ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆಯಲ್ಲಿ ಬೆಂಕಿ ಹಚ್ಚಿ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್
ವ್ಯಕ್ತಿಯೊಬ್ಬನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ವ್ಯಕ್ತಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

Published : February 26, 2026 at 9:09 PM IST
ಬೆಂಗಳೂರು: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ವ್ಯಕ್ತಿಯೊಬ್ಬನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಬೆಂಗಳೂರಿನ ನಿವಾಸಿಯೊಬ್ಬನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು ಎಂದು ಕೋರಿ ಅಪರಾಧಿ ಆಸೀಫ್ ಎಂಬವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ಟಿ.ನಾಯಕ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದನ್ನು ಪ್ರತ್ಯಕ್ಷದರ್ಶಿ ಸಾಕ್ಷಿ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ ಮತ್ತು ಮೃತನು ಸಾಯುವ ಮುನ್ನ ನೀಡಿರುವ ಮರಣಪೂರ್ವ ಹೇಳಿಕೆ (ಡೈಯಿಂಗ್ ಡಿಕ್ಲರೇಷನ್)ನಲ್ಲೂ ಅಪರಾಧ ಸಾಬೀತಾಗಿರುವುದರಿಂದ ವಿಚಾರಣಾ ನ್ಯಾಯಾಲಯ ನೀಡಿರುವ ಶಿಕ್ಷೆಯ ತೀರ್ಪಿನಲ್ಲಿ ಮಧ್ಯಪ್ರವೇಶ ಮಾಡಲಾಗದು ಎಂದು ಹೈಕೋರ್ಟ್ ಹೇಳಿದೆ.
ಅಪರಾಧಿ ತಾನು ಮೃತನನ್ನು ಕೊಲ್ಲುವ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಅದನ್ನು ಒಪ್ಪಲಾಗದು. ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದಾಗ, ಆರೋಪಿಯು ಪೆಟ್ರೋಲ್ ಡಬ್ಬ(ಬಾಟಲ್), ಬೆಂಕಿ ಪೆಟ್ಟಿಗೆಯೊಂದಿಗೆ ಸ್ಥಳಕ್ಕೆ ಹೋಗಿ, ಪೆಟ್ರೋಲ್ ಸುರಿದು ವ್ಯಕ್ತಿಯ ಮೇಲೆ ಬೆಂಕಿ ಹಚ್ಚಿದ್ದಾನೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ, ಮೃತ ವ್ಯಕ್ತಿಯ ಜೀವವನ್ನು ತೆಗೆದುಕೊಳ್ಳುವ ಉದ್ದೇಶವಿರಲಿಲ್ಲ ಎಂಬ ಮೇಲ್ಮನವಿ ಪರ ವಕೀಲರ ವಾದ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.
ಆದ್ದರಿಂದ ಜೀವಾವಧಿ ಶಿಕ್ಷೆ ಮತ್ತು ದಂಡದ ಶಿಕ್ಷೆಯನ್ನು ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ದೋಷ ಕಂಡುಬರುತ್ತಿಲ್ಲ. ಅಲ್ಲದೆ, ಶಿಕ್ಷೆಯ ನೀತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಗಮನಿಸಬೇಕು ಮತ್ತು ಆರೋಪಿಯು ಜೀವಂತವಾಗಿದ್ದಾಗ ಮೃತ ವ್ಯಕ್ತಿಯ ಜೀವವನ್ನು ತೆಗೆದುಕೊಂಡ ಅಪರಾಧದ ತೀವ್ರತೆಯನ್ನು ಗಮನಿಸಿದ ನಂತರ, ಶಿಕ್ಷೆಯನ್ನು ಕಡಿತಗೊಳಿಸುವಂತೆ ಮೇಲ್ಮನವಿದಾರರ ಮನವಿಯನ್ನೂ ಸಹ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಪೀಠ ಹೇಳಿದೆ.
ಮೃತರ ಮರಣಪೂರ್ವ ಹೇಳಿಕೆಯನ್ನು ತನಿಖಾಧಿಕಾರಿ ಸಂಬಂಧಪಟ್ಟ ವೈದ್ಯರ ಸಮ್ಮುಖದಲ್ಲಿ ದಾಖಲಿಸಿದ್ದಾರೆ ಮತ್ತು ವೈದ್ಯರ ಸಾಕ್ಷ್ಯವು ಗಾಯಾಳು ಪ್ರಜ್ಞೆ ಹೊಂದಿದ್ದರು ಮತ್ತು ಹೇಳಿಕೆ ನೀಡಲು ಯೋಗ್ಯ ಸ್ಥಿತಿಯಲ್ಲಿದ್ದರೆಂಬುದನ್ನು ಸ್ಪಷ್ಟಪಡಿಸುತ್ತದೆ. ಮೃತ ವ್ಯಕ್ತಿಗೆ ಶೇ.40ರಿಂದ 45ರಷ್ಟು ಸುಟ್ಟ ಗಾಯಗಳಾಗಿದ್ದು, ಘಟನೆ ನಡೆದ ನಾಲ್ಕು ದಿನಗಳ ನಂತರ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ, ಈ ನ್ಯಾಯಾಲಯವು ಮೃತರು ನೀಡಿ ಮರಣಪೂರ್ವ ಹೇಳಿಕೆ ಪರಿಗಣಿಸಬಹುದಾಗಿದೆ. ಇದೇ ಅಂಶವನ್ನು ವಿಚಾರಣಾ ನ್ಯಾಯಾಲಯವು ಪರಿಗಣಿಸಿ ಶಿಕ್ಷೆಯನ್ನು ವಿಧಿಸಿದೆ ಎಂದು ಪೀಠ ತಿಳಿಸಿದೆ.
