GBA ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮಾರ್ಚ್ 11ಕ್ಕೆ ನಿಗದಿ ಪಡಿಸಿದ ಹೈಕೋರ್ಟ್
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಮಾರ್ಚ್ 11ರಿಂದ ವಿಚಾರಣೆ ನಡೆಸುವುದಕ್ಕಾಗಿ ಹೈಕೋರ್ಟ್ ದಿನಾಂಕ ನಿಗದಿಪಡಿಸಿದೆ.

Published : January 7, 2026 at 8:27 PM IST
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ವನ್ನಾಗಿ ರಚನೆ ಮಾಡಿರುವ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಮಾರ್ಚ್ 11ರಿಂದ ವಿಚಾರಣೆ ನಡೆಸುವುದಕ್ಕಾಗಿ ಹೈಕೋರ್ಟ್ ದಿನಾಂಕ ನಿಗದಿಪಡಿಸಿದೆ.
2025ರ ಮೇ 15ರಂದು ರಾಜ್ಯ ಸರ್ಕಾರ ಹೊರಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಪ್ರಶ್ನಿಸಿ, ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ನಟ ಪ್ರಕಾಶ್ ಬೆಳವಾಡಿ, ಸಿಟಿಜನ್ ಆಕ್ಷನ್ ಫೋರಂ ಮತ್ತು ಕಾತ್ಯಾಯಿನಿ ಚಾಮರಾಜ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ, ಎಲ್ಲ ಅರ್ಜಿಗಳ ಸಂಬಂಧ ಅರ್ಜಿದಾರರು ತಮ್ಮ ಲಿಖಿತ ಹೇಳಿಕೆಗಳನ್ನು ದಾಖಲಿಸಬೇಕು. ಅದಕ್ಕೆ ಸರ್ಕಾರವು ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಈ ಕಾಯ್ದೆಯ ಪ್ರಕಾರ ಬೆಂಗಳೂರಿನ ಐದು ಪಾಲಿಕೆಗಳಾಗಿ ರಚನೆಯಾಗಲಿದ್ದು, ಈ ಪಾಲಿಕೆಗಳ ಮೇಲ್ವಿಚಾರಣೆಗೆ ಸಮಿತಿ ರಚನೆಯಾಗಲಿದೆ. ಈ ಸಮಿತಿಯಲ್ಲಿ ನಗರದಲ್ಲಿ ಚುನಾವಣಾ ರಹಿತವಾಗಿ ಆಯ್ಕೆಯಾದವರಿರಲಿದ್ದು, ಜಿಬಿಎಯಲ್ಲಿ ಜಾರಿ ಯಾಗಬಹುದಾದಂತ ಕಾರ್ಯಯೋಜನೆಗಳ ಕುರಿತಂತೆ ನಿರ್ಣಯಗಳನ್ನು ಕೈಗೊಳ್ಳಲಿದ್ದು, ನಿರ್ದೇಶನಗಳನ್ನು ಹೊರಡಿಸಲಿದ್ದಾರೆ. ಈ ಪ್ರಕ್ರಿಯೆಯಿಂದ ಜನರಿಂದ ಆಯ್ಕೆಯಾದವರಿಗೆ ಅಧಿಕಾರದಲ್ಲಿ ಸಂಪೂರ್ಣವಾಗಿ ತಟಸ್ಥವಾಗಲಿದೆ ಎಂದರು.
ಅಲ್ಲದೇ, ಎಲ್ಲ ಅರ್ಜಿದಾರರು ಬೆಂಗಳೂರಿನ ನಿವಾಸಿಗಳಾಗಿದ್ದು, ನಾಗರಿಕ ಸಂಘಟನೆಗಳ ಸದಸ್ಯರಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ವಿಕೇಂದ್ರೀಕರಣದ ಅನುಗುಣವಾಗಿ ನಗರ ಭಾಗಗಳಲ್ಲಿ ಸಾರ್ವಜನಿಕರು ಭಾಗಿಯಾಗುವುದು ಮುಖ್ಯವಾಗಲಿದೆ. ಆದರೆ, ಜಿಬಿಎ ಕಾಯ್ದೆ ಜನರಿಂದ ಆಯ್ಕೆಯಾದವರಿಂದ ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆಗೆ ವಿರುದ್ಧವಾಗಿರಲಿದೆ ಎಂದು ಪೀಠಕ್ಕೆ ತಿಳಿಸಿದರು.
