ಆರೋಪ ಮಾಡುವ ಮುನ್ನ ಪುರಾವೆ ನೀಡಿ, ಹಿಟ್ ಆ್ಯಂಡ್ ರನ್ ಕುಮಾರಸ್ವಾಮಿಗೆ ಅಭ್ಯಾಸ: ಪ್ರಿಯಾಂಕ್ ಖರ್ಗೆ
ಹಗರಣದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿಯೂ ನಾನು ಭಾಗಿಯಾಗಿಲ್ಲ. ಭಾಗಿಯಾಗಿರುವ ಕುರಿತು ದಾಖಲಾತಿ ನೀಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

Published : August 31, 2026 at 7:19 PM IST
ಬೆಂಗಳೂರು: ನನ್ನ ವಿರುದ್ಧ ಆರೋಪ ಮಾಡುವ ಮುನ್ನ ಪುರಾವೆ ನೀಡಿ. ಹಿಟ್ ಆ್ಯಂಡ್ ರನ್ ರೀತಿಯ ಹೇಳಿಕೆಗಳನ್ನು ನೀಡಬೇಡಿ. ಸುಖಾಸುಮ್ಮನೆ ನನ್ನ ವಿರುದ್ಧ ಅಪಪ್ರಚಾರ ಮಾಡದೆ ದಾಖಲಾತಿ ನೀಡಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ (ಆರ್ ಡಿಪಿಆರ್) ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ನೇಮಕಾತಿ ಆದೇಶದ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರವಿದೆ ಎಂದು ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದರು.
ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಗೃಹ ಸಚಿವರು, ಹಿಟ್ ಆ್ಯಂಡ್ ರನ್ ಹೇಳಿಕೆ ಕೊಡುವುದು ಕುಮಾರಸ್ವಾಮಿ ಅವರಿಗೆ ಅಭ್ಯಾಸವಾಗಿದೆ. ಆರೋಪಕ್ಕೆ ಪೂರಕವಾಗಿ ದಾಖಲಾತಿ ನೀಡಿದರೆ ಆಗ ನಿಮ್ಮ ಮಾತಿಗೆ ತೂಕ ಬರಲಿದೆ. ಇತ್ತೀಚೆಗೆ ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿದ ಬಳಿಕ ಕೇಂದ್ರ ಸಚಿವ ಅಮಿತ್ ಶಾ ಜೊತೆಗೂಡಿ ನನ್ನನ್ನು ಟಾರ್ಗೆಟ್ ಮಾಡಲು ಕಾಂಟ್ರಾಕ್ಟ್ ಪಡೆದಿದ್ದಾರೆ ಎಂದು ಆಪಾದಿಸಿದರು.
2022ರಲ್ಲಿ ಎಇಇ ಪರೀಕ್ಷೆಗಾಗಿ ಆರ್ಡಿಪಿರ್ ಅಧಿಸೂಚನೆ ಹೊರಡಿಸಿತ್ತು. ಇದರಂತೆ ಕೆಪಿಎಸ್ಸಿ ಪರೀಕ್ಷೆ ನಡೆಸಿ ತಾತ್ಕಾಲಿಕ ಪಟ್ಟಿಯನ್ನು 2023ರಲ್ಲಿ ಹೊರಡಿಸಿತ್ತು. ಬಳಿಕ 2024ರಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಈ ಸಂಬಂಧ ಆನಂದ್ ಸಿದ್ದಾರೆಡ್ಡಿ ಎಂಬವರು ಆಕ್ಷೇಪಿಸಿದ್ದರು. ಈ ಸಂಬಂಧ ಶಾಂತಾ ಹೊಸಮನಿ ಸೇರಿದಂತೆ ಮೂವರ ಸದಸ್ಯರ ಉಪಸಮಿತಿ ರಚಿಸಲಾಗಿತ್ತು. ಸಮಿತಿಯು ತನಿಖೆ ನಡೆಸುತ್ತಿರುವಾಗಲೇ ಕೆಪಿಎಸ್ಸಿಯಿಂದ ಆರ್ಪಿಡಿಆರ್ಗೆ ಅಂತಿಮ ನೇಮಕಾತಿ ಆಯ್ಕೆ ಪಟ್ಟಿ ಕಳುಹಿಸಿತ್ತು. ಅಕ್ರಮ ನಡೆದಿದೆ ಎಂದಾದರೆ ಕೆಪಿಎಸ್ಸಿಗೆ ನೇಮಕಾತಿ ಅಧಿಸೂಚನೆ ತಡೆಹಿಡಿಯಬಹುದಿತ್ತಲ್ಲವೇ? ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಪರೀಕ್ಷಾ ಲೋಪ ಹಾಗೂ ನೇಮಕಾತಿ ಆದೇಶ ಅಥವಾ ರದ್ದು ಮಾಡುವ ಅಧಿಕಾರ ಕೆಪಿಎಸ್ಸಿಗಿದೆ. ಆದನ್ನು ಮಾಡದೆ ನೇರವಾಗಿ ಅಂತಿಮ ಆಯ್ಕೆ ಪಟ್ಟಿ ಕಳುಹಿಸಿದ್ದು ಯಾಕೆ? ಈ ಮಧ್ಯೆ ಐವರು ಸದಸ್ಯರಿರುವ ಸಮಿತಿ ರಚಿಸಿ 2025ರ ಜ.1ರಂದು ಸರ್ಕಾರಕ್ಕೆ ವರದಿ ನೀಡಿತ್ತು. ಇದರಲ್ಲಿ ನನ್ನ ಪಾತ್ರ ಏನಿದೆ? ಹಗರಣದಲ್ಲಿ ನೇರ ಹಾಗೂ ಪರೋಕ್ಷವಾಗಿ ನಾನು ಭಾಗಿಯಾಗಿಲ್ಲ. ಭಾಗಿಯಾಗಿರುವ ಕುರಿತು ದಾಖಲಾತಿ ನೀಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಈ ಸವಾಲನ್ನ ಬಿಜೆಪಿ-ಜೆಡಿಎಸ್ ಸ್ವೀಕರಿಸುತ್ತದಯೇ ಎಂದು ಪ್ರಶ್ನಿಸಿದರು.
ಅಧಿಕಾರಿಯನ್ನು ಬಂಧಿಸಿದ್ದು ರಾಜ್ಯ ಪೊಲೀಸರೇ ಹೊರತು ಇ.ಡಿಯಲ್ಲ: ಪಶುವೈದ್ಯಾಧಿಕಾರಿ ಹಗರಣ ಸಂಬಂಧ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಬಂಧಿಸಿದ್ದು ರಾಜ್ಯ ಪೊಲೀಸರೇ ಹೊರತು ಇ.ಡಿ, ಐಟಿ ಅಧಿಕಾರಿಗಳಲ್ಲ. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಲಿಖಿತವಾಗಿ ಬರೆದು ರಜೆಯ ಮೇಲೆ ತೆರಳಿದ್ದ ಜ್ಞಾನೇಂದ್ರ ಅವರು ಊರಿಗೆ ತೆರಳಿದ್ದರು. ಈ ಬಗ್ಗೆ ಕುಮಾರಸ್ವಾಮಿ ಅವರು ಅಧಿಕಾರಿಯನ್ನು ರಜೆ ಮೇರೆಗೆ ಬಿಟ್ಟು ಕಳುಹಿಸಿದ್ದು ಯಾಕೆ ಎಂದು ಪ್ರಶ್ನಿಸಿರುವುದು ಅಸಮಂಜಸ. ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮೊದಲೇ ಅವರಿಗೆ ಗೊತ್ತಿತ್ತಾ? ಒಂದು ವೇಳೆ ಕುಮಾರಸ್ವಾಮಿಗೆ ಗೊತ್ತಿದ್ದರೆ ನಮಗೆ ಹೇಳಬಹುದಿತ್ತಲ್ಲವೇ? ಇಂತಹ ಹಿಟ್ ರನ್ ಆ್ಯಂಡ್ ಹೇಳಿಕೆ ನೀಡುವುದು ಸರಿಯಲ್ಲ. ಅಧಿಕಾರಿ ಬಗ್ಗೆ ನಮಗೆ ಅನುಮಾನ ಮೂಡುತ್ತಿದ್ದಂತೆ ಕೂಡಲೇ ಆತನನ್ನು ಯುಪಿಯಲ್ಲಿ ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದು ರಾಜ್ಯ ಪೊಲೀಸರು ಹೊರತು ಇ.ಡಿ ಅಧಿಕಾರಿಗಳಲ್ಲ ಎಂದರು.