ಆರೋಪಿಗೆ ಕೊಲೆಯ ಉದ್ದೇಶವಿತ್ತು. ಆರೋಪಿಯು ಪತ್ನಿಯ ಶೀಲ ಶಂಕಿಸುತ್ತಿದ್ದ ಎಂದು ಆರೋಪಿಯ ಪತ್ನಿ ಸ್ಪಷ್ಟವಾಗಿ ಹೇಳಿದ್ದಾಳೆ. ಆರೋಪಿಯು ತನ್ನ ಪತ್ನಿಯ ಶೀಲ ಶಂಕಿಸಿದಾಗ ಪಂಚಾಯ್ತಿ ನಡೆಸಲಾಯಿತೆಂಬುದನ್ನು ಸಾಕ್ಷಿಗಳು ದೃಢಪಡಿಸಿದ್ದಾರೆ. ಆ ಸಾಕ್ಷಿಗಳು ಆರೋಪಿಯು ಕೊಲೆ ಮಾಡಲು ಕಾರಣವನ್ನು ನ್ಯಾಯಾಲಯದ ಮುಂದೆ ಸ್ಪಷ್ಟವಾಗಿ ಮಂಡಿಸಿದಾಗ, ಅವನಿಗೆ ತನ್ನ ಪತ್ನಿಯ ಶೀಲದ ಬಗ್ಗೆ ಅನುಮಾನವಿತ್ತೆಂದು, ಕೊಲೆಗೆ ಅದೇ ಕಾರಣವೆಂಬುದನ್ನು ಒಪ್ಪಿಕೊಂಡಿದೆ ಎಂದು ಪೀಠ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಅಪರಾಧಿಯ ಪತ್ನಿ ಶಹೀದಾ ಖಾನಂ ಎಂಬವರು ಇಂಟಿರಿಯರ್ ಡೆಕೋರೇಟರ್ ಇಮ್ರಾನ್ ಆಲಿ ಎಂಬವರೊಂದಿಗೆ ಕೆಲಸ ಮಾಡುತ್ತಿದ್ದರು. ಇದೇ ಕಾರಣಕ್ಕೆ ಶಹೀದಾ ಖಾನಂ ಅವರು ಇಮ್ರಾನ್ ಆಲಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದರು.
ಇದೇ ಕಾರಣಕ್ಕೆ 2019ರ ಅ.20ರಂದು ನಾಗಾವರ ಮುಖ್ಯರಸ್ತೆಯ ಭಾರತ್ ಪೆಟ್ರೋಲ್ ಬಂಕ್ ಸಮೀಪದ ಟೀ ಅಂಗಡಿ ಬಳಿ ಇಮ್ರಾನ್ ಆಲಿ ನಿಂತಿದ್ದ. ಆಗ ಸ್ಥಳಕ್ಕೆ ಪೆಟ್ರೋಲ್ ಕ್ಯಾನ್ನೊಂದಿಗೆ ಬಂದಿದ್ದ ಆಸೀಫ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ತೀವ್ರ ಸುಟ್ಟ ಗಾಯಗಳಾಗಿದ್ದ ಇಮ್ರಾನ್ ಆಲಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಆತ ಬದುಕುಳಿಯಲಿಲ್ಲ.
ಘಟನೆ ಸಂಬಂಧ ಕಾಡುಗೊಂಡನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ದಾಖಲೆಗಳು ಪ್ರತ್ಯಕ್ಷದರ್ಶಿ ಹೇಳಿಕೆ, ಮೃತನ ಮರಣಪೂರ್ವ ಹೇಳಿಕೆ ಆಧರಿಸಿ ವಿಚಾರಣಾ ನ್ಯಾಯಾಲಯ 2022ರ ಅ.1ರಂದು ಆಸೀಫ್ನನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆಸೀಫ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ವೈವಾಹಿಕ ವಿವಾದದಲ್ಲಿ ಆದಾಯ ತೆರಿಗೆ ಪಾವತಿಯ ವಿವರವನ್ನು ಆರ್‌ಟಿಐ ಅಡಿಯಲ್ಲಿ ಪಡೆಯಲಾಗದು: ಹೈಕೋರ್ಟ್