ಈ ವೇಳೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಜಿಬಿಎ ಪ್ರಶ್ನಿಸಿ ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಎರಡು ಅರ್ಜಿಗಳು ಇಡೀ ಕಾಯ್ದೆಯನ್ನು ಪ್ರಶ್ನಿಸಿವೆ. ಇನ್ನೆರಡು ಅರ್ಜಿಗಳಲ್ಲಿ ಕಾಯ್ದೆಯ ಕೆಲವು ಅಂಶಗಳನ್ನು ಮಾತ್ರ ಪ್ರಶ್ನಿಸಿವೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಅರ್ಜಿದಾರರು ಲಿಖಿತ ಹೇಳಿಕೆ ಸಲ್ಲಿಸಲಿ, ನಾವು ಲಿಖಿತ ಹೇಳಿಕೆ ಸಲ್ಲಿಸಿದ ಬಳಿಕ ದಿನಾಂಕ ನಿಗದಿ ಮಾಡಿದಲ್ಲಿ ವಾದ ಮಂಡಿಸಲಾಗುವುದು ಎಂದು ತಿಳಿಸಿದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಅರ್ಜಿಯಲ್ಲೇನಿದೆ?: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯು ಸಂವಿಧಾನದ 74ನೇ ತಿದ್ದುಪಡಿಗೆ (ಸ್ಥಳೀಯ ಸಂಸ್ಥೆಗಳಿಗೆ ಸಮಾನ ಸ್ಥಾನಮಾನ ನೀಡಿ ಅಧಿಕಾರ ವಿಕೇಂದ್ರಿಕರಣಕ್ಕೆ ಅವಕಾಶ ಕಲ್ಪಿಸಿರುವುದು) ತದ್ವಿರುದ್ಧವಾಗಿದೆ. ಆದ್ದರಿಂದ ಕಾಯ್ದೆ ಅಸಂವಿಧಾನಿಕ ಎಂಬುದಾಗಿ ಘೋಷಣೆ ಮಾಡಬೇಕು. ಬಿಬಿಎಂಪಿಗೆ ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೇ, ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತದಲ್ಲಿ ವಿಕೇಂದ್ರೀಕರಣದ ಉದ್ದೇಶದಿಂದ ಸಂವಿಧಾನಕ್ಕೆ 74ನೇ ತಿದ್ದುಪಡಿ ಮಾಡಲಾಗಿದೆ. ಇದೀಗ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿ ಮಾಡುವ ಮೂಲಕ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅಲ್ಲದೆ, ಪಾಲಿಕೆಯ ಆಡಳಿತದಲ್ಲಿ ಸರ್ಕಾರ ನೇರವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಸ್ಥಳೀಯ ಸಂಸ್ಥೆಗೆ ಇದ್ದಂತಹ ತೆರಿಗೆ ವಿಧಿಸುವ ಪ್ರಾಧಿಕಾರದ ಸ್ಥಾನಮಾನವನ್ನು ಸರ್ಕಾರ ಕಸಿದುಕೊಳ್ಳುತ್ತಿದೆ. ಇದು ಸ್ಥಳೀಯ ಸಂಸ್ಥೆಯ ಆರ್ಥಿಕ ಸ್ವಾತಂತ್ರ್ಯವನ್ನು ಕಳೆದುಕೊಂಡು ದುರ್ಬಲಗೊಳ್ಳುವಂತಾಗಲಿದೆ. ಜೊತೆಗೆ, ಸಂವಿಧಾನ ಪರಿಚ್ಚೇದ 