಸಂಭ್ರಮಿಸಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕ-ಯುವತಿಯರು, ಮಹಿಳೆಯರು, ವಯಸ್ಕರು ಮತ್ತು ಹಿರಿಯರು ಪರಸ್ಪರ ಬಣ್ಣ ಎರಚಿದರು.
ಪಿಯುಸಿ ಪರೀಕ್ಷೆ ಹೊರತುಪಡಿಸಿ ಬಹುತೇಕ ಶಾಲೆ - ಕಾಲೇಜುಗಳಿಗೆ ರಜೆ ನೀಡಿದ್ದರಿಂದ ವಿದ್ಯಾರ್ಥಿಗಳು ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಹಲಗೆ ಬಾರಿಸುತ್ತ, ಅದರ ನಾದಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಸ್ನೇಹಿತರು, ಪರಿಚಯಸ್ಥರು ಮುಂದೆ ಸಿಕ್ಕರೆ ಸಾಕು ಲಬೋ-ಲಬೋ ಎಂದು ಬಾಯಿ ಬಡಿದುಕೊಳ್ಳುತ್ತಾ, ಕೈಯಲ್ಲಿದ್ದ ಬಣ್ಣ ಅವರಿಗೆ ಹಚ್ಚಿ ಸಂಭ್ರಮಿಸುವುದು ಕಂಡುಬಂದಿತು.
ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ವಡಗಾವಿಯ ಲೆಲೆ ಮೈದಾನ, ಡಾ.ಸತೀಶ ಚೌಲಿಗೆರ ನೇತೃತ್ವದಲ್ಲಿ ಸಿಪಿಇಡ್ ಮೈದಾನದಲ್ಲಿ, ರಾಮತೀರ್ಥ ನಗರದಲ್ಲಿ ಸಮಾಜಸೇವಕ ಸುರೇಶ ಯಾದವ್ ನೇತೃತ್ವದಲ್ಲಿ ಆಯೋಜಿಸಿದ್ದ ಹೋಳಿ ಕಾರ್ಯಕ್ರಮದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರ ಸೇರಿದ್ದರು. ಈ ವೇಳೆ ಕನ್ನಡ ಜನಪದ ಮತ್ತು ಚಲನಚಿತ್ರ ಗೀತೆಗಳು, ಮರಾಠಿ-ಹಿಂದಿ ಹಾಡುಗಳಿಗೆ ಯುವಕ-ಯುವತಿಯರು ಮನಸೋಇಚ್ಛೆ ಕುಣಿದು ಕುಪ್ಪಳಿಸಿದರು. ಜಾನಪದ ಕಲಾವಿದ ಮಾಳು ನಿಪ್ನಾಳ ಸೇರಿದಂತೆ ಮತ್ತಿತರ ಕಲಾವಿದರು ಹೋಳಿಗೆ ಸಂಗೀತದ ರಂಗ ತಂದರು. ಒಂದೆಡೆ ಗಾಳಿಯಲ್ಲಿ ಬಣ್ಣ ತೂರಿ ಬರುತ್ತಿದ್ದರೆ, ಮತ್ತೊಂದೆಡೆ ನೀರಿನ ಸಿಂಚನ ಅವರ ಉತ್ಸಾಹ ಹೆಚ್ಚಿಸಿತು. ಯುವಕ-ಯುವತಿಯರಿಗೆ ಪ್ರತ್ಯೇಕವಾಗಿ ನೃತ್ಯ ಮಾಡಲು ವ್ಯವಸ್ಥೆ ಮಾಡಲಾಗಿತ್ತು.

ಭಕ್ತರ ಉರುಳು ಸೇವೆ: ನಗರದ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರದ ಮುಂದೆ ಹಲವಾರು ಭಕ್ತರು ಉರುಳು ಸೇವೆ ಸಲ್ಲಿಸಿದರು. ಹೋಳಿಯ ದಿನ ಉರುಳು ಸೇವೆ ಮಾಡಿದರೆ ಶಾಪ ವಿಮೋಚನೆ ಆಗುತ್ತದೆ ಎಂಬುದು ನಂಬಿಕೆ ಇದೆ. ಹಾಗಾಗಿ, ಪ್ರತಿ ವರ್ಷದಂತೆ ಈ ಬಾರಿಯೂ ಉರುಳು ಸೇವೆ ಮಾಡಿ ಭಕ್ತರು ದೇವರಲ್ಲಿ ಬೇಡಿಕೊಂಡರು.
ಬೈಕ್ ಮೇಲೆ ಯುವಕರ ಭರ್ಜರಿ ರೈಡ್: ಬಣ್ಣ ಆಡುತ್ತಲೇ ಯುವಕರ ದಂಡು ಬೈಕ್ ಮೇಲೆ ಸಿಳ್ಳೆ, ಕೇಕೆ ಹಾಕುತ್ತ ಇಡೀ ನಗರ ಸುತ್ತು ಹೊಡೆದರು. ದಾರಿಯಲ್ಲಿ ಸಿಗುವ ಜನರಿಗೂ ಬಣ್ಣ ಎರಚುತ್ತಾ ಸಾಗಿದರು. ತಲೆಗೆ ಬಣ್ಣ ಬಣ್ಣದ ಚಿತ್ರ, ವಿಚಿತ್ರ ಕ್ಯಾಪ್ಗಳನ್ನು ಧರಿಸಿದ್ದ ಹುಡುಗರು ಓಡಾಡುತ್ತಿರುವುದು ಸಾಮಾನ್ಯವಾಗಿತ್ತು. ಇನ್ನು ಕೆಲ ಮಹಿಳೆಯರು ತಾವೇನು ಕಮ್ಮಿ ಇಲ್ಲ ಎನ್ನುವಂತೆ ಬೈಕ್-ಸ್ಕೂಟರ್ ಏರಿ ನಗರ ಪ್ರದಕ್ಷಿಣೆ ಹಾಕಿದರು.

ಬಿಗಿ ಪೊಲೀಸ್ ಬಂದೋಬಸ್ತ್: ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನಗರದಾದ್ಯಂತ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದರು. ಹೋಳಿ ಕಾರ್ಯಕ್ರಮ ಆಯೋಜಿಸಿದ್ದ ಸ್ಥಳಗಳು, ಪ್ರಮುಖ ರಸ್ತೆಗಳು, ಸೂಕ್ಷ್ಮ ಪ್ರದೇಶಗಳ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದರು. ಒಟ್ಟಾರೆ ಬೆಳಗಾವಿಯಲ್ಲಿ ಶಾಂತಿಯುತವಾಗಿ ಹೋಳಿ ಆಚರಿಸಲಾಗಿದ್ದು, ನಾಳೆ ಬುಧವಾರ ಜಿಲ್ಲೆಯ ವಿವಿಧ ತಾಲೂಕುಗಳು, ಗ್ರಾಮಗಳಲ್ಲಿ ಬಣ್ಣದಾಟ ನಡೆಯಲಿದೆ.
ಇದನ್ನೂ ಓದಿ: ದೇಶಾದ್ಯಂತ 'ಹೋಲಿಕಾ ದಹನ' ಆಚರಣೆ: ರಂಗು ರಂಗಿನ ಫೋಟೋಗಳು

