ETV Bharat / state

ಜಲ ಸಂಪನ್ಮೂಲ ಇಲಾಖೆಯಲ್ಲಿ ಎಂಜಿನಿಯರ್​ಗಳ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ

ರಾಜ್ಯ ಜಲ ಸಂಪನ್ಮೂಲ ಇಲಾಖೆಯ 300ಕ್ಕೂ ಅಧಿಕ ಜ್ಯೂನಿಯರ್ ಎಂಜಿನಿಯರ್​ಗಳ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

BENGALURU  JUNIOR ENGINEERS RECRUITMENT  HIGH COURT  ಎಂಜಿನಿಯರ್ ನೇಮಕಾತಿ ಪ್ರಕ್ರಿಯೆ  KPSC RECRUITMENT STAY
ಹೈಕೋರ್ಟ್ (ETV Bharat)
author img

By ETV Bharat Karnataka Team

Published : August 29, 2026 at 10:23 PM IST

2 Min Read
Choose ETV Bharat

ಬೆಂಗಳೂರು: ರಾಜ್ಯ ಜಲ ಸಂಪನ್ಮೂಲ ಇಲಾಖೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಕೈಗೊಂಡಿರುವ 300ಕ್ಕೂ ಅಧಿಕ ಜ್ಯೂನಿಯರ್ ಎಂಜಿನಿಯರ್​ಗಳ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ರಾಜೇಶ್ ಡೆಂಗಿ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ನೇತೃತ್ವದ ನ್ಯಾಯಪೀಠ ಈ ಆದೇಶವನ್ನು ಮಾಡಿ, ವಿಚಾರಣೆಯನ್ನು ಮುಂದೂಡಿದೆ.

ಅರ್ಜಿದಾರರ ವಾದ ಆಲಿಸಿದ ಬಳಿಕ ಸರ್ಕಾರ ಮತ್ತು ಕೆಪಿಎಸ್ಸಿ ಪರ ವಕೀಲರಿಗೆ ನೋಟಿಸ್ ಜಾರಿಗೊಳಿಸಿತು. ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಆಯೋಗ ಈಗಾಗಲೇ ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

ಅಲ್ಲದೆ, ಅರ್ಜಿದಾರರ ಪರ ವಕೀಲರು ಮಧ್ಯಂತರ ಆದೇಶ ಕೋರಿದ್ದಾರೆ. ಅವರು ಕೆಲವು ಗಂಭೀರ ಆರೋಪಗಳನ್ನು ಮಾಡಿ, ಅಯ್ಕೆ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ, ಅರ್ಹರ ಪಟ್ಟಿ ಪ್ರಕಟಣೆ ಸಂಬಂಧ ಕೆಲವು ಮಾಹಿತಿ ಸೋರಿಕೆಯಾಗಿದೆ. ಕೆಪಿಎಸ್ಸಿ ಕೆಲವು ಅಧಿಕಾರಿಗಳ ಬಂಧನವಾಗಿದೆ ಮತ್ತು ನಾಲ್ವರು ಮಧ್ಯವರ್ತಿಗಳೂ ಸಹ ಬಂಧನಕ್ಕೆ ಒಳಗಾಗಿದ್ದಾರೆಂದು ತಿಳಿಸಿದ್ದಾರೆ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮೇಲ್ನೋಟಕ್ಕೆ ಅರ್ಜಿದಾರರ ವಾದದಲ್ಲಿ ಹುರುಳಿದೆ ಎನಿಸುತ್ತಿದೆ. ಹಾಗಾಗಿ ಮುಂದಿನ ಆದೇಶದವರೆಗೆ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಬಾರದು ಎಂದು ಕೆಪಿಎಸ್ಸಿಗೆ ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ : ಅರ್ಜಿದಾರರ ಪ್ರಕಾರ ಪ್ರಕರಣ ಸಂಬಂಧ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ನಿರ್ದೇಶನ ನೀಡಬೇಕು. ಅರ್ಹ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ನಡೆಸುವಂತೆ 2026ರ ಆ.10ರಂದು ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು. ಕಿರಿಯ ಎಂಜಿನಿಯರ್​ಗಳ ನೇಮಕ ಸಂಬಂಧ ಹಳೆಯ ಅಧಿಸೂಚನೆ ರದ್ದುಗೊಳಿಸಿ, ಹೊಸದಾಗಿ ಅಧಿಸೂಚನೆ ಹೊರಡಿಸಬೇಕು. ಪ್ರಕರಣದಲ್ಲಿ ಭಾರಿ ಅಕ್ರಮ ನಡೆದಿರುವ ಹಿನ್ನೆಲಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ಸಿಬಿಐ ತನಿಖೆ ಕೋರಿದ್ದ ಅರ್ಜಿಯ ಆದೇಶ ಕಾಯ್ದಿರಿಸಿ ಹೈಕೋರ್ಟ್: ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಶನಿವಾರ ತೀರ್ಪು ಕಾಯ್ದಿರಿಸಿದೆ.

ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ವಾದ-ಪ್ರತಿವಾದ ಆಲಿಕೆ ಪೂರ್ಣಗೊಳಿಸಿತು. ಸರ್ಕಾರದ ಪರ ವಾದ ಮಂಡಿಸಿದ ಎಸ್ಪಿಪಿ ಬಿ.ಎನ್.ಜಗದೀಶ್, ಸಿಬಿಐ ತನಿಖೆ ಅಗತ್ಯವಿಲ್ಲ. ಈ ಹಿಂದೆ ಸಿಐಡಿ ಹಲವು ಪ್ರಕರಣಗಳನ್ನು ಸಮರ್ಥ ತನಿಖೆ ನಡೆಸಿದೆ ಎಂದು ಹಿಂದಿನ ಪ್ರಕರಣಗಳನ್ನು ಉಲ್ಲೇಖಿಸಿದರು.

ಆದರೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವೆಂಕಟೇಶ್ ದಳವಾಯಿ, 'ವಾಲ್ಮೀಕಿ ಹಗರಣದಲ್ಲಿ ಸಿಬಿಐ, ಇಡಿ ತನಿಖೆ ವೇಳೆ ಬಿ. ನಾಗೇಂದ್ರ ಪಾತ್ರ ಬಯಲಾಗಿದ್ದರೂ ಬಿ.ನಾಗೇಂದ್ರ ವಿರುದ್ಧ ಸಿಐಡಿ ಕ್ರಮ ಕೈಗೊಂಡಿಲ್ಲ. ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಇಡಿಗೆ ಸಿಗಲಿಲ್ಲ. ಸಿಐಡಿ ತನಿಖೆಗೆ ಮಾತ್ರ ಜ್ಙಾನೇಂದ್ರ ಕುಮಾರ್ ಹಾಜರಾದರು. ಗೃಹ ಸಚಿವರು ಜ್ಞಾನೇಂದ್ರ ಕುಮಾರ್ ರಜೆಯಲ್ಲಿದ್ದಾರೆ ಎಂದು ತಿಳಿಸಲಾಗಿತ್ತು. ಹಾಗಾಗಿ ಸಿಬಿಐ ತನಿಖೆಗೆ ಒಪ್ಪಿಸಿದರೆ ಮಾತ್ರ ಸತ್ಯಾಂಶ ಹೊರಬೀಳಲಿದೆ ಎಂದು ಪೀಠಕ್ಕೆ ವಿವರಿಸಿದ್ದರು.

ಇದನ್ನೂ ಓದಿ:

ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ಅಕ್ರಮ: ಅರ್ಜಿ ಸಲ್ಲಿಸಿರುವವರಿಗೆ ಮಾತ್ರ ಮಧ್ಯಂತರ ತಡೆ ಆದೇಶ ಅನ್ವಯ: ಹೈಕೋರ್ಟ್