243-ಪಿ(ಇ) ಅಡಿ ನೇರ ಚುನಾವಣೆಗಳ ಮೂಲಕ ಆಯ್ಕೆಯಾದವರನ್ನು ಪಾಲಿಕೆಗೆ ತುಂಬಿಸುವ ಯತ್ನವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಜಾಪ್ರಭುತ್ವ ತತ್ವಗಳಿಗೆ ತದ್ವಿರುದ್ಧ: ಪಾಲಿಕೆ ಸದಸ್ಯರನ್ನು ಪಾಲಿಕೆಯ ಅಭಿವೃದ್ಧಿಯ ಉದ್ದೇಶಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಆದರೆ, ದೇಶ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಶಾಸನಗಳನ್ನು ರಚನೆ ಮಾಡುವುದಕ್ಕೆ ಆಯ್ಕೆಯಾದಂತಹ ಶಾಸಕರು ಮತ್ತು ಸಂಸದರನ್ನು ಜಿಬಿಎ ಕಾರ್ಯಚಟುವಟಿಕೆಗಳಲ್ಲಿ ಸೇರಿಸಿ ಅಧಿಕಾರ ನೀಡಲಾಗುತ್ತಿದೆ. ಪಾಲಿಕೆ ಯಾವುದೇ ಯೋಜನೆ ರೂಪಿಸಬೇಕಾದರೂ, ಸರ್ಕಾರ ಮತ್ತು ಜಿಬಿಎ ಅನುಮತಿ ಪಡೆದುಕೊಳ್ಳಬೇಕು. ಈ ಬೆಳವಣಿಗೆ ಪ್ರಜಾಪ್ರಭುತ್ವ ತತ್ವಗಳಿಗೆ ತದ್ವಿರುದ್ಧವಾಗಿರಲಿದ್ದು, ಹಲ್ಲು ಕಿತ್ತಂತಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸ್ಥಳೀಯರ ಅಭಿಪ್ರಾಯಕ್ಕೆ ಬೆಲೆ ಇಲ್ಲದಂತಾಗಲಿದೆ: ಕೆಎಂಸಿ ಕಾಯ್ದೆ ಪ್ರಕಾರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸದಸ್ಯರು ಮಾತ್ರ ಪಾಲಿಕೆ ಸದಸ್ಯರಾಗುವುದಕ್ಕೆ ಅರ್ಹರಾಗಿರುತ್ತಾರೆ. ಆದರೆ, ಜಿಬಿಎಗೆ ಈ ಮಿತಿ ಇರುವುದಿಲ್ಲ. ಪದನಿಮಿತ್ತ ಸದಸ್ಯರು ಸ್ಥಳೀಯರೇ ಇರಬೇಕು ಎಂದೇನಿಲ್ಲ. ಬೆಂಗಳೂರಿನ ಹೊರ ಭಾಗದ ಜನ ಪ್ರತಿನಿಧಿಗಳು ಇಲ್ಲಿ ಸದಸ್ಯರಾಗಲಿದ್ದು, ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಲಿದೆ. ಜಿಬಿಎ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಮೂಲಸೌಲಭ್ಯ ಯೋಜನೆಗಳು ಜಾರಿಗೆ ಸದಸ್ಯರು ಮತ್ತು ಮೇಯರ್ಗಳ ಅಭಿಪ್ರಾಯ ಇಲ್ಲವಾಗಲಿದೆ. ಬದಲಿಗೆ ಜಿಬಿಎ ನಿರ್ಧಾರ ತೆಗೆದುಕೊಳ್ಳಲಿದ್ದು, ಇದರಿಂದ ಸ್ಥಳೀಯರ ಅಭಿಪ್ರಾಯಕ್ಕೆ ಬೆಲೆ ಇಲ್ಲದಂತಾಗಲಿದೆ. ಇದರಿಂದ ಕಳಪೆ ಮೂಲ ಸೌಲಭ್ಯಕ್ಕೆ ಕಾರಣವಾಗಲಿದ್ದು, ಮುಂದೊಂದು ದಿನ ಅನಾಹುತಗಳನ್ನು ಎದುರಿಸಬೇಕಾಗುತ್ತದೆ.
ಜಿಬಿಎ ಪ್ರಕಾರ, ಬೆಂಗಳೂರು ನಗರವನ್ನು ಏಳು ನಗರ ಪಾಲಿಕೆಗಳನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದ್ದು, ಇವುಗಳನ್ನು ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ದಿ ಉಸ್ತುವಾರಿ ಹೊಂದಿರುವ ಸಚಿವರ ಅಧ್ಯಕ್ಷತೆಯಲ್ಲಿ ನಿರ್ವಹಣೆ ಆಗಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಮುಖ್ಯ ಆಯುಕ್ತರ ನೇಮಕ ಅಸಂವಿಧಾನಿಕ: ದೇಶದಲ್ಲಿ ಈಗಾಗಲೇ ನಗರ ಪಾಲಿಕೆಗಳನ್ನು ವಿಭಜನೆ ಮಾಡಿರುವ ನಗರಗಳಲ್ಲಿ ಆಡಳಿತ ವಿಫಲವಾಗಿದೆ. ಆದ್ದರಿಂದ ವೈಜ್ಞಾನಿಕ ಅಧ್ಯಯನ ನಡೆಸಿದ ನಗರವನ್ನು ವಿಭಜನೆ ಮಾಡಿಲಿದ್ದು, ಇದರಿಂದ ಜನಸಂಖ್ಯಾ ಅಸಮತೋಲನ, ಸಾಮಾಜಿಕ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ.
ಬೆಂಗಳೂರು ನಗರಕ್ಕೆ ಈವರೆಗೂ ಸರಿಯಾದ ರೀತಿಯಲ್ಲಿ ಗಡಿಗಳನ್ನು ಗುರುತಿಸಲಾಗಿಲ್ಲ. ಇನ್ನು ಏಳು ನಗರಪಾಲಿಕೆಗಳಿಗೆ ಗಡಿಗಳನ್ನು ಗುರುತಿಸುವ ಸಂಬಂಧ ಈವರೆಗೂ ಅಧಿಸೂಚನೆ ಹೊರಡಿಸಿಲ್ಲ. ಗಡಿಗಳನ್ನು ಗುರುತಿಸುವ ಪ್ರಕ್ರಿಯೆಯು ಚುನಾವಣೆಗಳನ್ನು ಮುಂದೂಡುವ ಹುನ್ನಾರವಾಗಿದೆ. ಜಿಬಿಎಗೆ ಒಬ್ಬರು ಮುಖ್ಯ ಆಯುಕ್ತರು ಮತ್ತು ಇತರ ಪಾಲಿಕೆಗಳಿಗೆ ಆಯುಕ್ತರನ್ನು ನೇಮಕ ಮಾಡಲಾಗುತ್ತಿದೆ. ಆದರೆ, ಜನರಿಂದ ಆಯ್ಕೆಯಾಗುವ ಮೇಯರ್ಗಳು ಹಾಗೂ ಸದಸ್ಯರು ಮುಖ್ಯ ಆಯುಕ್ತರ ಅಧೀನ ಸ್ಥಾನದಲ್ಲಿರಲಿದ್ದು, ತಮ್ಮ ಅಧಿಕಾರವನ್ನು ಚಲಾಯಿಸುವುದಕ್ಕೆ ಅವಕಾಶವಿರುವುದಿಲ್ಲ. ಹೀಗಾಗಿ, ಮುಖ್ಯ ಆಯುಕ್ತರ ನೇಮಕವು ಅಸಾಂವಿಧಾನಿಕವಾಗಿರಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇವುಗಳನ್ನೂ ಓದಿ:

